ಸೋಮವಾರ, ಜೂನ್ 21, 2021
30 °C

ಟಿ20 ವಿಶ್ವಕಪ್‌ನಲ್ಲಿ ಕನ್ನಡಿಗ ಕೃಷ್ಣಗೆ ಸ್ಥಾನ!: ಅಚ್ಚರಿ ನೀಡುವರೇ ಕೊಹ್ಲಿ

ಪಿಟಿಐ Updated:

ಅಕ್ಷರ ಗಾತ್ರ : | |

ಇಂದೋರ್: ಕರ್ನಾಟಕದ ಮಧ್ಯಮವೇಗಿ ಪ್ರಸಿದ್ಧ ಎಂ ಕೃಷ್ಣ ಅವರಿಗೆ ಟ್ವೆಂಟಿ–20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಅವಕಾಶ ಸಿಗುವ ಸಾಧ್ಯತೆ ಇದೆ.

ಮಂಗಳವಾರ ಹೋಳ್ಕರ್ ಮೈದಾನದಲ್ಲಿ ಶ್ರೀಲಂಕಾ ವಿರುದ್ಧದ ಟ್ವೆಂಟಿ–20 ಪಂದ್ಯದಲ್ಲಿ ಗೆದ್ದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ, ‘ಆಸ್ಟ್ರೇಲಿಯಾಕ್ಕೆ (ವಿಶ್ವಕಪ್ ಟೂರ್ನಿ) ಹೋಗುವ ತಂಡದಲ್ಲಿ ಒಂದು ಅಚ್ಚರಿಯ ಆಯ್ಕೆ ಇದೆ. ವೇಗ ಮತ್ತು ಬೌನ್ಸ್‌ ಎರಡನ್ನೂ ಸಮರ್ಥವಾಗಿ ಪ್ರಯೋಗಿಸುವ ಬೌಲರ್‌ಗಳು ಅಲ್ಲಿ ಅವಶ್ಯಕ. ದೇಶಿ ಕ್ರಿಕೆಟ್‌ನಲ್ಲಿ ಪ್ರಸಿದ್ಧಕೃಷ್ಣ ಉತ್ತಮವಾಗಿ ಆಡಿದ್ದಾರೆ’ ಎಂದರು.

ಅನುಭವಿ ಮಧ್ಯಮವೇಗಿಗಳಾದ ಭುವನೇಶ್ವರ್ ಕುಮಾರ್ ಮತ್ತು ದೀಪಕ್ ಚಾಹರ್ ಅವರು ಗಾಯಗೊಂಡಿದ್ದಾರೆ. ಸ್ಪೋರ್ಟ್ಸ್‌ ಹರ್ನಿಯಾದ ಸಮಸ್ಯೆ ಅನುಭವಿಸುತ್ತಿರುವ ಭುವನೇಶ್ವರ್ ಮತ್ತು ಮೂಳೆಮುರಿತಕ್ಕೊಳಗಾಗಿರುವ ದೀಪಕ್ ಚೇತರಿಸಿಕೊಳ್ಳಲು ಸಮಯ ಬೇಕಿದೆ. ಆದ್ದರಿಂದ ಜಸ್‌ಪ್ರೀತ್ ಬೂಮ್ರಾ ನಾಲ್ಕು ತಿಂಗಳುಗಳ ಸುದೀರ್ಘ ವಿಶ್ರಾಂತಿಯ ನಂತರ ಶನಿವಾರ ಕಣಕ್ಕಿಳಿದಿದ್ದಾರೆ. ನವದೀಪ್ ಸೈನಿ ಅವರೊಂದಿಗೆ ಬೌಲಿಂಗ್ ಮಾಡಿದ್ದರು. ಆದ್ದರಿಂದ ಹೆಚ್ಚುವರಿ ಮಧ್ಯಮವೇಗಿಯಾಗಿ  23 ವರ್ಷದ ಬಲಗೈ ಮಧ್ಯಮವೇಗಿ, ಪ್ರಸಿದ್ಧ ಕೃಷ್ಣ ಅವರಿಗೆ ಸ್ಥಾನ ಸಿಗುವ ಸಾಧ್ಯತೆಗಳು ಇವೆ.  ಇದೇ ತಿಂಗಳಿನ ಕೊನೆಯ ವಾರದಲ್ಲಿ ನ್ಯೂಜಿಲೆಂಡ್ ಪ್ರವಾಸಕ್ಕೆ ತೆರಳಲಿರುವ ಭಾರತ ತಂಡದಲ್ಲಿ ಪ್ರಸಿದ್ಧ ಅವಕಾಶ ಪಡೆಯಬಹುದು ಎನ್ನಲಾಗಿದೆ.

ಹೋದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ  ಪ್ರಸಿದ್ಧ ಸೂಪರ್ ಓವರ್‌ ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದರು. ಅವರು ಕೋಲ್ಕತ್ತ ನೈಟ್ ರೈಡರ್ಸ್ ತಂವನ್ನು ಪ್ರತಿನಿಧಿಸಿದ್ದರು. ವಿಜಯ್ ಹಜಾರೆ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಅವರು 19 ವಿಕೆಟ್‌ಗಳನ್ನು ಗಳಿಸಿದ್ದರು. ಹೋದ ವರ್ಷ ಭಾರತ ಎ ತಂಡದಲ್ಲಿಯೂ ಆಡಿದ್ದರು.

ಸೈನಿ ಬಗ್ಗೆಯೂ ಮೆಚ್ಚುಗೆಯ ಮಾತುಗಳನ್ನಾಡಿದ ಕೊಹ್ಲಿ, ‘ಅವರು ಏಕದಿನ ಕ್ರಿಕೆಟ್ ಮಾದರಿಯಲ್ಲಿ ಉತ್ತಮವಾಗಿ ಆಡಿದ್ದಾರೆ. ಟಿ20ಯಲ್ಲಿಯೂ ಚೆನ್ನಾಗಿ ಆಡಬಲ್ಲರು. ಅನುಭವಿ ಬೌಲರ್‌ಗಳಾದ ಬೂಮ್ರಾ, ಭುವಿ ಮತ್ತು ಶಾರ್ದೂಲ್ ಅವರೂ ಉತ್ತಮವಾಗಿ ಆಡುತ್ತಿದ್ದಾರೆ. ಇದು ತಂಡದ ವಿಶ್ವಾಸ ಹೆಚ್ಚಿಸಿದೆ.  ಬೂಮ್ರಾ ಮರಳಿ ಬಂದಿರುವುದು ಆಶಾದಾಯಕ. ಚೆನ್ನಾಗಿ ಬೌಲಿಂಗ್ ಮಾಡಿದ್ದಾರೆ’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು