ಗುರುವಾರ , ಆಗಸ್ಟ್ 5, 2021
29 °C

ರೋಹಿತ್ ತರಹ ಬ್ಯಾಟಿಂಗ್ ಮಾಡುವ ಆಸೆ ಇದೆ: ಹೈದರ್ ಅಲಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕರಾಚಿ: ಪಾಕಿಸ್ತಾನ ಕ್ರಿಕೆಟ್ ತಂಡದ ಯುವ ಬ್ಯಾಟ್ಸ್‌ಮನ್ ಹೈದರ್ ಅಲಿ ಅವರಿಗೆ ಭಾರತದ ‘ಹಿಟ್‌ಮ್ಯಾನ್‌’ ರೋಹಿತ್ ಶರ್ಮಾ ಅವರಂತೆ ಬ್ಯಾಟಿಂಗ್ ಮಾಡುವ ಗುರಿ ಇದೆಯೆಂತೆ.

ಈಚೆಗೆ ನಡೆದ 19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿಯಲ್ಲಿ ಹೈದರ್ ಗಮನ ಸೆಳೆಯುವಂತೆ ಆಡಿದ್ದರು. ಮುಂದಿನ ತಿಂಗಳು ಇಂಗ್ಲೆಂಡ್‌ನಲ್ಲಿ ನಡೆಯುವ ಕ್ರಿಕೆಟ್ ಸರಣಿಯಲ್ಲಿ ಆಡಲಿರುವ ಪಾಕಿಸ್ತಾನ ತಂಡದಲ್ಲಿ ಅವರು ಸ್ಥಾನ ಪಡೆದಿದ್ದಾರೆ.

ಮಾಧ್ಯಮಗಳೊಂದಿಗೆ ತಮ್ಮ ಸಂತಸ ಹಂಚಿಕೊಂಡ ಹೈದರ್, ‘ಭಾರತದ ರೋಹಿತ್ ಶರ್ಮಾ ಅವರ  ಆಟದ ಶೈಲಿಯೆಂದರೆ ನನಗೆ ಅಚ್ಚುಮೆಚ್ಚು. ಅವರು ನನಗೆ ರೋಲ್ ಮಾಡೆಲ್ ಆಗಿದ್ದಾರೆ. ಆರಂಭಿಕ ಬ್ಯಾಟ್ಸ್‌ಮನ್ ಆಗಿ ಇನಿಂಗ್ಸ್‌ಗೆ ಅಬ್ಬರದ ಚಾಲನೆ ನೀಡಬೇಕು. ಆಗ ತಂಡದ ದೊಡ್ಡ ಸ್ಕೋರ್ ಗಳಿಸುವ ಗುರಿ ಸಾಧನೆಗೆ ನೆರವಾಗುತ್ತದೆ. ರೋಹಿತ್ ಅವರಂತೆ ನಿಖರವಾಗಿ ಚೆಂಡನ್ನು ಬೌಂಡರಿಯಾಚೆಗೆ ಎತ್ತುವ ಕಲೆಯನ್ನು ನಾನು ರೂಢಿಸಿಕೊಳ್ಳಬೇಕಿದೆ’ ಎಂದಿದ್ದಾರೆ.

‘ಮೂರು ಮಾದರಿಗಳಲ್ಲಿಯೂ ಅವರ ಶೈಲಿಯ ಆಟವನ್ನೇ ನಾನು ಅನುಕರಿಸುತ್ತೇನೆ. ಅವರು ವೈಯಕ್ತಿಕ 50 ರನ್‌ಗಳನ್ನು ಹೊಡೆದಾಗ 100, 150 ಮತ್ತು 200 ರನ್‌ಗಳ ಮೈಲುಗಲ್ಲುಗಳನ್ನು ಸಾಧಿಸುತ್ತ ಸಾಗುವ ಪರಿ ಅನನ್ಯ. ಅವರ ಮನೋಬಲ ಅಮೋಘವಾದದ್ದು. ಅವರ ಜಾಡಿನಲ್ಲಿಯೇ ಸಾಗುವ ಇರಾದೆ ನನ್ನದು. ಅವರು ತಮ್ಮ ಅದ್ಭುತ ಶೈಲಿಯಿಂದ  ತಂಡದ ಗೆಲುವಿನ ರೂವಾರಿಯಾಗುತ್ತಾರೆ’ ಎಂದು ಹೈದರ್ ಶ್ಲಾಘಿಸಿದರು.

‘ಕೋಚ್ ಯೂನಿಸ್  ಖಾನ್ ಅವರ ಮಾರ್ಗದರ್ಶನದಲ್ಲಿ ಆಡುವುದು ನನ್ನ ಬಹಳ ದಿನಗಳ ಕನಸಾಗಿತ್ತು. ಈಗ ಅಂತಹದೊಂದು ಅವಕಾಶ ಸಿಕ್ಕಿರುವುದು ಸಂತಸವಾಗಿದೆ. ಅವರಿಂದ ಎಷ್ಟು ಸಾಧ್ಯವೋ ಅಷ್ಟು ಕಲಿಯಲು ಪ್ರಯತ್ನಿಸುತ್ತೇನೆ. ಅಲ್ಲದೇ ಮಿಸ್ಬಾ ಉಲ್ ಹಕ್ ಅವರಿಂದಲೂ ಕಲಿಯುವುದು ಬಹಳಷ್ಟಿದೆ’ ಎಂದಿದ್ದಾರೆ.

‘ಕ್ರಿಕೆಟ್‌ನ ಮೂರು ಮಾದರಿಗಳಲ್ಲಿ ಆಡುವ ರೀತಿ, ನೀತಿಯನ್ನು ಕಲಿತುಕೊಳ್ಳುವುದು ನನ್ನ ಗುರಿ. ಮುಂದಿನ ಮೂರು ತಿಂಗಳಲ್ಲಿ ನನ್ನ ಮಟ್ಟವನ್ನು ಎಷ್ಟು ಎತ್ತರಕ್ಕೆ ಬೆಳೆಸಲು ಸಾಧ್ಯವಿದೆ ಎಂಬ ಕುತೂಹಲ ಮೂಡಿದೆ’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು