ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಹ್ಲಿಗೆ ಐಸಿಸಿ ಪ್ರಶಸ್ತಿ ಪ್ರದಾನ; ಪಾಕ್ ವಿರುದ್ಧದ ಸಿಕ್ಸರ್ 'ಶ್ರೇಷ್ಠ ಕ್ಷಣ'

Published 2 ಜೂನ್ 2024, 3:08 IST
Last Updated 2 ಜೂನ್ 2024, 3:08 IST
ಅಕ್ಷರ ಗಾತ್ರ

ನ್ಯೂಯಾರ್ಕ್: 'ರನ್ ಮೆಶಿನ್' ಖ್ಯಾತಿಯ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರು, 2023ನೇ ಸಾಲಿನ ಐಸಿಸಿ ಏಕದಿನ ಕ್ರಿಕೆಟಿಗ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಅಮೆರಿಕದಲ್ಲಿ ಸಾಗುತ್ತಿರುವ ಟ್ವೆಂಟಿ-20 ಕ್ರಿಕೆಟ್ ವಿಶ್ವಕಪ್ ವೇಳೆ ವಿರಾಟ್ ಕೊಹ್ಲಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಇದೇ ವೇಳೆ 2023ನೇ ಸಾಲಿನ ಐಸಿಸಿ ಏಕದಿನ ಕ್ರಿಕೆಟ್ ತಂಡದಲ್ಲೂ ಗುರುತಿಸಿಕೊಂಡಿದ್ದ ವಿರಾಟ್ ಕೊಹ್ಲಿ ಅವರು ಐಸಿಸಿ ಕ್ಯಾಪ್ ಅನ್ನು ಪಡೆದರು. ಈ ಸಂಬಂಧ ಐಸಿಸಿ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೊ ಹಂಚಿಕೊಂಡಿದೆ.

ಟೀಮ್ ಇಂಡಿಯಾದ ಹೊಸ ಸಮವಸ್ತ್ರದಲ್ಲಿ ಕಾಣಿಸಿಕೊಂಡ ವಿರಾಟ್, ಇವೆಲ್ಲ 'ದೇವರ ಯೋಜನೆ' ಎಂದು ಪ್ರತಿಕ್ರಿಯಿಸಿದ್ದಾರೆ.

2023ನೇ ಸಾಲಿನಲ್ಲಿ ಕೊಹ್ಲಿ, 27 ಏಕದಿನ ಪಂದ್ಯಗಳಲ್ಲಿ (24 ಇನಿಂಗ್ಸ್) 72.47ರ ಸರಾಸರಿಯಲ್ಲಿ 1,377 ರನ್ ಗಳಿಸಿದ್ದರು. ಇದರಲ್ಲಿ ಆರು ಶತಕಗಳು ಸೇರಿದ್ದವು. ಗರಿಷ್ಠ ಸ್ಕೋರ್ 166*.

ಈ ಪೈಕಿ ತವರಿನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ 11 ಪಂದ್ಯಗಳಲ್ಲಿ 95.62ರ ಸರಾಸರಿಯಲ್ಲಿ 765 ರನ್ ಪೇರಿಸಿದ್ದರು. ಇದರಲ್ಲಿ ಮೂರು ಶತಕ ಹಾಗೂ ಆರು ಅರ್ಧಶತಕಗಳು ಒಳಗೊಂಡಿದ್ದವು. ಆ ಮೂಲಕ ಏಕದಿನ ವಿಶ್ವಕಪ್ ಟೂರ್ನಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ್ದ ಬ್ಯಾಟರ್ ಎನಿಸಿದ್ದರು.

ಆದರೂ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲನುಭವಿಸಿದ್ದ ಭಾರತದ ಪ್ರಶಸ್ತಿ ಕನಸು ಭಗ್ನಗೊಂಡಿತ್ತು.

ಪಾಕ್ ವಿರುದ್ಧದ ಸಿಕ್ಸರ್ ಅತ್ಯಂತ ಶ್ರೇಷ್ಠ ಕ್ಷಣ...

2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಹೌರಿಸ್ ರವೂಫ್ ದಾಳಿಯಲ್ಲಿ ವಿರಾಟ್ ಕೊಹ್ಲಿ ಗಳಿಸಿದ್ದ ಸಿಕ್ಸರ್, ಐಸಿಸಿಯ 'ಅತ್ಯಂತ ಶ್ರೇಷ್ಠ ಕ್ಷಣ' ಎಂದು ಗುರುತಿಸಲ್ಪಟ್ಟಿದೆ. ಈ ಕುರಿತು ಐಸಿಸಿ ಟ್ವೀಟ್ ಮಾಡಿದ್ದು, ಅಭಿಮಾನಿಗಳು ಮತ ಹಾಕುವ ಮೂಲಕ ಆಯ್ಕೆ ಮಾಡಿದ್ದಾರೆ.

ಭಾರತಕ್ಕೆ ಐರ್ಲೆಂಡ್ ಸವಾಲು...

ಟ್ವೆಂಟಿ-20 ವಿಶ್ವಕಪ್‌ನಲ್ಲಿ ಭಾರತ ತನ್ನ ಮೊದಲ ಪಂದ್ಯದಲ್ಲಿ ಜೂನ್ 5ರಂದು ಐರ್ಲೆಂಡ್ ಸವಾಲನ್ನು ಎದುರಿಸಲಿದೆ. ಶನಿವಾರ ಬಾಂಗ್ಲಾದೇಶ ವಿರುದ್ಧ ನಡೆದಿದ್ದ ಅಭ್ಯಾಸ ಪಂದ್ಯದಲ್ಲಿ 60 ರನ್ ಅಂತರದ ಗೆಲುವು ದಾಖಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT