ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿ20 ಸರಣಿ: ವರುಣ್‌ ಪದಾರ್ಪಣೆ ಸಾಧ್ಯತೆ

ಶಿಖರ್‌ ಧವನ್–ದಸುನ್ ಶನಕ ಬಳಗಗಳ ಮುಖಾಮುಖಿ: ಮನೀಷ್ ‘ಔಟ್’?
Last Updated 24 ಜುಲೈ 2021, 15:55 IST
ಅಕ್ಷರ ಗಾತ್ರ

Varun Chakravarthy ಸ್ಪಿನ್ನರ್ ವರುಣ್ ಚಕ್ರವರ್ತಿ ಭಾನುವಾರ ಇಲ್ಲಿ ಆರಂಭವಾಗಲಿರುವ ಶ್ರೀಲಂಕಾ ಎದುರಿನ ಟಿ20 ಸರಣಿಯಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡುವ ಸಾಧ್ಯತೆ ಇದೆ. ಶಿಖರ್ ಧವನ್ ಬಳಗ ಮೂರು ಪಂದ್ಯಗಳ ಸರಣಿಲ್ಲಿ ಗೆಲುವು ಸಾಧಿಸುವ ನೆಚ್ಚಿನ ತಂಡ ಎನಿಸಿದೆ.

ಶುಕ್ರವಾರ ಮುಕ್ತಾಯಗೊಂಡ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಭಾರತ ಭರ್ಜರಿ ಜಯ ಗಳಿಸಿತ್ತು. ಕೊನೆಯ ಪಂದ್ಯದಲ್ಲಿ ಪ್ರಯೋಗಗಳನ್ನು ಮಾಡಿ, ಆರು ಮಂದಿ ಹೊಸಬರಿಗೆ ಅವಕಾಶ ನೀಡಿತ್ತು. ಮೂರು ವಿಕೆಟ್‌ಗಳಿಂದ ಸೋಲನುಭವಿಸಿತ್ತು.

ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮಿಂಚಿದ ಯುವ ಆಟಗಾರರ ಪೈಕಿ ಕೆಲವರು ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದು ಟಿ20 ಸರಣಿಯಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ. ಆಫ್‌ ಬ್ರೇಕ್ ಮತ್ತು ಕೇರಂ ಬಾಲ್ ಎಸೆತಗಳನ್ನು ಹಾಕಬಲ್ಲ ವರುಣ್ ಚಕ್ರವರ್ತಿ ಅವರಿಗೆ ಈ ಪೈಕಿ ಆದ್ಯತೆ ಸಿಗುವುದು ಖಚಿತ. ಗಾಯ ಮತ್ತು ಫಿಟ್‌ನೆಸ್ ಸಮಸ್ಯೆಯಿಂದಾಗಿ ಅವರಿಗೆ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಎದುರಿನ ಸರಣಿಗಳಲ್ಲಿ ಆಡಲು ಅವಕಾಶ ಸಿಕ್ಕಿರಲಿಲ್ಲ.

ದೇವದತ್ತ ಪಡಿಕ್ಕಲ್ ಮತ್ತು ಋತುರಾಜ್ ಗಾಯಕವಾಡ್ ಅವರ ಪೈಕಿ ಒಬ್ಬರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ. ಪೃಥ್ವಿ ಶಾ ಮತ್ತು ಸೂರ್ಯಕುಮಾರ್ ಯಾದವ್ ಟೆಸ್ಟ್ ಸರಣಿಯಲ್ಲಿ ಆಡಲು ಇಂಗ್ಲೆಂಡ್‌ಗೆ ಪ್ರಯಾಣಿಸಲಿದ್ದಾರೆ. ಆದ್ದರಿಂದ ಅವರಿಗೆ ವಿಶ್ರಾಂತಿ ನೀಡಲು ತಂಡದ ಆಡಳಿತ ಮುಂದಾಗಲಿದೆ.

ಇಶಾನ್ ಕಿಶನ್ ಮತ್ತು ಸಂಜು ಸ್ಯಾಮ್ಸನ್ ಅವರನ್ನು ಆಡುವ 11ರ ಬಳಗದಲ್ಲಿ ಸೇರಿಸಿದರೆ ಮನೀಷ್ ಪಾಂಡೆ ಸ್ಥಾನ ಕಳೆದುಕೊಳ್ಳುವುದು ಖಚಿತ. ಹಾರ್ದಿಕ್ ಪಾಂಡ್ಯ ಮತ್ತು ಕೃಣಾಲ್ ಪಾಂಡ್ಯ ಸಹೋದರರ ಸ್ಥಾನಕ್ಕೆ ಧಕ್ಕೆಯಾಗುವ ಸಾಧ್ಯತೆ ಕಡಿಮೆ.

ತಂಡಗಳು: ಭಾರತ: ಶಿಖರ್ ಧವನ್ (ನಾಯಕ), ಪೃಥ್ವಿ ಶಾ, ದೇವದತ್ತ ಪಡಿಕ್ಕಲ್‌, ಋತುರಾಜ್ ಗಾಯಕವಾಡ್‌, ಸೂರ್ಯಕುಮಾರ್ ಯಾದವ್, ಭುವನೇಶ್ವರ್ ಕುಮಾರ್ (ಉಪನಾಯಕ), ಮನೀಷ್ ಪಾಂಡೆ, ಹಾರ್ದಿಕ್ ಪಾಂಡ್ಯ, ನಿತೀಶ್ ರಾಣಾ, ಇಶಾನ್ ಕಿಶನ್‌ (ವಿಕೆಟ್ ಕೀಪರ್‌), ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಯಜುವೇಂದ್ರ ಚಾಹಲ್, ರಾಹುಲ್ ಚಾಹರ್‌, ಕೃಷ್ಣಪ್ಪ ಗೌತಮ್‌, ಕೃಣಾಲ್ ಪಾಂಡ್ಯ, ಕುಲದೀಪ್ ಯಾದವ್, ವರುಣ್ ಚಕ್ರವರ್ತಿ, ದೀಪಕ್ ಚಾಹರ್‌, ನವದೀಪ್ ಸೈನಿ, ಚೇತನ್ ಸಕಾರಿಯ.

ಶ್ರೀಲಂಕಾ: ದಸುನ್ ಶನಕ (ನಾಯಕ), ಧನಂಜಯ ಡಿ’ಸಿಲ್ವ, ಆವಿಷ್ಕ ಫರ್ನಾಂಡೊ, ಭಾನುಕ ರಾಜಪಕ್ಸ, ಪಾಥುಮ್ ನಿಸಾಂಕ, ಚರಿತ್ ಅಸಲಂಕ, ವನಿಂದು ಹಸರಂಗ, ಅಶೇನ್ ಬಂಡಾರ, ಮಿನೋದ್ ಭಾನುಕ, ಲಾಹಿರು ಉದಾರ, ರಮೇಶ್ ಮೆಂಡಿಸ್‌, ಚಮಿಕ ಕರುಣರತ್ನೆ, ಬಿನೂರ ಫರ್ನಾಂಡೊ, ದುಷ್ಮಂತ ಚಮೀರ, ಲಕ್ಷನ್ ಸಂಡಗನ್, ಅಕಿಲ ಧನಂಜಯ, ಶಿರಾನ್ ಫರ್ನಾಂಡೊ, ಧನಂಜಯ ಲಕ್ಷನ್, ಇಶಾನ್ ಜಯರತ್ನೆ, ಪ್ರವೀಣ್ ಜಯವಿಕ್ರಮ, ಅಸಿತ ಫರ್ನಾಂಡೊ, ಕಾಸುನ್ ರಜಿತ, ಲಾಹಿರು ಕುಮಾರ, ಇಸುರು ಉಡಾನ.

ಪಂದ್ಯ ಆರಂಭ: ರಾತ್ರಿ 8.00

ನೇರ ಪ್ರಸಾರ: ಸೋನಿ ನೆಟ್‌ವರ್ಕ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT