ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

19 ವರ್ಷದೊಳಗಿನವರ ವಿಶ್ವಕಪ್ ಟೂರ್ನಿ: ಭವಿಷ್ಯದ ಕ್ರಿಕೆಟ್ ತಾರೆಗಳ ಹೊಳಪು

ಐದನೇ ಸಲ ಪ್ರಶಸ್ತಿ ಗೆದ್ದ ಭಾರತ ಯುವಪಡೆ
Last Updated 6 ಫೆಬ್ರುವರಿ 2022, 21:36 IST
ಅಕ್ಷರ ಗಾತ್ರ

ನಾರ್ತ್ ಸೌಂಡ್, ಆ್ಯಂಟಿಗಾ (ಪಿಟಿಐ): ಭಾನುವಾರ ಬೆಳಿಗ್ಗೆ ನಿದ್ದೆಯಿಂದ ಎದ್ದವರಿಗೆಲ್ಲ ಸಿಹಿ ಸುದ್ದಿ ಕೊಟ್ಟವರು ಭಾರತದ 19 ವರ್ಷದೊಳಗಿನವರ ಕ್ರಿಕೆಟ್ ತಂಡದ ಆಟಗಾರರು. ಶನಿವಾರ ತಡರಾತ್ರಿ ನಡೆದ ಫೈನಲ್‌ನಲ್ಲಿ 4 ವಿಕೆಟ್‌ಗಳಿಂದ ಇಂಗ್ಲೆಂಡ್ ಎದುರು ಗೆದ್ದ ಯಶ್ ಧುಳ್ ತಂಡವು ಸಂಭ್ರಮಿಸಿತು. ಭಾರತಕ್ಕೆ ಇದು ಐದನೇ ವಿಶ್ವಕಪ್. 1998ರಲ್ಲಿ ಜಯಿಸಿದ್ದ ಇಂಗ್ಲೆಂಡ್ ತಂಡಕ್ಕೆ ಮತ್ತೊಂದು ಟ್ರೋಫಿಯನ್ನು ಗೆಲ್ಲುವ ಆಸೆಗೆ ಯಶ್ ಧುಳ್ ಪಡೆಯುವ ಅಡ್ಡಗಾಲು ಹಾಕಿತು.

ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡವು 44.5 ಓವರ್‌ಗಳಲ್ಲಿ 189 ರನ್ ಗಳಿಸಿತು. ರಾಜ್ ಬಾವಾ (31ಕ್ಕೆ5) ಮತ್ತು ರವಿಕುಮಾರ್ (34ಕ್ಕೆ4) ಇಂಗ್ಲೆಂಡ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿದರು. ಗುರಿ ಬೆನ್ನತ್ತಿದ ಭಾರತ ತಂಡವು 47.4 ಓವರ್‌ಗಳಲ್ಲಿ6 ವಿಕೆಟ್‌ಗಳಿಗೆ 195 ರನ್ ಗಳಿಸಿತು. ಶೇಖ್ ರಶೀದ್ (50; 84ಎ), ನಿಶಾಂತ್ ಸಿಂಧು (ಔಟಾಗದೆ 50) ಮತ್ತು ರಾಜ್ ಬಾವಾ (35; 34ಎ) ತಂಡವನ್ನು ಗೆಲುವಿನ ದಡ ಸೇರಿಸಿದರು.ಸಂಭ್ರಮ ಕುಡಿಯೊಡೆಯಿತು. ಭಾರತ ಕ್ರಿಕೆಟ್‌ನ ಭವಿಷ್ಯದ ತಾರೆಗಳು ಉದಯಿಸಿದರು.

ಯಶ್ ಧುಳ್ (ನಾಯಕ)

ತಂಡದ ನಾಯಕ ಯಶ್ ದೆಹಲಿಯ ಜನಕಪುರಿಯವರು. ಮಧ್ಯಮ ಕ್ರಮಾಂಕದ ಬ್ಯಾಟರ್‌. ಟೂರ್ನಿಯ ಮಧ್ಯದಲ್ಲಿಯೇ ಕೋವಿಡ್‌ನಿಂದಾಗಿ ಐಸೋಲೆಷನ್‌ಗೆ ಒಳಗಾದರು. ಚೇತರಿಸಿ ಕೊಂಡು ಮರಳಿದ ಅವರು ಸೆಮಿಫೈನ ಲ್‌ನಲ್ಲಿ ಆಸ್ಟ್ರೆಲಿಯಾ ಎದುರು ಶತಕ ಬಾರಿಸಿ, ಗೆಲುವಿನ ರೂವಾರಿಯಾದರು.

16 ವರ್ಷದೊಳಗಿನವರ ವಿನೂ ಮಂಕಡ್ ಟ್ರೋಫಿ ಟೂರ್ನಿಯಲ್ಲಿ 302 ರನ್‌ ಗಳಿಸಿದ್ದ ಅವರ ಕೌಶಲ ಮತ್ತು ಆಕ್ರಮಣಶೀಲ ಗುಣವನ್ನು ಮನಗಂಡು ತಂಡಕ್ಕೆ ನಾಯಕರನ್ನಾಗಿ ನೇಮಕ ಮಾಡಲಾಗಿತ್ತು. ಭಾರತ ತಂಡದ ವಿರಾಟ್ ಕೊಹ್ಲಿ ಜನಿಸಿ ಬೆಳೆದ ಉತ್ತರ ದೆಹಲಿಯವರು ಯಶ್.

ಶೇಖ್ ರಶೀದ್

ವಿನೂ ಮಂಕಡ್ ಟ್ರೋಫಿ ಟೂರ್ನಿಯ ಆರು ಇನಿಂಗ್ಸ್‌ಗಳಲ್ಲಿ 376 ರನ್‌ಗಳನ್ನು ಹರಿಸಿದ್ದ ರಶೀದ್, ಚಾಲೆಂಜರ್ ಟ್ರೋಫಿ ಟೂರ್ನಿಯಲ್ಲಿ ಶತಕ ಬಾರಿಸಿದ್ದರು. ಏಷ್ಯಾಕಪ್‌ ಟೂರ್ನಿಯ ಸೆಮಿಫೈನಲ್‌ ನಲ್ಲಿ ಬಾಂಗ್ಲಾ ಎದುರು 90 ರನ್ ಬಾರಿಸಿದ್ದರು. ಸೆಮಿಫೈನಲ್‌ನಲ್ಲಿ ಯಶ್ ಜೊತೆಗೆ ಅಮೋಘ ಜೊತೆಯಾಟವಾಡಿ ತಂಡದ ಜಯಕ್ಕೆ ಕಾಣಿಕೆ ನೀಡಿದ್ದರು.

ಹರ್ನೂರ್ ಸಿಂಗ್ ಪನ್ನು

ಎಡಗೈ ಬ್ಯಾಟ್ಸ್‌ಮನ್ ತಂಡದ ಆರಂಭಿಕ ಆಟಗಾರ. ಏಷ್ಯಾಕಪ್ ಟೂರ್ನಿಯಲ್ಲಿ ಐದು ಇನಿಂಗ್ಸ್‌ಗಳಲ್ಲಿ 251 ರನ್‌ ಗಳಿಸಿದ್ದರು. ಭಾರತ ತಂಡದ ಆಲ್‌ರೌಂಡರ್ ಯುವರಾಜ್ ಸಿಂಗ್ ಅವರ ಕೋಚ್ ಸುಖ್ವಿಂದರ್ ಸಿಂಗ್ ಅವರು ಹರ್ನೂರ್‌ಗೆ ಕೋಚ್ ಮಾಡಿದ್ದರು. ಜಲಂಧರ್‌ನ ಹರ್ನೂರ್ ಮನೆ ಪಕ್ಕದ ಖಾಲಿಜಾಗದಲ್ಲಿ ಆಡುತ್ತಿದ್ದರು. ಅಜ್ಜ ರಾಜೀಂದರ್ ಸಿಂಗ್ ಅವರು ಕ್ರಿಕೆಟ್ ತರಬೇತಿಗೆ ಹಾಕಿದ್ದರು.

ಒಲಿಂಪಿಯನ್ ಮೊಮ್ಮಗ ರಾಜ್ ಬಾವಾ

ಕ್ರೀಡಾಕುಟುಂಬದ ಕುಡಿ ರಾಜ್ ಬಾವಾ. 1948ರ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರತ ಹಾಕಿ ತಂಡದಲ್ಲಿ ಆಡಿದ್ದ ತಾರಲೋಚನ್ ಬಾವಾ ಅವರ ಮೊಮ್ಮಗ ರಾಜ್. ಯುವರಾಜ್ ಸಿಂಗ್‌ಗೆ ಕೋಚ್ ಆಗಿದ್ದ ಸುಖ್ವಿಂದರ್ ಸಿಂಗ್ ಅವರ ಮಗ ರಾಜ್ ಪ್ರತಿಭೆಯಿಂದಲೇ ಗುರುತಿಸಿಕೊಂಡವರು.

ಅಂಗಕ್ರಿಷ್ ರಘುವಂಶಿ

ಬಲಗೈ ಬ್ಯಾಟರ್ ಅಂಗಕ್ರಿಷ್ ಏಷ್ಯಾಕಪ್ ಫೈನಲ್‌ನಲ್ಲಿ ಅರ್ಧಶತಕ ಬಾರಿಸಿದ್ದರು. ತಂದೆ ಅವನೀಶ್ ಭಾರತ ಟೆನಿಸ್ ತಂಡದಲ್ಲಿ ಆಡಿದ್ದರು. ತಾಯಿ ಮಲ್ಲಿಕಾ ಭಾರತ ಬ್ಯಾಸ್ಕೆಟ್‌ಬಾಲ್ ತಂಡದ ಆಟಗಾರ್ತಿಯಾಗಿದ್ದರು. ಮಗನ ಕ್ರಿಕೆಟ್‌ ಪ್ರೀತಿಗೆ ಬೆಂಬಲವಾಗಿ ನಿಂತರು. ದೆಹಲಿಯಲ್ಲಿದ್ದ ಅವರು ಅಂಗಕ್ರಿಷ್ 11 ವರ್ಷದವನಿದ್ದಾಗ ಮುಂಬೈಗೆ ಸ್ಥಳಾಂತರಗೊಂಡರು.

ರಾಜವರ್ಧನ್ ಹಂಗರಗೇಕರ್

ಎರಡು ವರ್ಷಗಳ ಹಿಂದೆ ಕೋವಿಡ್‌ ಕಾಯಿಲೆಯಿಂದಾಗಿ ತಂದೆ ತೀರಿ ಹೋದಾಗ ರಾಜವರ್ಧನ್ ಕುಗ್ಗಿದ್ದರು. ಆದರೆ, ಅಪ್ಪನ ಕನಸು ಈಡೇರಿಸಲು ಪಣತೊಟ್ಟರು. ಮಧ್ಯಮವೇಗಿ–ಆಲ್‌ರೌಂಡರ್ ರಾಜವರ್ಧನ್ ಏಷ್ಯಾ ಕಪ್ ಟೂರ್ನಿಯಲ್ಲಿ 8 ವಿಕೆಟ್ ಮತ್ತು 97 ರನ್ ಗಳಿಸಿದರು.

ಕೌಶಲ್ ತಾಂಬೆ

ಬಲಗೈ ಬ್ಯಾಟರ್ ಮತ್ತು ಆಫ್‌ಸ್ಪಿನ್ನರ್ ಕೌಶಲ್ ಪುಣೆ ಜಿಲ್ಲೆಯ ಊಟೂರು ಗ್ರಾಮದ ಪ್ರತಿಭೆ. ಅವರು ಪುಣೆಯಲ್ಲಿ ಎಸ್‌ಪಿ ಕಾಲೇಜಿನಲ್ಲಿ ಓದುತ್ತಿದ್ದಾರೆ. ತಂದೆ ಸುನೀಲ್ ತಾಂಬೆ ಭಯೋತ್ಪಾದನ ನಿಗ್ರಹ ಪಡೆಯಲ್ಲಿ ಎಸಿಪಿ ಆಗಿದ್ದಾರೆ.

ವಿಕಿ ಓಸ್ವಾಲ್

ಪುಣೆ ಜಿಲ್ಲೆಯ ಸುಂದರ ಪ್ರವಾಸಿ ತಾಣ ಲೊನಾವಾಳದವರು. ಎಡಗೈ ಸ್ಪಿನ್ನರ್ ವಿಕಿ ಏಷ್ಯಾಕಪ್ ಟೂರ್ನಿಯಲ್ಲಿ ಎಂಟು ವಿಕೆಟ್ ಗಳಿಸಿದರು. ಫೈನಲ್‌ನಲ್ಲಿ ಅವರು 11ಕ್ಕೆ 3 ವಿಕೆಟ್ ಗಳಿಸಿ ಮಿಂಚಿದರು. ತೇರಗಾಂವ್ ಚಿಂಚವಾಡದಲ್ಲಿತರಬೇತಿ ಪಡೆಯುತ್ತಿದ್ದಾರೆ.

ನಿಶಾಂತ್ ಸಿಂಧು

ವಿಶ್ವಕಪ್ ಫೈನಲ್‌ನಲ್ಲಿ ಅರ್ಧಶತಕ ಸಿಡಿಸಿ ತಂಡದ ಜಯಕ್ಕೆ ಕಾಣಿಕೆ ನೀಡಿದ ನಿಶಾಂತ್ ಹರಿಯಾಣದ ರೋಹ್ಟಕ್‌ನವರು. ಎಡಗೈ ಸ್ಪಿನ್ನರ್ ಕೂಡ ಆಗಿದ್ದಾರೆ. ವಿನೂ ಮಂಕಡ್ ಟ್ರೋಫಿ ಟೂರ್ನಿಯಲ್ಲಿ ಹರಿಯಾಣ ತಂಡದ ನಾಯಕರಾಗಿದ್ದರು. 16 ವರ್ಷದೊಳಗಿನವರ ವಿಜಯ್ ಮರ್ಚಂಟ್ ಟ್ರೋಫಿ ಜಯಿಸಲೂ ಅವರ ನಾಯಕತ್ವ ಕಾರಣವಾಗಿತ್ತು. ಅವರ ತಂದೆ ರಾಜ್ಯಮಟ್ಟದ ಬಾಕ್ಸಿಂಗ್ ಪಟುವಾಗಿದ್ದರು. ವಿಶ್ವಕಪ್ ಟೂರ್ನಿ ಯಲ್ಲಿ ಯಶ್ ಜೊತೆಗೆ ಕೋವಿಡ್‌ನಿಂದ ಬಳಲಿದವರಲ್ಲಿ ಇವರೂ ಒಬ್ಬರು.

ಆರಾಧ್ಯ ಯಾದವ್

ಉತ್ತರಪ್ರದೇಶ ಗಾಜಿಯಾಬಾದ್‌ನ ವಿಕೆಟ್‌ಕೀಪರ್ ಆರಾಧ್ಯ. ವಿನೂ ಮಂಕಡ್ ಟ್ರೋಫಿಯಲ್ಲಿ 295 ರನ್ ಗಳಿಸಿದ್ದರು. ಅದರಲ್ಲಿ ಒಂದು ಶತ ಕವೂ ಇತ್ತು.

ರವಿಕುಮಾರ್

ಫೈನಲ್ ಪಂದ್ಯದಲ್ಲಿ ನಾಲ್ಕು ವಿಕೆಟ್ ಗಳಿಸಿ ಮಿಂಚಿದ ಬೌಲರ್ ರವಿಕುಮಾರ್ ಪಶ್ಚಿಮ ಬಂಗಾಳದವರು. ವಿನೂ ಮಂಕಡ್ ಟ್ರೋಫಿಯಲ್ಲಿ 11 ವಿಕೆಟ್ ಗಳಿಸಿದ್ದರು. ಏಷ್ಯಾ ಕಪ್ ಟೂರ್ನಿ ಯಲ್ಲಿಯೂ ಮಿಂಚಿದ್ದರು. ಇದೀಗ ಬಂಗಾಳ ರಣಜಿ ತಂಡದಲ್ಲಿದ್ದಾರೆ.

ದಿನೇಶ್ ಬಾನಾ

ಸಚಿನ್ ತೆಂಡೂಲ್ಕರ್ ಅವರ ಕಟ್ಟಾ ಅಭಿಮಾನಿ ದಿನೇಶ್ ಹರಿಯಾಣದ ಹಿಸಾರ್‌ನವರು. ಚಾಲೆಂಜರ್ ಟ್ರೋಫಿಯ ನಾಲ್ಕು ಪಂದ್ಯಗಳಲ್ಲಿ 255 ರನ್ ಗಳಿಸಿದ್ದರು. ಅದರಲ್ಲಿ ಶತಕ (170) ಕೂಡ ಸೇರಿದೆ. ಆಸ್ಟ್ರೇಲಿಯಾ ಎದುರಿನ ಸೆಮಿಫೈನಲ್‌ನಲ್ಲಿ ದೊಡ್ಡ ಹೊಡೆತಗಳ ಮೂಲಕ ಗಮನ ಸೆಳೆದಿದ್ದರು.

ಸಿದ್ಧಾರ್ಥ್‌ ಯಾದವ್

ಉತ್ತರ ಪ್ರದೇಶದ ಗಾಜಿಯಾಬಾದ್‌ನವರು. ಅವರ ತಂದೆಯ ಕಿರಾಣಿ ಅಂಗಡಿಯಿದೆ. ವಿನೂ ಮಂಕಡ್ ಟ್ರೋಫಿ ಟೂರ್ನಿಯಲ್ಲಿ ಏಳು ಇನಿಂಗ್ಸ್‌ಗಳಲ್ಲಿ 258 ರನ್‌ ಗಳಿಸಿದ್ದರು. ಅದರಲ್ಲಿ ಎರಡು ಅರ್ಧಶತಕಗಳಿದ್ದವು.

ಗರ್ವ ಸಂಗ್ವಾನ್

ಹರಿಯಾಣದ ಬಿವಾನಿಯ ಗರ್ವ್ ಬಲಗೈ ಸ್ಪಿನ್ನರ್. ಬಾಕ್ಸಿಂಗ್ ಮತ್ತು ಕುಸ್ತಿಪಟುಗಳ ನಡುವೆ ಬೆಳೆದ ಗರ್ವ್ ವಿನೂ ಮಂಕಡ್ ಟ್ರೋಫಿ ಗೆದ್ದ ಹರಿಯಾಣತಂಡದಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT