ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರ  ಏಕದಿನ ಕ್ರಿಕೆಟ್- ಟೇಲರ್ ಶತಕದ ಮಿಂಚು: ವಿಂಡೀಸ್ ಕ್ಲೀನ್‌ಸ್ವೀಪ್

Last Updated 14 ನವೆಂಬರ್ 2021, 14:41 IST
ಅಕ್ಷರ ಗಾತ್ರ

ಕರಾಚಿ (ಪಿಟಿಐ): ನಾಯಕಿ ಸ್ಟೆಫಾನಿ ಟೇಲರ್ ಅಜೇಯ ಶತಕದ ಬಲದಿಂದ ವೆಸ್ಟ್ ಇಂಡೀಸ್ ತಂಡವು ಭಾನುವಾರ ನಡೆದ ಪಾಕಿಸ್ತಾನ ಎದುರಿನ ಮಹಿಳೆಯರ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಜಯಭೇರಿ ಬಾರಿಸಿತು. ಇದರೊಂದಿಗೆ ಸರಣಿಯಲ್ಲಿ 3–0ಯಿಂದ ಕ್ಲೀನ್‌ ಸ್ವೀಪ್ ಮಾಡಿಕೊಂಡಿತು.

ಟಾಸ್ ಗೆದ್ದ ವಿಂಡೀಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಬ್ಯಾಟರ್ ಮುನೀಬಾ ಅಲಿ (58; 88ಎ, 8ಬೌಂಡರಿ) ಮತ್ತು ಅಲಿಯಾ ರಿಯಾಜ್ (ಔಟಾಗದೆ 44, 57ಎ) ಅವರ ಬ್ಯಾಟಿಂಗ್‌ ನೆರವಿನಿಂದ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 225 ರನ್ ಗಳಿಸಿತು. ಗುರಿ ಬೆನ್ನಟ್ಟಿದ ವಿಂಡೀಸ್ ತಂಡದ ಆರಂಭ ಚೆನ್ನಾಗಿರಲಿಲ್ಲ. ಕೇವಲ 15 ರನ್‌ಗಳಾಗುವಷ್ಟರಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡ ತಂಡವು ಆತಂಕದಲ್ಲಿತ್ತು. ಆದರೆ, ನಾಯಕಿಗೆ ತಕ್ಕ ಆಟವಾಡಿದ ಟೇಲರ್ (ಔಟಾಗದೆ 102, 117ಎ, 12ಬೌಂಡರಿ) ಆತಂಕ ದೂರ ಮಾಡಿದರು. ಅದರಿಂದಾಗಿ ತಂಡವು 44 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 226 ರನ್ ಗಳಿಸಿ ಜಯಭೇರಿ ಬಾರಿಸಿತು.

ಹೈಲಿ ಮ್ಯಾಥ್ಯೂಸ್ (49; 58ಎ, 8ಬೌಂಡರಿ) ಮತ್ತು ಅಜೇಯ ಅರ್ಧಶತಕ ಗಳಿಸಿದ ಚೆಡಿಯನ್ ನೇಷನ್ (ಔಟಾಗದೆ 51; 67ಎ, 7ಬೌಂಡರಿ) ತಂಡದ ಜಯಕ್ಕೆ ಮಹತ್ವದ ಕಾಣಿಕೆ ನೀಡಿದರು. ಟೇಲರ್ ಮತ್ತು ಮ್ಯಾಥ್ಯೂಸ್ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 83 ರನ್ ಸೇರಿಸಿದರು. ಮ್ಯಾಥ್ಯೂಸ್ ಔಟಾದ ನಂತರ ಮುರಿಯದ ಐದನೇ ವಿಕೆಟ್ ಜೊತೆಯಾಟದಲ್ಲಿ ಟೇಲರ್ ಮತ್ತು ನೇಷನ್ 128 ರನ್‌ ಸೇರಿಸಿದರು. ಇದರಿಂದಾಗಿ ತಂಡವು ಗೆಲುವಿನ ದಡ ಸೇರಿತು.

ಸಂಕ್ಷಿಪ್ತ ಸ್ಕೋರು: ಪಾಕಿಸ್ತಾನ: 50 ಓವರ್‌ಗಳಲ್ಲಿ 7ಕ್ಕೆ 225 (ಮುನೀಬಾ ಅಲಿ 58, ಒಮೇಮಾ ಸೊಹೈಲ್ 27, ಇರಾಮ್ ಜಾವೇದ್ 26, ಆಲಿಯಾ ರಿಯಾಜ್ ಔಟಾಗದೆ 44, ಶಕಿರಾ ಸೆಲ್ಮನ್ 40ಕ್ಕೆ2, ಅಲಿಯಾ ಅಲಿನ್ 41ಕ್ಕೆ2), ವೆಸ್ಟ್ ಇಂಡೀಸ್: 44 ಓವರ್‌ಗಳಲ್ಲಿ 4ಕ್ಕೆ 226 (ಸ್ಟೆಫಾನಿ ಟೇಲರ್ ಔಟಾಗದೆ 102, ಹೈಲಿ ಮ್ಯಾಥ್ಯೂಸ್ 49, ಚೆಡಿಯನ್ ನೇಷನ್ ಔಟಾಗದೆ 51, ಅನಾಮ್ ಅಮಿನ್ 45ಕ್ಕೆ2) ಫಲಿತಾಂಶ: ವೆಸ್ಟ್ ಇಂಡೀಸ್ ತಂಡಕ್ಕೆ 6 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT