ಗುರುವಾರ , ಜೂನ್ 17, 2021
24 °C

IPL 2021| ಶತಕದಂಚಿನಲ್ಲಿದ್ದ ಪಡಿಕ್ಕಲ್‌ಗೆ ವಿರಾಟ್‌ ಕಿವಿಮಾತು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ‘ಈಗಲ್ಲದಿದ್ದರೆ ಇನ್ನೊಂದು ಪಂದ್ಯದಲ್ಲಿ ಶತಕ ಗಳಿಸಲು ಅವಕಾಶ ಸಿಗುತ್ತದೆ.  ಆದಷ್ಟು ಬೇಗ ಪಂದ್ಯ ಮುಗಿಸಿಬಿಡು ಎಂದು ದೇವದತ್ತ ಪಡಿಕ್ಕಲ್ ನನಗೆ ಹೇಳಿದ್ದರು. ಆದರೆ, ಅವಕಾಶ ಇದೆ. ಶತಕ ಪೂರೈಸು, ಗೆಲುವನ್ನೂ ಸಾಧಿಸೋಣವೆಂದು ಸಲಹೆ ನೀಡಿದ್ದೆ. ಅದ್ಭುತವಾಗಿ ಆಡಿದರು ದೇವದತ್ತ‘ ಎಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ಗುರುವಾರದ ಪಂದ್ಯದಲ್ಲಿ ದೇವದತ್ತ ಮತ್ತು ವಿರಾಟ್ ಮುರಿಯದ ಮೊದಲ ವಿಕೆಟ್ ಜೊತೆಯಾಟದಲ್ಲಿ 181 ರನ್‌ ಗಳಿಸಿದ್ದರು. ತಂಡವು 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತ್ತು. ತಾವಿಬ್ಬರೂ ಬ್ಯಾಟಿಂಗ್ ಮಾಡುವಾಗ ನಡೆಸಿದ ಪರಸ್ಪರ ಸಂಭಾಷಣೆಯ ಕುರಿತು ಅಧಿಕೃತ ಪ್ರಸಾರಕ ವಾಹಿನಿಯ ಸಂದರ್ಶನದಲ್ಲಿ ವಿರಾಟ್  ಬಹಿರಂಗಪಡಿಸಿದ್ದಾರೆ. 'ಶತಕದ ಬಗ್ಗೆ ನಾವು ಮಾತನಾಡಿದ್ದೇವೆ. ಆದರೆ ಅವರು ಪಂದ್ಯವನ್ನು ಬೇಗನೇ ಮುಗಿಸಲು ತಿಳಿಸಿದರು. ಇನ್ನೂ ಅನೇಕ ಶತಕಗಳು ದಾಖ ಲಾಗಲಿವೆ ಎಂದವರು ಹೇಳಿದರು. ಈ ಸಂದರ್ಭದಲ್ಲಿ ಮೊದಲು ಈ ಶತಕವನ್ನು ಗಳಿಸು, ಬಳಿಕ ಈ ಮಾತನ್ನು ಆಡುವಂತೆ ಪಡಿಕ್ಕಲ್‌ಗೆ ತಿಳಿಸಿದ್ದೆ' ಎಂದು ವಿರಾಟ್ ವಿವರಿಸಿದ್ದಾರೆ.

’ಭಾರತ ಕ್ರಿಕೆಟ್‌ನಲ್ಲಿ ಭವಿಷ್ಯ ಭರವಸೆಯ ಆಟಗಾರ ಪಡಿಕ್ಕಲ್. ಅವರು ಹೋದ ವರ್ಷದ ಟೂರ್ನಿಯಲ್ಲಿಯೂ ಅಮೋಘವಾಗಿ ಬ್ಯಾಟಿಂಗ್ ಮಾಡಿದ್ದರು.  ಇನ್ನು ಮುಂದೆಯೂ ಇಂತಹ ಇನ್ನಷ್ಟು ಉತ್ತಮ ಇನಿಂಗ್ಸ್‌ಗಳ ಕಾಣಿಕೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ‘ ಎಂದು ವಿರಾಟ್ ವಿಶ್ವಾಸ ವ್ಯಕ್ತಪಡಿಸಿದರು.  

ಈ ವೇಳೆ ಮಾತನಾಡಿದ ಬೆಂಗಳೂರಿನ ಪಡಿಕ್ಕಲ್, ‘ಶತಕ ಗಳಿಸುವುದಕ್ಕಿಂತಲೂ ತಂಡವನ್ನು ಬೇಗನೆ ಗೆಲುವಿನ ದಡ ಸೇರಿಸುವುದು ಮುಖ್ಯ. ನಮ್ಮಿಬ್ಬರ ಸಂಭಾಷಣೆಯಲ್ಲಿ ಅದನ್ನು ಸ್ಪಷ್ಟವಾಗಿ ಕೊಹ್ಲಿಗೆ ಹೇಳಿದ್ದೆ. ಆದರೆ, ಅವರ ಪ್ರೋತ್ಸಾಹದಿಂದ ಎರಡೂ ಸಾಧ್ಯವಾಯಿತು‘  'ಟೂರ್ನಿಗಿಂತ ಮುನ್ನ ನಾನು ಕೊರೊನಾ ಸೋಂಕಿಗೊಳಗಾಗಿದ್ದಾಗ ಇಲ್ಲಿಗೆ ಬಂದು ಆಟವಾಡುವ ಬಗ್ಗೆ ಯೋಚಿಸುತ್ತಿದ್ದೆ. ಮೊದಲ ಪಂದ್ಯಕ್ಕೆ ಅಲಭ್ಯರಾದಾಗ ತುಂಬಾ ಬೇಸರವಾಗಿತ್ತು. ಈಗ ತಂಡದ ಗೆಲುವಿಗಾಗಿ ಕೊಡುಗೆ ನೀಡಿರುವುದು ಸಂತಸ ನೀಡಿದೆ. ತೃಪ್ತಿದಾಯಕ ಇನಿಂಗ್ಸ್ ಇದು' ಎಂದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು