ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆನಿಸ್‌ ದಿಗ್ಗಜ ರೋಜರ್‌ ಫೆಡರರ್‌ ಕಣ್ಣೀರಿನ ವಿದಾಯ

ಲಂಡನ್‌ನ ಒ2 ಅರೆನಾದಲ್ಲಿ ಭಾವುಕ ಕ್ಷಣಗಳು; ತೆರೆಮೆರೆಗೆ ಸರಿದ ಅಪ್ರತಿಮ ಆಟಗಾರ
Last Updated 24 ಸೆಪ್ಟೆಂಬರ್ 2022, 17:35 IST
ಅಕ್ಷರ ಗಾತ್ರ

ಲಂಡನ್‌: ಟೆನಿಸ್‌ ಲೋಕದ ದಿಗ್ಗಜ ಆಟಗಾರ, ಕೋಟ್ಯಾಂತರ ಅಭಿಮಾನಿಗಳ ಕಣ್ಮಣಿ ಸ್ವಿಟ್ಜರ್‌ಲೆಂಡ್‌ನ ರೋಜರ್‌ ಫೆಡರರ್‌ ಅವರು ಇಪ್ಪತ್ತನಾಲ್ಕು ವರ್ಷಗಳ ವೃತ್ತಿಜೀವನಕ್ಕೆ ಕಣ್ಣೀರಿನ ವಿದಾಯ ಕೋರಿದರು.

ಲೆವರ್‌ ಕಪ್‌ ಟೆನಿಸ್‌ ಟೂರ್ನಿಯಲ್ಲಿ ಶುಕ್ರವಾರ ರಾತ್ರಿ ನಡೆದ ಡಬಲ್ಸ್‌ ಪಂದ್ಯದಲ್ಲಿ ಫೆಡರರ್‌ ತಮ್ಮ ‘ಬದ್ಧ ವೈರಿ ಹಾಗೂ ಉತ್ತಮ ಸ್ನೇಹಿತ’ ಸ್ಪೇ‌ನ್‌ನ ರಫೆಲ್‌ ನಡಾಲ್‌ ಜತೆಗೂಡಿ ಆಡಿ ಟೆನಿಸ್‌ ಜಗತ್ತಿಗೆ ಗುಡ್‌ಬೈ ಹೇಳಿದರು.

20 ಗ್ರ್ಯಾನ್‌ಸ್ಲಾಮ್‌ ಟ್ರೋಫಿಗಳ ಒಡೆಯನಿಗೆ ಕೊನೆಯ ಪಂದ್ಯದಲ್ಲಿ ಗೆಲುವು ದಕ್ಕಲಿಲ್ಲ. ‘ಟೀಮ್‌ ವರ್ಲ್ಡ್‌ ತಂಡದ ಜಾಕ್‌ ಸಾಕ್‌ ಮತ್ತು ಫ್ರಾನ್ಸೆಸ್ಕೊ ಟೈಫೊ 4-6, 7-6, 11-9 ರಲ್ಲಿ ‘ಟೀಮ್‌ ಯುರೋಪ್‌’ ತಂಡದ ಫೆಡರರ್‌–ನಡಾಲ್‌ ವಿರುದ್ಧ ಗೆದ್ದರು.

ಟೆನಿಸ್‌ ಜಗತ್ತಿನ ಅಪ್ರತಿಮ ಆಟಗಾರನ ವಿದಾಯ ಪಂದ್ಯದ ವೇಳೆ ಲಂಡನ್‌ನ ಒ2 ಅರೆನಾದಲ್ಲಿ ಮೂಡಿಬಂದ ಭಾವುಕ ಕ್ಷಣಗಳು ಅಭಿಮಾನಿಗಳ ಹೃದಯದಲ್ಲಿ ಬಹುಕಾಲ ಅಚ್ಚಳಿಯದೇ ಉಳಿಯಲಿದೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು 17,500 ಪ್ರೇಕ್ಷಕರು ನೆರೆದಿದ್ದರು.

ಡಬಲ್ಸ್‌ ಪಂದ್ಯ ಕೊನೆಗೊಂಡಾಗ ಕೆಲ ಸೆಕೆಂಡು ಕ್ರೀಡಾಂಗಣ ನಿಶ್ಯಬ್ಧವಾಯಿತು. ಆ ಬಳಿಕ ಎಲ್ಲರೂ ಎದ್ದುನಿಂತು ಚಪ್ಪಾಳೆ ಮೂಲಕ ತಮ್ಮ ನೆಚ್ಚಿನ ಆಟಗಾರನಿಗೆ ಗೌರವ ಸಲ್ಲಿಸಿದರು.

ಸ್ಪರ್ಧಾತ್ಮಕ ಟೆನಿಸ್‌ನ ಕೊನೆಯ ಪಂದ್ಯಕ್ಕೆ ತೆರೆಬೀಳುತ್ತಿದ್ದಂತೆಯೇ ಫೆಡರರ್‌, ಜತೆಗಾರ ನಡಾಲ್ ಅವರನ್ನು ಅಪ್ಪಿಕೊಂಡು ಕೃತಜ್ಞತೆ ಸಲ್ಲಿಸಿದರು. ಆ ಬಳಿಕ ಎದುರಾಳಿ ಆಟಗಾರರನ್ನು ಅಭಿನಂದಿಸಿದರು.

ತಮ್ಮ ರ‍್ಯಾಕೆಟ್‌ ಬ್ಯಾಗ್‌ನೊಳಗಿಟ್ಟ ಬಳಿಕ ‘ಟೀಮ್‌ ಯುರೋಪ್‌’ ತಂಡ ಸಹ ಆಟಗಾರರ ಬಳಿ ತೆರಳಿದರು. ಸಮಕಾಲೀನ ಆಟಗಾರರಾದ ಆ್ಯಂಡಿ ಮರೆ, ನೊವಾಕ್ ಜೊಕೊವಿಚ್‌ ಅವರನ್ನು ಅಪ್ಪಿಕೊಂಡು ಬೆನ್ನುತಟ್ಟಿದರು. ಅದುವರೆಗೂ ದುಃಖವನ್ನು ಅದುಮಿಟ್ಟುಕೊಂಡಿದ್ದ 41 ವರ್ಷದ ಫೆಡರರ್‌, ಬಿಕ್ಕಿಬಿಕ್ಕಿ ಅತ್ತರು.

ಪಂದ್ಯದ ಬಳಿಕ ಮಾತನಾಡುವಾಗ ಅವರಿಗೆ ದುಃಖ ಪದೇ ಪದೇ ಉಮ್ಮಳಿಸಿ ಬಂತು. ಟಿ.ವಿ ನಿರೂಪಕನ ಪ್ರಶ್ನೆಗಳಿಗೆ ಉತ್ತರ ಆರಂಭಿಸುತ್ತಿದ್ದರೂ ಪೂರ್ಣಗೊಳಿಸಲು ಆಗುತ್ತಿರಲಿಲ್ಲ. ಮಾತು ಗಂಟಲಲ್ಲೇ ಉಳಿದುಕೊಂಡಿತು. ಹಲವು ಸಲ ಕಣ್ಣೊರೆಸಿಕೊಂಡರು. ಅದರ ನಡುವೆಯೂ ‘ನನಗೆ ದುಃಖ ಆಗಿಲ್ಲ. ಸಂತಸದಿಂದಲೇ ಇದ್ದೇನೆ’ ಎಂದು ಗದ್ಗರಿತರಾಗಿ ಹೇಳಿದರು.

ಕೊನೆಯ ಪಂದ್ಯವನ್ನು ಜತೆಯಲ್ಲಿ ಆಡಿದ ನಡಾಲ್‌ ಅಲ್ಲದೆ ಲೆವರ್‌ ಕಪ್‌ನಲ್ಲಿ ಪಾಲ್ಗೊಂಡ ಆಟಗಾರರಿಗೆ ಅಭಿನಂದನೆ ಸಲ್ಲಿಸಿದರು. ಟೆನಿಸ್‌ ಪಯಣದಲ್ಲಿ ತಮ್ಮ ಜತೆ ನಿಂತ ಪತ್ನಿ ಮಿರ್ಕಾ ಫೆಡರರ್‌ ಅವರ ಬೆಂಬಲವನ್ನು ಸ್ಮರಿಸಿಕೊಂಡರು. ಗ್ಯಾಲರಿಯಲ್ಲಿದ್ದ ಮಿರ್ಕಾ ಅವರೂ ಕಣ್ಣೀರು ಹಾಕಿದರು.

ಅವಳಿ ಹೆಣ್ಣುಮಕ್ಕಳಾದ ಮೈಲಾ- ಚಾರ್ಲಿನ್ ಮತ್ತು ಅವಳಿ ಗಂಡುಮಕ್ಕಳಾದ ಲಿಯೊ -ಲೆನಿ, ಹೆತ್ತವರಾದ ಲಿನೆಟ್‌– ರಾಬರ್ಟ್‌ ಅವರನ್ನು ಅಪ್ಪಿಕೊಂಡಾಗಲಂತೂ ಫೆಡರರ್‌ಗೆ ದುಃಖ ತಡೆಯಲಾಗಲಿಲ್ಲ. ಆ ವೇಳೆ ಸಾವಿರಾರು ಪ್ರೇಕ್ಷಕರ ಕಣ್ಣಾಲಿಗಳೂ ತೇವಗೊಂಡವು.

ಸ್ವಿಟ್ಜರ್‌ಲೆಂಡ್‌ನ ಬಾಸೆಲ್‌ನಲ್ಲಿ ಹುಟ್ಟಿ ಬೆಳೆದ ತನ್ನನ್ನು ಬಾನೆತ್ತರಕ್ಕೆ ಬೆಳೆದು ನಿಲ್ಲಿಸಿದ ಟೆನಿಸ್‌ ಕೋರ್ಟ್ಅನ್ನು ಭಾರವಾದ ಹೆಜ್ಜೆಗಳೊಂದಿಗೆ ತೊರೆದರು. ಒಂದು ಕೈಯನ್ನು ಎದೆಯ ಮೇಲಿಟ್ಟು, ಇನ್ನೊಂದು ಕೈಯನ್ನು ಪ್ರೇಕ್ಷಕರತ್ತ ಬೀಸಿ ಮನದಾಳ‌ದಿಂದ ಕೃತಜ್ಞತೆ ಸಲ್ಲಿಸಿದರು.

ಸಾಂಪ್ರದಾಯಿಕ ಟೆನಿಸ್‌ನ ಸೌಂದರ್ಯ ಮತ್ತು ಆಧುನಿಕ ಟೆನಿಸ್‌ನ ವೇಗದ ಶೈಲಿಯನ್ನು ತಮ್ಮ ಆಟದಲ್ಲಿ ಸಮಪ್ರಮಾಣದಲ್ಲಿ ಬೆರೆಸಿಕೊಂಡು, ಅಭಿಮಾನಿಗಳ ಹೃದಯ ಗೆದ್ದಿರುವ ಫೆಡರರ್ತೆರೆಮರೆಗೆಸರಿಯುವುದರೊಂದಿಗೆ ಒಂದು ಯುಗ ಕೊನೆಗೊಂಡಂತಾಗಿದೆ.

20 ಗ್ರ್ಯಾನ್‌ಸ್ಲಾಮ್‌ ಕಿರೀಟ, 103 ಪ್ರಶಸ್ತಿ ಸೇರಿದಂತೆ ಎರಡು ದಶಕಗಳಿಗೂ ಹೆಚ್ಚು ಕಾಲ ಅಭಿಮಾನಿಗಳಿಗೆ ಆಟದ ಸೌಂದರ್ಯ ಉಣಬಡಿಸಿದ ಫೆಡರರ್‌ ನಿವೃತ್ತಿಯೊಂದಿಗೆ ಟೆನಿಸ್‌ ಜಗತ್ತಿನಲ್ಲೊಂದು ದೊಡ್ಡ ನಿರ್ವಾತ ಸೃಷ್ಟಿಯಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT