ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 WC: ವಾರ್ನರ್-ಮಾರ್ಶ್ ಅಬ್ಬರ; ವಿಂಡೀಸ್ ವಿರುದ್ಧ ಆಸೀಸ್‌ಗೆ ಗೆಲುವು

Last Updated 6 ನವೆಂಬರ್ 2021, 13:45 IST
ಅಕ್ಷರ ಗಾತ್ರ

ಅಬುಧಾಬಿ: ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಶನಿವಾರ ನಡೆದ ಸೂಪರ್-12 ಹಂತದ ಒಂದನೇ ಗುಂಪಿನ ಪಂದ್ಯದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ಆಸ್ಟ್ರೇಲಿಯಾ ಎಂಟು ವಿಕೆಟ್ ಅಂತರದ ಭರ್ಜರಿ ಗೆಲುವು ದಾಖಲಿಸಿದೆ.

158 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ, ಡೇವಿಡ್ ವಾರ್ನರ್ (89*) ಹಾಗೂ ಮಿಚೆಲ್ ಮಾರ್ಶ್ (53*) ಬಿರುಸಿನ ಅರ್ಧಶತಕಗಳ ನೆರವಿನಿಂದ 16.2 ಓವರ್‌ಗಳಲ್ಲಿ ಎರಡು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.

ಇದರೊಂದಿಗೆ ನಾಲ್ಕನೇ ಗೆಲುವು ದಾಖಲಿಸಿರುವ ಆಸೀಸ್, ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ನೆಗೆದಿದೆ. ಅಲ್ಲದೆ ಸೆಮಿಫೈನಲ್ ಪ್ರವೇಶದ ಸನಿಹದಲ್ಲಿದೆ.

ಈಗ ದಕ್ಷಿಣ ಆಫ್ರಿಕಾ ಸೆಮಿಫೈನಲ್ ಪ್ರವೇಶಿಸಲು, ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಗ್ರೂಪ್ 1ರ ಅಂತಿಮ ಪಂದ್ಯದಲ್ಲಿ ಬೃಹತ್ ಗೆಲುವು ದಾಖಲಿಸಬೇಕಿದೆ.

ಇನ್ನೊಂದೆಡೆ ಹಾಲಿ ಚಾಂಪಿಯನ್ ವೆಸ್ಟ್‌ಇಂಡೀಸ್ ಐದು ಪಂದ್ಯಗಳಲ್ಲಿ ಒಂದು ಪಂದ್ಯದಲ್ಲಷ್ಟೇ ಗೆಲುವು ದಾಖಲಿಸಲು ಸಾಧ್ಯವಾಗಿದೆ. ಅಲ್ಲದೆ ಡ್ವೇನ್ ಬ್ರಾವೊ ಸೋಲಿನೊಂದಿಗೆ ವಿದಾಯ ಹಾಡಿದ್ದಾರೆ. 'ಯೂನಿವರ್ಸ್ ಬಾಸ್' ಖ್ಯಾತಿಯ ಕ್ರಿಸ್ ಗೇಲ್ ಅವರಿಗೂ ಕೊನೆಯ ಪಂದ್ಯ ಎಂದೇ ಅಂದಾಜಿಸಲಾಗಿದೆ.

ಸವಾಲಿನ ಮೊತ್ತ ಬೆನ್ನತ್ತಿದ ಆಸೀಸ್‌ಗೆ ನಾಯಕ ಆ್ಯರನ್ ಫಿಂಚ್ (9) ಬೇಗನೇ ನಷ್ಟವಾದರೂ ದ್ವಿತೀಯ ವಿಕೆಟ್‌ಗೆ 124 ರನ್‌ಗಳ ಜೊತೆಯಾಟ ಕಟ್ಟಿದ ವಾರ್ನರ್ ಹಾಗೂ ಮಾರ್ಶ್ ಗೆಲುವಿನ ರೂವಾರಿಯೆನಿಸಿದರು.

ವಾರ್ನರ್-ಮಾರ್ಶ್ ಜೋಡಿಯು ವಿಂಡೀಸ್ ಬೌಲರ್‌ಗಳನ್ನು ಮನಬಂದಂತೆ ದಂಡಿಸಿದರು. 56 ಎಸೆತಗಳನ್ನು ಎದುರಿಸಿದ ವಾರ್ನರ್ 89 ರನ್ ಗಳಿಸಿ (9 ಬೌಂಡರಿ, 4 ಸಿಕ್ಸರ್) ಔಟಾಗದೆ ಉಳಿದರು. ಅವರಿಗೆ ತಕ್ಕ ಸಾಥ್ ನೀಡಿದ ಮಾರ್ಶ್ 32 ಎಸೆತಗಳಲ್ಲಿ 53 ರನ್ (5 ಬೌಂಡರಿ, 2 ಸಿಕ್ಸರ್) ಗಳಿಸಿ ಮಿಂಚಿದರು.

ಈ ಮೊದಲು ನಾಯಕ ಕೀರನ್ ಪೊಲಾರ್ಡ್ (44) ಬಿರುಸಿನ ಬ್ಯಾಟಿಂಗ್ ನೆರವಿನಿಂದ ವಿಂಡೀಸ್ ಏಳು ವಿಕೆಟ್ ನಷ್ಟಕ್ಕೆ 157 ರನ್‌ಗಳ ಸ್ಪರ್ಧಾತ್ಮಕ ಮೊತ್ತ ಪೇರಿಸಿತ್ತು.

35 ರನ್ ಗಳಿಸುವಷ್ಟರಲ್ಲಿ ವಿಂಡೀಸ್ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕ್ರಿಸ್ ಗೇಲ್ (15), ನಿಕೋಲಸ್ ಪೂರನ್ (4) ಹಾಗೂ ರೋಸ್ಟನ್ ಚೇಸ್ (0) ಬೇಗನೇ ನಿರ್ಗಮಿಸಿದರು.

ಈ ನಡುವೆ ಎವಿನ್ ಲೂಯಿಸ್ (29) ಹಾಗೂ ಶಿಮ್ರೊನ್ ಹೆಟ್ಮೆಯೆರ್ (27) ಉಪಯುಕ್ತ ಇನ್ನಿಂಗ್ಸ್ ಕಟ್ಟಿದರು. ಕೊನೆಯ ಹಂತದಲ್ಲಿ ನಾಯಕ ಪೊಲಾರ್ಡ್ ಕೇವಲ 31 ಎಸೆತದಲ್ಲಿ 44 ರನ್ (4 ಬೌಂಡರಿ, 1 ಸಿಕ್ಸರ್) ಗಳಿಸಿ ತಂಡವನ್ನು ಸವಾಲಿನ ಮೊತ್ತದತ್ತ ಮುನ್ನಡೆಸಿದರು.

ಇನ್ನಿಂಗ್ಸ್‌ನ ಅಂತಿಮ ಓವರ್‌ನ ಕೊನೆಯ ಎರಡು ಎಸೆತಗಳನ್ನು ಸಿಕ್ಸರ್‌ಗಟ್ಟಿದ ಆ್ಯಂಡ್ರೆ ರಸೆಲ್ (18 ರನ್, 7 ಎಸೆತ) ವಿಂಡೀಸ್‌ಗೆ ನೆರವಾದರು. ಆಸೀಸ್ ಪರ ಜೋಶ್ ಹ್ಯಾಜಲ್‌ವುಡ್ ನಾಲ್ಕು ವಿಕೆಟ್ ಕಬಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT