ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2023: ಗಿಲ್ ಅಬ್ಬರಕ್ಕೆ ಆರ್‌ಸಿಬಿ ಕನಸು ಭಗ್ನ

ಸಪ್ತ ಶತಕ ಸರದಾರ ವಿರಾಟ್ ಕೊಹ್ಲಿ; ಗುಜರಾತ್ ಟೈಟನ್ಸ್‌ಗೆ ಭರ್ಜರಿ ಗೆಲುವು; ಪ್ಲೇಆಫ್‌ಗೆ ಸಾಗದ ಬೆಂಗಳೂರು
Published 21 ಮೇ 2023, 20:08 IST
Last Updated 21 ಮೇ 2023, 20:08 IST
ಅಕ್ಷರ ಗಾತ್ರ

ಬೆಂಗಳೂರು: ಯುವತಾರೆ ಶುಭಮನ್ ಗಿಲ್  ಬ್ಯಾಟಿಂಗ್ ಅಬ್ಬರಕ್ಕೆ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಪ್ಲೇ ಆಫ್‌ ಕನಸು ನುಚ್ಚುನೂರಾಯಿತು.

ಭಾನುವಾರ ರಾತ್ರಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿಯ  ದಾಖಲೆಯ  ಶತಕವನ್ನು ಕಣ್ಮನ ತುಂಬಿಕೊಂಡಿದ್ದ 36 ಸಾವಿರಕ್ಕೂ ಅಧಿಕ ಪ್ರೇಕ್ಷಕರು ಪಂದ್ಯದ ಕೊನೆಗೆ ನಿರಾಶೆಯಿಂದ ತಲೆ ಮೇಲೆ ಕೈಹೊತ್ತು ನಿಂತರು. ಅದಕ್ಕೆ ಕಾರಣರಾಗಿದ್ದು ಪಂಜಾಬಿ ಹುಡುಗ  ಗಿಲ್ (ಅಜೇಯ 104; 52ಎ, 4X5, 6X8) ಅವರ ಆಟ.  ಗಿಲ್ ಅವರು ಟೂರ್ನಿಯಲ್ಲಿ ಗಳಿಸಿದ ಎರಡನೇ ಶತಕ ಇದು. ಇದರಿಂದಾಗಿ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ತಂಡ  6 ವಿಕೆಟ್‌ಗಳಿಂದ ಗೆದ್ದಿತು.  ಈ ತಂಡದ ಅಂಕಗಳು 20ಕ್ಕೇರಿದವು.  

ಈ ಸೋಲಿನೊಂದಿಗೆ ಆರ್‌ಸಿಬಿ ತಂಡವು ಪ್ಲೇ ಆಫ್‌ ತಲುಪುವ ಅವಕಾಶ ಕಳೆದುಕೊಂಡಿತು. ಕಳೆದ ಮೂರು ಆವೃತ್ತಿಗಳಲ್ಲಿಯೂ ಬೆಂಗಳೂರು ಬಳಗವು ನಾಲ್ಕರ ಹಂತ ಪ್ರವೇಶಿಸಿತ್ತು. 

ಲೀಗ್ ಹಂತದ ಈ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ಗುಜರಾತ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ವಿರಾಟ್ (ಅಜೇಯ 101;61ಎ, 4X13. 6X1) ಶತಕದ ಬಲದಿಂದ  ಆರ್‌ಸಿಬಿಯು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 197 ರನ್ ಗಳಿಸಿತು. ಆದರೆ ಈ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ಬೌಲರ್‌ಗಳು ವಿಫಲರಾದರು. ಕೊನೆಯ ಓವರ್‌ಗಳಲ್ಲಿ ಗುಜರಾತ್ ತಂಡಕ್ಕೆ ಗೆಲುವಿಗಾಗಿ 8 ರನ್‌ಗಳ ಅವಶ್ಯಕತೆ ಇತ್ತು. ವೇಯ್ನ್ ಪಾರ್ನೆಲ್ ಮೊದಲೆರಡು ಎಸೆತಗಳಲ್ಲಿ ನೋಬಾಲ್ ಮತ್ತು ವೈಡ್ ಹಾಕುವ ಮೂಲಕ ಲಯ ತಪ್ಪಿದರು. ನಂತರ ಗಿಲ್  ಸಿಕ್ಸರ್ ಎತ್ತಿದರು. ಟೈಟನ್ಸ್ ತಂಡವು 19.1 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಗೆಲುವಿನ ಗುರಿ ತಲುಪಿತು.

ಶುಭಮನ್ ಗಿಲ್ ಮತ್ತು ಅರ್ಧಶತಕ ಬಾರಿಸಿದ ಇಂಪ್ಯಾಕ್ಟ್‌ ಪ್ಲೇಯರ್ ವಿಜಯಶಂಕರ್ ಅವರನ್ನು ಕಟ್ಟಿಹಾಕುವಲ್ಲಿ ಸಫಲರಾಗಲಿಲ್ಲ.  

ಸಪ್ತ ಶತಕ ಸರದಾರ:

ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ’ಸಪ್ತ ಶತಕ‘ಗಳ ಸರದಾರನಾದರು. ಇದರೊಂದಿಗೆ ಕ್ರಿಸ್‌ ಗೇಲ್ ದಾಖಲೆಯನ್ನು ಮೀರಿ ನಿಂತರು.

ಮೊದಲ ಓವರ್‌ನ ಮೂರನೇ ಎಸೆತವನ್ನು ಬೌಂಡರಿಗಟ್ಟುವ ಮೂಲಕ ವಿರಾಟ್ ತಮ್ಮ ಖಾತೆ ತರೆದರು. 35 ಎಸೆತಗಳಲ್ಲಿ ಅರ್ಧಶತಕ ಮುಟ್ಟಿದರು. ತಾವೆದುರಿಸಿದ 60ನೇ ಎಸೆತದಲ್ಲಿ ಶತಕದ ಗಡಿ ಮುಟ್ಟಿದರು. ಪೆವಿಲಿಯನ್‌ನತ್ತ ತಮ್ಮ ಬ್ಯಾಟ್ ತೋರಿಸಿ ಸಂಭ್ರಮಿಸಿದರು. ಗಣ್ಯರ ಗ್ಯಾಲರಿಯಲ್ಲಿದ್ದ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರ ‘ಅಭಿನಂದನೆ‘ಯನ್ನು ಸ್ವೀಕರಿಸಿದ ಸಂಜ್ಞೆ ಪ್ರದರ್ಶಿಸಿದರು. ವಿರಾಟ್ ಅವರದ್ದು ಈ ಟೂರ್ನಿಯಲ್ಲಿ ಸತತ ಎರಡನೇ ಶತಕ ಇದು.

ತವರಿನಂಗಳದಲ್ಲಿ ಕೊಹ್ಲಿಗೆ ಅದೃಷ್ಟವೂ ಜೊತೆ ನೀಡಿತು. ಇನಿಂಗ್ಸ್‌ನ ಆರನೇ ಓವರ್‌ನಲ್ಲಿ ಅವರು ಹೊಡೆದ ಚೆಂಡು ಗಾಳಿಯಲ್ಲಿ ತೇಲಿ ಕವರ್ ಮತ್ತು ಮಿಡ್‌ ಆಫ್  ನಡುವೆ ಬಿದ್ದಿತು. ಅಲ್ಲಿದ್ದ ಹಾರ್ದಿಕ್ ಕ್ಯಾಚ್ ಪಡೆಯಲು  ಪ್ರಯತ್ನ ಮಾಡಲಿಲ್ಲ. ಇದರಿಂದಾಗಿ  ಕೊಹ್ಲಿ ಮುಖದಲ್ಲಿ ಮೂಡಿದ ಅಚ್ಚರಿಯ ನಗುವಿಗೆ ಹಾರ್ದಿಕ್ ಕೂಡ ಮುಗುಳ್ನಕ್ಕರು.

ಕೊಹ್ಲಿ 99 ರನ್‌ ಗಳಿಸಿದ್ದ ಸಂದರ್ಭದಲ್ಲಿ ರನ್‌ ಔಟ್ ನಿಂದ ಪಾರಾದರು. ಫೀಲ್ಡರ್ ಹೊಡೆದ ನೇರ ಥ್ರೋಗೂ ಮುನ್ನ ಡೈವ್ ಮಾಡಿ ಕ್ರೀಸ್‌ ಸೇರಿಕೊಂಡಿದ್ದರು. ವಿಡಿಯೊ ರೆಫರಲ್‌ನಲ್ಲಿ ನಾಟ್‌ಔಟ್‌ ನಿರ್ಧಾರ ಬರುವವರೆಗೂ ಕ್ರೀಡಾಂಗಣದಲ್ಲಿ ಗಾಢ ಮೌನ ಆವರಿಸಿತ್ತು.

ತಮ್ಮ ಶತಕದ ಮೂಲಕ ತಂಡವನ್ನೂ ಅಲ್ಪಮೊತ್ತಕ್ಕೆ ಕುಸಿಯುವ  ಆತಂಕದಿಂದ ಪಾರು ಮಾಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ ಅವರು ಡುಪ್ಲೆಸಿ ಜೊತೆಗೆ 67 ರನ್‌ ಸೇರಿಸಿ ಉತ್ತಮ ಅಡಿಪಾಯ ಹಾಕಿದರು. ಟೂರ್ನಿಯಲ್ಲಿ ಇವರಿಬ್ಬರೂ ಎಂಟನೇ ಬಾರಿ ಅರ್ಧಶತಕದ ಜೊತೆಯಾಟವಾಡಿದ ದಾಖಲೆ ಮಾಡಿದರು.ಆದರೆ, ಫಫ್ ಔಟಾದ ನಂತರ ವಿರಾಟ್ ಇನಿಂಗ್ಸ್‌ನ ಸಂಪೂರ್ಣ ಹೊಣೆ ಹೊತ್ತರು.

ಕ್ರೀಸ್‌ಗೆ ಬಂದ ಗ್ಲೆನ್ ಮ್ಯಾಕ್ಸ್‌ವೆಲ್ ಒಂದು ಬೌಂಡರಿ ಮತ್ತು ಸಿಕ್ಸರ್ ಹೊಡೆದು  ಸ್ಪಿನ್ನರ್ ರಶೀದ್ ಖಾನ್  ಎಸೆತದಲ್ಲಿ ಕ್ಲೀನ್‌ ಬೌಲ್ಡ್‌ ಆದರು. ಮೈಕೆಲ್ ಬ್ರೇಸ್‌ವೆಲ್ ಮತ್ತು ಅನುಜ್ ರಾವತ್ ಉಪಯುಕ್ತ ಕಾಣಿಕೆ ನೀಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT