ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯ್‌ ಲೋಕಪಲ್ಲಿ ಬರಹ: ವಿರಾಟ್ ಕೊಹ್ಲಿಗೆ ಬೇಕಿತ್ತು ಉತ್ತಮ ವಿದಾಯ

ನಾಯಕತ್ವದಿಂದ ಕೊಹ್ಲಿ ನಿರ್ಗಮನ: ಬಿಸಿಸಿಐ ಜತೆಗಿನ ಸಂಘರ್ಷದ ಪರಿಣಾಮವೇ?
Last Updated 21 ಜನವರಿ 2022, 19:31 IST
ಅಕ್ಷರ ಗಾತ್ರ

ಪ್ರೀತಿಪಾತ್ರವಾದ ಆದರೆ ಗ್ರಹಿಕೆಗೆ ಸುಲಭಕ್ಕೆ ನಿಲುಕದ, ಒಳ್ಳೆಯತನ, ಸಿಡುಕು, ಆಕ್ರೋಶ, ಮೃದುತ್ವ ಎಲ್ಲವೂ ಒಳಗೊಂಡ ವ್ಯಕ್ತಿತ್ವ ಅವರದ್ದು. ಅಂಗಣದಲ್ಲಿ ಆಕ್ರಮಣಶೀಲರಾಗಿದ್ದರೂ ಹೊರಗೆ ಬಂದಾಗ ಮೃದು. ವ್ಯಕ್ತಿತ್ವ ಬಹಳ ಗಟ್ಟಿ. ನಿರ್ಭೀತ ಬ್ಯಾಟ್ಸ್‌ಮನ್‌. ಸ್ಫೂರ್ತಿದಾಯಕ ನಾಯಕ. ವಿರಾಟ್‌ ಕೊಹ್ಲಿಗೆ ಅವರು ಮಾತ್ರ ಹೋಲಿಕೆ. ನಿರಂಕುಶವಾದರೂ ಇತರರನ್ನು ಅರ್ಥ ಮಾಡಿಕೊಳ್ಳಬಲ್ಲ ಯಶಸ್ವಿ ನಾಯಕ. ಹಾಗಿದ್ದರೂ ವಿವಾದಾತ್ಮಕವಾದವರು; ಸಾಮಾನ್ಯವಾಗಿ ತಪ್ಪು ಗ್ರಹಿಕೆಗೆ ಒಳಗಾದವರು. ಜಾಗತಿಕ ಕ್ರಿಕೆಟ್‌ ಈಗ ಏನು ಆಗಿದೆಯೋ ಅದರ ಅವಿಭಾಜ್ಯ ಅಂಗವಾಗಿ ಕೊಹ್ಲಿ ಇದ್ದಾರೆ.

14 ವರ್ಷದ ಬಾಲಕನಾಗಿದ್ದಾಗಿನಿಂದಲೇ ನನಗೆ ಅವರು ಗೊತ್ತು. ಅಚ್ಚರಿ ಹುಟ್ಟಿಸುವ ರೀತಿಯ ಹೊಡೆತಗಳಿಂದ ಅವರು ದೆಹಲಿ ಕ್ರಿಕೆಟ್‌ ವಲಯದಲ್ಲಿ ಅಲೆ ಎಬ್ಬಿಸುತ್ತಿದ್ದ ದಿನಗಳವು. ಇನ್ನಷ್ಟು ಸುಧಾರಿಸಬೇಕು ಮತ್ತು ತ್ವರಿತವಾಗಿ ಬೆಳೆಯಬೇಕು ಎಂಬ ತುಡಿತದಿಂದಾಗಿ ಅವರು ತಮಗಿಂತ ಬಹಳ ದೊಡ್ಡ ಹುಡುಗರ ಜೊತೆ ಆಡುತ್ತಿದ್ದರು. ಅವರ ಜೊತೆ ವಾಗ್ವಾದ, ಸ್ಪರ್ಧೆ ಮಾಡುತ್ತಿದ್ದರು ಮತ್ತು ಅವರನ್ನು ಮುಖಾಮುಖಿಯಾಗುತ್ತಿದ್ದರು. ಈ ಪ್ರವೃತ್ತಿ ಅವರಲ್ಲಿ ಹಾಸುಹೊಕ್ಕಾಗಿ ಉಳಿದು ಹೋಯಿತು.

ಕಳೆದ ಒಂದು ವರ್ಷದ ಪಯಣ ಕೊಹ್ಲಿ ಪಾಲಿಗೆ ಏರುಪೇರಿನದ್ದಾಗಿತ್ತು. ಭಾರತೀಯ ಕ್ರಿಕೆಟ್‌ನಲ್ಲಿ ಕ್ರಾಂತಿಕಾರಕ ಎನ್ನಬಹುದಾದ ಹಲವು ಕ್ರಮಗಳನ್ನು ಅವರು ಕೈಗೊಂಡರು. ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸದಲ್ಲಿದ್ದಾಗ, ಪಿತೃತ್ವ ರಜೆಯಿಂದಾಗಿ ಮೂರು ಟೆಸ್ಟ್‌ ಪಂದ್ಯಗಳನ್ನು ಅವರು ಕಳೆದುಕೊಳ್ಳಬೇಕಾಯಿತು. ಇದು ಅತ್ಯಂತ ಸ್ಪಷ್ಟವಾಗಿ ಅವರಿಗೆ ಕುಟುಂಬದ ವಿಚಾರ. ಇದಕ್ಕಾಗಿ ಅವರಲ್ಲಿ ಲೋಪ ಹುಡುಕಲು ಸಾಧ್ಯವೇ? ವೈವಾಹಿಕ ಜೀವನದ ಅತ್ಯಂತ ಸಂಭ್ರಮದ ಕ್ಷಣದಲ್ಲಿ ಗಂಡ ಜೊತೆಗೆ ಇರುವುದು ಎಷ್ಟು ಖುಷಿಯ ಸಂಗತಿ ಎಂಬುದು ಅನುಷ್ಕಾ ಶರ್ಮಾ ಅವರಿಗೆ ಗೊತ್ತು. ಕೊಹ್ಲಿ ಅವರು ಕ್ರಿಕೆಟ್‌ ಆಟಗಾರ, ಭಾರತ ತಂಡದ ನಾಯಕ ಆಗಿದ್ದಾಗಲೂ ಅವರೊಬ್ಬ ಗಂಡ ಮತ್ತು ತಂದೆ ಕೂಡ ಹೌದು.

ಉತ್ಕೃಷ್ಟತೆಯ ಹುಡುಕಾಟದಲ್ಲಿ, ಭಾರತೀಯ ಕ್ರಿಕೆಟನ್ನು ಉತ್ತುಂಗಕ್ಕೆ ಒಯ್ಯುವಲ್ಲಿ ಜಗತ್ತನ್ನು ಎದುರು ಹಾಕಿಕೊಳ್ಳಲು ಕೊಹ್ಲಿ ಹಿಂದೆ ಮುಂದೆ ನೋಡಿದ್ದಿಲ್ಲ; ಏಕೆಂದರೆ ಅವರು ಸದಾ ತಂಡದ ಬೆನ್ನಿಗೆ ನಿಂತವರು. ಅವರು ತಂಡದ ಆಟಗಾರರ ನಾಯಕ. ಬಿಸಿಸಿಐಯನ್ನು ಮೂಕ‍ಪ್ರೇಕ್ಷಕ ಎಂಬ ಮಟ್ಟಕ್ಕೆ ಸುಪ್ರೀಂ ಕೋರ್ಟ್ ಇಳಿಸಿದ್ದ ಸಂದರ್ಭದಲ್ಲಿ ಆಡಳಿತ ಸಮಿತಿಯ ಜತೆಗಿನ ಅವರ ಸಂವಹನದಲ್ಲಿ ಇದು ಎದ್ದು ಕಾಣುತ್ತಿದ್ದ ಅಂಶವಾಗಿತ್ತು. ಆಡಳಿತ ಸಮಿತಿಯಲ್ಲಿ ತಮ್ಮ ಮಾತು ನಡೆಯುವಂತೆ ಕೊಹ್ಲಿ ನೋಡಿಕೊಂಡಿದ್ದರು.

ಅನಿಲ್‌ ಕುಂಬ್ಳೆ ಪ್ರಕರಣದಲ್ಲಿ ಕೊಹ್ಲಿ ತೋರಿದ್ದು ಉದ್ಧಟತನ. ಕುಂಬ್ಳೆ ಅವರು ಕ್ರಿಕೆಟ್‌ ವಲಯದ ಎಲ್ಲರ ಜತೆಗೂ ಮುಕ್ತವಾಗಿ ಒಡನಾಡುವ ವ್ಯಕ್ತಿ. ಅವರ ಜತೆಗೂ ಅಹಂ ಸಂಘರ್ಷ ಅರ್ಥ ಮಾಡಿಕೊಳ್ಳಲು ಸ್ವಲ್ಪ ಕಷ್ಟವೇ ಸರಿ. ಕುಂಬ್ಳೆ ಅವರ ಜತೆ ಜಗಳಕ್ಕೆ ಇಳಿದದ್ದು ಕೊಹ್ಲಿ ಅವರನ್ನು ಒಳ್ಳೆಯದಾಗಿ ಬಿಂಬಿಸಲಿಲ್ಲ. ಟೀಕೆಯನ್ನು ಸ್ವೀಕರಿಸಲು ಕೊಹ್ಲಿ ಸಿದ್ಧರಿಲ್ಲ ಎಂಬುದರ ಆರಂಭಿಕ ಸೂಚನೆ ಅದಾಗಿತ್ತು.

ರವಿಶಾಸ್ತ್ರಿ ಜತೆಗಿನ ಬಾಂಧವ್ಯವು ಕೊಹ್ಲಿ ಅವರಿಗೆ ಪೂರಕವಾಗಿ ಕೂಡಿಬಂತಾದರೂ ಅದು ಅವರನ್ನು ಸರ್ವಾಧಿಕಾರಿ ಮಾಡಿಬಿಟ್ಟಿತು. ಅವರ ಧೋರಣೆ ಮತ್ತು ಆಕ್ರಮಣಶೀಲತೆಯಲ್ಲಿ ಮಾಜಿ ಆಟಗಾರರು ಲೋಪ ಕಂಡರಾದರೂ ತಂಡದ ಆಟಗಾರರು ಅದನ್ನು ಇಷ್ಟಪಟ್ಟರು. ಫಿಟ್‌ನೆಸ್‌ ಬಗೆಗಿನ ಗೀಳು, ಆಟಕ್ಕೆ ಬದ್ಧತೆ ಬೇಕು ಎಂಬ ಅವರ ಆಗ್ರಹವನ್ನು ತಂಡವು ಒಪ್ಪಿಕೊಂಡಿತು. ಆಯ್ಕೆ ಸಂಬಂಧಿ ವಿಚಾರಗಳಲ್ಲಿ ನಾಯಕ ತಮ್ಮ ಕೈಬಿಡುವುದಿಲ್ಲ ಎಂಬುದು ತಂಡಕ್ಕೆ ಬಹಳ ನೆಚ್ಚಿನದಾಗಿತ್ತು.

ವೈಯಕ್ತಿಕ ಯಶಸ್ಸು, ಭಯ ಹುಟ್ಟಿಸುವ ವೇಗದಲ್ಲಿ ಅವರು ರನ್‌ ಕಲೆ ಹಾಕುತ್ತಿದ್ದ ರೀತಿ ಬಿಸಿಸಿಐಯನ್ನೇ ಮೂಲೆಗುಂಪು ಮಾಡಿತು; ಸಚಿನ್‌ ತೆಂಡೂಲ್ಕರ್‌ ನಂತರದ ಯುಗದ ಅತ್ಯಂತ ಶ್ರೇಷ್ಠ ಆಟಗಾರನಾಗಿ ಹೊರಹೊಮ್ಮಿದ ಕೊಹ್ಲಿ, ತಮ್ಮ ನಿರಂತರತೆಯಿಂದಾಗಿ ಆಟದಲ್ಲಿ ಛಾಪು ಮೂಡಿಸಿದರು. ಅವರು ಕ್ರಿಕೆಟ್‌ನ ಅದರಲ್ಲೂ ವಿಶೇಷವಾಗಿ ಟೆಸ್ಟ್‌ ಕ್ರಿಕೆಟ್‌ನ ಅತ್ಯುತ್ತಮ ರಾಯಭಾರಿಯಾಗಿ ಮೂಡಿ ಬಂದರು.

ಬಿಸಿಸಿಐ ಅಧ್ಯಕ್ಷರಾಗಿ ಸೌರವ್‌ ಗಂಗೂಲಿ ಮುನ್ನೆಲೆಗೆ ಬಂದದ್ದು ಕುತೂಹಲಕರ ಹಂತ; ಆದರೆ, ಇದು ಅತ್ಯಂತ ಚಂಚಲ ಹಂತವೂ ಆಯಿತು. ಕೊಹ್ಲಿ ಅವರ ಮೇಲಿನ ಒತ್ತಡ ಹೆಚ್ಚುತ್ತಲೇ ಹೋಯಿತು. ಭಿನ್ನ ಮಾದರಿಗಳಿಗೆ ಬೇರೆ ಬೇರೆ ನಾಯಕರ ನೇಮಕದ ವಿಚಾರ ಚರ್ಚೆಗೆ ಬಂತು ಮತ್ತು ಕೆಲಸದ ಒತ್ತಡವು ಕೊಹ್ಲಿ ಅವರ ಫಾರ್ಮ್‌ ಮೇಲೆ ಪರಿಣಾಮ ಬೀರಿತು. ರನ್‌ ಗಳಿಕೆ, ಪ್ರಶಸ್ತಿ ಗೆಲ್ಲುವಿಕೆ ಮರೀಚಿಕೆಯಾಗತೊಡಗಿತು. ಟೀಕೆಗಳು ಯಾವ ಮಟ್ಟಕ್ಕೆ ಹೆಚ್ಚಿದವು ಎಂದರೆ,
ನಾಯಕತ್ವ ಸಾಮರ್ಥ್ಯದ ಬಗೆಗೆ ನಿರಂತರವಾಗಿ ಕೇಳಿ ಬಂದ ‍ಪ್ರಶ್ನೆಗಳಿಂದ ತಮ್ಮ ಖ್ಯಾತಿಯನ್ನು ರಕ್ಷಿಸಿಕೊಳ್ಳಲು ಕೊಹ್ಲಿ ಅವರು ಟ್ವೆಂಟಿ 20 ನಾಯಕತ್ವವನ್ನು ಬಿಟ್ಟುಕೊಡುವುದಾಗಿ ಹೇಳಬೇಕಾಯಿತು.

ಈ ನಿರ್ಧಾರದಿಂದ ಅವರನ್ನು ಹಿಮ್ಮೆಟ್ಟಿಸುವ ಪ್ರಯತ್ನ ನಡೆಸಲಾಯಿತಾದರೂ ಯುಎಇಯಲ್ಲಿ ನಡೆದ ಟ್ವೆಂಟಿ20 ವಿಶ್ವಕಪ್‌ ನಂತರ ನಾಯಕತ್ವ ತೊರೆಯುವುದಾಗಿ ಘೋಷಿಸುವ ಅಸಾಧಾರಣ ಕ್ರಮವನ್ನು ಕೊಹ್ಲಿ ಕೈಗೊಂಡರು ಎಂದು ಬಿಸಿಸಿಐ ಆರೋಪಿಸಿದೆ. ಕೊಹ್ಲಿ ನಡೆ ಬಿಸಿಸಿಐಗೆ ಹಿಡಿಸಲಿಲ್ಲ. ಏಕದಿನ ತಂಡದ ನಾಯಕತ್ವ ಉಳಿಸಿಕೊಳ್ಳುವ ಇಚ್ಛೆ ವ್ಯಕ್ತಪಡಿಸುವ ತಪ್ಪನ್ನೂ ಅವರು ಮಾಡಿದರು. ಬಿಸಿಸಿಐ ಅದನ್ನು ಒಪ್ಪಲಿಲ್ಲ. ಟ್ವೆಂಟಿ20 ಮತ್ತು ಏಕದಿನ ತಂಡಕ್ಕೆ ರೋಹಿತ್‌ ಶರ್ಮಾ ಅವರನ್ನು ನಾಯಕನನ್ನಾಗಿ ನೇಮಿಸಿತು. ಕೊಹ್ಲಿ ಸಿಟ್ಟಾದರು.

ಈಗ ಸೂಚನೆಗಳು ಅತ್ಯಂತ ಸ್ಪಷ್ಟವಾಗಿದ್ದವು. ಆಡಳಿತ ಸಮಿತಿಯ ಅವಧಿಯಲ್ಲಿ ಅವರಿಗೆ ಪೂರಕವಾಗಿ ಒದಗಿ ಬಂದದ್ದು ಈಗ ನೆರವಾಗಿ ಬರಲಿಲ್ಲ. ಸಂವಹನಕ್ಕೇ ಸಿಗದ ಕೊಹ್ಲಿ ಬಗ್ಗೆ ಬಿಸಿಸಿಐ ಕೋಪಗೊಂಡಿತ್ತು. ಅರ್ಥ ಮಾಡಿಕೊಳ್ಳಲು ಸಿದ್ಧರಿಲ್ಲದ ಕೊಹ್ಲಿ ಅವರ ಬಗ್ಗೆ ಆಯ್ಕೆಗಾರರೂ ಸಿಟ್ಟಾದರು ಎಂದು ಹೇಳಲಾಗುತ್ತಿದೆ.

ಕೊಹ್ಲಿ ಬಗ್ಗೆ ಬಿಸಿಸಿಐಗೆ ಇದ್ದ ಒಲವು ಕುಸಿಯಿತು ಎಂದು ಒಳಗಿನವರು ಹೇಳುತ್ತಾರೆ. ಭಾರತದ ಕ್ರಿಕೆಟ್‌ಗೆ ಸಂಬಂಧಿಸಿ ನಿರ್ಧಾರಗಳನ್ನು ತೆಗೆದುಕೊಳ್ಳುವವರು ಯಾರು ಎಂಬ ಬಗ್ಗೆ ಯಾವತ್ತೂ ಚರ್ಚೆಯೇ ಇಲ್ಲ. ಅದು ಬಿಸಿಸಿಐಯೇ. ಲಾಲಾ ಅಮರನಾಥ್‌, ಬಿಷನ್ ಸಿಂಗ್ ಬೇಡಿ, ಸುನಿಲ್ ಗಾವಸ್ಕರ್‌, ಸಚಿನ್‌ ತೆಂಡೂಲ್ಕರ್‌ರಿಂದ ಕುಂಬ್ಳೆ ವರೆಗೆ... ಆಟಕ್ಕಿಂತ ದೊಡ್ಡವರು ಯಾರೂ ಇಲ್ಲ. ಕೊಹ್ಲಿ ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಬಿಸಿಸಿಐ ಬಯಸಿತ್ತು. ಕೊಹ್ಲಿ ಆಡುತ್ತಿದ್ದರೇ ಹೊರತು ಅವರು ಅದರ ಆಡಳಿತಗಾರ ಅಲ್ಲ.

ಟೀಕಾಕಾರರು ಕೊಹ್ಲಿ ಅವರ ತಲೆದಂಡಕ್ಕೆ ಸಜ್ಜಾಗಿದ್ದರು. ಬದಲಾವಣೆ ಆರಂಭವಾಗಿದೆ ಎಂಬುದು ಕ್ರಿಕೆಟ್‌ನ ದಂತಕತೆ ರಾಹುಲ್‌ ದ್ರಾವಿಡ್‌ ಅವರನ್ನು ಮುಖ್ಯ ಕೋಚ್‌ ಆಗಿ ನೇಮಿಸಿದಾಗಲೇ ಕೊಹ್ಲಿ ಅವರ ಅನುಭವಕ್ಕೆ ಬಂದಿರಬೇಕು. ಭಾರತದ ಅತ್ಯಂತ ಯಶಸ್ವಿ ನಾಯಕನಿಗೆ ತಮ್ಮ ಆಯ್ಕೆಯ ತಂಡ ಸಿಗುತ್ತಿರಲಿಲ್ಲ. ಆಯ್ಕೆಗಾರರು ಕೊಹ್ಲಿ ಅವರನ್ನು ಪ್ರಶ್ನಿಸಲಾರಂಭಿಸಿದ್ದರು ಮತ್ತು ಅದು ಸರಿ ಕೂಡ. ಗಾಳಿ ಬೀಸುವ ದಿಕ್ಕು ಬದಲಾಗಿತ್ತು.

ಕೊಹ್ಲಿ ತಲೆ ತುಂಬಾ ಹತ್ತಾರು ವಿಚಾರಗಳಿವೆ. ಬಿಸಿಸಿಐನ ಸದಾ ಅನುಮಾನದ ನೋಟದಿಂದ ಅವರಿಗೆ ಮುಕ್ತಿ ಬೇಕಿದೆ. ಟೆಸ್ಟ್‌ ಪಂದ್ಯದ ನಾಯಕ ಸ್ಥಾನ ತ್ಯಜಿಸುವ ನಿರ್ಧಾರವನ್ನು ಸದ್ಯಕ್ಕೆ ತಡೆ ಹಿಡಿಯಿರಿ ಎಂದು ಅವರನ್ನು ಕೇಳಿಕೊಂಡದ್ದು ನಿಜ. ಆರ್‌ಸಿಬಿ ತಾರೆಗೆ ಬೆಂಗಳೂರು ಕ್ರೀಡಾಂಗಣವು ವಿದಾಯಕ್ಕೆ ಅತ್ಯುತ್ತಮ ತಾಣ ಆಗಬಹುದಿತ್ತು. ಆದರೆ ಬಿಸಿಸಿಐಗೆ ವಿಶ್ವಾಸ ಇಲ್ಲದಿರುವಾಗ ನಾಯಕತ್ವದಲ್ಲಿ ಮುಂದುವರಿಯಲು ಕೊಹ್ಲಿ ಒಪ್ಪಲಿಲ್ಲ. ಇದು ಸಿಂಹಾಸನ ತೊರೆಯುವ ಸಮಯ. ಭಾರತದ ಅತ್ಯಂತ ಯಶಸ್ವಿ ಟೆಸ್ಟ್‌ ತಂಡದ ನಾಯಕ ಕೊಹ್ಲಿ ಸಮಯ ವ್ಯರ್ಥ ಮಾಡಲಿಲ್ಲ. ಆದರೆ, ಅವರು ಸುನಿಲ್‌ ಗಾವಸ್ಕರ್ ಅವರನ್ನು ಅನುಸರಿಸಬಹುದಿತ್ತು. ಗಾವಸ್ಕರ್‌ ಅವರು 1985ರಲ್ಲಿ ವಿಶ್ವ ಚಾಂಪಿಯನ್‌ಶಿಪ್‌ ಗೆದ್ದು ಉತ್ತುಂಗದಲ್ಲಿ ಇದ್ದಾಗಲೇ ವಿದಾಯ ಹೇಳಿದ್ದರು. ಕ್ರಿಕೆಟ್‌ನ ದಂತಕತೆ ಕೊಹ್ಲಿಗೆ ಅವರ ಅರ್ಹತೆಯ ವಿದಾಯ ದೊರೆಯಲಿಲ್ಲ ಎಂಬುದನ್ನು ಮತ್ತೊಮ್ಮೆ ಹೇಳಬೇಕಾಗುತ್ತದೆ. ಕೊಹ್ಲಿ ಅವರು ಆಡಳಿತಗಾರರಿದ ಸಂಕಷ್ಟಕ್ಕೆ ಒಳಗಾದ ಮೊದಲ ಆಟಗಾರನೇನೂ ಅಲ್ಲ. ಕೊನೆಯವರೂ ಅಲ್ಲ. ನೂರು ಟೆಸ್ಟ್‌ಗಳ ಮೈಲುಗಲ್ಲುಗಳ ಸನಿಹ ಇರುವ ಆಟಗಾರನನ್ನು ಇನ್ನಷ್ಟು ಉತ್ತಮವಾಗಿ ನಡೆಸಿಕೊಳ್ಳಬೇಕಿತ್ತು.

ನಿರೂಪಿತ ಲೇಖನ...

ಲೇಖಕ: ಸ್ಪೋರ್ಟ್ಸ್‌ಸ್ಟಾರ್‌ ಸಂಪಾದಕೀಯ ಸಲಹೆಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT