ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 WC: ಪಾಕಿಸ್ತಾನಕ್ಕೆ ಅಜೇಯ ಓಟ ಮುಂದುವರಿಸುವ ವಿಶ್ವಾಸ

ಸೂಪರ್ 12 ಹಂತದ ಕೊನೆಯ ಪಂದ್ಯ: ಸ್ಕಾಟ್ಲೆಂಡ್ ಎದುರಾಳಿ
Last Updated 6 ನವೆಂಬರ್ 2021, 10:27 IST
ಅಕ್ಷರ ಗಾತ್ರ

ಶಾರ್ಜಾ: ಮಾಜಿ ಚಾಂಪಿಯನ್ ಪಾಕಿಸ್ತಾನ ತಂಡವು ಅಜೇಯ ಓಟವನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದು, ಟಿ20 ವಿಶ್ವಕಪ್‌ನ ಎರಡನೇ ಗುಂಪಿನ ಪಂದ್ಯದಲ್ಲಿ ಭಾನುವಾರ ಸ್ಕಾಟ್ಲೆಂಡ್ ತಂಡಕ್ಕೆ ಎದುರಾಗಲಿದೆ.

2009ರಲ್ಲಿ ಚಾಂಪಿಯನ್ ಪಟ್ಟ ಧರಿಸಿದ್ದ ಪಾಕಿಸ್ತಾನ ತಂಡಕ್ಕೆ ಇದು ಸೂಪರ್ 12 ಹಂತದಲ್ಲಿ ಕೊನೆಯ ಪಂದ್ಯವಾಗಿದೆ. ಆಡಿದ ನಾಲ್ಕೂ ಪಂದ್ಯಗಳಲ್ಲಿ ಜಯಭೇರಿ ಮೊಳಗಿಸಿರುವ ಬಾಬರ್ ಆಜಂ ನಾಯಕತ್ವದ ಬಳಗ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಸೆಮಿಫೈನಲ್‌ನಲ್ಲೂ ಸ್ಥಾನ ಖಚಿತಪಡಿಸಿಕೊಂಡಿದೆ.

ಪಾಕ್ ತಂಡದ ಆರಂಭಿಕ ಬ್ಯಾಟರ್‌ಗಳಾದ ಬಾಬರ್ ಹಾಗೂ ಮೊಹಮ್ಮದ್ ರಿಜ್ವಾನ್ ಭರ್ಜರಿ ಲಯದಲ್ಲಿದ್ದಾರೆ. ಫಖರ್ ಜಮಾನ್‌, ಮೊಹಮ್ಮದ್ ಹಫೀಜ್ ಹಾಗೂ ಶೋಯಬ್ ಮಲಿಕ್ ಬ್ಯಾಟಿಂಗ್‌ನಲ್ಲಿ ಸ್ಥಿರತೆ ಕಾಯ್ದುಕೊಳ್ಳುವ ವಿಶ್ವಾಸದಲ್ಲಿದ್ದಾರೆ.

ವೇಗಿಗಳಾದ ಹ್ಯಾರಿಸ್ ರವೂಫ್‌ ಹಾಗೂ ಶಹೀನ್ ಶಾ ಆಫ್ರಿದಿ ಇದುವರೆಗೆ ಟೂರ್ನಿಯಲ್ಲಿ ಕ್ರಮವಾಗಿ ಏಳು ಮತ್ತು ಐದು ವಿಕೆಟ್ ಗಳಿಸಿ ಪರಿಣಾಮಕಾರಿಯಾಗಿದ್ದಾರೆ. ಇವರಿಗೆ ಸ್ಪಿನ್ನರ್‌ಗಳಾದ ಇಮದ್ ವಾಸೀಂ ಮತ್ತು ಶಾದಾಬ್ ಖಾನ್‌ ಕೂಡ ಉತ್ತಮ ಬೆಂಬಲ ನೀಡುತ್ತಿದ್ದಾರೆ. ಈ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಕೆಲವರಿಗೆ ವಿಶ್ರಾಂತಿ ನೀಡಿ ಇದುವರೆಗೆ ಕಣಕ್ಕಿಳಿಯದವರಿಗೆ ಅವಕಾಶ ನೀಡುವ ಸಾಧ್ಯತೆಯಿದೆ.

ಆಡಿದ ನಾಲ್ಕೂ ಪಂದ್ಯಗಳಲ್ಲಿ ನಿರಾಸೆ ಅನುಭವಿಸಿರುವ ಕೈಲ್ ಕೊಯ್ಜರ್‌ ನಾಯಕತ್ವದ ಸ್ಕಾಟ್ಲೆಂಡ್ ತಂಡವು ಗೆಲುವಿನೊಂದಿಗೆ ಅಭಿಯಾನ ಕೊನೆಗೊಳಿಸುವ ಹಂಬಲದಲ್ಲಿದೆ.

ಟಿ20 ರ‍್ಯಾಂಕಿಂಗ್‌

ಪಾಕಿಸ್ತಾನ - 2

ಸ್ಕಾಟ್ಲೆಂಡ್‌ - 14

ಪಂದ್ಯ ಆರಂಭ: ರಾತ್ರಿ 7.30 (ಭಾರತೀಯ ಕಾಲಮಾನ)

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT