ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್ ಟೂರ್ನಿ: ಕೆಎಸ್‌ಸಿಎ ಇಲೆವನ್‌ಗೆ ಹಿನ್ನಡೆ

ಛತ್ತೀಸ್‌ಗಢ್ ಕ್ರಿಕೆಟ್ ಸಂಘ್‌ಗೆ ಋಷಭ್ ಶತಕದ ಬಲ
Last Updated 29 ಜುಲೈ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ಜಿ.ಮನೀಷ್‌, ಶೋಯೆಬ್ ಮೊಹಮ್ಮದ್ ಖಾನ್ ಮತ್ತು ಸ್ವರೂಪ್ ಕುಮಾರ್ ಅವರು ಕೆಎಸ್‌ಸಿಎ ಇಲೆವನ್ ತಂಡದ ಕೆಳ ಕ್ರಮಾಂಕಕ್ಕೆ ಆಘಾತ ನೀಡಿದರು. ಈ ಮೂವರ ಪರಿಣಾಮಕಾರಿ ದಾಳಿಯ ಪರಿಣಾಮ ಆಂಧ್ರ ಕ್ರಿಕೆಟ್ ಸಂಸ್ಥೆ ತಂಡ ಕ್ಯಾಪ್ಟನ್ ತಿಮ್ಮಪ್ಪಯ್ಯ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಮೇಲುಗೈ ಸಾಧಿಸಿತು.

ಮೊದಲ ಇನಿಂಗ್ಸ್‌ನಲ್ಲಿ 334 ರನ್‌ ಗಳಿಸಿದ ಆಂಧ್ರ ತಂಡ ಕೆಎಸ್‌ಸಿಎ ಇಲೆವನ್ ತಂಡವನ್ನು 255 ರನ್‌ಗಳಿಗೆ ಆಲೌಟ್ ಮಾಡಿತು. ಆದರೆ ದಿನದಾಟದ ಮುಕ್ತಾಯಕ್ಕೆ ನಾಲ್ಕು ರನ್ ಗಳಿಸುವಷ್ಟರಲ್ಲಿ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಮೊದಲ ದಿನವಾದ ಭಾನುವಾರ ಪ್ರಸಿದ್ಧ ಕೃಷ್ಣ ಅವರ ದಾಳಿಗೆ ತತ್ತರಿಸಿದ್ದ ಆಂಧ್ರ ತಂಡ 293 ರನ್‌ಗಳಿಗೆ ಪತನ ಕಂಡಿತ್ತು. ದಿನದಾಟದ ಮುಕ್ತಾಯಕ್ಕೆ ಕೆಎಸ್‌ಸಿಎ ಇಲೆವನ್ ವಿಕೆಟ್ ಕಳೆದುಕೊಳ್ಳದೆ 11 ರನ್ ಗಳಿಸಿತ್ತು. ಸೋಮವಾರ ಬ್ಯಾಟಿಂಗ್ ಮುಂದುವರಿಸಿದ ತಂಡದ ಪರ ಅಗ್ರ ಕ್ರಮಾಂಕದ ಆಟಗಾರರು ಉಪಯುಕ್ತ ಕಾಣಿಕೆ ನೀಡಿದರು. ಹೀಗಾಗಿ ತಂಡ ಭಾರಿ ಮೊತ್ತ ಗಳಿಸುವ ಭರವಸೆ ಮೂಡಿತ್ತು. ಆದರೆ ನಿಧಾನಕ್ಕೆ ಹಿಡಿತ ಸಾಧಿಸಿದ ಎದುರಾಳಿ ಬೌಲರ್‌ಗಳು ದಿನದಾಟದ ಮುಕ್ತಾಯದ ವೇಳೆ ಸಂಭ್ರಮಿಸಿದರು.

ಮೊದಲ ವಿಕೆಟ್‌ಗೆ ಅರ್.ಸಮರ್ಥ್ (56; 106 ಎಸೆತ, 4 ಬೌಂಡರಿ) ಮತ್ತು ಡೇಗಾ ನಿಶ್ಚಲ್ (48; 88 ಎ, 8 ಬೌಂ) 91 ರನ್ ಸೇರಿಸಿದ್ದರು. ಆದರೆ ಆರು ಓವರ್‌ಗಳ ಅಂತದಲ್ಲಿ ಈ ಇಬ್ಬರು ಸೇರಿದಂತೆ ತಂಡ ಮೂವರನ್ನು ವಿಕೆಟ್ ಕಳೆದುಕೊಂಡಿತು.

ಕರುಣ್–ಸಿದ್ಧಾರ್ಥ್‌ ಶತಕದ ಜೊತೆಯಾಟ: ನಾಲ್ಕನೇ ವಿಕೆಟ್‌ಗೆ ಅಮೋಘ ಆಟವಾಡಿದ ಕರುಣ್ ನಾಯರ್ ಮತ್ತು ಸಿದ್ಧಾರ್ಥ್‌ (79; 188 ಎ, 7 ಬೌಂಡರಿ) 104 ರನ್ ಸೇರಿಸಿದರು. ತಲಾ ಒಂದು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದ ಕರುಣ್ ನಾಯರ್ ರನ್ ಔಟಾಗುವುದರೊಂದಿಗೆ ತಂಡ ಪತನದ ಹಾದಿ ಹಿಡಿಯಿತು. ಸಿದ್ಧಾರ್ಥ್ ಏಕಾಂಗಿ ಹೋರಾಟ ನಡೆಸಿದರೂ ಉಳಿದವರಿಂದ ಅವರಿಗೆ ಸಹಕಾರ ಸಿಗಲಿಲ್ಲ. ತಂಡದ ಕೊನೆಯ ಆರು ವಿಕೆಟ್‌ಗಳು ಬೇಗನೇ ಉರುಳಿದವು. ಮೂವರು ಶೂನ್ಯಕ್ಕೆ ಔಟಾದರು.

ಋಷಭ್ ತಿವಾರಿ ಶತಕ: ಮತ್ತೊಂದು ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಋಷಭ್ ತಿವಾರಿ (100; 192 ಎ, 10 ಬೌಂ) ಅವರ ಶತಕದ ಬಲದಿಂದ ಛತ್ತೀಸಗಢ್‌ ಕ್ರಿಕೆಟ್‌ ಸಂಘ್‌ ತಂಡ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ ತಿರುಗೇಟು ನೀಡಿದೆ. ಬಾಂಗ್ಲಾ ತಂಡದ ಮೊದಲ ಇನಿಂಗ್ಸ್ ಮೊತ್ತವಾದ 334ಕ್ಕೆ ಉತ್ತರಿಸಿದ ತಂಡ ದಿನದಾಟದ ಮುಕ್ತಾಯಕ್ಕೆ 4 ವಿಕೆಟ್‌ಗಳಿಗೆ 210 ರನ್ ಗಳಿಸಿದೆ.

ಸಂಕ್ಷಿಪ್ತ ಸ್ಕೋರು: ಆಲೂರು 2ನೇ ಮೈದಾನ: ಮೊದಲ ಇನಿಂಗ್ಸ್‌: ಆಂಧ್ರ ಕ್ರಿಕೆಟ್ ಸಂಸ್ಥೆ: 293; ಕೆಎಸ್‌ಸಿಎ ಇಲೆವನ್: 92.5 ಓವರ್‌ಗಳಲ್ಲಿ 255 (ಆರ್‌.ಸಮರ್ಥ್‌ 56, ಡೇಗಾ ನಿಶ್ಚಲ್ 48, ಅಭಿಷೇಕ್ ರೆಡ್ಡಿ 12, ಕರುಣ್ ನಾಯರ್‌ 35, ಸಿದ್ಧಾರ್ಥ್‌ 79, ಶರತ್ ಶ್ರೀನಿವಾಸ 10; ಜಿ. ಮನೀಷ್‌ 74ಕ್ಕೆ3, ಶೋಯೆಬ್ ಮೊಹಮ್ಮದ್ ಖಾನ್ 66ಕ್ಕೆ2, ಸ್ವರೂಪ್ ಕುಮಾರ್ 26ಕ್ಕೆ3); ಎರಡನೇ ಇನಿಂಗ್ಸ್‌: ಆಂಧ್ರ ಕ್ರಿಕೆಟ್ ಸಂಸ್ಥೆ: 5 ಓವರ್‌ಗಳಲ್ಲಿ 2ಕ್ಕೆ4 (ಪ್ರಸಿದ್ಧ ಕೃಷ್ಣ 1ಕ್ಕೆ1, ಜೆ.ಸುಚಿತ್ 1ಕ್ಕೆ1).

ಆಲೂರು 1ನೇ ಮೈದಾನ: ಮೊದಲ ಇನಿಂಗ್ಸ್‌: ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಭಾನುವಾರದ ಅಂತ್ಯಕ್ಕೆ 85.1 ಓವರ್‌ಗಳಲ್ಲಿ 3ಕ್ಕೆ 254): 111.5 ಓವರ್‌ಗಳಲ್ಲಿ 334 (ಯಾಸಿರ್ ಅಲಿ ಚೌಧರಿ 62, ನಜ್ಮುಲ್ ಹೊಸೇನ್ 39; ವೀರ ಪ್ರತಾಪ 92ಕ್ಕೆ4, ಪುನೀತ್ ದಾತೆ 34ಕ್ಕೆ1, ಶಶಾಂಕ್ 44ಕ್ಕೆ2, ಬಿನ್ನಿ ಸ್ಯಾಮ್ಯುಯೆಲ್ 51ಕ್ಕೆ3); ಛತ್ತೀಸ್‌ಗಢ್ ಕ್ರಿಕೆಟ್ ಸಂಘ್: 59.1 ಓವರ್‌ಗಳಲ್ಲಿ 4ಕ್ಕೆ 210 (ಋಷಭ್ ತಿವಾರಿ 100, ಜೀವನ್‌ ಜ್ಯೋತ್ ಸಿಂಗ್‌ 47, ಶಶಾಂಕ್ ಔಟಾಗದೆ 54; ಸಂಜಮುಲ್ ಇಸ್ಲಾಂ 66ಕ್ಕೆ1, ಸೈಫ್ ಹಸನ್ 24ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT