ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತದ 4ನೇ ಕ್ರಮಾಂಕದ ಬ್ಯಾಟಿಂಗ್‌ ಸಮಸ್ಯೆಗೆ ಕೊಹ್ಲಿಯೇ ಪರಿಹಾರ: ರವಿಶಾಸ್ತ್ರಿ

Published 17 ಆಗಸ್ಟ್ 2023, 13:33 IST
Last Updated 17 ಆಗಸ್ಟ್ 2023, 13:33 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್‌ ತಂಡದಲ್ಲಿ ಬಹುದಿನಗಳಿಂದ ತಲೆದೋರಿರುವ ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್‌ ಸಮಸ್ಯೆಗೆ ವಿರಾಟ್‌ ಕೊಹ್ಲಿ ಪರಿಹಾರವಾಗಬಲ್ಲರು ಎಂದು ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಹೇಳಿದ್ದಾರೆ.

ಭಾರತ ತಂಡವು 2017ರಿಂದ ಸಾಕಷ್ಟು ಜನರನ್ನು ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿಸಿದೆ. ಆದರೆ, ಯಶಸ್ಸು ಸಿಕ್ಕಿಲ್ಲ. ತವರಿನಲ್ಲಿ ಇದೇ ವರ್ಷ ಅಕ್ಟೋಬರ್‌–ನವೆಂಬರ್‌ನಲ್ಲಿ ಏಕದಿನ ವಿಶ್ವಕಪ್‌ ಟೂರ್ನಿ ನಡೆಯಲಿದ್ದು, 4ನೇ ಕ್ರಮಾಂಕದಲ್ಲಿ ಸಮಸ್ಯೆ ಇರುವುದನ್ನು ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ ಒಪ್ಪಿಕೊಂಡಿದ್ದಾರೆ.

ಹೀಗಾಗಿ ಕೊಹ್ಲಿಯನ್ನು ನಾಲ್ಕನೇ ಕ್ರಮಾಂಕದಲ್ಲಿ ಆಡಿಸುವಂತೆ ರವಿಶಾಸ್ತ್ರಿ ಸಲಹೆ ನೀಡಿದ್ದಾರೆ.

ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿಯೊಂದಿಗೆ ಮಾತನಾಡಿರುವ ಅವರು, 'ವಿರಾಟ್‌ ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿದರೆ, ತಂಡಕ್ಕೆ ನೆರವಾಗಲಿದೆ. ಹಲವು ಸಂದರ್ಭಗಳಲ್ಲಿ ಈ ಬಗ್ಗೆ ಯೋಚಿಸಿದ್ದೆ' ಎಂದು ಹೇಳಿದ್ದಾರೆ.

ತಂಡವು ಅಗ್ರ ಕ್ರಮಾಂಕದ ಬ್ಯಾಟರ್‌ಗಳನ್ನು ಅವಲಂಬಿಸುವುದನ್ನು ತಪ್ಪಿಸಲು ಕೊಹ್ಲಿಯನ್ನು ಕೆಳ ಕ್ರಮಾಂಕದಲ್ಲಿ ಆಡಿಸುವ ಬಗ್ಗೆ 2019ರ ವಿಶ್ವಕಪ್‌ ಸಂದರ್ಭದಲ್ಲಿ ಯೋಚಿಸಿದ್ದೆ ಎಂದಿದ್ದಾರೆ.

'ಆರಂಭಿಕ ಎರಡು ಅಥವಾ ಮೂರು ವಿಕೆಟ್‌ಗಳನ್ನು ಕಳೆದುಕೊಂಡರೆ ನಾವು ಮುಗ್ಗರಿಸುತ್ತೇವೆ. ಇದು ಈಗಾಗಲೇ ಸಾಬೀತಾಗಿದೆ. ಕೊಹ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಲು ಸಮರ್ಥರಿದ್ದಾರೆ. ಬೇಕಿದ್ದರೆ ಅವರ ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್‌ ಅಂಕಿ–ಅಂಶಗಳನ್ನು ಗಮನಿಸಿ' ಎಂದು ಹೇಳಿದ್ದಾರೆ.

ಈವರೆಗೆ 275 ಏಕದಿನ ಪಂದ್ಯಗಳ 265 ಇನಿಂಗ್ಸ್‌ಗಳಲ್ಲಿ ಬ್ಯಾಟಿಂಗ್‌ ಮಾಡಿರುವ ವಿರಾಟ್‌ ಕೊಹ್ಲಿ, 12,898 ರನ್‌ ಕಲೆಹಾಕಿದ್ದಾರೆ. ಮೂರನೇ ಕ್ರಮಾಂಕದಲ್ಲಿ 210 ಇನಿಂಗ್ಸ್‌ಗಳಲ್ಲಿ ಬ್ಯಾಟ್‌ ಬೀಸಿ, 60.21ರ ಸರಾಸರಿಯಲ್ಲಿ 39 ಶತಕ ಸಹಿತ 10,777 ರನ್‌ ಗಳಿಸಿದ್ದಾರೆ. 39 ಇನಿಂಗ್ಸ್‌ಗಳಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದು 55.22ರ ಸರಾಸರಿಯಲ್ಲಿ 7 ಶತಕ ಸಹಿತ 1,767 ರನ್ ಬಾರಿಸಿದ್ದಾರೆ.

ಭಾರತ ತಂಡ ಕೊಹ್ಲಿ ನಾಯಕತ್ವದಲ್ಲಿ 2019ರ ಏಕದಿನ ವಿಶ್ವಕಪ್‌ನಲ್ಲಿ ಆಡಿದಾಗ ರವಿಶಾಸ್ತ್ರಿ ಮುಖ್ಯ ಕೋಚ್‌ ಆಗಿದ್ದರು. ಕೊಹ್ಲಿ ಬಳಗ ಟೂರ್ನಿಯ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್‌ ಎದುರು ಸೋಲು ಕಾಣುವುದರೊಂದಿಗೆ ಪ್ರಶಸ್ತಿ ರೇಸ್‌ನಿಂದ ಹೊರಬಿದ್ದಿತ್ತು.

ಸೆಮಿಫೈನಲ್‌ನಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ನ್ಯೂಜಿಲೆಂಡ್‌, ನಿಗದಿತ 50 ಓವರ್‌ಗಳಲ್ಲಿ 8 ವಿಕೆಟ್‌ಗೆ 239 ರನ್‌ ಗಳಿಸಿತ್ತು. ಗುರಿ ಬೆನ್ನತ್ತಿದ ಭಾರತ 221 ರನ್‌ ಗಳಿಸಿ ಆಲೌಟ್‌ ಆಗಿತ್ತು. ಅಗ್ರ ಕಮಾಂಕದಲ್ಲಿ ಆಡಿದ್ದ ಕೆ.ಎಲ್‌.ರಾಹುಲ್‌, ರೋಹಿತ್‌ ಶರ್ಮಾ ಮತ್ತು ವಿರಾಟ್‌ ಕೊಹ್ಲಿ ತಲಾ 1 ರನ್ ಗಳಿಸಿ ಔಟಾಗಿದ್ದರು. ಕೊನೆಯಲ್ಲಿ ಎಂ.ಎಸ್‌.ಧೋನಿ (50) ಮತ್ತು ರವೀಂದ್ರ ಜಡೇಜ (77) ಅರ್ಧಶತಕ ಬಾರಿಸಿ ಹೋರಾಟ ನಡೆಸಿದ್ದರೂ ಗೆಲುವು ದಕ್ಕಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT