ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ವಿರುದ್ಧದ ಹೋರಾಟ: ಕೊರೊನಾ ವಾರಿಯರ್‌ಗಳಿಗೆ ವಿರಾಟ್-ಅನುಷ್ಕಾ ಕೃತಜ್ಞತೆ

Last Updated 9 ಮೇ 2021, 9:02 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್-‌19 ಸಾಂಕ್ರಾಮಿಕದ ವಿರುದ್ಧ ನಡೆಯುತ್ತಿರುವ ಹೋರಾಟದಲ್ಲಿ ಸತತವಾಗಿ ಶ್ರಮಿಸುತ್ತಿರುವ ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಮತ್ತು ಅವರ ಪತ್ನಿ, ಬಾಲಿವುಡ್‌ ನಟಿ ಅನುಷ್ಕಾ ಶರ್ಮಾ ಕೃತಜ್ಞತೆ ಸಲ್ಲಿಸಿದ್ದಾರೆ.

ವಿರಾಟ್‌ ಮತ್ತು ಅನುಷ್ಕಾ, ಕೋವಿಡ್ ವಿರುದ್ಧದ ಹೋರಾಟದಲ್ಲಿ ನೆರವಾಗಲು 2 ಕೋಟಿ ದೇಣಿಗೆ ನೀಡಿದ್ದಾರೆ. ಜೊತೆಗೆ ಕ್ರೌಡ್‌ ಫಂಡಿಂಗ್‌ ಮೂಲಕ 7 ಕೋಟಿ ಸಂಗ್ರಹಿಸುವ ಗುರಿ ಇಟ್ಟುಕೊಂಡಿದ್ದಾರೆ.

ಸದ್ಯ ದೇಶದಲ್ಲಿ ವೈರಾಣುವಿನ ಎರಡನೇ ಅಲೆ ಆರಂಭವಾಗಿದ್ದು, ಸೋಂಕು ಹರಡುವಿಕೆ ಮತ್ತು ಮೃತಪಡುತ್ತಿರುವವರ ಪ್ರಮಾಣ ಮೊದಲ ಅಲೆಗಿಂತ ತೀವ್ರವಾಗಿದೆ. ಇಂತಹ ಸಂಕಷ್ಟದ ಸಮಯದಲ್ಲಿ ಪರಸ್ಪರ ನೆರವಾಗಲು ಮುಂದೆ ಬಂದ ಎಲ್ಲರಿಗೂ ದಂಪತಿ ಟ್ವಿಟರ್‌ ಮೂಲಕ ಧನ್ಯವಾದ ಹೇಳಿದ್ದಾರೆ.

ʼನಾವು ಆರೋಗ್ಯ ಸಿಬ್ಬಂದಿ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುವುದನ್ನು ಬಿಟ್ಟು ಬೇರೇನೂ ಇಲ್ಲ. ಅವರ ಉತ್ಸಾಹ ಮತ್ತು ಸಮರ್ಪಣೆ ಭಾವವನ್ನು ಕಂಡು ಬೆರಗುಗೊಂಡಿದ್ದೇವೆ. ಅದೇರೀತಿ ಈ ಸಮಯದಲ್ಲಿ ಒಬ್ಬರಿಗೊಬ್ಬರು ನೆರವಾಗಲು ಮುಂದೆ ಬಂದ ಎಲ್ಲರಿಗೂ ಧನ್ಯವಾದಗಳನ್ನು ಹೇಳುತ್ತೇನೆ. ನಿಮ್ಮಂತಹ ವೀರರನ್ನು ಪಡೆಯಲು ಭಾರತ ಹೆಮ್ಮೆ ಪಡುತ್ತದೆʼ ಎಂದು ಕೊಹ್ಲಿ ಬರೆದುಕೊಂಡಿದ್ದಾರೆ.

ಅನುಷ್ಕಾ ಶರ್ಮಾ, ಮುಂಚೂಣಿ ಕಾರ್ಯಕರ್ತರನ್ನು ದೇಶದ ʼನಿಜವಾದ ಹೀರೋಗಳುʼ ಎಂದು ಬಣ್ಣಿಸಿದ್ದಾರೆ. ಅವರು, ʼನಾವು ಆರೋಗ್ಯ ಸಿಬ್ಬಂದಿ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ತುಂಬಾ ದೊಡ್ಡ ಧನ್ಯವಾದ ಹೇಳಲು ಬಯಸುತ್ತೇವೆ. ಅವರ ಸಮರ್ಪಣಾ ಭಾವ ನಿಜವಾಗಿಯೂ ಸ್ಫೂರ್ತಿದಾಯಕ. ನೀವು ದೇಶಕ್ಕಾಗಿ ನಿಮ್ಮ ಪ್ರಾಣವನ್ನೇ ಪಣಕ್ಕಿಟ್ಟಿದ್ದೀರಿ. ಅದಕ್ಕಾಗಿ ನಾವು ನಿಮಗೆ ಶಾಶ್ವತವಾಗಿ ಕೃತಜ್ಞರಾಗಿರುತ್ತೇವೆ. ವಿರಾಟ್‌ ಮತ್ತು ನನಗೆ ಹಾಗೂ ಇಡೀ ದೇಶಕ್ಕೇ ನೀವು ನಿಜವಾದ ಹೀರೋಗಳುʼ ಎಂದು ಅನುಷ್ಕಾ ಟ್ವೀಟಿಸಿದ್ದಾರೆ.

ಕೋವಿಡ್‌ ವಿರುದ್ಧದ ಹೋರಾಟದಲ್ಲಿ ಮುಂಚೂಣಿ ಕಾರ್ಯಕರ್ತರ ಸೇವೆಯನ್ನು ಬಿಂಬಿಸುವ ವಿಡಿಯೊವನ್ನೂ ಹಂಚಿಕೊಂಡಿದ್ದಾರೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೋವಿಡ್–19 ದೃಢಪಟ್ಟ 4,03,738 ಹೊಸ ಪ್ರಕರಣಗಳು ವರದಿಯಾಗಿವೆ. ಇದೇ ಅವಧಿಯಲ್ಲಿ ಸೋಂಕಿನಿಂದ 4,092 ಮಂದಿ ಮೃತಪಟ್ಟಿದ್ದಾರೆ. ಸತತ ನಾಲ್ಕನೇ ದಿನವೂ ದಾಖಲಾಗುತ್ತಿರುವ ಹೊಸ ಪ್ರಕರಣಗಳ ಸಂಖ್ಯೆ 4 ಲಕ್ಷ ದಾಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT