ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಕ್ರಿಕೆಟ್ ಫೈನಲ್ ಇಂದು; ಮನೀಷ್–ದಿನೇಶ್ ಹಣಾಹಣಿ

ಸೂರತ್‌ನಲ್ಲಿ ‘ದಕ್ಷಿಣ ಡರ್ಬಿ’
Last Updated 30 ನವೆಂಬರ್ 2019, 18:45 IST
ಅಕ್ಷರ ಗಾತ್ರ

ಸೂರತ್: ಮನೀಷ್ ಪಾಂಡೆ ಮತ್ತು ದಿನೇಶ್ ಕಾರ್ತಿಕ್ ಮತ್ತೆ ಮುಖಾಮುಖಿಯಾಗುತ್ತಿದ್ದಾರೆ. ಹೋದ ಮೂರು ತಿಂಗಳಲ್ಲಿ ಈ ಇಬ್ಬರು ಆಟಗಾರರು ಮುಖಾಮುಖಿಯಾಗುತ್ತಿರುವುದು ಇದು ಮೂರನೇ ಸಲ.

ಭಾನುವಾರ ಇವರಿಬ್ಬರ ನಾಯಕತ್ವದ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಲಾಲ್‌ಭಾಯಿ ಕಾಂಟ್ರ್ಯಾಕ್ಟರ್ ಕ್ರೀಡಾಂಗಣದಲ್ಲಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯನ್ನು ಜಯಿಸುವ ಛಲದಿಂದ ಕಣಕ್ಕಿಳಿಯುತ್ತಿವೆ. ಇಲ್ಲಿ ನಡೆಯಲಿರು ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ಕರ್ನಾಟಕ ತಂಡವು ಗೆಲುವಿನ ನೆಚ್ಚಿನ ತಂಡವಾಗಿ ಅಂಗಳಕ್ಕಿಳಿಯುತ್ತಿದೆ. ಆದರೆ, ಈ ಹಿಂದಿನ ಎರಡು ಪಂದ್ಯಗಳಲ್ಲಿ ಅನುಭವಿಸಿದ ಮುಖಭಂಗಕ್ಕೆ ಮುಯ್ಯಿ ತೀರಿಸಿಕೊಂಡು ಟ್ರೋಫಿಗೆ ಮುತ್ತಿಡುವ ಛಲದಲ್ಲಿ ತಮಿಳುನಾಡು ತಂಡವಿದೆ.

ಶುಕ್ರವಾರ ಇಲ್ಲಿ ನಡೆದಿದ್ದ ಸೆಮಿಫೈನಲ್‌ ಪಂದ್ಯದಲ್ಲಿ ಒಂದೇ ಓವರ್‌ನಲ್ಲಿ ಹ್ಯಾಟ್ರಿಕ್ ಸಹಿತ ಐದು ವಿಕೆಟ್ ಕಬಳಿಸಿದ್ದ ಅಭಿಮನ್ಯು ಮಿಥುನ್ ಅವರನ್ನು ಎದುರಿಸಲು ತಮಿಳುನಾಡು ಬ್ಯಾಟ್ಸ್‌ಮನ್‌ಗಳು ಯಾವ ರೀತಿ ಆಡುತ್ತಾರೆ ಎನ್ನುವ ಕುತೂಹಲ ಗರಿಗೆದರಿದೆ. ಆರ್. ಅಶ್ವಿನ್, ವಾಷಿಂಗ್ಟನ್ ಸುಂದರ್ ಅವರಂತಹ ಅನುಭವಿ ಸ್ಪಿನ್ನರ್‌ಗಳ ಬಲ ಇರುವ ದಿನೇಶ್ ಕಾರ್ತಿಕ್ ಬಳಗವು ಕರ್ನಾಟಕದ ಬ್ಯಾಟಿಂಗ್ ಪಡೆಯ ದಿಂಡುರುಳಿಸಲು ಯಾವ ರೀತಿಯ ಅಸ್ತ್ರಗಳನ್ನು ಪ್ರಯೋಗಿಸುತ್ತಾರೆ ನೋಡಬೇಕು.

ಸೆಮಿಫೈನಲ್‌ನಲ್ಲಿ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್‌ನಿಂದ ಹರಿಯಾಣ ತಂಡಕ್ಕೆ ನಡುಕ ಮೂಡಿಸಿದ್ದ ಕೆ.ಎಲ್. ರಾಹುಲ್ ಮತ್ತು ದೇವದತ್ತ ಪಡಿಕ್ಕಲ್ ಅವರನ್ನು ಕಟ್ಟಿಹಾಕುವುದು ಸುಲಭವಲ್ಲ. ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿರುವ ಎಡಗೈ ಬ್ಯಾಟ್ಸ್‌ಮನ್ ಪಡಿಕ್ಕಲ್ ಅವರು ಸಹನೆಯಿಂದ ಇನಿಂಗ್ಸ್‌ ಆರಂಭಿಸಿ, ಅಬ್ಬರದೊಂದಿಗೆ ಮುಗಿಸುವ ಕಲೆ ಕರಗತವಾಗಿದೆ. ಬಾಂಗ್ಲಾ ದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ದ್ವಿಶತಕ ಬಾರಿಸಿ ಬಂದಿರುವ ಮಯಂಕ್ ಅಗರವಾಲ್, ನಾಯಕ ಮನೀಷ್ ಪಾಂಡೆ, ಬೆಳಗಾವಿ ಹುಡುಗ ರೋಹನ್ ಕದಂ ಕೂಡ ಅಮೋಘ ಲಯದಲ್ಲಿದ್ದಾರೆ. ಕರುಣ್ ನಾಯರ್ ಕೂಡ ತಮ್ಮ ನೈಜ ಲಯಕ್ಕೆ ಮರಳುವ ಯತ್ನದಲ್ಲಿದ್ದಾರೆ. ಗಾಯದಿಂದ ಚೇತರಿಸಿಕೊಂಡಿರುವ ಕೃಷ್ಣಪ್ಪ ಗೌತಮ್ ಸೆಮಿಯಲ್ಲಿ ಆಡಿದ್ದರು. ಅವರು ಮತ್ತು ಶ್ರೇಯಸ್ ಗೋಪಾಲ್ ಕೆಳಕ್ರಮಾಂಕದ ಬ್ಯಾಟಿಂಗ್ ಅನ್ನು ಬಲಿಷ್ಠಗೊಳಿಸಬಲ್ಲರು. ಮಿಥುನ್ ಕೂಡ ಅವರೊಂದಿಗೆ ಇದ್ದಾರೆ.

ಆದರೆ, ಬೌಲಿಂಗ್‌ನಲ್ಲಿ ರೋನಿತ್ ಮೋರೆ ಮತ್ತು ಕೌಶಿಕ್ ಅವರು ಇನ್ನಷ್ಟು ಬಿಗಿ ಕಾಯ್ದುಕೊಳ್ಳುವ ಅಗತ್ಯವಿದೆ. ಈ ಬಗ್ಗೆ ಬೌಲಿಂಗ್ ಕೋಚ್ ಎಸ್. ಅರವಿಂದ್ ಶನಿವಾರ ತಮ್ಮ ಬೌಲರ್‌ಗಳಿಗೆ ‘ಪಾಠ’ ಮಾಡಿದ್ದಾರೆ. ಈ ಟೂರ್ನಿಯಲ್ಲಿ ತಮಿಳುನಾಡಿನ ಪ್ರಮುಖ ಬ್ಯಾಟ್ಸ್‌ಮನ್‌ಗಳಿಂದ ಹೆಚ್ಚು ರನ್‌ಗಳು ಹರಿದಿಲ್ಲ. ಆದರೆ ಆಲ್‌ರೌಂಡರ್‌ಗಳಾದ ವಿಜಯಶಂಕರ್, ವಾಷಿಂಗ್ಟನ್ ಸುಂದರ್ ಅವರೇ ಹೆಚ್ಚು ಹೊತ್ತು ಬ್ಯಾಟಿಂಗ್ ಮಾಡಿದ್ದಾರೆ. ಆದ್ದರಿಂದ ಈ ಸವಾಲನ್ನು ಮೆಟ್ಟಿನಿಲ್ಲುವತ್ತ ಕರ್ನಾಟಕ ಬೌಲರ್‌ಗಳು ತಮ್ಮ ಚಾಣಾಕ್ಷತೆ ಬಳಸುವ ಅಗತ್ಯವಂತೂ ಇದೆ.

2006–07ರಲ್ಲಿ ಒಂದು ಬಾರಿ ಮಾತ್ರ ಚುಟುಕು ದೇಶಿ ಟೂರ್ನಿಯಲ್ಲಿ ತಮಿಳುನಾಡು ಚಾಂಪಿಯನ್ ಆಗಿತ್ತು. ಆದರೆ ಅದರ ನಂತರದ ವರ್ಷದಲ್ಲಿ ಈ ಟೂರ್ನಿಯನ್ನು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಎಂದು ಆಡಿಸತೊಡಗಿದ ಮೇಲೆ ಆ ತಂಡ ಪ್ರಶಸ್ತಿ ಗೆದ್ದಿಲ್ಲ. ಕರ್ನಾಟಕ ಹೋದ ವರ್ಷ ಕರುಣ್ ನಾಯರ್ ನಾಯಕತ್ವದಲ್ಲಿ ಜಯಿಸಿತ್ತು. ಇದೀಗ ಮನೀಷ್ ನಾಯಕತ್ವದಲ್ಲಿ ಪ್ರಶಸ್ತಿ ಉಳಿಸಿಕೊಳ್ಳುವತ್ತ ಚಿತ್ತ ನೆಟ್ಟಿದೆ.

ತಂಡಗಳು

ಕರ್ನಾಟಕ: ಮನೀಷ್ ಪಾಂಡೆ (ನಾಯಕ), ದೇವದತ್ತ ಪಡಿಕ್ಕಲ್, ಮಯಂಕ್ ಅಗರವಾಲ್, ಕೆ.ಎಲ್. ರಾಹುಲ್, ರೋಹನ್ ಕದಂ, ಕರುಣ್ ನಾಯರ್, ಲವನೀತ್ ಸಿಸೋಡಿಯಾ (ವಿಕೆಟ್‌ಕೀಪರ್), ಪವನ್ ದೇಶಪಾಂಡೆ, ಪ್ರವೀಣ ದುಬೆ, ಶ್ರೇಯಸ್ ಗೋಪಾಲ್, ಅನಿರುದ್ಧ ಜೋಶಿ, ಅಭಿಮನ್ಯು ಮಿಥುನ್, ರೋನಿತ್ ಮೋರೆ, ಜೆ. ಸುಚಿತ್, ಪ್ರತೀಕ್ ಜೈನ್. ತಮಿಳುನಾಡು: ದಿನೇಶ್ ಕಾರ್ತಿಕ್ (ನಾಯಕ/ವಿಕೆಟ್‌ಕೀಪರ್), ವಾಷಿಂಗ್ಟನ್ ಸುಂದರ್, ಬಾಬಾ ಅಪರಾಜಿತ್, ಮುರುಗನ್ ಅಶ್ವಿನ್, ಶಾರೂಕ್ ಖಾನ್, ಮುರಳಿ ವಿಜಯ್, ವಿಜಯಶಂಕರ್, ಎಂ. ಮೊಹಮ್ಮದ್, ರವಿಶ್ರೀನಿವಾಸನ್ ಸಾಯಿಕಿಶೋರ್, ಟಿ. ನಟರಾಜನ್, ಜಿ. ಪೆರಿಯಸ್ವಾಮಿ, ಜಗದೀಶನ್ ಕೌಶಿಕ್, ಹರಿ ನಿಶಾಂತ, ಕೃಷ್ಣಮೂರ್ತಿ ವಿಘ್ನೇಶ್, ಎನ್. ಜಗದೀಶನ್.

ಪಂದ್ಯ ಆರಂಭ: ಸಂಜೆ 7

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT