ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕ ಕ್ರಿಕೆಟ್‌ನ ‘ವಿಜಯ’ಗಾಥೆಯ ಕೊಂಡಿ ವಿಜಯಕೃಷ್ಣ

Last Updated 17 ಜೂನ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಕರ್ನಾಟಕ ತಂಡದಲ್ಲಿ 1970ರ ದಶಕದಲ್ಲಿ ಪ್ರಮುಖ ಆಲ್‌ರೌಂಡರ್ ಆಗಿ ಗುರುತಿಸಿಕೊಂಡಿದ್ದ ಬಿ. ವಿಜಯಕೃಷ್ಣ(71) ಅವರು ಗುರುವಾರ ಬೆಳಿಗ್ಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಕರ್ನಾಟಕ ರಣಜಿ ಟ್ರೋಫಿ ಗೆದ್ದುಕೊಂಡ ಮೂರು ಸಂದರ್ಭಗಳಲ್ಲಿ ಅವರು ತಂಡದಲ್ಲಿ ಆಡಿದ್ದರು.

ಎಡಗೈ ಸ್ಪಿನ್ನರ್‌ ಮತ್ತು ಬ್ಯಾಟ್ಸ್‌ಮನ್‌ ಆಗಿದ್ದ ಭರಮಯ್ಯ ವಿಜಯಕೃಷ್ಣ ಅವರು 1968ರಲ್ಲಿ ಕರ್ನಾಟಕ ತಂಡಕ್ಕೆ ಪದಾರ್ಪಣೆ ಮಾಡಿದ್ದು ಸುಮಾರು 14 ವರ್ಷಗಳ ಕಾಲ ರಾಜ್ಯ ತಂಡದಲ್ಲಿ ಆಡಿದ್ದರು.

1973–74, 1977–78 ಮತ್ತು 1981–82ರಲ್ಲಿ ಕರ್ನಾಟಕ ದೇಶಿಯ ಕ್ರಿಕೆಟ್‌ ಚಾಂಪಿಯನ್‌ ಆಗಿದ್ದಾಗ ಅವರು ಆಡಿದ್ದರು. ಜೊತೆಗೆ ಮೂರು ಬಾರಿ (1974–75, 1978–79, 1982–83 ರಲ್ಲಿ) ರನ್ನರ್‌ ಅಪ್‌ ಆಗಿದ್ದ ತಂಡದಲ್ಲೂ ಆಡಿದ್ದರು. ಸಿಂಡಿಕೇಟ್‌ ಬ್ಯಾಂಕ್‌ ಉದ್ಯೋಗಿಯಾಗಿದ್ದ ಅವರು ತಮ್ಮ ಕೊನೆಯ ಪಂದ್ಯವನ್ನು 1982–83ರ ಫೈನಲ್‌ನಲ್ಲಿ ಮುಂಬೈ ವಿರುದ್ಧ ಮುಂಬೈನಲ್ಲಿ ಆಡಿದ್ದರು.

ಮಲ್ಲೇಶ್ವರದ ಶಿರೂರು ಪಾರ್ಕ್‌ನಲ್ಲಿ ಸಾಲಸ್ ನಝರೆತ್‌ ಅವರಿಂದ ಬಾಲ್ಯದಲ್ಲಿ ತರಬೇತಿ ಪಡೆದಿದ್ದ ವಿಜಯಕೃಷ್ಣ, 11ನೇ ವಯಸ್ಸಿನಲ್ಲಿ ಸಬ್ ಮೆಟ್ರೊ ಶೀಲ್ಡ್‌ನಲ್ಲಿ ಮೊದಲ ಪಂದ್ಯ ಆಡಿದ್ದರು. ಫಾರ್ವಡ್‌ ಶಾರ್ಟ್‌ಲೆಗ್‌ನಲ್ಲಿ ಅಮೋಘ ಕ್ಷೇತ್ರರಕ್ಷಣೆಗಾಗಿ ಅವರು ಪ್ರಸಿದ್ಧಿ ಪಡೆದಿದ್ದರು. 1968–69ರಲ್ಲಿ ಬೆಂಗಳೂರಿನಲ್ಲಿ ಹೈದರಾಬಾದ್‌ ತಂಡದ ವಿರುದ್ಧ ಮೊದಲ ಬಾರಿ ರಣಜಿ ಟ್ರೋಫಿ ಟೂರ್ನಿಗೆ ಪದಾರ್ಪಣೆ ಮಾಡಿದ್ದರು.

ಘಟಾನುಘಟಿ ಸ್ಪಿನ್ನರ್‌ಗಳಾದ ಇ.ಎ.ಎಸ್‌. ಪ್ರಸನ್ನ, ಬಿ.ಎಸ್‌.ಚಂದ್ರಶೇಖರ್‌ ಮತ್ತು ಬ್ಯಾಟ್ಸ್‌ಮನ್ ಜಿ.ಆರ್. ವಿಶ್ವನಾಥ್ ಅವರ ಸಮಕಾಲೀನರಾಗಿದ್ದವರು ವಿಜಯಕೃಷ್ಣ. ಭಾರತ ತಂಡದಲ್ಲಿಯೂ ಪ್ರಸನ್ನ ಮತ್ತು ಚಂದ್ರಶೇಖರ್ ಅವರು ಮಿಂಚುತ್ತಿದ್ದರು. ಆ ಹಂತದಲ್ಲಿ ವಿಜಯಕೃಷ್ಣ ಅವರಿಗೆ ಸಾಮರ್ಥ್ಯ ಇದ್ದರೂ, ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶ ಸಿಗಲಿಲ್ಲ. ಆದರೆ ಉಪಯುಕ್ತ ಆಲ್‌ರೌಂಡ್‌ ಆಟದಿಂದ ರಾಜ್ಯ ತಂಡದ ಶಕ್ತಿಯಾಗಿ ಬೆಳೆದರು. ಪ್ರವಾಸಿ ವೆಸ್ಟ್‌ ಇಂಡೀಸ್‌ ವಿರುದ್ಧ 1978–79ರಲ್ಲಿ ನಡೆದ ಮೂರು ದಿನಗಳ ಪಂದ್ಯದಲ್ಲಿ ಅವರು 9 ವಿಕೆಟ್‌ಗಳನ್ನು (79ಕ್ಕೆ6, 89ಕ್ಕೆ3) ಪಡೆದು ಕರ್ನಾಟಕದ ಪ್ರಸಿದ್ಧ ಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದು ಅವರ ಕ್ರಿಕೆಟ್‌ ಜೀವನದ ಸ್ಮರಣೀಯ ಸಂದರ್ಭಗಳಲ್ಲಿ ಒಂದು.

ಒಟ್ಟು 74 ರಣಜಿ ಟ್ರೋಫಿ ಪಂದ್ಯಗಳಲ್ಲಿ ಆಡಿರುವ ‘ವಿಜಿ’ ಎರಡು ಶತಕ, 16 ಅರ್ಧಶತಕ ಸೇರಿ 2,191 ರನ್‌ ಬಾರಿಸಿದ್ದಾರೆ. 27.15 ಸರಾಸರಿಯಲ್ಲಿ 177 ವಿಕೆಟ್‌ಗಳನ್ನು ಪಡೆದಿದ್ದಾರೆ. ಐದು ಬಾರಿ ಐದು ವಿಕೆಟ್‌ಗಳ ಗೊಂಚಲು ಪಡೆದಿರುವ ಅವರ ಶ್ರೇಷ್ಠ ಸಾಧನೆ 85ಕ್ಕೆ7 ವಿಕೆಟ್‌.

ಸಮಕಾಲೀನರಾದ ಪ್ರಸನ್ನ, ಚಂದ್ರಶೇಖರ್‌, ನಂತರದ ದಿನಗಳಲ್ಲಿ ರಘುರಾಮ ಭಟ್‌ ಅಂಥ ಘಟಾನುಘಟಿಗಳ ಜೊತೆಗೆ ಆಡಿದ್ದ ಅವರ ಈ ಸಾಧನೆ ಕಡಿಮೆಯೇನೂ ಆಗಿರಲಿಲ್ಲ. 1973–74ರಲ್ಲಿ ರಾಜಸ್ಥಾನ ವಿರುದ್ಧ ಫೈನಲ್‌ನಲ್ಲಿ ಗಳಿಸಿದ 71 ರನ್‌ಗಳು ಪಂದ್ಯದಲ್ಲಿ ಕರ್ನಾಟಕದ ಪಾಲಿಗೆ ನಿರ್ಣಾಯಕ ಎನಿಸಿದ್ದವು.

1975–76ರಲ್ಲಿ ಮಹಾರಾಷ್ಟ್ರ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಗಳಿಸಿದ ಬಿರುಸಿನ ಶತಕ (102* ) ಅವರಿಗೆ ಪ್ರಸಿದ್ಧಿ ತಂದುಕೊಟ್ಟಿತ್ತು. ಅವರು ದೇಶಿ ಕ್ರಿಕೆಟ್‌ನಲ್ಲಿ ವೇಗದ ಶತಕಕ್ಕೆ ನೀಡುವ ಎಲ್‌ ಪಿ.ಜೈ ಟ್ರೋಫಿಯನ್ನು ಪಡೆದ ಕರ್ನಾಟಕದ ಮೊದಲ ಕ್ರಿಕೆಟಿಗರಾದರು.

ವಿಜಯಕೃಷ್ಣ, ಮೂರು ಇರಾನಿ ಟ್ರೋಫಿ, ಒಮ್ಮೆ ದುಲೀಪ್‌ ಟ್ರೋಫಿಯಲ್ಲೂ ಆಡಿದ್ದಾರೆ.

(ಅಂಕಿಅಂಶ: ಚನ್ನಗಿರಿ ಕೇಶವಮೂರ್ತಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT