ಶನಿವಾರ, ಮೇ 21, 2022
28 °C
ಸಿದ್ಧಾರ್ಥ್‌–ಮನೀಷ್‌ ಶತಕದ ಜೊತೆಯಾಟ

ವಿಜಯ್ ಹಜಾರೆ ಟ್ರೋಫಿ: ಕ್ವಾರ್ಟರ್ ಫೈನಲ್‌ಗೆ ಕರ್ನಾಟಕ; ವೈಶಾಖ್‌ಗೆ 4 ವಿಕೆಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆತಿಥೇಯ ರಾಜಸ್ಥಾನ ತಂಡವನ್ನು ಎಂಟು ವಿಕೆಟ್‌ಗಳಿಂದ ಮಣಿಸಿದ ಮನೀಷ್ ಪಾಂಡೆ ನೇತೃತ್ವದ ಕರ್ನಾಟಕ ತಂಡ ವಿಜಯ್ ಹಜಾರೆ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಕ್ವಾರ್ಟರ್ ಫೈನಲ್ ಪ್ರವೇಶಿಸಿತು.

ಜೈಪುರದ ಕೆ.ಎಲ್‌.ಸೈನಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪ್ರೀ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕರ್ನಾಟಕ ಎಂಟು ವಿಕೆಟ್‌ಗಳ ಜಯ ಸಾಧಿಸಿತು. 200 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ತಂಡ ಇನ್ನೂ 38 ಎಸೆತ ಬಾಕಿ ಇರುವಾಗ ಗೆಲುವಿನ ದಡ ಸೇರಿತು.

ಆರಂಭಿಕ ಬ್ಯಾಟರ್ ದೇವದತ್ತ ಪಡಿಕ್ಕಲ್ ತಂಡದ ಮೊತ್ತ 25 ಆಗಿದ್ದಾಗ ಔಟಾದರು. ರವಿಕುಮಾರ್ ಸಮರ್ಥ್ ಜೊತೆಗೂಡಿದ ಕೃಷ್ಣಮೂರ್ತಿ ಸಿದ್ಧಾರ್ಥ್ 75 ರನ್ ಸೇರಿಸಿ ತಂಡಕ್ಕೆ ಆಸರೆಯಾದರು. ಸಮರ್ಥ್ ಔಟಾದ ನಂತರ ಸಿದ್ಧಾರ್ಥ್ ಮತ್ತು ಮನೀಷ್ ಪಾಂಡೆ ಆಟ ರಂಗೇರಿತು. ಇಬ್ಬರೂ 104 ರನ್‌ಗಳ ಜೊತೆಯಾಟವಾಡಿ ಸುಲಭ ಜಯ ತಂದುಕೊಟ್ಟರು.

ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮನೀಷ್ ಪಾಂಡೆ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ನಾಲ್ಕು ವಿಕೆಟ್ ಗಳಿಸಿದ ವೇಗಿ ವೈಶಾಖ್ ವಿಜಯಕುಮಾರ್ ಮತ್ತು ಎರಡು ವಿಕೆಟ್ ಪಡೆದ ಆಫ್‌ ಸ್ಪಿನ್ನರ್ ಕೃಷ್ಣಪ್ಪ ಗೌತಮ್ ಅವರ ದಾಳಿಗೆ ಆತಿಥೇಯ ತಂಡದ ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿದರು.

ಐದು ಸಿಕ್ಸರ್ ಮತ್ತು ಒಂಬತ್ತು ಬೌಂಡರಿ ಸಿಡಿಸಿ 109 ಎಸೆತಗಳಲ್ಲಿ 109 ರನ್ ಗಳಿಸಿದ ನಾಯಕ ದೀಪಕ್ ಹೂಡಾ ಏಕಾಂಗಿಯಾಗಿ ಇನಿಂಗ್ಸ್ ಮುನ್ನಡೆಸಿದರು. ಹೀಗಾಗಿ ತಂಡಕ್ಕೆ ಸವಾಲಿನ ಮೊತ್ತ ಕಲೆ ಹಾಕಲು ಸಾಧ್ಯವಾಯಿತು.

 ಆರಂಭಿಕ ಬ್ಯಾಟರ್ ಅಭಿಜಿತ್ ತೋಮರ್ ಅವರನ್ನು ಪ್ರಸಿದ್ಧ ಕೃಷ್ಣ ಅವರು ವಾಪಸ್ ಕಳುಹಿಸಿದರೆ ಮಣಿಂದರ್ ಸಿಂಗ್ ಮತ್ತು ಮಹಿಪಾಲ್ ಲೊಮ್ರೊರ್ ವಿಕೆಟ್ ವೈಶಾಖ್ ಪಾಲಾಯಿತು. ಆಗ ತಂಡ 15ಕ್ಕೆ3 ಎಂಬ ಸ್ಥಿತಿಯಲ್ಲಿತ್ತು. 19 ರನ್ ಗಳಿಸುವಷ್ಟರಲ್ಲಿ ಐದು ವಿಕೆಟ್ ಕಳೆದುಕೊಂಡು ತಂತ ಸಂಕಷ್ಟಕ್ಕೆ ಸಿಲುಕಿತು. ಈ ಹಂತದಲ್ಲಿ ದೀಪಕ್ ಹೂಡಾ ಮತ್ತು ಸಮರ್ಪಿತ್ ಜೋಶಿ ಶತಕದ (118 ರನ್‌) ಜೊತೆಯಾಟವಾಡಿ ತಂಡವನ್ನು ಕಾಪಾಡಿದರು.

ಸಮರ್ಪಿತ್ ಔಟಾದ ನಂತರ ಮತ್ತೆ ಕುಸಿತದ ಹಾದಿ ಹಿಡಿದ ತಂಡಕ್ಕೆ 41ನೇ ಓವರ್‌ನಲ್ಲಿ ದೀಪಕ್ ವಿಕೆಟ್ ಉರುಳಿಸಿ ಪ್ರವೀಣ್ ದುಬೆ ಭಾರಿ ಪೆಟ್ಟು ನೀಡಿದರು. ಮುಂದಿನ ಓವರ್‌ನಲ್ಲಿ ತಂಡದ ಇನಿಂಗ್ಸ್‌ಗೆ ತೆರೆ ಬಿತ್ತು.

ಕ್ವಾರ್ಟರ್‌ ಫೈನಲ್ ಹಣಾಹಣಿ

ದಿನಾಂಕ;ತಂಡಗಳು

ಡಿ.21;ಹಿಮಾಚಲ ಪ್ರದೇಶ–ಉತ್ತರ ಪ್ರದೇಶ

ಡಿ.21;ಕರ್ನಾಟಕ–ತಮಿಳುನಾಡು

ಡಿ.22;ಸೌರಾಷ್ಟ್ರ–ವಿದರ್ಭ

ಡಿ.22;ಕೇರಳ–ಸರ್ವಿಸಸ್‌

ಸ್ಥಳ: ಜೈಪುರ ಅರಂಭ: ಬೆಳಿಗ್ಗೆ 9.00

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು