ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರೀಡಂ ಟೆಸ್ಟ್ ಸರಣಿ: ತ್ರಿಶತಕದ ಅವಕಾಶ ಕೈಬಿಟ್ಟ ವಿರಾಟ್

ಬ್ರಾಡ್ಮನ್ ದಾಖಲೆ ಮೀರಿದ ಭಾರತ ತಂಡದ ನಾಯಕ; 5ನೇ ವಿಕೆಟ್‌ಗೆ ದ್ವಿಶತಕದ ಜೊತೆಯಾಟ
Last Updated 12 ಅಕ್ಟೋಬರ್ 2019, 2:14 IST
ಅಕ್ಷರ ಗಾತ್ರ

ಪುಣೆ: ‘ವಿರಾಟ್ ಕೊಹ್ಲಿ ತ್ರಿಶತಕ ಗಳಿಸಬಹುದಿತ್ತಲ್ವಾ? ಅವರು ಇರುವ ಫಾರ್ಮ್‌ನಲ್ಲಿ ಇದು ಅಸಾಧ್ಯವೇನಾಗಿರಲಿಲ್ಲ ಅಲ್ಲವೇ?’

ಶುಕ್ರವಾರ ಸಂಜೆ 254 ರನ್‌ ಗಳಿಸಿ ಕ್ರೀಸ್‌ನಲ್ಲಿದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಇನಿಂಗ್ಸ್‌ ಡಿಕ್ಲೇರ್ಡ್‌ ಮಾಡಿಕೊಂಡಾಗ ಕೇಳಿಬಂದ ಪ್ರಶ್ನೆಗಳು ಇವು. ಐದನೇ ವಿಕೆಟ್‌ಗೆ ವಿರಾಟ್ ಅವರೊಂದಿಗೆ ದ್ವಿಶತಕದ ಜೊತೆಯಾಟವಾಡಿದ್ದ ರವೀಂದ್ರ ಜಡೇಜ 91 ರನ್‌ ಗಳಿಸಿದ್ದಾಗ ಔಟಾದರು.

ಕೂಡಲೇ ವಿರಾಟ್ ಇನಿಂಗ್ಸ್ ಡಿಕ್ಲೇರ್ಡ್‌ ಮಾಡಿಕೊಂಡು ಪೆವಿಲಿಯನ್‌ನತ್ತ ನಡೆದರು. ಇದು ನೋಡುಗರಲ್ಲಿ ಅಚ್ಚರಿ ಮತ್ತು ನಿರಾಸೆ ಮೂಡಿಸಿತ್ತು ಏಕೆಂದರೆ, ಆಗ ತಂಡದ ಸ್ಕೋರು 156.3 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 601 ರನ್ ಆಗಿತ್ತು. ತ್ರಿಶತಕದತ್ತ ಚಿತ್ತವಿಡದೇ ಕೊಹ್ಲಿ ತೆಗೆದುಕೊಂಡ ನಿರ್ಧಾರ ಫಲ ನೀಡಿತು. ದಕ್ಷಿಣ ಆಫ್ರಿಕಾ ತಂಡವು ದಿನದಾಟದ ಕೊನೆಗೆ 15 ಓವರ್‌ಗಳಲ್ಲಿ 36 ರನ್‌ ಗಳಿಸುವಷ್ಟರಲ್ಲಿ ಮೂರು ವಿಕೆಟ್ ಕಳೆದುಕೊಂಡಿತು. ಬೆಳಿಗ್ಗೆಯಿಂದ ಕೊಹ್ಲಿ ದ್ವಿಶತಕದ ವಿರಾಟ್ ರೂಪಕ್ಕೆ ಬಸವಳಿದಿದ್ದ ಫಾಫ್ ಡುಪ್ಲೆಸಿ ಬಳಗವು ಮತ್ತಷ್ಟು ಕಂಗಾಲಾಯಿತು.

ಬ್ರಾಡ್ಮನ್–ಸಚಿನ್ ದಾಖಲೆ ದೂಳೀಪಟ: ಪಂದ್ಯದ ಮೊದಲ ದಿನವಾದ ಗುರುವಾರ ವಿರಾಟ್ ಒಂದು ರನ್‌ ಗಳಿಸಿದ್ದ ಸಂದರ್ಭದಲ್ಲಿ ಕೇಶವ್ ಮಹಾರಾಜ್ ತಮ್ಮದೇ ಓವರ್‌ನಲ್ಲಿ ಜೀವದಾನ ಕೊಟ್ಟಿದ್ದರು. ಅದು ತಂಡಕ್ಕೆ ತುಟ್ಟಿಯಾಯಿತು.

63 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದುಕೊಂಡಿದ್ದ ಅವರು, ಶುಕ್ರವಾರ ರನ್‌ಗಳ ರಾಶಿ ಪೇರಿಸಿದರು. ಟೆಸ್ಟ್‌ ಕ್ರಿಕೆಟ್‌ನಲ್ಲಿ ಏಳನೇ ದ್ವಿಶತಕ ದಾಖಲಿಸಿದರು. ಕ್ರಿಕೆಟ್ ದಂತಕಥೆ, ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ ಮತ್ತು ಸಚಿನ್ ತೆಂಡೂಲ್ಕರ್ ದಾಖಲೆಗಳನ್ನು ವಿರಾಟ್ ಮುರಿದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ಏಳು ಸಾವಿರ ರನ್ ಪೇರಿಸಿದ ಅವರು ಬ್ರಾಡ್ಮನ್ (6996) ದಾಖಲೆಯನ್ನು ಮೀರಿ ನಿಂತರು. ಅಲ್ಲದೇ ಬ್ರಾಡ್ಮನ್ 150 ರಿಂದ 199ರೊಳಗಿನ ಮೊತ್ತಗಳನ್ನು ಎಂಟು ಬಾರಿ ಗಳಿಸಿದ್ದನ್ನೂ ಕೊಹ್ಲಿ ಮೀರಿ ನಿಂತರು. ಆದರೆ ಬ್ರಾಡ್ಮನ್ ದ್ವಿಶತಕಗಳ ದಾಖಲೆ (12) ಮುರಿಯಲು ಕೊಹ್ಲಿ ಇನ್ನೂ ಆರು ಗಳಿಸಬೇಕು.

ದಾಖಲೆಯ ಜೊತೆಯಾಟ: ವೈಯಕ್ತಿಕ ದಾಖಲೆಗಳನ್ನು ಪುಡಿಗಟ್ಟಿದ ಕೊಹ್ಲಿ, ರವೀಂದ್ರ ಜಡೇಜ ಜೊತೆಗೆ ಸೇರಿ ಪಾಲುದಾರಿಕೆ ಆಟದ ದಾಖಲೆಯನ್ನೂ ಬರೆದರು. ಐದನೇ ವಿಕೆಟ್ ಜೊತೆಯಾಟದಲ್ಲಿ 225 ರನ್ ಸೇರಿಸಿದ ಇವರಿಬ್ಬರೂ 2001ರಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ (220 ರನ್) ದಾಖಲೆಯನ್ನು ಅಳಿಸಿಹಾಕಿದರು. ಇದಕ್ಕೂ ಮುನ್ನ ವಿರಾಟ್ ಅವರು ಅಜಿಂಕ್ಯ ರಹಾನೆ ಜೊತೆಗೆ ನಾಲ್ಕನೇ ವಿಕೆಟ್‌ಗೆ ಸೇರಿಸಿದ 178 ರನ್‌ಗಳು ಕೂಡ ದಾಖಲೆ ಪುಟ ಸೇರಿದವು. 1996–97ರಲ್ಲಿ ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಅವರು ವಾಂಡರರ್ಸ್‌ ಕ್ರೀಡಾಂಗಣದಲ್ಲಿ ಗಳಿಸಿದ್ದ 145 ರನ್‌ಗಳ ಜೊತೆತಯಾಟವು ಇಲ್ಲಿಯವರೆಗಿನ ದಾಖಲೆಯಾಗಿತ್ತು.

ವಿರಾಟ್ 19ನೇ ಶತಕ: ಭಾರತ ತಂಡದ ನಾಯಕತ್ವ ವಹಿಸಿಕೊಂಡ ನಂತರ ವಿರಾಟ್ ದಾಖಲಿಸಿದ 19ನೇ ಶತಕ ಇದಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಒಟ್ಟು 26 ಶತಕಗಳಾದವು. ನೂರರ ಗಡಿ ದಾಟಿದ ನಂತರವೂ ವಿರಾಟ್ ಆಟದ ಓಘ ಕಡಿಮೆಯಾಗಲಿಲ್ಲ. ಆಕರ್ಷಕ ಡ್ರೈವ್, ಫ್ಲಿಕ್ ಮತ್ತು ಕಟ್‌ಗಳ ಆಟದ ಮೂಲಕ ಫೀಲ್ಡರ್‌ಗಳನ್ನು ಕಾಡಿದ ವಿರಾಟ್ ದ್ವಿಶತಕದತ್ತ ಸಾಗಿದರು. ಸೆನುರನ್ ಮುತ್ತುಸ್ವಾಮಿ ಎಸೆತವನ್ನು ಸ್ಕೇರ್‌ಲೆಗ್‌ಗೆ ತಳ್ಳಿ ಎರಡು ರನ್ ಗಳಿಸಿ 200ರ ಗಡಿ ದಾಟಿದರು.

ಇನ್ನೊಂದು ಬದಿಯಲ್ಲಿ ರವೀಂದ್ರ ಜಡೇಜ ಕೂಡ ಅಬ್ಬರದ ಬ್ಯಾಟಿಂಗ್ ಮಾಡಿದರು. ಅವರು ಶತಕದ ಸನಿಹ (91; 104ಎಸೆತ, 8ಬೌಂಡರಿ, 2ಸಿಕ್ಸರ್) ಎಡವಿದರು. ಮುತ್ತುಸ್ವಾಮಿ ಎಸೆತವನ್ನು ಲಾಂಗ್‌ ಆಫ್‌ಗೆ ಸಿಕ್ಸರ್ ಎತ್ತುವ ಪ್ರಯತ್ನ ಮಾಡಿದರು. ಅಲ್ಲಿದ್ದ ಫೀಲ್ಡರ್ ಡಿ ಬ್ರಯನ್ ಕ್ಯಾಚ್ ಪಡೆದರು. ಜೊತೆಯಾಟ ಮತ್ತು ಇನಿಂಗ್ಸ್‌ ಎರಡಕ್ಕೂ ತೆರೆ ಬಿತ್ತು.

ಪ್ರಮುಖ ಅಂಕಿ ಅಂಶಗಳು

* ವಿರಾಟ್ ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲಿಸಿದ ಒಟ್ಟು7 ದ್ವಿಶತಕಗಳು. ಸಚಿನ್ ತೆಂಡೂಲ್ಕರ್ ಮತ್ತು ವೀರೇಂದ್ರ ಸೆಹ್ವಾಗ್ ಅವರು ತಲಾ ಆರು ದ್ವಿಶತಕ ಗಳಿಸಿದ್ದರು. ಅವರನ್ನು ಮೀರಿ ಕೊಹ್ಲಿ ಮುನ್ನುಗ್ಗಿದ್ದಾರೆ.

* ವಿಶ್ವದಲ್ಲಿ ಅತಿ ಹೆಚ್ಚು ದ್ವಿಶತಕ ಬಾರಿಸಿರುವ ಬ್ಯಾಟ್ಸ್‌ಮನ್‌ಗಳಲ್ಲಿ ವಿರಾಟ್4ಸ್ಥಾನ ಪಡೆದಿದ್ದಾರೆ. ಡಾನ್ ಬ್ರಾಡ್ಮನ್ (12), ಕುಮಾರ ಸಂಗಕ್ಕಾರ (11) ಮತ್ತು ಬ್ರಯನ್ ಲಾರಾ (9) ಅವರ ನಂತರ ವಿರಾಟ್ ಇದ್ದಾರೆ.

* ಇದುವರೆಗೆ ಭಾರತ ತಂಡದ ನಾಯಕತ್ವ ವಹಿಸಿದ ಉಳಿದೆಲ್ಲರಿಗಿಂತಲೂ ಹೆಚ್ಚು ಮೊತ್ತದ254* ವೈಯಕ್ತಿಕ ಶ್ರೇಷ್ಠ ಸ್ಕೋರ್ ದಾಖಲಿಸಿದ್ದಾರೆ.

* ಟೆಸ್ಟ್ ಕ್ರಿಕೆಟ್‌ನಲ್ಲಿ ವಿರಾಟ್ ಗಳಿಸಿರುವ ರನ್‌ಗಳು 7000. 138 ಇನಿಂಗ್ಸ್‌ಗಳಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ಅತಿ ವೇಗವಾಗಿ ಏಳು ಸಾವಿರ ರನ್ ಗಡಿ ಮುಟ್ಟಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಜಂಟಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ವಾಲಿ ಹಮ್ಮಂಡ್ (131), ವೀರೇಂದ್ರ ಸೆಹ್ವಾಗ್ (134) ಮತ್ತು ಸಚಿನ್ ತೆಂಡೂಲ್ಕರ್ (136) ಅವರ ನಂತರದ ಸ್ಥಾನ ಕೊಹ್ಲಿಯವರದ್ದಾಗಿದೆ.

ವಿರಾಟ್ ಆಟದ ಓಟ

ರನ್ ಎಸೆತ

50 91

100 173

150 241

200 295

254* 336

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT