ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರ‍್ಯಾಂಕಿಂಗ್: ಅಗ್ರಸ್ಥಾನಕ್ಕೆ ಮರಳಿದ ಕೊಹ್ಲಿ, ಹತ್ತರ ಪಟ್ಟಿಯಿಂದ ಜಾರಿದ ಮಯಂಕ್

Last Updated 4 ಡಿಸೆಂಬರ್ 2019, 12:06 IST
ಅಕ್ಷರ ಗಾತ್ರ

ಐಸಿಸಿ ಟೆಸ್ಟ್‌ ಬ್ಯಾಟ್ಸ್‌ಮನ್‌ಗಳರ‍್ಯಾಂಕಿಂಗ್‌ ಪಟ್ಟಿಯಲ್ಲಿ ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಅಗ್ರಸ್ಥಾನಕ್ಕೆ ಮರಳಿದ್ದಾರೆ.

ದಕ್ಷಿಣ ಆಫ್ರಿಕಾ ಎದುರಿನ ಸರಣಿಯಲ್ಲಿ ಅಜೇಯ ದ್ವಿಶತಕ(254) ಹಾಗೂಬಾಂಗ್ಲಾದೇಶ ವಿರುದ್ಧದ ಪಿಂಕ್‌ ಟೆಸ್ಟ್‌ನಲ್ಲಿ 136 ರನ್‌ ಗಳಿಸಿದ್ದ ಕೊಹ್ಲಿ 928 ಪಾಯಿಂಟ್‌ಗಳನ್ನು ಬುಟ್ಟಿಗೆ ಹಾಕಿಕೊಂಡಿದ್ದರು. ಆದರೆ, 931 ಪಾಯಿಂಟ್‌ಗಳೊಂದಿಗೆ ಮೊದಲ ಸ್ಥಾನದಲ್ಲಿದ್ದ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್‌ ಸ್ಟೀವ್‌ ಸ್ಮಿತ್‌, ಇತ್ತೀಚೆಗೆ ಮುಕ್ತಾಯವಾದ ಪಾಕಿಸ್ತಾನ ಎದುರಿನ ಸರಣಿಯಲ್ಲಿ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ಅವರು ಎಂಟು ಅಂಕ ಕಳೆದುಕೊಂಡು ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.

ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌(877) ಹಾಗೂ ಭಾರತದ ಚೇತೇಶ್ವರ ಪೂಜಾರ(791) ಕ್ರಮವಾಗಿಮೂರು ಮತ್ತು ನಾಲ್ಕನೇ ಸ್ಥಾನಗಳಲ್ಲಿ ಇದ್ದಾರೆ.ಪಾಕ್‌ ವಿರುದ್ಧದ ಪಿಂಕ್‌ ಟೆಸ್ಟ್‌ನಲ್ಲಿ ಅಜೇಯ 335ರನ್‌ ಗಳಿಸಿದ್ದ ಡೇವಿಡ್‌ ವಾರ್ನರ್‌(764) 12 ಸ್ಥಾನ ಮೇಲೇರಿದ್ದು, ಐದನೇ ಸ್ಥಾನದಲ್ಲಿದ್ದಾರೆ.ಅಜಿಂಕ್ಯ ರಹಾನೆ(759) ಮತ್ತು ಜೋ ರೂಟ್‌(752) 6 ಹಾಗೂ 7ನೇ ಸ್ಥಾನಗಳಲ್ಲಿದ್ದಾರೆ.

ಆಸ್ಟ್ರೇಲಿಯಾ ಪರ ಉತ್ತಮ ಫಾರ್ಮ್‌ನಲ್ಲಿರುವ ಮಾರ್ನಸ್‌ ಲಾಬುಶನ್‌ 731 ಅಂಕ ಸಂಪಾದಿಸಿ ಇದೇ ಮೊದಲ ಬಾರಿಗೆ ಅಗ್ರ ಹತ್ತರಲ್ಲಿ ಕಾಣಿಸಿಕೊಂಡಿದ್ದಾರೆ. ಈ ವರ್ಷ ಆರಂಭದಲ್ಲಿ 110ನೇ ಸ್ಥಾನದಲ್ಲಿದ್ದ ಲಾಬುಶನ್‌ ಇದೀಗ 8ನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ನ್ಯೂಜಿಲೆಂಡ್‌ನ ಹೆನ್ರಿ ನಿಕೋಲಸ್‌(726) ಹಾಗೂ ಶ್ರೀಲಂಕಾದ ದಿಮುತ ಕುಲರತ್ನೆ(723) ಕ್ರಮವಾಗಿ 9 ಮತ್ತು 10ನೇ ಸ್ಥಾನದಲ್ಲಿದ್ದಾರೆ.

ಜಾರಿದ ಮಯಂಕ್‌
ಬಾಂಗ್ಲಾದೇಶ ಎದುರಿನ ಎರಡು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ದ್ವಿಶತಕ ಸಿಡಿಸಿ ಹತ್ತನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದ ಕನ್ನಡಿಗ ಮಯಂಕ್, ನಂತರದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದರು. ಹೀಗಾಗಿ ಎರಡು ಸ್ಥಾನ ಹಿನ್ನಡೆ ಕಂಡಿದ್ದಾರೆ. ಸದ್ಯ ಅವರು 700 ಅಂಕಗಳೊಂದಿಗೆ 12ನೇ ಸ್ಥಾನದಲ್ಲಿದ್ದಾರೆ.

ಬೌಲರ್‌ಗಳು ಮತ್ತು ಆಲ್ರೌಂಡರ್‌ಗಳ ವಿಭಾಗದ ಮೊದಲ ಐದು ಸ್ಥಾನಗಳಲ್ಲಿ ಯಾವುದೇ ಬದಲಾವಣೆಗಳು ಆಗಿಲ್ಲ.

900 ಅಂಕಗಳನ್ನು ಹೊಂದಿರುವಆಸಿಸ್‌ ವೇಗಿ ಪ್ಯಾಟ್‌ ಕಮಿನ್ಸ್‌ ವೇಗಿಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾದ ಕಗಿಸೊ ರಬಡ(839), ವೆಸ್ಟ್‌ ಇಂಡೀಸ್‌ನ ಜೇಸನ್‌ ಹೋಲ್ಡರ್‌(830), ನ್ಯೂಜಿಲೆಂಡ್‌ನ ನೀಲ್‌ ವ್ಯಾಗ್ನರ್‌(814) ಮತ್ತು ಜಸ್‌ಪ್ರೀತ್‌ ಬೂಮ್ರಾ(794) ಕ್ರಮವಾಗಿ ನಂತರದ ಸ್ಥಾನಗಳಲ್ಲಿದ್ದಾರೆ.

ಆಲ್ರೌಂಡರ್‌ಗಳ ಪಟ್ಟಿಯಲ್ಲಿ ಹೋಲ್ಡರ್‌(573), ಭಾರತದ ರವೀಂದ್ರ ಜಡೇಜಾ(406), ಇಂಗ್ಲೆಂಡ್‌ನ ಬೆನ್‌ಸ್ಟೋಕ್ಸ್‌(381), ದ.ಆಫ್ರಿಕಾದ ವೆರ್ನನ್‌ ಫಿಲ್ಯಾಂಡರ್‌(315) ಹಾಗೂ ರವಿಚಂದ್ರನ್‌ ಅಶ್ವಿನ್‌(308) ಮೊದಲ ಐದು ಸ್ಥಾನಗಳಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT