ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ICC: 'ವರ್ಷದ ಕ್ರಿಕೆಟಿಗ' ಪ್ರಶಸ್ತಿಗಾಗಿ ವಿರಾಟ್ ಕೊಹ್ಲಿ, ರವೀಂದ್ರ ಜಡೇಜ ಪೈಪೋಟಿ

Published 6 ಜನವರಿ 2024, 13:13 IST
Last Updated 6 ಜನವರಿ 2024, 13:13 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ ಕ್ರಿಕೆಟ್‌ ತಂಡದ 'ರನ್‌ ಮಷಿನ್‌' ಖ್ಯಾತಿಯ ವಿರಾಟ್ ಕೊಹ್ಲಿ ಹಾಗೂ ಪ್ರಮುಖ ಆಲ್‌ರೌಂಡರ್‌ ರವೀಂದ್ರ ಜಡೇಜ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಮಂಡಳಿ (ಐಸಿಸಿ) ನೀಡುವ ವರ್ಷದ ಕ್ರಿಕೆಟಿಗ ಪ್ರಶಸ್ತಿ ರೇಸ್‌ನಲ್ಲಿದ್ದಾರೆ. ಆಫ್‌ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್‌ ಅವರು 'ಟೆಸ್ಟ್‌ ಕ್ರಿಕೆಟಿಗ' ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾರೆ.

ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ವರ್ಷದುದ್ದಕ್ಕೂ ಶ್ರೇಷ್ಠ ಪ್ರದರ್ಶನ ನೀಡಿದವರಿಗೆ ಕೊಡಲಾಗುವ 'ಸರ್‌ ಗ್ಯಾರಿಫೀಲ್ಡ್‌ ಸೋಬರ್ಸ್‌ ಟ್ರೋಫಿ'ಗೆ ಕೊಹ್ಲಿ, ಜಡೇಜ ಮಾತ್ರವಲ್ಲದೆ, ಆಸ್ಟ್ರೇಲಿಯಾದವರಾದ ಪ್ಯಾಟ್‌ ಕಮಿನ್ಸ್‌ ಮತ್ತು ಟ್ರಾವಿಸ್‌ ಹೆಡ್‌ ನಡುವೆ ಪೈಪೋಟಿ ಇದೆ.

'ಟೆಸ್ಟ್‌ ಕ್ರಿಕೆಟಿಗ' ಪ್ರಶಸ್ತಿ ರೇಸ್‌ನಲ್ಲಿ ಅಶ್ವಿನ್‌, ಆಸ್ಟ್ರೇಲಿಯಾದವರಾದ ಉಸ್ಮಾನ್‌ ಖ್ವಾಜಾ, ಟ್ರಾವಿಸ್‌ ಹೆಡ್‌ ಹಾಗೂ ಇಂಗ್ಲೆಂಡ್‌ನ ಜೋ ರೂಟ್‌ ಕಾಣಿಸಿಕೊಂಡಿದ್ದಾರೆ.

ಟೆಸ್ಟ್‌ ಕ್ರಿಕೆಟಿಗ: ರೇಸ್‌ನಲ್ಲಿರುವವರ ಸಾಧನೆ
ವಿರಾಟ್‌ ಕೊಹ್ಲಿ:
2023ರಲ್ಲಿ ಟೆಸ್ಟ್‌ ಹಾಗೂ ಏಕದಿನ ಮಾದರಿಯ 35 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಕೊಹ್ಲಿ, 8 ಶತಕ ಸಹಿತ ಬರೋಬ್ಬರಿ 2048 ರನ್‌ ಗಳಿಸಿದ್ದಾರೆ. ದಿಗ್ಗಜ ಬ್ಯಾಟರ್‌ ಸಚಿನ್‌ ತೆಂಡೂಲ್ಕರ್‌ ಅವರ ಹೆಸರಿನಲ್ಲಿದ್ದ 'ಏಕದಿನ ಮಾದರಿಯಲ್ಲಿ ಹೆಚ್ಚು ಶತಕ ಗಳಿಸಿದ ಬ್ಯಾಟರ್‌' ಎಂಬ ದಾಖಲೆಯನ್ನು ಕೊಹ್ಲಿ ಕಳೆದ ವರ್ಷ ಮುರಿದಿದ್ದಾರೆ.

ರವೀಂದ್ರ ಜಡೇಜ: 2023ರಲ್ಲಿ ಮೂರೂ ಮಾದರಿಯಲ್ಲಿ ಒಟ್ಟು 35 ಪಂದ್ಯಗಳಲ್ಲಿ ಆಡಿರುವ ಜಡೇಜ, 613 ರನ್‌ ಗಳಿಸಿ ಹಾಗೂ 66 ವಿಕೆಟ್‌ ಪಡೆದಿದ್ದಾರೆ. ಮೂರು ಬಾರಿ 5 ವಿಕೆಟ್‌ ಗೊಂಚಲು ಸಾಧನೆ ಮಾಡಿರುವ ಅವರು, ಬಾರ್ಡರ್‌–ಗವಾಸ್ಕರ್‌ ಟೂರ್ನಿಯಲ್ಲಿ ಒಟ್ಟು 22 ವಿಕೆಟ್‌ ಕಬಳಿಸಿದ್ದರು.

ಪ್ಯಾಟ್‌ ಕಮಿನ್ಸ್‌: ಮೂರೂ ಮಾದರಿಯಲ್ಲಿ 24 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಕಮಿನ್ಸ್‌ 59 ವಿಕೆಟ್‌ ಕಬಳಿಸಿದ್ದಾರೆ. ಬ್ಯಾಟ್‌ ಮೂಲಕವೂ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡಿರುವ ಅವರು 422 ರನ್‌ ಗಳಿಸಿದ್ದಾರೆ. ನಾಯಕನಾಗಿ ಒಂದೇ ವರ್ಷದಲ್ಲಿ ಮೂರು ಪ್ರಮುಖ (ಆ್ಯಷಸ್‌, ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಮತ್ತು ಏಕದಿನ ವಿಶ್ವಕಪ್‌) ಪ್ರಶಸ್ತಿ ಗೆದ್ದ‌ದ್ದು ಪ್ಯಾಟ್‌ ಸಾಧನೆಯಾಗಿದೆ.

ಟ್ರಾವಿಸ್‌ ಹೆಡ್‌: ಕಳೆದ ವರ್ಷ 31 ಪಂದ್ಯಗಳಲ್ಲಿ ಬ್ಯಾಟ್‌ ಬೀಸಿರುವ ಹೆಡ್‌, ಮೂರು ಶತಕ ಮತ್ತು 9 ಅರ್ಧಶತಕ ಸಹಿತ 1698 ರನ್‌ ಗಳಿಸಿದ್ದಾರೆ. ಭಾರತ ತಂಡದ ವಿರುದ್ಧವೇ ನಡೆದ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಹಾಗೂ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಶತಕ ಸಿಡಿಸಿ, ತಮ್ಮ ತಂಡಕ್ಕೆ ಪ್ರಶಸ್ತಿ ಗೆದ್ದುಕೊಟ್ಟಿದ್ದಾರೆ.

ಟೆಸ್ಟ್‌ ಕ್ರಿಕೆಟಿಗ: ರೇಸ್‌ನಲ್ಲಿರುವವರ ಸಾಧನೆ
ರವಿಚಂದ್ರನ್‌ ಅಶ್ವಿನ್‌:
ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ನಂ.1 ಸ್ಥಾನದಲ್ಲಿ ಉಳಿಯುವುದರೊಂದಿಗೆ 2023ನ್ನು ಪೂರೈಸಿರುವ ಅಶ್ವಿನ್‌, ಆಡಿರುವ ಕೇವಲ 7 ಪಂದ್ಯಗಳಲ್ಲಿ ಬರೋಬ್ಬರಿ 41 ವಿಕೆಟ್‌ ಉರುಳಿಸಿದ್ದಾರೆ. 4 ಬಾರಿ ಐದು ವಿಕೆಟ್‌ ಗೊಂಚಲು ಸಾಧನೆಯನ್ನೂ ಮಾಡಿದ್ದಾರೆ.

ಜೋ ರೂಟ್‌: ಇಂಗ್ಲೆಂಡ್‌ ತಂಡವು ಕಳೆದ ವರ್ಷ ಟೆಸ್ಟ್‌ ಕ್ರಿಕೆಟ್‌ನಲ್ಲಿ ಸಾಧಿಸಿದ ಯಶಸ್ಸಿನಲ್ಲಿ ರೂಟ್‌ ಪ್ರಮುಖ ಪಾತ್ರ ವಹಿಸಿದ್ದರು. ಅವರು ಆಡಿದ ಕೇವಲ 8 ಪಂದ್ಯಗಳಿಂದ 787 ರನ್ ಗಳಿಸಿದ್ದರು. ಇದರಲ್ಲಿ 2 ಶತಕ ಮತ್ತು 5 ಅರ್ಧಶತಕ ಸೇರಿವೆ. 65.58 ಅವರ ಬ್ಯಾಟಿಂಗ್ ಸರಾಸರಿ.

ಉಸ್ಮಾನ್‌ ಖ್ವಾಜಾ: ಟೆಸ್ಟ್ ಕ್ರಿಕೆಟ್‌ನಲ್ಲಿ 2023ರಲ್ಲಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್‌ ಖ್ವಾಜಾ. ಆಡಿದ 13 ಪಂದ್ಯಗಳಲ್ಲಿ ಅವರು 3 ಶತಕ ಮತ್ತು 6 ಅರ್ಧಶತ ಸಹಿತ 1,210 ರನ್‌ ಗಳಿಸಿದ್ದಾರೆ.

ಟ್ರಾವಿಸ್‌ ಹೆಡ್‌: ಆಸ್ಟ್ರೇಲಿಯಾದ ಮತ್ತೊಬ್ಬ ಬ್ಯಾಟರ್‌ ಹೆಡ್‌, ಆಡಿದ 12 ಪಂದ್ಯಗಳಲ್ಲಿ 919 ರನ್ ಗಳಿಸಿದ್ದಾರೆ. ಅವರ ಬ್ಯಾಟ್‌ನಿಂದ 1 ಶತಕ ಹಾಗೂ 5 ಅರ್ಧಶತಕ ಬಂದಿವೆ.

ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನಿಗೆ ಐಸಿಸಿ ವೆಬ್‌ಸೈಟ್‌ನಲ್ಲಿ ವೋಟ್ ಮಾಡಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT