ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೋನಿಗೆ ವಿಶ್ರಾಂತಿ; ರಿಷಭ್‌ಗೆ ಅವಕಾಶ

ಭಾರತ– ಆಸ್ಟ್ರೇಲಿಯಾ ನಡುವಣ ನಾಲ್ಕನೇ ಏಕದಿನ ಪಂದ್ಯ ಇಂದು: ಸರಣಿ ಸಮಬಲಕ್ಕೆ ಫಿಂಚ್ ಪಡೆ ಚಿತ್ತ
Last Updated 9 ಮಾರ್ಚ್ 2019, 16:24 IST
ಅಕ್ಷರ ಗಾತ್ರ

ಮೊಹಾಲಿ, ಪಂಜಾಬ್: ಮುಂಬರಲಿರುವ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಆಡಲಿರುವ ಭಾರತ ತಂಡದಲ್ಲಿ ಸ್ಥಾನ ಗಿಟ್ಟಿಲು ರಿಷಭ್ ಪಂತ್‌ಗೆ ಈಗ ಸುವರ್ಣಾವಕಾಶ ಲಭಿಸಿದೆ.

ಭಾನುವಾರ ಇಲ್ಲಿಯ ಪಂಜಾಬ್ ಕ್ರಿಕೆಟ್ ಸಂಸ್ಥೆ (ಪಿಸಿಎ) ಕ್ರೀಡಾಂಗಣದಲ್ಲಿ ನಡೆಯಲಿರುವ ಏಕದಿನ ಸರಣಿಯ ನಾಲ್ಕನೇ ಪಂದ್ಯದಲ್ಲಿ ಮಹೇಂದ್ರಸಿಂಗ್ ಧೋನಿ ವಿಶ್ರಾಂತಿ ಪಡೆದಿದ್ದಾರೆ. ಆದ್ದರಿಂದ ರಿಷಭ್ ಕಣಕ್ಕಿಳಿಯಲಿದ್ದಾರೆ. ಹೋದ ವರ್ಷ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ ಅವರು ಆಡಿದ್ದರು. ಅದರ ನಂತರ ಅವಕಾಶ ಲಭಿಸಿಲ್ಲ. ವಿಶ್ವಕಪ್‌ ಗೆ ತೆರಳುವ ತಂಡದಲ್ಲಿ ಎರಡನೇ ವಿಕೆಟ್‌ ಕೀಪರ್ ಸ್ಥಾನ ತುಂಬಲು ಅವರು ಇಲ್ಲಿ ತಮ್ಮ ಸಾಮರ್ಥ್ಯ ತೋರಿಸಬೇಕಿದೆ.

ಧೋನಿಯ ತವರೂರು ರಾಂಚಿಯಲ್ಲಿ ಶುಕ್ರವಾರ ನಡೆದಿದ್ದ ಪಂದ್ಯದಲ್ಲಿ ಭಾರತ ತಂಡವು ಸೋತಿತ್ತು. ಅದರಿಂದಾಗಿ ಸರಣಿಯನ್ನು 3–0ಯಿಂದ ಕೈವಶ ಮಾಡಿಕೊಳ್ಳುವ ಆತಿಥೆಯರ ಉದ್ದೇಶ ಈಡೇರಲಿಲ್ಲ.

ಆದರೆ ಆಸ್ಟ್ರೇಲಿಯಾ ತಂಡಕ್ಕೆ ಸರಣಿ ಗೆಲುವಿನ ಕನಸು ಮತ್ತೆ ಮರುಜೀವ ಪಡೆದಿತ್ತು. ಮೊಹಾಲಿ ಮತ್ತು ದೆಹಲಿ ಪಂದ್ಯಗಳಲ್ಲಿ ಗೆದ್ದು ಸರಣಿ ಜಯಿಸುವತ್ತ ಪ್ರವಾಸಿ ತಂಡವು ಚಿತ್ತ ನೆಟ್ಟಿದೆ. ಆದ್ದರಿಂದ ಈ ಪಂದ್ಯವು ಆ್ಯರನ್ ಫಿಂಚ್ ನಾಯಕತ್ವದ ಪಡೆಗೆ ಮಹತ್ವದ್ದಾಗಿದೆ. ಇಲ್ಲಿ ಗೆದ್ದು ಸರಣಿಯನ್ನು 2–2ರಿಂದ ಸಮಬಲ ಮಾಡಿಕೊಳ್ಳುವ ಅವಕಾಶವಿದೆ.

ರಾಂಚಿಯಲ್ಲಿ ಫಿಂಚ್ ಮತ್ತು ಉಸ್ಮಾನ್ ಖ್ವಾಜಾ ಅವರು ಲಯಕ್ಕೆ ಮರಳಿದ್ದರು. ಮೊದಲ ವಿಕೆಟ್‌ಗೆ 196 ರನ್‌ಗಳನ್ನು ಪೇರಿಸಿ ತಂಡದ ಜಯಕ್ಕೆ ಮುನ್ನುಡಿ ಬರೆದಿದ್ದರು. ಗ್ಲೆನ್ ಮ್ಯಾಕ್ಸ್‌ವೆಲ್, ಪೀಟರ್ ಹ್ಯಾಂಡ್ಸ್‌ಕಂಬ್ ಕೂಡ ಉತ್ತಮವಾಗಿ ಆಡಿದ್ದರು. ಆದ್ದರಿಂದ ಭಾರತದ ಬೌಲರ್‌ಗಳು ಇನ್ನಷ್ಟು ಪ್ರಬಲ ದಾಳಿ ಸಂಘಟಿಸುವತ್ತ ಪ್ರಯತ್ನಿಸಬೇಕಿದೆ. ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್ ಉತ್ತಮವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಆದರೆ, ಮಧ್ಯಮವೇಗಿಗಳು ಜೊತೆಯಾಟಗಳನ್ನು ಮುರಿಯುವ ಕಾರ್ಯವನ್ನು ನಿಭಾಯಿಸಬೇಕಿದೆ.

ಆದರೆ ಆತಿಥೇಯರ ಬಳಗದಲ್ಲಿ ಪ್ರಮುಖ ಚಿಂತೆ ಇರುವುದು ಬ್ಯಾಟಿಂಗ್‌ನಲ್ಲಿ. ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಿಲ್ಲ. ಏಕದಿನ ಮಾದರಿಯಲ್ಲಿ ಮೂರು ದ್ವಿಶತಕಗಳ ದಾಖಲೆ ಮಾಡಿರುವ ರೋಹಿತ್ ಕಳೆದ ಮೂರು ಪಂದ್ಯಗಳಿಂದ ಒಟ್ಟು 51 ರನ್‌ ಗಳಿಸಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಶಿಖರ್ ಧವನ್ ಕೇವಲ 22 ರನ್‌ಗಳನ್ನು ಗಳಿಸಿದ್ದಾರೆ. ಇದರಿಂದಾಗಿ ತಂಡವು ಮೂರು ಪಂದ್ಯಗಳಲ್ಲಿಯೂ ಮುನ್ನೂರರ ಗಡಿ ದಾಟಲು ಸಾಧ್ಯವಾಗಿಲ್ಲ. ಆದ್ದರಿಂದ ಶಿಖರ್ ಬದಲು ಕೆ.ಎಲ್. ರಾಹುಲ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ಸರಣಿಯ ಮೊದಲ ಪಂದ್ಯದಲ್ಲಿ ಧೋನಿ ಮತ್ತು ಕೇದಾರ್ ಜಾಧವ್ ಜೊತೆಯಾಟ, ಎರಡನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಶತಕದ ಅಬ್ಬರಕ್ಕೆ ಜಯ ಒಲಿದಿತ್ತು. ಮೂರನೇ ಪಂದ್ಯದಲ್ಲಿಯೂ ವಿರಾಟ್ ಹೊಡೆದ ಆಕರ್ಷಕ ಶತಕಕ್ಕೆ ಗೆಲುವು ಒಲಿಯಲಿಲ್ಲ. ಉಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯ. ಆಸ್ಟ್ರೇಲಿಯಾ ವೇಗಿ ಪ್ಯಾಟ್ ಕಮಿನ್ಸ್‌ ಅವರ ಎಸೆತಗಳ ವೇಗ ಮತ್ತು ಸ್ಪಿನ್ನರ್ ಆ್ಯಡಂ ಜಂಪಾ ಅವರ ಎಸೆತಗಳ ತಿರುವುಗಳನ್ನು ಗುರುತಿಸುವಲ್ಲಿ ಎಡವಿದ್ದರು.

ಮೊಹಾಲಿಯ ಫ್ಲ್ಯಾಟ್‌ ಪಿಚ್‌ನಲ್ಲಿ ರನ್‌ಗಳ ಹೊಳೆ ಹರಿಯುವ ಸಾಧ್ಯತೆ ಹೆಚ್ಚಿದೆ. ಜೊತೆಗೆ ಸ್ಪಿನ್ನರ್‌ಗಳಿಗೂ ಇಲ್ಲಿ ನೆರವು ಸಿಗುವ ನಿರೀಕ್ಷೆಯಿದೆ. ಭಾರತ ತಂಡವು ಕುಲದೀಪ್, ರವೀಂದ್ರ ಜಡೇಜ ಮತ್ತು ಚಾಹಲ್ ಅವರನ್ನು ಕಣಕ್ಕಿಳಿಸುವ ನಿರೀಕ್ಷೆಯಿದೆ. ಮೊಹಮ್ಮದ್ ಶಮಿ ಅಥವಾ ಜಸ್‌ಪ್ರೀತ್ ಬೂಮ್ರಾ ಅವರಲ್ಲಿ ಒಬ್ಬರಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಆಲ್‌ರೌಂಡರ್ ವಿಜಯಶಂಕರ್ ಮಧ್ಯಮವೇಗಿಯೂ ಆಗಿರುವುದರಿಂದ ಅವರಿಗೆ ಹೆಚ್ಚಿನ ಹೊಣೆ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT