ಕೇಪ್‌ಟೌನ್: ಐಸಿಸಿ ಮಹಿಳಾ ಟಿ20 ವಿಶ್ವಕಪ್ ಟೂರ್ನಿಯ ಫೈನಲ್ ಮೇಲೆ ಕಣ್ಣಿಟ್ಟಿರುವ ಭಾರತ ತಂಡ, ಗುರುವಾರ ನಡೆಯಲಿರುವ ನಾಲ್ಕರಘಟ್ಟದ ಹಣಾಹಣಿಯಲ್ಲಿ ಆಸ್ಟ್ರೇಲಿಯಾ ತಂಡದ ಸವಾಲು ಎದುರಿಸಲಿದೆ.
ಲೀಗ್ ಹಂತದಲ್ಲಿ ಚೇತರಿಕೆಯ ಪ್ರದರ್ಶನ ನೀಡುವಲ್ಲಿ ಎಡವಿರುವ ಹರ್ಮನ್‌ಪ್ರೀತ್ ಕೌರ್ ಬಳಗ, ಪ್ರಶಸ್ತಿ ಸುತ್ತು ತಲುಪಬೇಕಾದರೆ ಆಟದ ಎಲ್ಲ ವಿಭಾಗಗಳಲ್ಲೂ ಪುಟಿದೆದ್ದು ನಿಲ್ಲಬೇಕಿದೆ.
2020ರ ಟೂರ್ನಿಯ ಫೈನಲ್‌ನಲ್ಲಿ ತನಗೆ ಎದುರಾಗಿದ್ದ ಸೋಲಿಗೆ ಮುಯ್ಯ ತೀರಿಸುವ ಅವಕಾಶ ಭಾರತಕ್ಕೆ ಲಭಿಸಿದೆ. ಮೆಲ್ಬರ್ನ್‌ನಲ್ಲಿ ನಡೆದಿದ್ದ ಫೈನಲ್‌ನಲ್ಲಿ ಆಸ್ಟ್ರೇಲಿಯಾ, 85 ರನ್‌ಗಳಿಂದ ಗೆದ್ದಿತ್ತು.
ಭಾರತವು ಕಳೆದ ಐದು ವರ್ಷಗಳಲ್ಲಿ ವಿಶ್ವದ ಅಗ್ರಮಾನ್ಯ ತಂಡಗಳಲ್ಲಿ ಒಂದೆನಿಸಿದೆಯಾದರೂ, ಐಸಿಸಿಯ ಯಾವುದೇ ಪ್ರಮುಖ ಟೂರ್ನಿ ಗೆದ್ದುಕೊಂಡಿಲ್ಲ. ನಾಕೌಟ್ ಹಂತದಲ್ಲಿ ಪದೇ ಪದೇ ಇಂಗ್ಲೆಂಡ್ ಅಥವಾ ಆಸ್ಟ್ರೇಲಿಯಾದ ಎದುರು ಮುಗ್ಗರಿಸಿದೆ.
ಭಾರತ ತಂಡ ಲೀಗ್ ಹಂತದಲ್ಲಿ ಮೂರು ಪಂದ್ಯಗಳನ್ನು ಗೆದ್ದು ಸೆಮಿಯಲ್ಲಿ ಸ್ಥಾನ ಪಡೆದಿದೆ. ಇಂಗ್ಲೆಂಡ್ ವಿರುದ್ಧ ಸೋಲು ಎದುರಾಗಿತ್ತು. ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡದಿರುವುದು ಭಾರತದ ಚಿಂತೆಗೆ ಕಾರಣವಾಗಿದೆ.
ಸ್ಮೃತಿ ಮಂದಾನ, ಶಫಾಲಿ ವರ್ಮಾ ಮತ್ತು ರಿಚಾ ಘೋಷ್ ಅವರು ಮಾತ್ರ ತಮ್ಮ ಸಾಮರ್ಥ್ಯ ತೋರಿಸಿದ್ದಾರೆ. ಜೆಮಿಮಾ ರಾಡ್ರಿಗಸ್ ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಬೇಕಿದೆ.
ಟೂರ್ನಿಯಲ್ಲಿ ಇದುವರೆಗೆ ಮಿಂಚಲು ವಿಫಲವಾಗಿರುವ ಹರ್ಮನ್‌ಪ್ರೀತ್ ಅವರು ಅತಿಯಾದ ಒತ್ತಡದಲ್ಲಿದ್ದಾರೆ. ತಂಡವನ್ನು ಫೈನಲ್‌ನತ್ತ ಮುನ್ನಡೆಸುವ ಜತೆಯಲ್ಲಿ, ಗೆಲುವಿಗೆ ವೈಯಕ್ತಿಕ ಕೊಡುಗೆ ನೀಡುವ ಸವಾಲೂ ಅವರ ಮುಂದಿದೆ.
ಬೌಲಿಂಗ್‌ನಲ್ಲಿ ರೇಣುಕಾ ಸಿಂಗ್ ಮತ್ತು ದೀಪ್ತಿ ಶರ್ಮಾ ಅವರನ್ನು ಹೊರತುಪಡಿಸಿದರೆ, ಇತರರಿಂದ ಪ್ರಭಾವಿ ಪ್ರದರ್ಶನ ಮೂಡಿಬಂದಿಲ್ಲ. ಇಂಗ್ಲೆಂಡ್ ವಿರುದ್ಧ 15 ರನ್‌ಗಳಿಗೆ ಐದು ವಿಕೆಟ್ ಪಡೆದಿದ್ದ ರೇಣುಕಾ ಒಟ್ಟು ಏಳು ವಿಕೆಟ್ ಗಳಿಸಿದ್ದಾರೆ.
ಸ್ಪಿನ್ನರ್ ದೀಪ್ತಿ ಪ್ರದರ್ಶನದಲ್ಲಿ ಸ್ಥಿರತೆ ಕಾಪಾಡಿಕೊಂಡಿದ್ದಾರೆ. ಪೂಜಾ ವಸ್ತ್ರಕರ್, ರಾಜೇಶ್ವರಿ ಗಾಯಕವಾಡ್ ಮತ್ತು ರಾಧಾ ಯಾದವ್ ಅವರು ಬಲಿಷ್ಠ ಬ್ಯಾಟಿಂಗ್ ಕ್ರಮಾಂಕ ಹೊಂದಿರುವ ಆಸ್ಟ್ರೇಲಿಯಾ ವಿರುದ್ಧ ಶಿಸ್ತಿನಿಂದ ಬೌಲಿಂಗ್ ಮಾಡಬೇಕಿದೆ.
‘ಇತ್ತೀಚೆಗೆ ತವರಿನಲ್ಲಿ ನಡೆದಿದ್ದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಆಸ್ಟ್ರೇಲಿಯಾಕ್ಕೆ ತಕ್ಕ ಪೈಪೋಟಿ ನೀಡಿದ್ದೆವು. ಆ ಸರಣಿಯಲ್ಲಿ ನೀಡಿದ ಪ್ರದರ್ಶನವು ಸಹಜವಾಗಿ ನಮ್ಮ ಆತ್ಮವಿಶ್ವಾಸ ಹೆಚ್ಚಿಸಿದೆ. ಅವರ ಶಕ್ತಿ– ದೌರ್ಬಲ್ಯ ಏನೆಂಬುದನ್ನು ಚೆನ್ನಾಗಿ ತಿಳಿದುಕೊಂಡಿದ್ದೇವೆ’ ಎಂದು ಹರ್ಮನ್‌ಪ್ರೀತ್ ಹೇಳಿದ್ದಾರೆ.
‘ಗುಂಪು 1’ ರಲ್ಲಿ ಆಡಿದ ಎಲ್ಲ ನಾಲ್ಕೂ ಪಂದ್ಯಗಳನ್ನು ಗೆದ್ದು ಸೆಮಿಫೈನಲ್ ಪ್ರವೇಶಿಸಿರುವ ಮೆಗ್ ಲ್ಯಾನಿಂಗ್ ನೇತೃತ್ವದ ಆಸ್ಟ್ರೇಲಿಯಾ, ಮತ್ತೊಂದು ಫೈನಲ್‌ನ ನಿರೀಕ್ಷೆಯಲ್ಲಿದೆ. ಕೊನೆಯ ಲೀಗ್ ಪಂದ್ಯದಲ್ಲಿ ಆಡದಿದ್ದ ವಿಕೆಟ್ ಕೀಪರ್ ಬ್ಯಾಟರ್ ಅಲಿಸಾ ಹೀಲಿ ಅವರು ಫಿಟ್ ಆಗಿದ್ದು, ಗುರುವಾರ ಕಣಕ್ಕಿಳಿಯಲಿದ್ದಾರೆ.
ಪಂದ್ಯ ಆರಂಭ: ಸಂಜೆ 6.30
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.