ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 WC: ಸೂಪರ್ ಓವರ್‌ನಲ್ಲಿ ಬಾಬರ ಬಳಗಕ್ಕೆ ಮುಖಭಂಗ; ಎರಡನೇ ಜಯ ದಾಖಲಿಸಿದ ಅಮೆರಿಕ

Published 6 ಜೂನ್ 2024, 15:06 IST
Last Updated 6 ಜೂನ್ 2024, 15:06 IST
ಅಕ್ಷರ ಗಾತ್ರ

ಡಲ್ಲಾಸ್‌: ರೋಚಕವಾಗಿದ್ದ ಪಂದ್ಯದಲ್ಲಿ ಕ್ರಿಕೆಟ್‌ ಕೂಸು ಆತಿಥೇಯ ಅಮೆರಿಕ ಸೂಪರ್ ಓವರ್‌ನಲ್ಲಿ ಪಾಕಿಸ್ತಾನ ತಂಡಕ್ಕೆ ಸೋಲಿನ ಆಘಾತ ನೀಡಿ ಇತಿಹಾಸ ನಿರ್ಮಿಸಿತು. ವಿಶ್ವಕಪ್ ಎ ಗುಂಪಿನ ಪಂದ್ಯದಲ್ಲಿ ಅಮೆರಿಕ ಎರಡನೇ ಜಯ ದಾಖಲಿಸಿತು.

ಗ್ರ್ಯಾಂಡ್ ಪ್ರಯರಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದ ಅಮೆರಿಕ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಪಾಕಿಸ್ತಾನ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 159 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಭರ್ಜರಿ ಆಟ ಆರಂಭಿಸಿದ ಅಮೆರಿಕ ನಿಗದಿ ಓವರ್‌ಗಳಲ್ಲೇ ಗೆಲ್ಲುವಂತೆ ಕಂಡಿತು.

ನಾಯಕ ಮೊನಾಂಕ್ ಪಟೇಲ್  (50), ಆ್ಯಂಡ್ರಿಸ್ ಗೌಸ್  (35), ಆ್ಯರನ್ ಜೋನ್ಸ್ ಔಟಾಗದೇ 36 ) ಅವರ ಉಪಯುಕ್ತ ಆಟದ ನೆರವಿನಿಂದ ಗೆಲುವಿನತ್ತ ಹೆಜ್ಜೆ ಇಟ್ಟಿತು. ಕೊನೆ ಓವರ್‌ನಲ್ಲಿ ಗೆಲುವಿಗೆ 15 ರನ್ ಬೇಕಿತ್ತು. ಆದರೆ 14 ರನ್ ಗಳಿಸಿದ್ದರಿಂದ ಪಂದ್ಯ ಸೂಪರ್ ಓವರ್‌ಗೆ ಬೆಳೆಯಿತು.

ಅನುಭವಿ ಎಡಗೈ ವೇಗಿ ಮೊಹಮದ್‌ ಅಮೀರ್ ಮಾಡಿದ ಸೂಪರ್ ಓವರ್‌ನಲ್ಲಿ ಅಮೆರಿಕ ಒಂದು ವಿಕೆಟ್‌ಗೆ 18 ರನ್ ಗಳಿಸಿತು. ಅಮೀರ್ ಮೂರು ವೈಡ್ ನೀಡಿದ ಜೊತೆಗೆ ಓವರ್‌ ಥ್ರೋಗಳು ಕೂಡ ಪಾಕಿಸ್ತಾನ ತಂಡಕ್ಕೆ ದುಬಾರಿಯಾದವು. ಉತ್ತರವಾಗಿಸೌರಭ್ ನೇತ್ರವಾಲ್ಕರ್ ಅವರು ಮಾಡಿದ ಓವರ್‌ನಲ್ಲಿ ಪಾಕಿಸ್ತಾನ ತಂಡ 13 ರನ್‌ ಗಳಿಸಲಷ್ಟೇ ಶಕ್ತವಾಯಿತು. ಮೂರನೇ ಎಸೆತದಲ್ಲಿ ನಿತೀಶ್ ಉತ್ತಮ ಕ್ಯಾಚ್‌ ಹಿಡಿದರು. 

ನಾಯಕ ಬಾಬರ್‌ ಆಜಂ (44;43ಎ, 4x3, 6x2) ಮತ್ತು ಶಾದಾಬ್‌ ಖಾನ್‌ (40;25ಎ, 4x1, 6x3) ತಂಡಕ್ಕೆ ಚೇತರಿಕೆ ನೀಡಿದರು. ಮೂಡಿಗೆರೆ ಮೂಲದ ನಾಸ್ತುಷ್ ಕಂಜಿಗೆ ಮೂರು ವಿಕೆಟ್‌ ಪ‍ಡೆದು ಮಿಂಚಿದರು. ಸೌರಭ್ ಎರಡು ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌: ಪಾಕಿಸ್ತಾನ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 159 (ಬಾಬರ್‌ ಆಜಂ 44, ಶಾದಾಬ್‌ ಖಾನ್‌ 40, ಶಾಹೀನ್ ಶಾ ಆಫ್ರಿದಿ ಔಟಾಗದೇ 23; ನಾಸ್ತುಷ್‌ ಕೆಂಜಿಗೆ 30ಕ್ಕೆ 3, ಸೌರಭ್ ನೇತ್ರಾಳ್ವಕರ್ 18ಕ್ಕೆ 2)
ಅಮೆರಿಕ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 159 (ಮೊನಾಂಕ್ ಪಟೇಲ್ 50, ಆ್ಯಂಡ್ರಿಸ್ ಗೌಸ್ 35, ಆ್ಯರನ್ ಜೋನ್ಸ್ ಔಟಾಗದೇ 36, ಮೊಹಮದ್‌ ಅಮೀರ್‌ 25ಕ್ಕೆ1, ನಸೀಮ್ ಶಾ 26ಕ್ಕೆ1)  ಪಂದ್ಯ ಶ್ರೇಷ್ಠ: ಮೊನಾಂಕ್ ಪಟೇಲ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT