ಶನಿವಾರ, ಮೇ 28, 2022
30 °C
ಕೋವಿಡ್‌ ಸೋಂಕಿತ ಆಟಗಾರರ ಲಭ್ಯತೆಗೆ ಪ್ರಾರ್ಥನೆ

19 ವರ್ಷದೊಳಗಿನವರ ವಿಶ್ವಕಪ್ ಕ್ರಿಕೆಟ್‌ ಟೂರ್ನಿ: ಭಾರತಕ್ಕೆ ಉಗಾಂಡ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ತರೌಬಾ, ಟ್ರಿನಿಡಾಡ್‌: ತಂಡದ ಕೆಲವು ಆಟಗಾರರು ಕೋವಿಡ್‌ ಸೋಂಕಿತರಾಗಿದ್ದರೂ, ಉತ್ತಮ ಆಟದೊಂದಿಗೆ ಕ್ವಾರ್ಟರ್‌ಫೈನಲ್‌ ತಲುಪಿರುವ ಭಾರತ ಕಿರಿಯರ ತಂಡವು 19 ವರ್ಷದೊಳಗಿನವರ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯ ‘ಬಿ’ ಗುಂಪಿನ ಕೊನೆಯ ಪಂದ್ಯದಲ್ಲಿ ಶನಿವಾರ ಉಗಾಂಡವನ್ನು ಎದುರಿಸಲಿದೆ.

ಬುಧವಾರದ ಐರ್ಲೆಂಡ್‌ ಎದುರಿನ ಪಂದ್ಯಕ್ಕೂ ಮೊದಲು, ಭಾರತದ 17 ಆಟಗಾರರ ಪೈಕಿ ಆರು ಮಂದಿ ಸೋಂಕಿನಿಂದಾಗಿ ಪ್ರತ್ಯೇಕವಾಸಕ್ಕೆ ತೆರಳಬೇಕಾಗಿತ್ತು. ಇದರ ಮಧ್ಯೆಯೂ ಎದೆಗುಂದದ ಆಟಗಾರರು ತಂಡವನ್ನು 174 ರನ್‌ಗಳಿಂದ ಗೆಲ್ಲಿಸಿ ಎಂಟರಘಟ್ಟಕ್ಕೆ ತಲುಪಿಸಿದ್ದರು.

ನಾಕೌಟ್‌ ಪಂದ್ಯಗಳು ಆರಂಭವಾಗುವ ಹೊತ್ತಿಗೆ ನಾಯಕ ಯಶ್ ಧುಳ್‌ ಮತ್ತು ಉಪನಾಯಕ ಶೇಖ್ ರಶೀದ್‌ ಅವರು ತಂಡಕ್ಕೆ ಮರಳಲಿ ಎಂದು ಭಾರತ ಬಯಸುತ್ತಿದೆ.

ಉಗಾಂಡ ಎದುರಿನ ಪಂದ್ಯವು ಭಾರತಕ್ಕೆ ಅಷ್ಟೇನೂ ಮಹತ್ವದಲ್ಲ. ಆದರೂ ಆಟಗಾರರು ಕೋವಿಡ್‌ನಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿರಬಹುದು. ಹೀಗಾಗಿ ಅವರು ಚೇತರಿಸಿಕೊಂಡು ಅಭ್ಯಾಸ ನಡೆಸಿದರೆ ನಿರಾಳ ಎನಿಸಬಹುದು.

ಭಾರತದ ಆರಂಭಿಕ ಬ್ಯಾಟರ್‌ಗಳಾದ ಹರ್ನೂರ್ ಸಿಂಗ್‌ ಮತ್ತು ಅಂಗ್‌ರಿಕ್ಷ್‌ ರಘುವಂಶಿ ಉತ್ತಮ ಲಯದಲ್ಲಿದ್ದಾರೆ. ಮಧ್ಯಮ ಕ್ರಮಾಂಕದ ಆಟಗಾರರಿಂದ ರನ್‌ಗಳು ಹರಿದುಬರಬೇಕಿದೆ. ಹಂಗಾಮಿ ನಾಯಕನಾಗಿರುವ ನಿಶಾಂತ್ ಸಿಂಧು ಕೂಡ ಉತ್ತಮ ಸಾಮರ್ಥ್ಯ ತೋರುತ್ತಿದ್ದಾರೆ.

ಉಗಾಂಡ ತಂಡವು ಟೂರ್ನಿಯಲ್ಲಿ ಒಂದೂ ಪಂದ್ಯ ಗೆದ್ದಿಲ್ಲ. ದಕ್ಷಿಣ ಆಫ್ರಿಕಾ ಎದುರು ಮಂಗಳವಾರ 121 ರನ್‌ಗಳಿಂದ ಸೋತಿದ್ದ ತಂಡವು, ಮೊದಲ ಪಂದ್ಯದಲ್ಲಿ ಐರ್ಲೆಂಡ್ ಎದುರು 39 ರನ್‌ಗಳಿಂದ ಮಣಿದಿತ್ತು.

ಪಂದ್ಯ ಆರಂಭ: ಸಂಜೆ 6.30

ಕ್ವಾರ್ಟರ್‌ಫೈನಲ್‌ಗೆ ಇಂಗ್ಲೆಂಡ್‌, ಪಾಕಿಸ್ತಾನ: ನಾಯಕ ಟಾಮ್ ಪ್ರೆಸ್ಟ್‌ ಗಳಿಸಿದ ಭರ್ಜರಿ ಶತಕದ (154) ಬಲದಿಂದ ಇಂಗ್ಲೆಂಡ್‌ ತಂಡವು 189 ರನ್‌ಗಳಿಂದ ಯುನೈಟೆಡ್ ಅರಬ್‌ ಎಮಿರೇಟ್ಸ್ (ಯುಎಇ) ತಂಡವನ್ನು ಮಣಿಸಿ ಟೂರ್ನಿಯ ಕ್ವಾರ್ಟರ್‌ಫೈನಲ್‌ ತಲುಪಿತು. 

ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಆರು ವಿಕೆಟ್‌ಗೆ 362 ರನ್‌ ಗಳಿಸಿತು. ಯುಎಇಯನ್ನು 38.2 ಓವರ್‌ಗಳಲ್ಲಿ 173 ರನ್‌ಗಳಿಗೆ ಕಟ್ಟಿ ಹಾಕಿತು.

ಮತ್ತೊಂದು ಪಂದ್ಯದಲ್ಲಿ ಪಾಕಿಸ್ತಾನ ತಂಡವು ಅಫ್ಗಾನಿಸ್ತಾನವನ್ನು 24 ರನ್‌ಗಳಿಂದ ಮಣಿಸಿ ಎಂಟರಘಟ್ಟ ತಲುಪಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು