ಸೋಮವಾರ, ಅಕ್ಟೋಬರ್ 18, 2021
22 °C

ಅಫ್ಗಾನಿಸ್ತಾನದಲ್ಲಿ ಐಪಿಎಲ್ ಪ್ರಸಾರಕ್ಕೆ ನಿಷೇಧ ಹೇರಿದ ತಾಲಿಬಾನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ (ಪಿಟಿಐ): ಅಫ್ಗಾನಿಸ್ತಾನದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಪ್ರಸಾರವನ್ನು ತಾಲಿಬಾಲ್ ನಿಷೇಧಿಸಿದೆ.

ಹಲವು ವರ್ಷಗಳಿಂದ ಅಫ್ಗಾನಿಸ್ತಾನದಲ್ಲಿ ಐಪಿಎಲ್ ಅಪಾರ ಜನಪ್ರಿಯತೆ ಗಳಿಸಿದೆ. ಅಪಾರ ಸಂಖ್ಯೆಯಲ್ಲಿ ಜನರು ಟಿವಿಯಲ್ಲಿ ಪಂದ್ಯಗಳನ್ನು ವೀಕ್ಷಿಸುತ್ತಿದ್ದಾರೆ. ತಮ್ಮ ದೇಶದ ಕೆಲವು ಕ್ರಿಕೆಟಿಗರು ಐಪಿಎಲ್‌ನಲ್ಲಿ ಆಡುವುದನ್ನು ನೋಡಿ ಆನಂದಿಸಿದ್ದಾರೆ.

ಆದರೆ ಕಳೆದ ತಿಂಗಳು ದೇಶವನ್ನು ತಾಲಿಬಾನ್ ತನ್ನ ವಶಕ್ಕೆ ತೆಗೆದುಕೊಂಡ ನಂತರ ಮಹಿಳೆಯರು ಕ್ರೀಡೆಯಲ್ಲಿ ಭಾಗವಹಿಸುವುದನ್ನು ನಿರ್ಬಂಧಿಸಿತ್ತು.

‘ಅಫ್ಗಾನಿಸ್ತಾನ ರಾಷ್ಟ್ರೀಯ ಟಿವಿಯು ಐಪಿಎಲ್ ಪ್ರಸಾರವನ್ನು ನಿಲ್ಲಿಸಿದೆ. ಪಂದ್ಯದ ವೇಳೆ ಪ್ರದರ್ಶಿತವಾಗಬಹುದಾದ ಇಸ್ಲಾಂ ವಿರೋಧಿ ಅಂಶಗಳು, ಹುಡುಗಿಯರು ನರ್ತಿಸುವುದು ಮತ್ತು ಮಹಿಳೆಯರು ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ವೀಕ್ಷಿಸುವ ದೃಶ್ಯಾವಳಿಗಳು ಪ್ರಸಾರಗೊಳ್ಳುತ್ತವೆ. ಆದ್ದರಿಂದ ಪ್ರಸಾರವನ್ನು ಸ್ಥಗಿತಗೊಳಿಸಲು ಇಸ್ಲಾಮಿಕ್ ಎಮಿರೇಟ್ಸ್‌ ಆಫ್ ತಾಲಿಬಾನ್ ಆದೇಶ ನೀಡಿದೆ’ ಎಂದು ಅಫ್ಗಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಮಾಧ್ಯಮ ವ್ಯವಸ್ಥಾಪಕ ಎಂ. ಇಬ್ರಾಹಿಮ್ ಮೊಮಾಂದ್ ಟ್ವೀಟ್ ಮಾಡಿದ್ದಾರೆ.

‘ಇದೊಂದು ಹಾಸ್ಯಾಸ್ಪದ ಸಂಗತಿ. ಐಪಿಎಲ್ ಪ್ರಸಾರ ನಿಷೇಧ ಮಾಡಿರುವುದು ಸರಿಯಲ್ಲ’ ಎಂದು ಅಫ್ಗಾನಿಸ್ತಾನದ ಪತ್ರಕರ್ತ ಮತ್ತು ಇಲ್ಲಿಯ ರಕ್ಷಣಾ ಇಲಾಖೆಯ ಮಾಜಿ ವಕ್ತಾರ ಫವಾದ್ ಅಮಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಯುಎಇಯಲ್ಲಿ ನಡೆಯುತ್ತಿರುವ ಐಪಿಎಲ್‌ನಲ್ಲಿ ಅಫ್ಗನ್ ಆಟಗಾರರಾದ ರಶೀದ್ ಖಾನ್, ಮೊಹಮ್ಮದ್ ನಬಿ ಮತ್ತು ಮುಜೀಬ್ ಉರ್ ರೆಹಮಾನ್ ಕೂಡ ಆಡುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು