ವಡೋದರ: ಭಾರತದ ಕ್ರಿಕೆಟ್ ದಿಗ್ಗಜರಾದ ಸುನೀಲ್ ಗಾವಸ್ಕರ್, ಕಪಿಲ್ ದೇವ್, ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜಯ್ ಶಾ ಸೇರಿದಂತೆ ಹಲವು ಗಣ್ಯರು, ಅಂಶುಮಾನ್ ಗಾಯಕವಾಡ್ ಅವರಿಗೆ ಗುರುವಾರ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗಿಯಾಗಿದ್ದರು.
ರಕ್ತದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಗಾಯಕವಾಡ್ (71) ಅವರು ಜುಲೈ 31ರಂದು ವಡೋದರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದರು. ಅವರು ಭಾರತ ತಂಡದ ಆರಂಭ ಆಟಗಾರರಾಗಿದ್ದು, ನಂತರ ಕೋಚ್ ಹಾಗೂ ಆಯ್ಕೆಗಾರ ಪಾತ್ರವನ್ನೂ ನಿರ್ವಹಿಸಿದ್ದರು.
ವಡೋದರದ ಸೆವಾಸಿ ಪ್ರದೇಶದಲ್ಲಿ ಗಾಯಕವಾಡ ಅವರ ಕುಟುಂಬಸ್ಥರು ಶ್ರದ್ಧಾಂಜಲಿ ಸಭೆ ಏರ್ಪಡಿಸಿದ್ದರು.
‘ಗಾಯಕವಾಡ್ ನನ್ನ ಸ್ನೇಹಿತ ಮತ್ತು ನನ್ನ ಜೊತೆ ಇನಿಂಗ್ಸ್ ಆರಂಭಿ ಸುತ್ತಿದ್ದರು. ಯಾವುದೇ ಪಂದ್ಯಕ್ಕೆ ಒಂದು ದಿನ ಮೊದಲು ನಾವು, ವೇಗದ ಬೌಲರ್‌ಗಳನ್ನು ಯಾವ ರೀತಿ ನಿಭಾಯಿಸಬೇಕೆಂದು ಕುಳಿತು ಚರ್ಚಿಸು ತ್ತಿದ್ದೆವು. ಇದರಿಂದ ನಾವು ಆರಂಭ ಜೊತೆಯಾಟಗಾರರಷ್ಟೇ ಅಲ್ಲ, ಆತ್ಮೀಯ ಮಿತ್ರರಾದೆವು’ ಎಂದು ಗಾವಸ್ಕರ್ ಸ್ಮರಿಸಿದರು.
ಭಾರತ ತಂಡದ ಪರ ಗಾಯಕವಾಡ್ 40 ಟೆಸ್ಟ್, 15 ಏಕದಿನ ಪಂದ್ಯಗಳನ್ನು ಆಡಿದ್ದಾರೆ.