ಗುರುವಾರ , ಅಕ್ಟೋಬರ್ 29, 2020
20 °C
ಮನೀಷ್ ಪಾಂಡೆ ವಿನ್ನಿಂಗ್ ರನ್‌

ಟ್ವೆಂಟಿ–20 ಕ್ರಿಕೆಟ್: ಭಾರತಕ್ಕೆ ರೋಚಕ ಜಯ

ಪಿಟಿಐ Updated:

ಅಕ್ಷರ ಗಾತ್ರ : | |

Deccan Herald

ಚೆನ್ನೈ: ಶಿಖರ್ ಧವನ್ ಮತ್ತು ರಿಷಭ್ ಪಂತ್ ಅವರ ಜೊತೆಯಾಟದ ಫಲವಾಗಿ ಭಾರತ ತಂಡವು ಭಾನುವಾರ ರಾತ್ರಿ ಇಲ್ಲಿ ನಡೆದ ಟ್ವೆಂಟಿ–20 ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು ರೋಚಕ ಜಯ ಸಾಧಿಸಿತು.

ಇದರೊಂದಿಗೆ ಆತಿಥೇಯರು ಸರಣಿಯನ್ನು 3–0ಯಿಂದ ಬುಟ್ಟಿಗೆ ಹಾಕಿಕೊಂಡರು. ಚುಟುಕು ಕ್ರಿಕೆಟ್‌ನ ವಿಶ್ವ ಚಾಂಪಿಯನ್ ವಿಂಡೀಸ್‌ ಬರಿಗೈಯಲ್ಲಿ ತವರಿಗೆ ಮರಳಿತು.  ಟಾಸ್ ಗೆದ್ದು ಬ್ಯಾಟಿಂಗ್  ಆಯ್ಕೆ ಮಾಡಿಕೊಂಡ ವೆಸ್ಟ್ ಇಂಡೀಸ್ ತಂಡವು 20 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 181 ರನ್‌ಗಳನ್ನು ಗಳಿಸಿತು.  

ಬ್ಯಾಟ್ಸ್‌ಮನ್ ನಿಕೊಲಾಸ್ ಪೂರನ್ (ಔಟಾಗದೆ 53) ಮತ್ತು ಡರೆನ್ ಬ್ರಾವೊ (ಔಟಾಗದೆ 43) ಆವರು ತಂಡಕ್ಕೆ ಬಲ ತುಂಬಿದರು.

ಭಾರತ ತಂಡವು ಸುಲಭವಾಗಿ ಗುರಿ ಮುಟ್ಟಲು ವಿಂಡೀಸ್ ಬೌಲರ್‌ಗಳು ಬಿಡಲಿಲ್ಲ.

ಆರಂಭದಲ್ಲಿಯೇ ಪೆಟ್ಟು ಕೊಟ್ಟರು.45 ರನ್‌ಗಳು ಸೇರುವಷ್ಟರಲ್ಲಿ ರೋಹಿತ್ ಶರ್ಮಾ (4 ರನ್) ಮತ್ತು ಕೆ.ಎಲ್. ರಾಹುಲ್ (17 ರನ್) ಬೇಗನೆ  ಔಟಾದರು. ಈ ಹಂತದಲ್ಲಿ ಜೊತೆಗೂಡಿದ ದೆಹಲಿ ಜೋಡಿ ಶಿಖರ್ ಧವನ್ (92; 62ಎಸೆತ, 10ಬೌಂಡರಿ, 2ಸಿಕ್ಸರ್)ಮತ್ತು ರಿಷಭ್ ಪಂತ್   (58;38ಎಸೆತ, 5ಬೌಂಡರಿ, 3ಸಿಕ್ಸರ್) ಕುಸಿತವನ್ನು ತಡೆದರು. ಇಬ್ಬರೂ ಎಡಗೈ ಬ್ಯಾಟ್ಸ್‌ಮನ್‌ಗಳು  ಮೂರನೇ ವಿಕೆಟ್‌ ಜೊತೆಯಾಟದಲ್ಲಿ 130 ರನ್‌ ಗಳಿಸಿದರು.   

ಆದರೆ, ತಂಡದ ಮೊತ್ತ 18.2  ಓವರ್‌ಗಳಲ್ಲಿ 175 ರನ್‌ಗಳಾಗಿದ್ದಾಗ ರಿಷಭ್ ಪಂತ್ ಔಟಾದರು.  ಕೊನೆಯ ಓವರ್‌ನಲ್ಲಿ ತಂಡಕ್ಕೆ ಗೆಲ್ಲಲು ಐದು ರನ್‌ಗಳ ಅವಶ್ಯಕತೆ ಇತ್ತು.  ಶಿಖರ್ ಮತ್ತು ಮನೀಷ್  ಕ್ರೀಸ್‌ನಲ್ಲಿದ್ದರು.  ಆದರೆ, ಬೌಲರ್‌ ಫ್ಯಾಬಿಯಾನ್ ಅಲೆನ್ ತಮ್ಮ ತಂಡವನ್ನು ಸೋಲಿನಿಂದ ಪಾರು ಮಾಡುವ ಪ್ರಯತ್ನ ಮಾಡಿದರು. ಅವರು ಮೊದಲ ಎಸೆತದಲ್ಲಿ   ಶಿಖರ್ ಎರಡು ರನ್ ಗಳಿಸಿದರು. ಎರಡನೇಯದ್ದರಲ್ಲಿ ಮನೀಷ್ ಒಂದು ಮತ್ತು ಮೂರನೆಯದ್ದರಲ್ಲಿ ಒಂದು ರನ್ ಪಡೆದರು. ನಾಲ್ಕನೇ ಎಸೆತದಲ್ಲಿ ಶಿಖರ್ ಒಂದೂರ ರನ್ ಪಡೆಯಲಿಲ್ಲ.

ಐದನೇ ಎಸೆತದಲ್ಲಿ ಗೆಲುವಿನ ರನ್ ಬಾರಿಸುವ ಯತ್ನದಲ್ಲಿ ಶಿಖರ್ ಅವರು ಕೀರನ್ ಪೊಲಾರ್ಡ್ ಅವರಿಗೆ ಕ್ಯಾಚಿತ್ತಾಗ ಪ್ರೇಕ್ಷಕರ ಗ್ಯಾಲರಿ ಸ್ತಬ್ಧವಾಯಿತು. ಪಂದ್ಯ ಟೈ ಆಗುವ ಸಾಧ್ಯತೆ ಇತ್ತು. ಕೊನೆಯ ಎಸೆತದಲ್ಲಿ ಕ್ರಿಸ್‌ನಲ್ಲಿದ್ದ ಮನೀಷ್ ಮೇಲೆ ಎಲ್ಲರ ನಿರೀಕ್ಷೆಯ ಕಣ್ಣುಗಳು ನೆಟ್ಟವು. ಇನ್ನೊಂದು ಬದಿಯಲ್ಲಿ ದಿನೇಶ್ ಕಾರ್ತಿಕ್ ಇದ್ದರು.

ಫ್ಯಾಬಿಯಾನ್ ಹಾಕಿದ ಎಸೆತವನ್ನು ಪುಷ್ ಮಾಡಿದ ಮನೀಷ್ ಚುರುಕಾಗಿ ಒಂದು ರನ್ ಓಡಿದರು. ರನ್‌ ಔಟ್ ಮಾಡುವ ವಿಂಡೀಸ್ ಫೀಲ್ಡರ್‌ಗಳ ಪ್ರಯತ್ನ ಫಲಿಸಲಿಲ್ಲ. ಭಾರತದ ಪಾಳೆಯದಲ್ಲಿ ಜಯಭೇರಿ ಮೊಳಗಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು