ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿವೃತ್ತಿ ಘೋಷಿಸುವ ಮುನ್ನ ನಮ್ಮ ದೇಶದಲ್ಲಿ ಆಡಿ: ಕೊಹ್ಲಿಗೆ ಪಾಕ್ ಅಭಿಮಾನಿ ಮನವಿ

Last Updated 1 ಅಕ್ಟೋಬರ್ 2022, 11:00 IST
ಅಕ್ಷರ ಗಾತ್ರ

ನವದೆಹಲಿ:ಆಧುನಿಕ ಕ್ರಿಕೆಟ್‌ನ ಸ್ಟಾರ್‌ ಬ್ಯಾಟರ್‌ ವಿರಾಟ್‌ ಕೊಹ್ಲಿಗೆ ಜಗತ್ತಿನಾದ್ಯಂತ ಅಭಿಮಾನಿಗಳಿದ್ದಾರೆ.

102 ಟೆಸ್ಟ್‌, 262 ಏಕದಿನ ಮತ್ತು 108 ಟಿ20 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿರುವ 'ಕಿಂಗ್‌' ಕೊಹ್ಲಿ, ಟೆಸ್ಟ್‌ ಕ್ರಿಕೆಟ್‌ ಆಡುವ ದೇಶಗಳ ಪೈಕಿ ಪಾಕಿಸ್ತಾನ ಹೊರತುಪಡಿಸಿ ಉಳಿದೆಲ್ಲ ರಾಷ್ಟ್ರಗಳಲ್ಲೂ ಬ್ಯಾಟ್‌ ಬೀಸಿದ್ದಾರೆ.

ಸದ್ಯ ಕ್ರಿಕೆಟ್‌ ಆಡುತ್ತಿರುವ ಆಟಗಾರರ ಪೈಕಿ ಹೆಚ್ಚು ಶತಕ ಸಿಡಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ವಿರಾಟ್‌ ಹೆಸರಿನಲ್ಲಿ ಹಲವು ದಾಖಲೆಗಳಿವೆ. ಪಾಕಿಸ್ತಾನ ಹೊರತುಪಡಿಸಿ ವಿಶ್ವದ ಬೇರೆಬೇರೆ ರಾಷ್ಟ್ರಗಳಲ್ಲಿ 71 ಅಂತರರಾಷ್ಟ್ರೀಯ ಶತಕಗಳನ್ನು ಅವರು ಸಿಡಿಸಿದ್ದಾರೆ.

ಭಾರತ ತಂಡ ಕೊನೆಯ ಸಲ ಪಾಕಿಸ್ತಾನ ಪ್ರವಾಸ ಕೈಗೊಂಡದ್ದು 2006ರಲ್ಲಿ. ಕೊಹ್ಲಿ, ಆಗಿನ್ನೂ ತಂಡಕ್ಕೆ ಪದಾರ್ಪಣೆ ಮಾಡಿರಲಿಲ್ಲ.

ರಾಜತಾಂತ್ರಿಕ ಕಾರಣಗಳಿಂದಾಗಿಉಭಯ ತಂಡಗಳ ನಡುವೆ ಕಳೆದ 10 ವರ್ಷಗಳಲ್ಲಿ ಯಾವುದೇ ದ್ವಿಪಕ್ಷೀಯ ಸರಣಿ ನಡೆದಿಲ್ಲ. ಐಸಿಸಿ ಟೂರ್ನಿ ಅಥವಾ ಏಷ್ಯಾ ಕಪ್‌ ಟೂರ್ನಿಗಳಲ್ಲಿ ಮಾತ್ರವೇ ಪರಸ್ಪರ ಮುಖಾಮುಖಿಯಾಗುತ್ತಿವೆ.ಹೀಗಾಗಿ ಕೊಹ್ಲಿಗೆ ಪಾಕ್‌ ನೆಲದಲ್ಲಿ ಆಡಲು ಸಾಧ್ಯವಾಗಿಲ್ಲ.

ಕಿಂಗ್ ಕೊಹ್ಲಿಗೆ ಪಾಕ್ ಅಭಿಮಾನಿಯ ವಿಶೇಷ ಸಂದೇಶ
ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳು 7 ಟಿ20 ಪಂದ್ಯಗಳ ಸರಣಿಯಲ್ಲಿ ಸೆಣಸಾಟ ನಡೆಸುತ್ತಿವೆ. ಪಾಕಿಸ್ತಾನದಲ್ಲೇ ಆಯೋಜನೆಗೊಂಡಿರುವ ಈ ಟೂರ್ನಿಯಲ್ಲಿ ಸದ್ಯ 6 ಪಂದ್ಯಗಳು ಮುಕ್ತಾಯವಾಗಿದ್ದು, 3–3 ಅಂತರದ ಸಮಬಲ ಸಾಧಿಸಿವೆ.

ಲಾಹೋರ್‌ನ ಗಡಾಫಿ ಕ್ರೀಡಾಂಗಣದಲ್ಲಿ ಶುಕ್ರವಾರ (ಸೆ.30) ನಡೆದ ಆರನೇ ಪಂದ್ಯದ ವೇಳೆ ಸ್ಥಳೀಯ ಅಭಿಮಾನಿಯೊಬ್ಬ, ಕೊಹ್ಲಿಗಾಗಿ ಬರೆದ ವಿಶೇಷ ಸಂದೇಶದ ಪೋಸ್ಟರ್‌ ಹಿಡಿದು ಗಮನ ಸೆಳೆದಿದ್ದಾರೆ. ಪೋಸ್ಟರ್‌ನಲ್ಲಿ 'ವಿರಾಟ್‌, ನೀವು ನಿವೃತ್ತರಾಗುವ ಮುನ್ನ ಪಾಕಿಸ್ತಾನದಲ್ಲಿ ಆಡಿ' ಎಂದು ಬರೆಯಲಾಗಿತ್ತು.

ಈ ಪೋಸ್ಟರ್‌ ಹಿಡಿದ ಅಭಿಮಾನಿಯ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಈ ಚಿತ್ರವನ್ನು ಹಂಚಿಕೊಂಡಿರುವ ನೆಟ್ಟಿಗರೊಬ್ಬರು, 'ವಿರಾಟ್‌ ಕೊಹ್ಲಿ ಪಾಕಿಸ್ತಾನದಲ್ಲಿ ಆಡಬೇಕೆಂದು ಅವರ ಅಭಿಮಾನಿಗಳು ಬಯಸುತ್ತಿದ್ದಾರೆ' ಎಂದು ಬರೆದುಕೊಂಡಿದ್ದಾರೆ.

ಪಾಕಿಸ್ತಾನದಲ್ಲಿ ಕೊಹ್ಲಿಗೆ ಅಪಾರ ಅಭಿಮಾನಿಗಳಿದ್ದಾರೆ. ಕ್ರಿಕೆಟ್ ದಂತಕತೆಯಾಗಿರುವ ಸಚಿನ್‌ ತೆಂಡೂಲ್ಕರ್‌ ಅವರ ಬಳಿಕ, ಎಂ.ಎಸ್‌. ಧೋನಿ ಮತ್ತು ಕೊಹ್ಲಿ ನೆರೆಯ ದೇಶದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಆಸ್ಟ್ರೇಲಿಯಾದಲ್ಲಿ ಭಾರತ vs ಪಾಕ್
ಭಾರತ ಮತ್ತು ಪಾಕಿಸ್ತಾನ ತಂಡಗಳು ಇದೇ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ20 ವಿಶ್ವಕಪ್‌–2022 ಟೂರ್ನಿಯಲ್ಲಿ ಮುಖಾಮುಖಿಯಾಗಲಿವೆ. ಅಕ್ಟೋಬರ್‌ 23 ರಂದು ನಡೆಯುವ ಆ ಪಂದ್ಯಕ್ಕೆ ಮೆಲ್ಬರ್ನ್‌ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದೆ.

ಇತ್ತೀಚೆಗೆ ಮುಕ್ತಾಯವಾದ ಏಷ್ಯಾಕಪ್‌ ಟೂರ್ನಿಯಲ್ಲಿ ಎರಡು ಬಾರಿ ಮುಖಾಮುಖಿಯಾಗಿದ್ದಉಭಯ ತಂಡಗಳು ತಲಾ ಒಂದೊಂದರಲ್ಲಿ ಜಯದ ನಗೆ ಬೀರಿದ್ದವು. ವಿಶ್ವಕಪ್‌ನಲ್ಲಿ ಆಡಲಿರುವ ಪಂದ್ಯವು ಇದೇ ವರ್ಷದಲ್ಲಿ ಎರಡೂ ತಂಡಗಳು ಪರಸ್ಪರ ಸೆಣಸಲಿರುವ ಮೂರನೇ ಪಂದ್ಯವಾಗಲಿದೆ.

ಬಲಿಷ್ಠ ವೇಗದ ಬೌಲಿಂಗ್‌ ಪಡೆ ಹೊಂದಿರುವ ಪಾಕ್‌ ಎದುರುಕೊಹ್ಲಿ ಹೇಗೆ ಆಡಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT