ಬುಧವಾರ, ಸೆಪ್ಟೆಂಬರ್ 30, 2020
22 °C
‘ಮೂರು ವಿಕೆಟ್‌ಗಳ ಸೋಲಿನಿಂದ ಅಭಿಮಾನಿಗಳಿಗೆ ನೋವು’

ಇಂಗ್ಲೆಂಡ್‌–ಪಾಕಿಸ್ತಾನ ಮೊದಲ ಟೆಸ್ಟ್‌: ಅಲಿ ನಿರ್ವಹಣೆ ರೀತಿಗೆ ಅಕ್ರಂ ನಿರಾಸೆ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

ಮ್ಯಾಂಚೆಸ್ಟರ್‌: ಇಂಗ್ಲೆಂಡ್‌ ವಿರುದ್ಧದ ಮೊದಲ ಕ್ರಿಕೆಟ್‌ ಟೆಸ್ಟ್‌ ಪಂದ್ಯದಲ್ಲಿ ಪಾಕಿಸ್ತಾನ ತಂಡದ ನಾಯಕ ಅಜರ್‌ ಅಲಿ ‘ತಂತ್ರಗಾರಿಕೆಯಲ್ಲಿ ಎಡವಿದರು’ ಎಂದು ಬೌಲಿಂಗ್‌ ದಿಗ್ಗಜ ವಾಸಿಂ ಅಕ್ರಂ ಅಭಿಪ್ರಾಯಪಟ್ಟಿದ್ದಾರೆ.

ಆತಿಥೇಯ ತಂಡದ ಎದುರು ಶನಿವಾರ ಅನುಭವಿಸಿದ ಮೂರು ವಿಕೆಟ್‌ ಸೋಲು ತಂಡಕ್ಕೆ, ಅಭಿಮಾನಿಗಳಿಗೆ ನೋವನ್ನುಂಟುಮಾಡಿದೆ ಎಂದು 54 ವರ್ಷದ ಮಾಜಿ ಎಡಗೈ ವೇಗಿ ಅಕ್ರಂ ‘ಸ್ಕೈ ಸ್ಫೋರ್ಟ್ಸ್‌’ಗೆ ಹೇಳಿದ್ದಾರೆ.

ಓಲ್ಡ್‌ ಟ್ರಾಫರ್ಡ್‌ನಲ್ಲಿ ನಡೆದ ಈ ಪಂದ್ಯದ ಹೆಚ್ಚಿನ ಅವಧಿಯಲ್ಲಿ ಅಲಿ ಬಳಗ ಮೇಲುಗೈ ಸಾಧಿಸಿತ್ತು. ಆದರೆ  ಕೊನೆಯ ದಿನ ಎಡವಟ್ಟಾಯಿತು. ಗೆಲುವಿಗೆ 277 ರನ್‌ಗಳ ಸವಾಲು ಎದುರಿಸಿದ್ದ ಇಂಗ್ಲೆಂಡ್‌ ಒಂದು ಹಂತದಲ್ಲಿ  117 ರನ್‌ ಗಳಿಸುವಷ್ಟರಲ್ಲಿ ಐದು ವಿಕೆಟ್‌ಗಳನ್ನು ಕಳೆದುಕೊಂಡು ಪರದಾಡುತ್ತಿತ್ತು. ಆದರೆ ಅನುಭವಿ ಜೋಸ್‌ ಬಟ್ಲರ್‌ (75) ಮತ್ತು ಕ್ರಿಸ್‌ ವೋಕ್ಸ್‌ (ಅಜೇಯ 84) ಉಪಯುಕ್ತ 139 ರನ್‌ ಭಾಗಿದಾರಿಯ ಮೂಲಕ ತಂಡವನ್ನು ಗೆಲುವಿನ ಹಾದಿಯಲ್ಲಿ ಮುನ್ನಡೆಸಿದ್ದರು. ಮೂರು ಟೆಸ್ಟ್‌ಗಳ ಸರಣಿಯಲ್ಲಿ ಇಂಗ್ಲೆಂಡ್‌ 1–0 ಮುನ್ನಡೆ ಸಾಧಿಸಿದೆ.

‘ಸೋಲು– ಗೆಲುವು ಕ್ರಿಕೆಟ್‌ನ ಭಾಗ. ಆದರೆ ನಾಯಕತ್ವಕ್ಕೆ ಸಂಬಂಧಿಸಿ ಅವರು ಕೆಲ ಸಂದರ್ಭಗಳಲ್ಲಿ ತಂತ್ರಗಳನ್ನು ಹೆಣೆಯಲು ವಿಫಲರಾದರು’ ಎಂದಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ ಆತಿಥೇಯರನ್ನು 219 ರನ್ನಿಗೆ ಉರುಳಿಸಿದ ಪಾಕ್‌ಗೆ, ಎರಡನೇ ಇನಿಂಗ್ಸ್‌ನಲ್ಲಿ ವೋಕ್ಸ್‌ ಅವರ ವಿಕೆಟ್‌ ಬೇಗನೇ ಪಡೆಯಲು ಆಗದಿರುವುದು ಅಕ್ರಂ ಅವರಿಗೆ ಅಚ್ಚರಿ ಮೂಡಿಸಿದೆ.

‘ವೋಕ್ಸ್‌ ಆಡಲಿಳಿದಾಗ, ಬೌನ್ಸರ್‌ಗಳು, ಷಾರ್ಟ್‌ಬಾಲ್‌ಗಳು ಕಾಣಲಿಲ್ಲ. ಅವರಿಗೆ ಕುದುರಿಕೊಳ್ಳಲು ಅವಕಾಶ ಮಾಡಿಕೊಡಲಾಯಿತು. ನಂತರ ರನ್‌ಗಳು ಹರಿಯಲಾರಂಭಿಸಿದವು’ ಎಂದು ಅಕ್ರಂ ಅಭಿಪ್ರಾಯಪಟ್ಟಿದ್ದಾರೆ.

‘ಬಟ್ಲರ್‌– ವೋಕ್ಸ್‌ ಗಟ್ಟಿಯಾದ ಮೇಲೆ ಏನೂ ನಡೆಯಲಿಲ್ಲ. ಚೆಂಡು ತಿರುವು ಪಡೆಯಲಿಲ್ಲ. ಸ್ವಿಂಗ್‌ ನಡೆಯಲಿಲ್ಲ. ಇಬ್ಬರೂ ಪಂದ್ಯವನ್ನು ಕಸಿದುಕೊಂಡರು’ ಎಂದು ವಿಶ್ಲೇಷಿಸಿದ್ದಾರೆ.

ಯುವ ವೇಗಿಗಳಾದ ನಸೀಮ್‌ ಶಾ (17 ವರ್ಷ) ಮತ್ತು ಶಹೀನ್‌ ಅಫ್ರೀದಿ (20 ವರ್ಷ) ಅವರಿಗೆ ಹೆಚ್ಚಿನ ಬೌಲಿಂಗ್‌ ನೀಡಬೇಕಿತ್ತು ಎನ್ನುವುದು ಅವರ ಅನಿಸಿಕೆ. ಇವರಿಬ್ಬರು ಎರಡನೇ ಇನಿಂಗ್ಸ್‌ನಲ್ಲಿ ಒಟ್ಟು 28.1 ಓವರ್‌ ಮಾಡಿದ್ದರು.

 

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು