ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚ್ ಕುರ್ಚಿಯ ‘ವಿರಾಟ್‌’ ರೂಪ

Last Updated 11 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆ ಈಗ ಕೋಟಿ ಕೋಟಿ ಆದಾಯ ತರುವ ಕೆಲಸವೂ ಹೌದು. ಜೊತೆಗೆ ನಾಯಕ ಮತ್ತು ತಂಡದ ತಾರಾ ವರ್ಚಸ್ಸಿನ ಆಟಗಾರರೊಂದಿಗೆ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುವ ಮುಳ್ಕಿನ ಗಾದಿಯೂ ಹೌದು. ಅಂತಹ ‘ಗುರು’ತರ ಸ್ಥಾನಕ್ಕಾಗಿ ಈಗ ಪೈಪೋಟಿ ನಡೆಯುತ್ತಿದೆ. ರವಿಶಾಸ್ತ್ರಿ ತಮ್ಮ ಸ್ಥಾನ ಉಳಿಸಿಕೊಳ್ಳುವರೇ ಅಥವಾ ಬೇರೆಯವರು ಬರುವರೇ ಎಂಬ ಕುತೂಹಲ ಕೆರಳಿದೆ.

***

ಹೋದ ಗುರುವಾರ ರಾತ್ರಿ ಗಯಾನದಲ್ಲಿ ವೆಸ್ಟ್‌ ಇಂಡೀಸ್ ಎದುರಿನ ಪಂದ್ಯವು ಮಳೆಯಿಂದ ಸ್ಥಗಿತವಾಯಿತು. ಅದರ ನಡುವೆ ಟಿವಿ ಕ್ಯಾಮೆರಾಗಳ ಗಮನ ಸೆಳೆದ ವಿದ್ಯಮಾನವೂ ನಡೆಯಿತು.

ಅದು ವಿರಾಟ್ ಕೊಹ್ಲಿಯ ನೃತ್ಯದ ಝಲಕ್‌. ಫೀಲ್ಡಿಂಗ್ ಮಾಡುವಾಗ, ವಿರಾಮದ ಅವಕಾಶ ಸಿಕ್ಕಾಗಲೆಲ್ಲ ತಮ್ಮ ಪ್ರತಿಭೆ ತೋರಿಸುವ ಕೊಹ್ಲಿ ಡ್ಯಾನ್ಸ್‌ ನೋಡುವ ಭಾಗ್ಯ ಎಲ್ಲ ಪ್ರೇಕ್ಷಕರಿಗೂ ಸಿಗುತ್ತಿದೆ. ಇತ್ತೀಚೆಗೆ ಅವರು ಚೆನ್ನಾಗಿ ನರ್ತಿಸುತ್ತಿದ್ದಾರೆ. ಆದರೆ ಅದಕ್ಕಿಂತ ಹೆಚ್ಚಾಗಿ ಅವರು ತಮ್ಮ ತಾಳಕ್ಕೆ ತಕ್ಕಂತೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯನ್ನು ಕುಣಿಸುತ್ತಿದ್ದಾರೆ.

ಅವರ ತಾರಾವರ್ಚಸ್ಸನ್ನು ಮೀರಿ ತಂಡದ ಬಗ್ಗೆ ಯಾವುದೇ ನಿರ್ಧಾರವನ್ನೂ ಬಿಸಿಸಿಐ ಸ್ವತಂತ್ರವಾಗಿ ತೆಗೆದುಕೊಳ್ಳುತ್ತಿಲ್ಲ. ಅದಕ್ಕೆ ಇತ್ತೀಚೆಗಿನ ತಾಜಾ ಉದಾಹರಣೆ ಭಾರತ ತಂಡದ ಕೋಚ್ ಆಯ್ಕೆಯ ವಿಷಯ.

‘ತಂಡದ ಕೋಚ್ ಆಗಿ ರವಿಶಾಸ್ತ್ರಿಯವರೇ ಮುಂದುವರಿ ಯಲಿ’ ಎಂದು ಕೊಹ್ಲಿ ನೀಡಿದ ಹೇಳಿಕೆಯನ್ನು ತಪ್ಪು ಎಂದು ಕೆಲವರು ಹೇಳಿದರು. ಕೋಚ್ ಆಯ್ಕೆ ಸಮಿತಿಯ ಸದಸ್ಯರೂ ಸೇರಿದಂತೆ ಬಹುತೇಕ ಎಲ್ಲರೂ ಮುಕ್ತ ಕಂಠದಿಂದ ಬೆಂಬಲಿಸಿದರು.

‘ಅದು ಅವರ ವೈಯಕ್ತಿಕ ಅಭಿಪ್ರಾಯ. ಅದನ್ನು ಗೌರವಿಸುತ್ತೇವೆ’ ಎಂದು ಕಪಿಲ್ ದೇವ್, ಸೌರವ್ ಗಂಗೂಲಿ, ಅನ್ಷುಮನ್ ಗಾಯವಾಡ್ ಸೇರಿದಂತೆ ಎಲ್ಲರೂ ಹೇಳಿದರು.

ದೇಶ, ವಿದೇಶಗಳ ಹಲವರು ಈಗಾಗಲೇ ಕೋಚ್ ಹುದ್ದೆಯ ರೇಸ್‌ನಲ್ಲಿದ್ದಾರೆ. ಆದರೆ ಕೊಹ್ಲಿಯವರಿಗೆ ತಮ್ಮೊಂದಿಗೆ ‘ಉತ್ತಮ ಹೊಂದಾಣಿಕೆ’ ಮಾಡಿಕೊಳ್ಳುವವರಷ್ಟೇ ಬೇಕು ಎಂಬುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ. ಹೋದ ತಿಂಗಳು ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ನಡೆದಿದ್ದ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಸೋತ ಭಾರತವನ್ನು ಹಲವರು ಟೀಕಿಸಿದ್ದರು. ಆದರೆ ಶಾಸ್ತ್ರಿಯವರ ಕೋಚ್‌ ಕೆಲಸ ಮತ್ತು ವಿರಾಟ್ ನಾಯಕತ್ವಗಳೆರಡೂ ಪ್ರಶ್ನಾತೀತವಾಗಿ ಉಳಿದಿದ್ದು ಆಶ್ಚರ್ಯಕರ.

2015ರಲ್ಲಿ ಡಂಕನ್ ಫ್ಲೆಚರ್ ಅವರು ವಿದಾಯ ಹೇಳಿದಾಗ ತಂಡಕ್ಕೆ ಡೇನಿಯಲ್ ವೆಟೋರಿ ಅವರನ್ನು ಆಯ್ಕೆ ಮಾಡಬೇಕು ಎಂದು ಕೊಹ್ಲಿ ಸಲಹೆ ನೀಡಿದ್ದರು. ಆಗ ವೆಟೋರಿಯವರು ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಕೋಚ್ ಆಗಿದ್ದರು.

ಆನಂತರ 2016ರ ವಿಶ್ವ ಟ್ವೆಂಟಿ–20 ಟೂರ್ನಿ ಮುಗಿಯುವವರೆಗೂ ತಂಡದ ನಿರ್ದೇಶಕರಾಗಿದ್ದ ರವಿಶಾಸ್ತ್ರಿ ಮಾರ್ಗದರ್ಶಕರೂ ಆಗಿದ್ದರು. ಭರತ್ ಅರುಣ್ ಬೌಲಿಂಗ್ ಮತ್ತು ಸಂಜಯ್ ಬಂಗಾರ್ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಆದರೆ 2017ರಲ್ಲಿ ರವಿಗೆ ಅವಕಾಶ ಸಿಗದೇ ಕುಂಬ್ಳೆ ಕೋಚ್‌ ಆಗಿದ್ದರು. ನಂತರದ ಕಥೆ ಎಲ್ಲರಿಗೂ ಗೊತ್ತಿರುವಂತಹದ್ದೇ. ಕುಂಬ್ಳೆಯವರ ಸುಧಾರಣೆ ಕ್ರಮಗಳು, ಶಿಸ್ತಿನ ಪಾಠ ಮತ್ತು ತಾರಾ ವರ್ಚಸ್ಸು ಬಹುತೇಕರಿಗೆ ರುಚಿಸಿರಲಿಲ್ಲವೇನೊ?

ಚಾಂಪಿಯನ್ಸ್‌ ಟ್ರೋಫಿ ಫೈನಲ್‌ನಲ್ಲಿ ಕೊಹ್ಲಿ ಬಳಗ ಸೋತಾಗ ಎಲ್ಲರ ಆಕ್ರೋಶ ಕೋಚ್ ಅನಿಲ್ ಕುಂಬ್ಳೆಯವರ ಮೇಲೆ ತಿರುಗಿತ್ತು. ಕುಂಬ್ಳೆಯವರು ತಾವೇ ರಾಜೀನಾಮೆ ನೀಡಿ ಹೊರಬಂದಿದ್ದರು. ಆಗ ರವಿಶಾಸ್ತ್ರಿ ಅವರನ್ನು ಕೋಚ್ ಆಗಿ ತಂಡಕ್ಕೆ ತರಲು ಕೊಹ್ಲಿ ಅವರ ಪ್ರಭಾವ ನಡೆದಿತ್ತು ಎಂಬ ಮಾತು ಕೇಳಿಬಂದಿತ್ತು.

ಭಾರತ ಕ್ರಿಕೆಟ್‌ನ ಇತಿಹಾಸದ ಪುಟಗಳನ್ನು ತಿರುವಿ ನೋಡಿ. ಯಾವುದೇ ಕೋಚ್ ಕೂಡ ಇಷ್ಟೊಂದು ಅನುಕೂಲಕರ ವಾತಾವರಣ ಮತ್ತು ನಾಯಕನ ಸಾಮೀಪ್ಯವನ್ನು ಪಡೆದಿರಲಿಲ್ಲ. ಈ ವಿಷಯದಲ್ಲಿ ಮಾಜಿ ಎಡಗೈ ಸ್ಪಿನ್ನರ್ ರವಿ ಅದೃಷ್ಟಶಾಲಿ!

ದಿಗ್ಗಜರಿಗೆ ಸವಾಲು

ಈ ಸಲದ ಕೋಚ್ ಆಯ್ಕೆಯಲ್ಲಿ ಕುತೂಹಲ ಕೆರಳಿಸಿರುವ ಮತ್ತೊಂದು ವಿಷಯವಿದೆ. ಆಯ್ಕೆ ಮಾಡಬೇಕಾದ ಕ್ರಿಕೆಟ್ ಸಲಹಾ ಸಮಿತಿಯಲ್ಲಿರುವ ಕಪಿಲ್ ದೇವ್, ಅನ್ಷುಮನ್ ಗಾಯಕವಾಡ್ ಮತ್ತು ಮಹಿಳಾ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಅವರ ಜೀವನದ ಮಹತ್ವದ ಘಟ್ಟ ಇದಾಗಬಹುದು.

ಅವರು ನಾಯಕನ ‘ಆಟ’ಕ್ಕೆ ಮಣೆ ಹಾಕುವರೋ ಅಥವಾ ಅದರಾಚೆಗೂ ತಂಡದ ಹಿತಾಸಕ್ತಿಗೆ ಗಮನ ನೀಡುವರೋ ಎಂಬ ಪ್ರಶ್ನೆ ಕಾಡುತ್ತಿದೆ. ಏಕೆಂದರೆ ಈ ಬಾರಿಯೂ ಲಾಲ್‌ಚಂದ್ ರಜಪೂತ್, ಟಾಮ್ ಮೂಡಿ ಅವರಂತಹ ಅನುಭವಿ ಕೋಚ್‌ಗಳು ರೇಸ್‌ನಲ್ಲಿದ್ದಾರೆ. ಆದರೆ ತಂಡದ ಸಮಗ್ರತೆ ಮತ್ತು ತಾರಾ ವರ್ಚಸ್ಸಿನ ಆಟಗಾರರನ್ನು ಒಗ್ಗೂಡಿಸಿಕೊಂಡು ಹೋಗುವವರಿಗೆ ಪ್ರಾಶಸ್ತ್ಯ ಸಿಗುವುದು ಖಚಿತ.

ಜೂನಿಯರ್ ವಿಭಾಗದಲ್ಲಿ ರಾಹುಲ್ ದ್ರಾವಿಡ್ ಅವರ ಗರಡಿಯಲ್ಲಿ ಪಳಗಿ ಬರುವ ಯುವ ಪ್ರತಿಭೆಗಳಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಕೊಡುವ ಮತ್ತು ಸಮರ್ಪಕವಾಗಿ ಬಳಸಿಕೊಳ್ಳುವ ಜಾಣ್ಮೆಯೂ ಕೋಚ್‌ಗೆ ಇರಬೇಕು. ಆಗ ಮಾತ್ರ ಬೆಂಚ್‌ ಸ್ಟ್ರೆಂಥ್ ಮತ್ತು ಸೀನಿಯರ್ ಸ್ಟ್ರೆಂಥ್ ಎರಡೂ ಆರೋಗ್ಯಕರ ಪೈಪೋಟಿ ನಡೆಸಲು ಸಾಧ್ಯ.

ಮುಳ್ಳಿನ ಕುರ್ಚಿ

ಈ ದೇಶದ ಕ್ರಿಕೆಟ್ ತಂಡದ ಕೋಚ್ ಹುದ್ದೆ ಅತ್ಯಂತ ಪ್ರತಿಷ್ಠಿತ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಅಷ್ಟೇ ಕಠಿಣ ಸವಾಲಿನದ್ದೂ ಹೌದು. ತಂಡ ಜಯದ ಹಾದಿಯಲ್ಲಿದ್ದರೆ ಕೋಚ್‌ಗೆ ಅತ್ಯುನ್ನತ ಗೌರವ.
ಒಂದೊಮ್ಮೆ ಸೋಲು ಎದುರಾದರೆ ಕೋಟ್ಯಂತರ ಅಭಿಮಾನಿಗಳು, ಟೀಕಾಕಾರರ ಕೆಂಗಣ್ಣು ಬೀಳುವುದು ಕೋಚ್ ಮೇಲೆ. ನಂತರ ನಾಯಕ ಅಥವಾ ಪ್ರಮುಖ ಆಟಗಾರನ ಮೇಲೆ. ಒಟ್ಟಿನಲ್ಲಿ ಹೇಳುವುದಾದರೆ ಒಂದು ಸುಂದರ ಗುಲಾಬಿ ಹೂ ಸುತ್ತ ಹತ್ತಾರು ಮಳ್ಳುಗಳು ಇರುವ ರೀತಿಯ ಕುರ್ಚಿ ಅದು.

1992ರವರೆಗೂ ಭಾರತ ತಂಡಕ್ಕೆ ಕೋಚ್ ಹುದ್ದೆ ಇರಲಿಲ್ಲ. ಅಜರುದ್ದೀನ್‌ ನಾಯಕತ್ವದ ತಂಡಕ್ಕೆ ಮೊದಲ ಬಾರಿ ಮಾಜಿ ನಾಯಕ ಅಜಿತ್ ವಾಡೇಕರ್ ಕೋಚ್ ಆಗಿ ನೇಮಕವಾಗಿದ್ದರು. 1996ರ ವಿಶ್ವಕಪ್ ಟೂರ್ನಿ ಮುಗಿಯುವವರೆಗೂ ಅವರು ಕಾರ್ಯನಿರ್ವಹಿಸಿದ್ದರು. ಆ ಟೂರ್ನಿಯ ಸೆಮಿಫೈನಲ್‌ನಲ್ಲಿ ಭಾರತ ಹೀನಾಯ ಸೋಲನುಭವಿಸಿದ ನಂತರ ಹುದ್ದೆಯನ್ನು ತ್ಯಜಿಸಿದ್ದರು. ತದನಂತರ 2000ನೇ ಇಸವಿಯವರೆಗೂ ಸಂದೀಪ್ ಪಾಟೀಲ್‌, ಅನ್ಷುಮನ್ ಗಾಯಕವಾಡ್, ಮದನ್‌ಲಾಲ್ ಮತ್ತು ಕಪಿಲ್ ದೇವ್ ಅಲ್ಪ ಕಾಲದ ಕೋಚ್‌ಗಳಾಗಿದ್ದವರು.

ಕಪಿಲ್ ನಂತರವೇ ವಿದೇಶಿ ಕೋಚ್ ನೇಮಕದ ಬಗ್ಗೆ ಒಲವು ವ್ಯಕ್ತವಾಯಿತು. ನ್ಯೂಜಿಲೆಂಡ್‌ನ ಜಾನ್ ರೈಟ್ ಐದು ವರ್ಷ ಕೆಲಸ ಮಾಡಿದರು. ಅವರ ನಂತರ ಬಂದ ಆಸ್ಟ್ರೇಲಿಯಾದ ಗ್ರೆಗ್‌ ಚಾಪೆಲ್ ಇದ್ದಿದ್ದು ಎರಡು ವರ್ಷ ಮಾತ್ರ. ಅವರ ಮತ್ತು ನಾಯಕ ಸೌರವ್ ಗಂಗೂಲಿ ನಡುವಣ ಭಿನ್ನಾಭಿಪ್ರಾಯಗಳು ಇವತ್ತಿಗೂ ಹಲವು ವೇದಿಕೆಗಳಲ್ಲಿ ಚರ್ಚಾವಸ್ತುಗಳಾಗಿವೆ.

ಆದರೆ, 2008ರಲ್ಲಿ ಬಂದ ದಕ್ಷಿಣ ಆಫ್ರಿಕಾದ ಗ್ಯಾರಿ ಕರ್ಸ್ಟನ್ ಅತ್ಯಂತ ಯಶಸ್ವಿ ಕೋಚ್ ಎನ್ನಲು ಅಡ್ಡಿಯಿಲ್ಲ. ಅವರ ಮತ್ತು ನಾಯಕ ಧೋನಿ ನಡುವಣ ಬಾಂಧವ್ಯ ಚೆನ್ನಾಗಿತ್ತು. ತಂಡವೂ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಿತ್ತು. ಟೆಸ್ಟ್‌ ಕ್ರಿಕೆಟ್‌ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೂ ಏರಿತ್ತು. ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ಯುವರಾಜ್‌ ಸಿಂಗ್‌, ಹರಭಜನ್ ಸಿಂಗ್, ಜಹೀರ್ ಖಾನ್, ವಿವಿಎಸ್ ಲಕ್ಷ್ಮಣ್, ರಾಹುಲ್‌ ದ್ರಾವಿಡ್, ರಾಬಿನ್ ಉತ್ತಪ್ಪ, ವಿರಾಟ್ ಕೊಹ್ಲಿ, ಇಶಾಂತ್ ಶರ್ಮಾ ಅವರಂತಹ ತಾರಾ ವರ್ಚಸ್ಸಿನ ಆಟಗಾರರಿದ್ದ ತಂಡವನ್ನು ಜಾಣ್ಮೆಯಿಂದ ನಿಭಾಯಿಸಿದ್ದ ಚತುರ ಗ್ಯಾರಿ.

ಜಯದ ಕುದುರೆಯನ್ನು ಕಟ್ಟಿಹಾಕುವ ಕಲೆ ರೂಢಿಗತವಾಗಿದ್ದೂ ಕರ್ಸ್ಟನ್‌ ಕಾಲದಲ್ಲಿಯೇ. ಸೆಮಿಫೈನಲ್‌, ಫೈನಲ್ ಹಂತಗಳಲ್ಲಿ ಆಡುವ ತಂತ್ರಗಾರಿಕೆಯನ್ನು ಹೆಣೆಯುವುದರಲ್ಲಿ ನಿಷ್ಣಾತರಾಗಿದ್ದರು. ಆದಕ್ಕೆ ತಕ್ಕಂತೆ ಧೋನಿಯ ತಣ್ಣನೆಯ ಮತ್ತು ಚಾಣಾಕ್ಷ ಸ್ವಭಾವವೂ ಜೊತೆಗೂಡಿತ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಭಾರತದ ಕ್ರಿಕೆಟ್‌ಗೆ ಕೊಹ್ಲಿಯೇ ‘ಕಿಂಗ್‌’ ಆಗಿರುವುದರಿಂದ ಬಿಸಿಸಿಐ ಅಡಕತ್ತರಿಯಲ್ಲಿ ಸಿಕ್ಕಿ ಹಾಕಿಕೊಂಡಿದೆ. ರವಿಶಾಸ್ತ್ರಿಯನ್ನು ಮುಂದುವರಿಸಿದರೆ ಒಳ್ಳೆಯದೋ ? ಹೊಸ ಕೋಚ್ ಬಂದರೆ ಮುಂದಿನ ಬೆಳವಣಿಗೆಗಳು ಏನಾಗಬಹುದು? ಎಂಬ ಚರ್ಚೆಗಳೂ ನಡೆಯುತ್ತಿವೆ.

ಕಪಿಲ್ ನೇತೃತ್ವದ ಸಲಹಾ ಸಮಿತಿ ಈ ಸಮಸ್ಯೆಯ ಗಂಟನ್ನು ಹೇಗೆ ಬಿಡಿಸಲಿದೆ ಎಂಬುದೇ ಈಗ ಕುತೂಹಲ ಕೆರಳಿಸಿರುವ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT