ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL–2023 ಕ್ವಾಲಿಫೈಯರ್: ಹಾರ್ದಿಕ್–ರೋಹಿತ್ ಹಣಾಹಣಿ

ಕ್ವಾಲಿಫೈಯರ್: ಹಾಲಿ ಚಾಂಪಿಯನ್ ಗುಜರಾತ್, ಐದು ಸಲದ ವಿಜೇತ ಮುಂಬೈ ಮುಖಾಮುಖಿ ಇಂದು
Published 25 ಮೇ 2023, 19:30 IST
Last Updated 25 ಮೇ 2023, 19:30 IST
ಅಕ್ಷರ ಗಾತ್ರ

ಅಹಮದಾಬಾದ್: ಸತತ ಎರಡನೇ ಬಾರಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಗುಜರಾತ್ ಟೈಟನ್ಸ್ ಹಾಗೂ ಐದು ಸಲದ ಚಾಂಪಿಯನ್ ಮುಂಬೈ ಇಂಡಿಯನ್ಸ್‌ ತಂಡಗಳು ಶುಕ್ರವಾರ ಎರಡನೇ ಕ್ವಾಲಿಫೈಯರ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

16ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಫೈನಲ್‌ಗೆ ಲಗ್ಗೆ ಇಡಲು ಉಭಯ ತಂಡಗಳಿಗೂ ಇದು ಕೊನೆಯ ಅವಕಾಶ. ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹೋದ ವರ್ಷ ನಡೆದಿದ್ದ ಫೈನಲ್‌ನಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಗುಜರಾತ್ ಬಳಗವು ಪ್ರಶಸ್ತಿ ಗೆದ್ದಿತ್ತು. ಈ ಬಾರಿಯೂ ಇಲ್ಲಿಯೇ ಎರಡನೇ ಕ್ವಾಲಿಫೈಯರ್ ಹಾಗೂ ಫೈನಲ್ ನಡೆಯಲಿದೆ. ಚೆನ್ನೈನಲ್ಲಿ ಈಚೆಗೆ ನಡೆದಿದ್ದ ಮೊದಲ ಕ್ವಾಲಿಫೈಯರ್‌ ಪಂದ್ಯದಲ್ಲಿ ಗುಜರಾತ್ ತಂಡವು ಚೆನ್ನೈ ಸೂಪರ್ ಕಿಂಗ್ಸ್ ಎದುರು ಮಣಿದಿತ್ತು. ಆದರೆ,  ಟೂರ್ನಿಯುದ್ದಕ್ಕೂ ಅಮೋಘ ಆಟವಾಡಿರುವ ಹಾರ್ದಿಕ್ ಬಳಗವು ಲೀಗ್ ಹಂತದಲ್ಲಿ 20 ಅಂಕ ಗಳಿಸಿ ಮೊದಲ ಸ್ಥಾನದೊಂದಿಗೆ ಪ್ಲೇ ಆಫ್‌ ಪ್ರವೇಶಿಸಿತ್ತು.

ರೋಹಿತ್ ಶರ್ಮಾ ನಾಯಕತ್ವದ ಮುಂಬೈ ತಂಡವು ಲೀಗ್ ಹಂತದಲ್ಲಿ ನಾಲ್ಕನೇ ಸ್ಥಾನ ಗಳಿಸಿ, ಪ್ಲೇ ಆಫ್‌ ಪ್ರವೇಶಿಸಿತ್ತು. ಎಲಿಮಿನೇಟರ್ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್‌ ವಿರುದ್ಧ ಜಯಿಸಿತ್ತು. ಚೆನ್ನೈನಲ್ಲಿ ನಡೆದಿದ್ದ ಪಂದ್ಯದಲ್ಲಿ ಆಶಿಶ್ ಮದ್ವಾಲ್ ಐದು ವಿಕೆಟ್ ಗೊಂಚಲು ಗಳಿಸಿ ಮುಂಬೈ ತಂಡಕ್ಕೆ ಜಯದ ಕಾಣಿಕೆ ನೀಡಿದ್ದರು.

ಜಸ್‌ಪ್ರೀತ್ ಬೂಮ್ರಾ ಹಾಗೂ ಜೋಫ್ರಾ ಆರ್ಚರ್ ಅವರಿಲ್ಲದ ಮುಂಬೈ ತಂಡಕ್ಕೆ ಆಶಿಶ್ ಹೊಸ ಭರವಸೆ ಮೂಡಿಸಿದ್ದಾರೆ. ಆದರೆ ಗುಜರಾತ್ ತಂಡದಲ್ಲಿ ಎರಡು ಶತಕ ಗಳಿಸಿ ಅಮೋಘ ಲಯದಲ್ಲಿರುವ ಶುಭಮನ್ ಗಿಲ್, ಆರಂಭಿಕ ಬ್ಯಾಟರ್ ವೃದ್ಧಿಮಾನ್ ಸಹಾ, ಡೇವಿಡ್ ಮಿಲ್ಲರ್, ಸ್ಪಿನ್ ಬೌಲಿಂಗ್ ಜೊತೆಗೆ ಬ್ಯಾಟಿಂಗ್‌ನಲ್ಲಿಯೂ ಅಬ್ಬರಿಸುತ್ತಿರುವ ರಶೀದ್ ಖಾನ್ ಅವರನ್ನು ಕಟ್ಟಿ ಹಾಕುವಲ್ಲಿ ಆಶಿಶ್ ಯಾವ ರೀತಿ ಪರಿಣಾಮಕಾರಿಯಾಗುವರು ಎಂಬ ಕುತೂಹಲ ಗರಿಗೆದರಿದೆ.

ಹೋದ ಸಲದ ಟೂರ್ನಿಯಲ್ಲಿ ಮುಂಬೈ ತಂಡವು ಪ್ಲೇ ಆಫ್‌ ಕೂಡ ಪ್ರವೇಶಿಸಿರಲಿಲ್ಲ. ಈ ಬಾರಿಯೂ ಆರಂಭದಲ್ಲಿ ಎರಡು ಸೋಲುಗಳ ಕಹಿಯುಂಡಿತ್ತು. ಆದರೆ ನಂತರದಲ್ಲಿ ತನ್ನ ಸೀಮಿತ ಸಂಪನ್ಮೂಲವನ್ನೇ ಬಳಸಿಕೊಂಡು ಈ ಹಂತಕ್ಕೆ ಬಂದು ನಿಂತಿದೆ. ನಾಯಕ ರೋಹಿತ್ ಬ್ಯಾಟಿಂಗ್‌ನಲ್ಲಿ ಲಯ ಕಂಡಿಲ್ಲ. ಆದರೆ, ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್, ಕ್ಯಾಮರಾನ್ ಗ್ರೀನ್, ಯುವ ಬ್ಯಾಟರ್ ನೆಹಲ್ ವಡೇರಾ ಹಾಗೂ ಟಿಮ್ ಡೇವಿಡ್ ಅವರನ್ನೇ ನೆಚ್ಚಿಕೊಂಡಿದೆ.

ಇದೀಗ ಈ ಬ್ಯಾಟರ್‌ಗಳ ಮುಂದೆ ಗುಜರಾತ್ ತಂಡದ ಯಶಸ್ವಿ ಬೌಲರ್‌ ಎನಿಸಿರುವ ಮೊಹಮ್ಮದ್ ಶಮಿ (26 ವಿಕೆಟ್), ಯಶ್ ದಯಾಳ್, ನೂರ್ ಅಹಮದ್ ಹಾಗೂ ರಶೀದ್ ಅವರನ್ನು ಎದುರಿಸುವ ಸವಾಲು ಇದೆ.

ಲೀಗ್ ಹಂತದಲ್ಲಿ ಉಭಯ ತಂಡಗಳು ಎರಡು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಗುಜರಾತ್ ಒಂದು ಸಲ ಹಾಗೂ ಮುಂಬೈ ಒಂದು ಬಾರಿ ಗೆದ್ದಿವೆ. ಅದರಿಂದಾಗಿ ಈ ಪಂದ್ಯದಲ್ಲಿ ಸಮಬಲದ ಪೈಪೋಟಿ ನಡೆಯುವ ನಿರೀಕ್ಷೆ ಇದೆ. ಅಲ್ಲದೇ ಭಾರತ ಟಿ20 ತಂಡದ ನಾಯಕ ಹಾರ್ದಿಕ್ ಹಾಗೂ ಟೆಸ್ಟ್ ತಂಡದ ನಾಯಕ ರೋಹಿತ್ ನಡುವಣ ಹಣಾಹಣಿಯೆಂದೇ ಈ ಪಂದ್ಯ ಕುತೂಹಲ ಕೆರಳಿಸಿದೆ.

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌ ವಾಹಿನಿ, ಜಿಯೊ ಸಿನೆಮಾ ಆ್ಯಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT