ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿ: ಗುಜರಾತ್ ಮಣಿಸಿ ಫೈನಲ್ ತಲುಪಿದ ಸೌರಾಷ್ಟ್ರ

ಪಾರ್ಥಿವ್ ಪಟೇಲ್–ಚಿರಾಗ್ ಗಾಂಧಿ ಜೊತೆಯಾಟ ವ್ಯರ್ಥ
Last Updated 4 ಮಾರ್ಚ್ 2020, 19:57 IST
ಅಕ್ಷರ ಗಾತ್ರ

ರಾಜ್‌ಕೋಟ್‌: ನಾಯಕ ಜಯದೇವ ಉನದ್ಕತ್ ಅವರ ಬಿರು ಗಾಳಿ ವೇಗಕ್ಕೆ ಗುಜರಾತ್‌ನ ಕನಸು ನುಚ್ಚುನೂರಾಯಿತು. ಬುಧವಾರ ಮುಕ್ತಾಯಗೊಂಡ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್‌ ಪಂದ್ಯ ದಲ್ಲಿ ಸೌರಾಷ್ಟ್ರ ತಂಡ 92 ರನ್‌ಗಳ ಜಯ ಸಾಧಿಸಿತು.

ಒಂದೇ ರಾಜ್ಯದ ಎರಡು ತಂಡಗಳ ನಡುವಿನ ಜಿದ್ದಾಜಿದ್ದಿಯ ಹೋರಾಟದ ಕೊನೆಯ ದಿನ ವಿಜಯದ ಮಾಲೆ ಅತ್ತಿಂದಿತ್ತ, ಇತ್ತಿಂದತ್ತ ಓಲಾಡಿತು. ಆದರೆ ಕೊನೆಗೆ ಗೆಲುವು ‘ಆತಿಥೇಯರ’ ‍‍ಪಾಲಾಯಿತು. ಈ ಮೂಲಕ ಸೌರಾಷ್ಟ್ರ ಸತತ ಎರಡನೇ ಬಾರಿ ಮತ್ತು ಒಟ್ಟಾರೆ ನಾಲ್ಕನೇ ಬಾರಿ ಪ್ರಶಸ್ತಿ ಹಂತ ತಲುಪಿತು. ಮುಂದಿನ ಸೋಮವಾರ ಆರಂಭವಾ ಗಲಿರುವ ಫೈನಲ್‌ನಲ್ಲಿ ಈ ತಂಡ ಬಂಗಾಳವನ್ನು ಎದುರಿಸಲಿದೆ.

327 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಗುಜರಾತ್ ಮಂಗಳವಾರ ಒಂದು ವಿಕೆಟ್ ಕಳೆದುಕೊಂಡು ಏಳು ರನ್ ಗಳಿಸಿತ್ತು. ಕೊನೆಯ ದಿನವಾದ ಬುಧವಾರ ಬೆಳಿಗ್ಗೆ ಅದೇ ಮೊತ್ತಕ್ಕೆ ಎರಡನೇ ವಿಕೆಟ್ ಕಳೆದುಕೊಂಡಿತು. ಸಮಿತ್ ಗೋಯೆಲ್ ವಿಕೆಟ್ ಕಬಳಿಸಿದ ಜಯದೇವ ರಿಟರ್ನ್ ಕ್ಯಾಚ್ ಮೂಲಕ ಧ್ರುವ ರಾವಲ್ ಅವರನ್ನೂ ಔಟ್ ಮಾಡಿದಾಗ ಗುಜರಾತ್ ಸ್ಕೋರ್ 3ಕ್ಕೆ18. ಭಾರ್ಗವ ಮೆರಾಯ್ ಮತ್ತು ರುಜುಲ್ ಭಟ್ ಕೂಟ ಪೆವಿಲಿಯನ್ ಸೇರಿದಾಗ ತಂಡ ಭೊಜನ ವಿರಾಮಕ್ಕೆ ಮೊದಲೇ ಸೋಲೊಪ್ಪಿಕೊಳ್ಳುವ ಸಾಧ್ಯತೆ ಕಂಡುಬಂದಿತ್ತು. ಆದರೆ ನಾಯಕ ಪಾರ್ಥಿವ್ ಪಟೇಲ್ (93; 148 ಎಸೆತ, 13 ಬೌಂಡರಿ) ಮತ್ತು ಚಿರಾಗ್ ಗಾಂಧಿ (96; 139 ಎ, 16 ಬೌಂ) ಪ್ರತಿರೋಧ ತೋರಿ ಗುಜರಾತ್ ಪಾಳಯದಲ್ಲಿ ಭರವಸೆ ಮೂಡಿಸಿದರು. ಇವರಿಬ್ಬರ ಜೊತೆಯಾಟದಿಂದ 158 ರನ್‌ಗಳು ಹರಿದು ಬಂದವು.

ಮತ್ತೆ ಬಿರುಗಾಳಿಯಾದ ಜಯದೇವ: ಚಹಾ ವಿರಾಮದ ನಂತರ ಜಯದೇವ ಜಾದೂ ಮಾಡಿದರು. ಆಕರ್ಷಕ ಹೊಡೆತಗಳ ಮೂಲಕ ನಿರಾಯಾಸವಾಗಿ ಆಡುತ್ತಿದ್ದ ಪಾರ್ಥಿವ್ ಮತ್ತು ಚಿರಾಗ್‌ ವಿಕೆಟ್‌ಗಳನ್ನು ಅವರು ಕಬಳಿಸಿದರು. ಕೊನೆಯ ಅವಧಿಯಲ್ಲಿ 121 ರನ್‌ ಗಳಿಸುವ ಗುರಿಯೊಂದಿಗೆ ಪಾರ್ಥಿವ್ ಮತ್ತು ಚಿರಾಗ್ ಕ್ರೀಸ್‌ಗೆ ಬರುತ್ತಿದ್ದಾಗ ಗುಜರಾತ್ ಪಾಳಯ ವಿಶ್ವಾಸದ ಅಲೆಯಲ್ಲಿತ್ತು. ಆದರೆ ಒಂದೇ ಓವರ್‌ನಲ್ಲಿ ಪಾರ್ಥಿವ್ ಮತ್ತು ಅಕ್ಷರ್ ಪಟೇಲ್ ವಿಕೆಟ್ ಉರುಳಿಸಿದ ಜಯದೇವ, ಸೌರಾಷ್ಟ್ರ ಮೇಲುಗೈ ಸಾಧಿಸುವಂತೆ ಮಾಡಿದರು. ಈಮೂಲಕ ಅವರು 20ನೇ ಬಾರಿ ಐದು ವಿಕೆಟ್ ಗೊಂಚಲು ಗಳಿಸಿದ ಸಾಧನೆ ಮಾಡಿದರು.

ಚಿರಾಗ್ ಗಾಂಧಿ ಅವರನ್ನು ಬೌಲ್ಡ್ ಮಾಡಿದ ಜಯದೇವ ಕೊನೆಯ ಬ್ಯಾಟ್ಸ್‌ಮನ್ ಅರ್ಜನ್ ನಾಗ್ವಸ್ವಾಲ ವಿಕೆಟ್ ಕೂಡ ಉರುಳಿಸಿ ಜಯದ ಕೇಕೆ ಹಾಕಿದರು.

ಸಂಕ್ಷಿಪ್ತ ಸ್ಕೋರ್
ಮೊದಲ ಇನಿಂಗ್ಸ್‌

ಸೌರಾಷ್ಟ್ರ: 304; ಗುಜರಾತ್: 252

ಎರಡನೇ ಇನಿಂಗ್ಸ್‌
ಸೌರಾಷ್ಟ್ರ:
274; ಗುಜರಾತ್‌ (ಮಂಗಳವಾರದ ಅಂತ್ಯಕ್ಕೆ 9 ಓವರ್‌ಗಳಲ್ಲಿ 1 ವಿಕೆಟ್‌ಗೆ 7): 72.2 ಓವರ್‌ಗಳಲ್ಲಿ 234 (ಚಿರಾಗ್ ಗಾಂಧಿ 96, ಪಾರ್ಥಿವ್ ಪಟೇಲ್ 93; ಜಯದೇವ ಉನದ್ಕತ್ 56ಕ್ಕೆ7).

ಫಲಿತಾಂಶ: ಸೌರಾಷ್ಟ್ರಕ್ಕೆ 92 ರನ್‌ಗಳ ಜಯ.
ಪಂದ್ಯಶ್ರೇಷ್ಠ: ಅರ್ಪಿತ್ ವಸಾವ್ಡ

ಫೈನಲ್‌ ಪಂದ್ಯ: ಸೌರಾಷ್ಟ್ರ–ಬೆಂಗಾಲ್. ಮಾರ್ಚ್‌ 9ರಿಂದ; ರಾಜ್‌ಕೋಟ್‌ನಲ್ಲಿ.

ದೊಡ್ಡ ಗಣೇಶ್ ದಾಖಲೆ ಮುರಿದ ಜಯದೇವ
ಎರಡನೇ ಇನಿಂಗ್ಸ್‌ನಲ್ಲಿ ಏಳು ಸೇರಿದಂತೆ ಪಂದ್ಯದಲ್ಲಿ ಒಟ್ಟಾರೆ 10 ವಿಕೆಟ್ ಗಳಿಸಿದ ಜಯದೇವ ಉನದ್ಕತ್ ಈ ಋತುವಿನಲ್ಲಿ ಒಟ್ಟು 65 ವಿಕೆಟ್ ಗಳಿಸಿದ ಸಾಧನೆ ಮಾಡಿದರು. ಈ ಮೂಲಕ ರಣಜಿಯ ಒಂದೇ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದ ವೇಗದ ಬೌಲರ್ ಎಂದೆನಿಸಿದರು. ಅವರು ಕರ್ನಾಟಕದ ದೊಡ್ಡ ಗಣೇಶ್ (1998–99ರಲ್ಲಿ 62 ವಿಕೆಟ್) ಅವರ ದಾಖಲೆ ಹಿಂದಿಕ್ಕಿದರು.

ಸ್ಪಿನ್ನರ್‌ಗಳೂ ಸೇರಿದಂತೆ ಒಂದೇ ಋತುವಿನಲ್ಲಿ ಅತಿ ಹೆಚ್ಚು ವಿಕೆಟ್ ಗಳಿಸಿದವರ ಸಾಲಿನಲ್ಲಿ ಎರಡನೇ ಸ್ಥಾನಕ್ಕೇರಿದರು. ಕಳೆದ ಬಾರಿ ಬಿಹಾರ ಪರವಾಗಿ ಆಡಿದ್ದ ಅಶುತೋಷ್ ಅಮನ್ 68 ವಿಕೆಟ್ ಉರುಳಿಸಿದ್ದರು. ಬಿಷನ್ ಸಿಂಗ್ ಬೇಡಿ (64 ವಿಕೆಟ್) ಮೂರನೇ ಸ್ಥಾನದಲ್ಲಿದ್ದಾರೆ.

**

ಜಯದೇವ ಉನದ್ಕತ್ ದಾಳಿ ಮುದ ನೀಡಿತು. ಭಾರತದಲ್ಲಿ ವೇಗದ ಬೌಲಿಂಗ್‌ ಇನ್ನೂ ಮೊನಚಾಗಿದೆ ಎಂಬುದನ್ನು ಅವರ ದಾಖಲೆ ಸಾಬೀತು ಮಾಡಿದೆ.
-ದೊಡ್ಡ ಗಣೇಶ್ ಹಿರಿಯ ಕ್ರಿಕೆಟಿಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT