ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್ ಕ್ರಿಕೆಟ್ ಪೂರ್ವಸಿದ್ದತೆಯತ್ತ ವಿರಾಟ್ ಬಳಗದ ಗಮನ

Last Updated 17 ನವೆಂಬರ್ 2020, 14:40 IST
ಅಕ್ಷರ ಗಾತ್ರ

ಸಿಡ್ನಿ : ಇನ್ನು ಒಂಬತ್ತು ದಿನಗಳು ಕಳೆದರೆ ಆಸ್ಟ್ರೇಲಿಯಾ ಎದುರಿನ ಸೀಮಿತ ಓವರ್‌ಗಳ ಕ್ರಿಕೆಟ್ ಸರಣಿಯಲ್ಲಿ ಭಾರತ ತಂಡವು ಕಣಕ್ಕಿಳಿಯಬೇಕು. ಆದರೆ ಮುಂದಿನ ತಿಂಗಳು ನಡೆಯುವ ಟೆಸ್ಟ್ ಸರಣಿಯ ಬಗ್ಗೆ ತಂಡವು ಹೆಚ್ಚು ಗಮನ ನೀಡುವಂತೆ ಕಾಣುತ್ತಿದೆ.

ತಂಡದ ಆಟಗಾರರು ಮಂಗಳವಾರ ಹೆಚ್ಚು ಸಮಯವನ್ನು ನಸುಗೆಂಪು ಮತ್ತು ಕೆಂಪು ಚೆಂಡಿನ ಅಭ್ಯಾಸಕ್ಕೆ ಮೀಸಲಿಟ್ಟರು. ಮೂರು ಮಾದರಿಗಳ ತಂಡದಲ್ಲಿರುವ ಬ್ಯಾಟ್ಸ್‌ಮನ್ ಮತ್ತು ಬೌಲರ್‌ಗಳು ಅಭ್ಯಾಸ ಮಾಡಿದರು.

ಮಧ್ಯಮವೇಗಿ ಮೊಹಮ್ಮದ್ ಶಮಿ, ಯುವ ಬೌಲರ್ ಮೊಹಮ್ಮದ್ ಸಿರಾಜ್ ಅವರ ಬೌಲಿಂಗ್‌ಗೆ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಮಾಡಿದರು.

ನೆಟ್ಸ್‌ ಅಭ್ಯಾಸದ ವಿಡಿಯೊ ಟ್ವೀಟ್ ಮಾಡಿರುವ ವಿರಾಟ್, ’ಕ್ರಿಕೆಟ್ ಅಭ್ಯಾಸದ ಅವಧಿಯೆಂದರೆ ನನಗೆ ಪ್ರೀತಿ‘ ಎಂದು ಬರೆದಿದ್ದಾರೆ.

ಆಸ್ಟ್ರೇಲಿಯಾ ವಿರುದ್ಧ ಅಡಿಲೇಡ್‌ನಲ್ಲಿ ನಡೆಯಲಿರುವ ಹಗಲು–ರಾತ್ರಿ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಆಡಲಿದ್ದಾರೆ. ಡಿಸೆಂಬರ್ 17ರಿಂದ ಈ ಪಂದ್ಯ ನಡೆಯುವುದು. ನಂತರ ವಿರಾಟ್ ಭಾರತಕ್ಕೆ ಮರಳುವರು.

ಅಭ್ಯಾಸದ ಸಂದರ್ಭದಲ್ಲಿ ಮೈದಾನದಲ್ಲಿ ಟೆಸ್ಟ್‌ಗೆ ಬಳಸುವ ಅಂಗಣವನ್ನು ತಂಡವು ಬಳಸಿಕೊಂಡಿದ್ದು ಗಮನ ಸೆಳೆಯಿತು. ಕೆ.ಎಲ್. ರಾಹುಲ್ ಅವರು ಹೆಚ್ಚು ಹೊತ್ತು ಪಿಂಕ್ ಬಾಲ್ ಎಸೆತಗಳನ್ನು ಎದುರಿಸಿದರು. ಮೊದಲ ಟೆಸ್ಟ್‌ನಲ್ಲಿ ಅವರು ಸ್ಥಾನ ಪಡೆಯುವ ಸಾಧ್ಯತೆ ಇದೆ.

ಈಚೆಗೆ ಮುಗಿದ ಐಪಿಎಲ್‌ ಟೂರ್ನಿಯಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದಲ್ಲಿ ಆಡಿ 20 ವಿಕೆಟ್‌ಗಳನ್ನು ಗಳಿಸಿದ್ದ ಮೊಹಮ್ಮದ್ ಶಮಿ ಅವರು ಮೂರು ಮಾದರಿಗಳ ತಂಡದಲ್ಲಿದ್ದಾರೆ. ಆರ್‌ಸಿಬಿಯಲ್ಲಿ ಆಡಿದ್ದ ಸಿರಾಜ್ 11 ವಿಕೆಟ್‌ಗಳನ್ನು ಗಳಿಸಿದ್ದರು.

ನವೆಂಬರ್ 27ರಿಂದ ಏಕದಿನ ಕ್ರಿಕೆಟ್ ಸರಣಿ ಆರಂಭವಾಗಲಿದೆ. ಮೊದಲ ಎರಡು ಪಂದ್ಯಗಳು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿವೆ. ಮೂರನೇ ಪಂದ್ಯವು ಡಿಸೆಂಬರ್ 2ರಂದು ಕ್ಯಾನ್‌ಬೆರಾದಲ್ಲಿ ನಡೆಯಲಿದೆ. ಡಿ 4ರಂದು ಮೊದಲ ಟಿ20 ಪಂದ್ಯವು ಕ್ಯಾನ್‌ಬೆರಾದಲ್ಲಿ ನಡೆಯಲಿದ್ದು, ನಂತರದ ಎರಡು ಪಂದ್ಯಗಳು ಎಸ್‌ಸಿಜಿಯಲ್ಲಿ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT