ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Video | ಇಂಗ್ಲೆಂಡ್ ವಿರುದ್ಧ ಪಂತ್ ಶತಕ: ಡಗೌಟ್‌ನಲ್ಲಿ ರಾಹುಲ್ ದ್ರಾವಿಡ್ ಸಂಭ್ರಮ

ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್: ವಿದೇಶದ ಅಂಗಳದಲ್ಲಿ ಮತ್ತೊಮ್ಮೆ ರಿಷಭ್ ಪಂತ್ ಭಾರತ ತಂಡಕ್ಕೆ ಆಸರೆಯಾದರು. ಇಂಗ್ಲೆಂಡ್‌ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ.

ಇತ್ತ ಡಗೌಟ್‌ನಲ್ಲಿ ಕುಳಿತಿದ್ದ ಭಾರತ ಕ್ರಿಕೆಟ್‌ ತಂಡದ ಕೋಚ್‌ ರಾಹುಲ್‌ ದ್ರಾವಿಡ್ ಎದ್ದು ನಿಂತು ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ದಾರೆ. ಇದೀಗ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕ್ರೀಡಾಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಎಜ್‌ಬಾಸ್ಟನ್‌ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಟೆಸ್ಟ್‌ನಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ ತಂಡ ಜಿಮ್ಮಿ ಆ್ಯಂಡರ್ಸನ್ (52ಕ್ಕೆ3) ಕೊಟ್ಟ ಬಲವಾದ ಪೆಟ್ಟಿಗೆ ಆಘಾತ ಅನುಭವಿಸಿತ್ತು. ತಂಡದ ಮೊತ್ತವು ನೂರು ರನ್ ದಾಟುವ ಮುನ್ನವೇ ಐದು ವಿಕೆಟ್‌ಗಳು ಪತನವಾಗಿದ್ದವು.

ಆದರೆ, ಆತಿಥೇಯ ವೇಗಿಗಳ ಬಿರುಗಾಳಿಗೆ ಎದೆಗೊಟ್ಟು ನಿಂತ ದೆಹಲಿ ಹುಡುಗ ರಿಷಭ್ (146 ರನ್, 111 ಎ, 4X19,6X4), ದಿಟ್ಟವಾಗಿ ಬ್ಯಾಟ್‌ ಬೀಸಿದರು. 131.53ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಗಳಿಸಿದರು. ಟಿ–20 ಮಾದರಿಯ ಬ್ಯಾಟಿಂಗ್ ಮೂಲಕ ಗಮನ ಸೆಳೆದಿದ್ದಾರೆ.

ಅವರಿಗೆ ಎಡಗೈ ಆಲ್‌ರೌಂಡರ್ ರವೀಂದ್ರ ಜಡೇಜ (ಬ್ಯಾಟಿಂಗ್ 83, 163 ಎ, 4X10) ಜೊತೆ ನೀಡಿದರು. ಇದರಿಂದಾಗಿ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 73 ಓವರ್‌ಗಳಲ್ಲಿ 7ಕ್ಕೆ 338 ರನ್‌ ಗಳಿಸಿತು.

ಆರನೇ ವಿಕೆಟ್ ಜೊತೆಯಾಟದಲ್ಲಿ ಇಬ್ಬರೂ 222 ರನ್‌ ಗಳಿಸಿದರು. ಈ ಹಿಂದೆಯೂ ರಿಷಭ್ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಭಾರತ ತಂಡವನ್ನು ಇಂತಹದೇ ಪರಿಸ್ಥಿತಿಗಳಿಂದ ಪಾರು ಮಾಡಿದ್ದರು. ವೇಗಿಗಳ ಸ್ವಿಂಗ್‌ಗಳನ್ನು ಚುರುಕಾಗಿ ಗುರುತಿಸಿದ ಅವರು ಬೌಂಡರಿಗಟ್ಟಿದ ರೀತಿ ಚಿತ್ತಾಪಹಾರಿಯಾಗಿತ್ತು.

ಐಪಿಎಲ್‌ನಲ್ಲಿ ಗಾಯಗೊಂಡು ದೀರ್ಘ ಕಾಲ ವಿಶ್ರಾಂತಿ ಪಡೆದಿದ್ದ ಜಡೇಜ ಕೂಡ ತಮ್ಮ ನೈಜ ಆಟಕ್ಕೆ ಕುದುರಿದ್ದು ತಂಡಕ್ಕೆ ಚೇತರಿಕೆ ಲಭಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT