ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವದತ್ತ ಮಿಂಚಿನ ಶತಕ: ಕರ್ನಾಟಕಕ್ಕೆ ಐದನೇ ಜಯ

ನಿಕಿನ್ ಜೋಸ್ ಚೆಂದದ ಬ್ಯಾಟಿಂಗ್: ಚಂಡೀಗಡದ ಅರ್ಸಲನ್ ಖಾನ್ ಶತಕ
Published 2 ಡಿಸೆಂಬರ್ 2023, 1:30 IST
Last Updated 2 ಡಿಸೆಂಬರ್ 2023, 1:30 IST
ಅಕ್ಷರ ಗಾತ್ರ

ಆನಂದ್, ಗುಜರಾತ್: ಮತ್ತೆ ಮಿಂಚಿದ ದೇವದತ್ತ ಪಡಿಕ್ಕಲ್ ಶತಕದ ನೆರವಿನಿಂದ ಕರ್ನಾಟಕ ತಂಡವು ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಅಜೇಯ ಓಟ ಮುಂದುವರಿಸಿತು.

ಎಡಿಎಸ್‌ಎ ರೈಲ್ವೆ ಕ್ರಿಕೆಟ್ ಮೈದಾನದಲ್ಲಿ ಶುಕ್ರವಾರ ನಡೆದ ಸಿ ಗುಂಪಿನ ಪಂದ್ಯದಲ್ಲಿ ಕರ್ನಾಟಕವು 22 ರನ್‌ಗಳಿಂದ ಚಂಡೀಗಡದ ವಿರುದ್ಧ ಗೆದ್ದಿತು. ಇದರೊಂದಿಗೆ ಸತತ ಐದನೇ ಜಯ ದಾಖಲಿಸಿತು. ಒಟ್ಟು 20 ಅಂಕಗಳು ಈ ಕರ್ನಾಟಕದ ಖಾತೆಯಲ್ಲಿವೆ.  ಆದರೆ ಇಷ್ಟೇ ಅಂಕಗಳಿರುವ ಹರಿಯಾಣ ತಂಡವು ಉತ್ತಮ ನೆಟ್‌ ರನ್‌ ರೇಟ್ ನಿಂದಾಗಿ ಮೊದಲ ಸ್ಥಾನದಲ್ಲಿದೆ.

ಟಾಸ್ ಗೆದ್ದ ಕರ್ನಾಟಕ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.ಆದರೆ ಸಮರ್ಥ್ (5 ರನ್) ಮತ್ತು ಮಯಂಕ್ ಅಗರವಾಲ್ (19 ರನ್) ಅವರ ವೈಫಲ್ಯ ಮುಂದುವರಿಯಿತು. ದೇವದತ್ತ (114; 103ಎ, 4X9, 6X6) ಮತ್ತು ನಿಕಿನ್ ಜೋಸ್ (96; 114ಎ, 4X6, 6X1) ಮೂರನೇ ವಿಕೆಟ್ ಜೊತೆಯಾಟದಲ್ಲಿ 171 ರನ್ ಸೇರಿಸಿದರು. ಇದರಿಂದಾಗಿ ತಂಡವು 50 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 299 ರನ್‌ ಗಳಿಸಿತು. ಅನುಭವಿ ಆಟಗಾರ ಮನೀಷ್ ಪಾಂಡೆ ಅಜೇಯ ಅರ್ಧಶತಕ (ಔಟಾಗದೆ 53; 48ಎ, 6X3) ಹೊಡೆದರು.

ಗುರಿ ಬೆನ್ನಟ್ಟಿದ ಚಂಡೀಗಡ ತಂಡಕ್ಕೆ ಉತ್ತಮ ಆರಂಭ ನೀಡುವಲ್ಲಿ ಅರ್ಸಲನ್ ಖಾನ್ (102; 103ಎ) ಮತ್ತು  ನಾಯಕ ಮನನ್ ವೊಹ್ರಾ ಯಶಸ್ವಿಯಾದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 108 ರನ್ ಸೇರಿಸಿದರು. ಆದರೆ, ಕೌಶಿಕ್ (44ಕ್ಕೆ 2) ಮತ್ತು ಉಳಿದ ಬೌಲರ್‌ಗಳ ಸಂಘಟಿತ ಹೋರಾಟದಿಂದಾಗಿ ಚಂಡೀಗಡ ತಂಡಕ್ಕೆ 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 277 ರನ್‌ ಗಳಿಸಲಷ್ಟೇ ಸಾಧ್ಯವಾಯಿತು. 

ದೇವದತ್ತ ಎರಡನೇ ಶತಕ: ಎಡಗೈ ಬ್ಯಾಟರ್ ದೇವದತ್ತ ಅಮೋಘ ಲಯ ವನ್ನು ಮುಂದುವರಿಸಿದರು. ಟೂರ್ನಿ ಯಲ್ಲಿ ಅವರಿಗೆ ಇದು ಎರಡನೇ ಶತಕ ವಾಗಿದೆ.  ಒಟ್ಟು ಐದು ಪಂದ್ಯಗಳಿಂದ 465 ರನ್‌ ಪೇರಿಸಿದ್ದಾರೆ. ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ನಿಕಿನ್ ಜೋಸ್ ಕೇವಲ ನಾಲ್ಕು ರನ್‌ಗಳ ಅಂತರದಲ್ಲಿ ಶತಕ ಕೈತಪ್ಪಿಸಿಕೊಂಡರು.

ಸಂಕ್ಷಿಪ್ತ ಸ್ಕೋರು

ಕರ್ನಾಟಕ: 50 ಓವರ್‌ಗಳಲ್ಲಿ 6 ವಿಕೆಟ್‌ಗೆ 299 (ಪಡಿಕ್ಕಲ್ 114, ನಿಕಿನ್ ಜೋಸ್ 96, ಮನೀಷ್ ಪಾಂಡೆ ಔಟಾಗದೆ 53, ಸಂದೀಪ್ ಶರ್ಮಾ 51ಕ್ಕೆ2, ಮನದೀಪ್ ಸಿಂಗ್ 31ಕ್ಕೆ2)

ಚಂಡೀಗಡ: 50 ಓವರ್‌ ಗಳಲ್ಲಿ 7 ವಿಕೆಟ್‌ಗೆ 277 (ಅರ್ಸಲನ್ ಖಾನ್ 102, ಮನನ್ ವೊಹ್ರಾ 34, ಅಂಕಿತ್ ಕೌಶಿಕ್ 51, ಭಾಗಮೆಂದೆರ್ ಲಾಥರ್ 32, ಕರಣ್ ಕೈಲಾ 20, ವಿ. ಕೌಶಿಕ್ 44ಕ್ಕೆ2)

ಫಲಿತಾಂಶ: ಕರ್ನಾಟಕ ತಂಡಕ್ಕೆ 22 ರನ್‌ಗಳ ಜಯ.

ಮುಂಬೈಗೆ ಮಣಿದ ಸೌರಾಷ್ಟ್ರ

ಆಲೂರು, ಬೆಂಗಳೂರು: ಮುಂಬೈ ಬೌಲರ್‌ಗಳ ದಾಳಿಯ ಮುಂದೆ ಹಾಲಿ ಚಾಂಪಿಯನ್ ಸೌರಾಷ್ಟ್ರ ತಂಡವು ಕುಸಿಯಿತು.

ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ  ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಎ ಗುಂಪಿನ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಮುಂಬೈ ಜಯಿಸಿತು. ಟಾಸ್ ಗೆದ್ದ ಮುಂಬೈ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸೌರಾಷ್ಟ್ರ ತಂಡವು 40.5 ಓವರ್‌ಗಳಲ್ಲಿ 144 ರನ್‌ ಗಳಿಸಿ ಕುಸಿಯಿತು.
ಮುಂಬೈ ತಂಡದ ಮೋಹಿತ್ ಅವಸ್ತಿ, ಶಾರ್ದೂಲ್ ಠಾಕೂರ್ ಮತ್ತು ಶಮ್ಸ್ ಮುಲಾನಿ ತಲಾ ಎರಡು ವಿಕೆಟ್ ಗಳಿಸಿದರು.

ಟೆಸ್ಟ್ ಪರಿಣತ ಚೇತೇಶ್ವರ್ ಪೂಜಾರ (ಔಟಾಗದೆ 55) ಅರ್ಧಶತಕ ಗಳಿಸಿದರೂ ಸೌರಾಷ್ಟ್ರವು ದೊಡ್ಡ ಮೊತ್ತ ಪೇರಿಸಲಿಲ್ಲ.

ಗುರಿ ಬೆನ್ನಟ್ಟಿದ ಮುಂಬೈ ಸುಲಭ ಜಯ ಸಾಧಿಸಲು ಸಾಧ್ಯವಾಗಲಿಲ್ಲ. ಸೌರಾಷ್ಟ್ರ ಬೌಲರ್‌ಗಳು ಕಠಿಣ ಸ್ಪರ್ಧೆಯೊಡ್ಡಿದರು. ಇದರಿಂದಾಗಿ ಮುಂಬೈ ತಂಡವು 34.4 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 150 ರನ್ ಗಳಿಸಿ ಜಯಿಸಿತು.

ಸಂಕ್ಷಿಪ್ತ ಸ್ಕೋರು

ಸೌರಾಷ್ಟ್ರ: 40.5 ಓವರ್‌ಗಳಲ್ಲಿ 144 (ಹರ್ವಿಕ್ ದೇಸಾಯಿ 27, ಚೇತೇಶ್ವರ್ ಪೂಜಾರ ಔಟಾಗದೆ 55, ಮೋಹಿನ್ ಅವಸ್ತಿ 32ಕ್ಕೆ2, ಶಾರ್ದೂಲ್ ಠಾಕೂರ್ 27ಕ್ಕೆ2, ಶಮ್ಸ್‌ ಮುಲಾನಿ 16ಕ್ಕೆ2)

ಮುಂಬೈ: 34.4 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 150 (ಪ್ರಸಾದ್ ಪವಾರ್ ಔಟಾಗದೆ 43, ಶಾರ್ದೂಲ್ ಠಾಕೂರ್ ಔಟಾಗದೆ 39, ಜಯದೇವ್  ಉನದ್ಕತ್ 35ಕ್ಕೆ2) 

ಫಲಿತಾಂಶ: ಮುಂಬೈ ತಂಡಕ್ಕೆ 5 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT