ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್‌ಸಿಬಿ ನಾಯಕತ್ವದಿಂದ ಹಿಂದೆ ಸರಿದಿದ್ದು ಏಕೆ? ಎಂಬ ಸತ್ಯ ಬಿಚ್ಚಿಟ್ಟ ಕೊಹ್ಲಿ

Published : 24 ಫೆಬ್ರುವರಿ 2022, 14:40 IST
ಫಾಲೋ ಮಾಡಿ
Comments

ಮುಂಬೈ: ಕೆಲಸದೊತ್ತಡವನ್ನು ನಿಭಾಯಿಸಲು ಮತ್ತು ವೈಯಕ್ತಿಕವಾಗಿ ಒಂದಷ್ಟು ಸಮಯ ಮೀಸಲಿರಿಸಿಕೊಳ್ಳುವ ಸಲುವಾಗಿ ನಾಯಕತ್ವವನ್ನು ಬಿಟ್ಟುಕೊಡುವ ನಿರ್ಧಾರ ಮಾಡಿದೆ ಎಂದು ಕ್ರಿಕೆಟಿಗ ವಿರಾಟ್ ಕೊಹ್ಲಿ ಹೇಳಿದ್ದಾರೆ

ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ನಾಯಕತ್ವವನ್ನು ತೊರೆದಿರುವ ಕುರಿತು ಅವರು ಪ್ರತಿಕ್ರಿಯಿಸಿದ್ದಾರೆ.

‘ಕಾರ್ಯೊತ್ತಡ ಹೆಚ್ಚಿದಾಗಲೂ ಸಹಿಸಿಕೊಂಡು ಇರುವಂತಹ ವ್ಯಕ್ತಿ ನಾನಲ್ಲ. ಅದನ್ನು ನಿಭಾಯಿಸುವ ಸಾಮರ್ಥ್ಯ ಇದ್ದರೂ ಕೂಡ ಚೆನ್ನಾಗಿ ಫಲಿತಾಂಶ ಕೊಡಲು ಸಾಧ್ಯವಾಗುವ ಮಿತಿಯಲ್ಲಿ ಮಾತ್ರ ಕೆಲಸ ಮಾಡುತ್ತೇನೆ. ಕೆಲಸವನ್ನು ಯಾಂತ್ರಿಕವಾಗಿ ಮಾಡುವುದಕ್ಕಿಂತ ಮನಸಾರೆ ಆಸ್ವಾದಿಸುವುದು ಮುಖ್ಯ’ ಎಂದು ವಿರಾಟ್ ಹೇಳಿದರು.

ಹೋದ ವರ್ಷ ಯುಎಇಯಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಟೂರ್ನಿಯ ನಂತರ ಅವರು ಚುಟುಕು ಮಾದರಿ ತಂಡದ ನಾಯಕತ್ವ ಬಿಟ್ಟಿದ್ದರು. ಅದೇ ಹೊತ್ತಿನಲ್ಲಿ ಆರ್‌ಸಿಬಿ ತಂಡದ ನಾಯಕ ಪಟ್ಟವನ್ನೂ ತ್ಯಜಿಸಿದ್ದರು. ಏಕದಿನ ತಂಡದ ನಾಯಕತ್ವದಿಂದ ಅವರನ್ನು ಬಿಸಿಸಿಐ ಕೆಳಗಿಳಿಸಿತ್ತು. ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಸರಣಿಯ ನಂತರ ಟೆಸ್ಟ್ ತಂಡದ ನಾಯಕತ್ವಕ್ಕೂ ಅವರು ವಿದಾಯ ಘೋಷಿಸಿದ್ದರು.

‘ಹೊರಗಿನ ಜನರಿಗೆ ನಮ್ಮ ಪರಿಸ್ಥಿತಿ ಅರ್ಥವಾಗುವುದಿಲ್ಲ. ಒತ್ತಡ ಅನುಭವಿಸುವವರಿಗೆ ಮಾತ್ರ ಅದು ಗೊತ್ತಿರುತ್ತದೆ. ಆದ್ದರಿಂದ ನಮ್ಮ ಕುರಿತು ನಾವೇ ನಿರ್ಧರಿಸುವುದು ಸೂಕ್ತ. ಜನ ಏನೆನ್ನುತ್ತಾರೆನ್ನುವುದನ್ನು ಯೋಚಿಸಬಾರದು. ನನ್ನ ನಿರ್ಧಾರದ ಕುರಿತು ಹಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಆಘಾತ, ಅಚ್ಚರಿ ಪಡೆಯುವಂತದ್ದೇನೂ ಇಲ್ಲ. ನನಗಾಗಿ ಸ್ವಲ್ಪ ಸಮಯ ಬೇಕಿತ್ತು ಅಷ್ಟೇ’ ಎಂದರು.

‘ಪರಿಶ್ರಮವು ಕಠಿಣವಾಗಿರಬೇಕು. ಆದರೆ ಕಲಿತಿದ್ದನ್ನು ಯೋಜನಾಬದ್ಧವಾಗಿ ಜಾರಿಗೊಳಿಸುವಾಗ ಉತ್ತಮ ಗುಣಮಟ್ಟ ಇರಲೇಬೇಕು. ಪ್ರತಿದಿನವೂ ನಾನು ನಾನಾಗಿರದಿದ್ದರೆ ಪಂದ್ಯದ ಅಂಗಳದಲ್ಲಿಯೂ ನಾನು ಬೇರೆಯೇ ಆಗಿರುತ್ತೇನಲ್ಲವೇ? ನಮ್ಮನ್ನು ನಾವು ಸಂಪೂರ್ಣವಾಗಿ ಅರ್ಥೈಸಿಕೊಳ್ಳುವುದು ಅಗತ್ಯ’ ಎಂದು ಮಾರ್ಮಿಕವಾಗಿ ನುಡಿದರು.

ಮುಂದಿನ ವಾರ ಅವರು ತಮ್ಮ ವೃತ್ತಿಜೀವನದ ನೂರನೇ ಟೆಸ್ಟ್ ಪಂದ್ಯವನ್ನು ಮೊಹಾಲಿಯಲ್ಲಿ ಶ್ರೀಲಂಕಾ ವಿರುದ್ಧ ಆಡುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT