ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಹಿ’ ಮರೆಯುವತ್ತ ಡುಪ್ಲೆಸಿ ಚಿತ್ತ

ದಕ್ಷಿಣ ಆಫ್ರಿಕಾ ತಂಡಕ್ಕೆ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶದ ಸವಾಲು
Last Updated 1 ಜೂನ್ 2019, 20:15 IST
ಅಕ್ಷರ ಗಾತ್ರ

ಲಂಡನ್: ಈ ಬಾರಿಯಾದರೂ ‘ಚೋಕರ್‌’ ಪಟ್ಟದಿಂದ ಮುಕ್ತಿ ಪಡೆಯುವ ಯೋಚನೆಯಲ್ಲಿರುವ ದಕ್ಷಿಣ ಆಫ್ರಿಕಾ ತಂಡವು ಮೊದಲ ಪಂದ್ಯದಲ್ಲಿಯೇ ಆಘಾತ ಅನುಭವಿಸಿತ್ತು.

ಭಾನುವಾರ ಇಲ್ಲಿ ನಡೆಯಲಿರುವ ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಗೆದ್ದು ಆ ‘ಕಹಿ’ ಮರೆಯುವ ಛಲದಲ್ಲಿದೆ. ಟೂರ್ನಿಯ ಉದ್ಘಾಟನೆ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್ ಎದುರು ದಕ್ಷಿಣ ಆಫ್ರಿಕಾ ತಂಡವು ಸೋಲನುಭವಿಸಿತ್ತು. ಆ ಪಂದ್ಯದಲ್ಲಿ ಫಾಫ್ ಡುಪ್ಲೆಸಿ ಬಳಗವು ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು.ಕ್ವಿಂಟನ್ ಡಿ ಕಾಕ್ ಮತ್ತು ವ್ಯಾನ್ ಡೆರ್ ದಸೆನ್ ಅವರಿಬ್ಬರು ಮಾತ್ರ ಅರ್ಧಶತಕಗಳನ್ನು ಗಳಿಸಿದರು. ಆದರೆ ಅವರ ಹೋರಾಟಕ್ಕೆ ಫಲ ಸಿಕ್ಕಿರಲಿಲ್ಲ. ಇಂಗ್ಲೆಂಡ್ ನೀಡಿದ್ದ ಬೃಹತ್ ಮೊತ್ತದ ಎದುರು 104 ರನ್‌ಗಳ ಅಂತರದಿಂದ ಸೋತಿತ್ತು.

ಐಪಿಎಲ್‌ನಲ್ಲಿ ಮಿಂಚಿದ್ದ ನಾಯಕ ಫಾಫ್ ಡುಪ್ಲೆಸಿ ಇಲ್ಲಿ ಕೇವಲ ಐದು ರನ್ ಗಳಿಸಿ ಔಟಾಗಿದ್ದರು. ಇದೀಗ ಅವರೂ ಸೇರಿದಂತೆ ತಂಡದ ಎಲ್ಲರೂ ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಬ್ಯಾಟಿಂಗ್ ಮಾಡುವ ಸವಾಲು ಇದೆ. ಸ್ವಲ್ಪ ಎಚ್ಚರ ತಪ್ಪಿದರೂ ಬಾಂಗ್ಲಾದೇಶ ತಂಡವು ಆಘಾತ ನೀಡಬಹದು.

ಮಷ್ರಫೆ ಮೊರ್ತಜಾ ನಾಯಕತ್ವದ ಬಾಂಗ್ಲಾ ತಂಡದಲ್ಲಿ ಬೌಲರ್‌ಗಳಾದ ಮುಸ್ತಫಿಜುರ್ ರೆಹಮಾನ್, ಮೊಹಮ್ಮದ್ ಸೈಫುದ್ದೀನ್ ಅವರು ಉತ್ತಮ ಲಯದಲ್ಲಿದ್ದಾರೆ. ಸ್ಪಿನ್ನರ್ ಶಕೀಬ್ ಅಲ್ ಹಸನ್ ಅವರು ಸ್ಪಿನ್ ವಿಭಾಗದ ಹೊಣೆಯನ್ನು ನಿಭಾಯಿಸಲಿದ್ದಾರೆ.

ಟೂರ್ನಿಯ ಅಭ್ಯಾಸ ಪಂದ್ಯದಲ್ಲಿ ಬಾಂಗ್ಲಾದೇಶ ತಂತವು ಭಾರತದ ಎದುರು ಸೋತಿತ್ತು. ತಂಡವು ಆ ಪಂದ್ಯದಲ್ಲಿ ಕಲಿತ ಪಾಠಗಳನ್ನು ಇಲ್ಲಿ ಬಳಸಿಕೊಳ್ಳುವ ಪ್ರಯತ್ನ ಮಾಡುವ ನಿರೀಕ್ಷೆ ಇದೆ. ಆರಂಭಿಕ ಬ್ಯಾಟ್ಸ್‌ಮನ್ ಲಿಟನ್ ದಾಸ್, ಮಷ್ಫಿಕರ್ ರಹೀಮ್, ಸೌಮ್ಯ ಸರ್ಕಾರ್ ಮತ್ತು ಮೆಹಮುದುಲ್ಲಾ ಅವರನ್ನು ಬೇಗನೆ ಕಟ್ಟಿಹಾಕಿದರೆ ದಕ್ಷಿಣ ಆಫ್ರಿಕಾದ ದಾರಿ ಸುಲಭವಾಗುತ್ತದೆ.

ಇಂಗ್ಲೆಂಡ್ ಎದುರು ಮಿಂಚಿದ್ದ ಸ್ಪಿನ್ನರ್ ಇಮ್ರಾನ್ ತಾಹೀರ್, ವೇಗಿಗಳಾ ದ ದಕಗಿಸೊ ರಬಾಡ ಮತ್ತು ಲುಂಗಿ ಗಿಡಿ ಅವರ ಶಿಸ್ತಿನ ದಾಳಿಯನ್ನು ಎದುರಿಸುವ ಸವಾಲು ಬಾಂಗ್ಲಾ ಮುಂದಿದೆ.

ಇದೇ ಕ್ರೀಡಾಂಗಣದಲ್ಲಿ ಶುಕ್ರವಾರ ವೆಸ್ಟ್‌ ಇಂಡೀಸ್ ಮತ್ತು ಪಾಕಿಸ್ತಾನ ತಂಡಗಳ ನಡುವಣ ಪಂದ್ಯ ನಡೆದಿತ್ತು. ಟಾಸ್ ಗೆದ್ದು ಫೀಲ್ಡಿಂಗ್ ಮಾಡಿದ್ದ ವಿಂಡೀಸ್‌ನ ವೇಗಿಗಳು ಮಿಂಚಿದ್ದರು. ಪಾಕ್ ತಂಡವು ಕೇವಲ 105 ರನ್‌ಗಳಿಗೆ ಕುಸಿದಿತ್ತು. ಭಾನುವಾರವೂ ಇಲ್ಲಿಯ ಪಿಚ್ ಬೌಲರ್‌ಗಳಿಗೇ ಮಣೆ ಹಾಕುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಟಾಸ್ ಗೆಲುವು ಕೂಡ ಮಹತ್ವದ್ದಾಗಲಿದೆ.

ತಂಡಗಳು: ದಕ್ಷಿಣ ಆಫ್ರಿಕಾ: ಫಾಫ್ ಡು ಪ್ಲೆಸಿ (ನಾಯಕ), ಹಾಶಿಂ ಆಮ್ಲಾ, ಕ್ವಿಂಟನ್ ಡಿ ಕಾಕ್ (ವಿಕೆಟ್‌ಕೀಪರ್), ಜೆಪಿ ಡುಮಿನಿ, ಆ್ಯಡನ್ ಮರ್ಕರಮ್, ಡೇವಿಡ್ ಮಿಲ್ಲರ್, ಕ್ರಿಸ್ ಮಾರಿಸ್, ಲುಂಗಿ ಗಿಡಿ, ಆ್ಯಂಡಿಲೆ ಪೆಹ್ಲುಕವ್ಯಾಯೊ, ಡ್ವೇನ್ ಪ್ರಿಟೊರಿಯಸ್, ಕಗಿಸೊ ರಬಾಡ, ತಬ್ರೇಜ್ ಶಮ್ಸಿ, ಇಮ್ರಾನ್ ತಾಹೀರ್, ಡೇಲ್ ಸ್ಟೇನ್,

ಬಾಂಗ್ಲಾದೇಶ: ಮಷ್ರಫೆ ಮೊರ್ತಜಾ (ನಾಯಕ), ಶಕೀಬ್ ಅಲ್ ಹಸನ್, ಲಿಟನ್ ದಾಸ್, ಮೆಹದಿ ಹಸನ್, ಮೊಸಾದಿಕ್ ಹೊಸೆನ್, ರುಬೆಲ್ ಹೊಸೆನ್, ತಮೀಮ್ ಇಕ್ಬಾಲ್, ಅಬು ಜಯೇದ್, ಮೆಹಮುದುಲ್ಲಾ, ಮೊಹಮ್ಮದ್ ಮಿಥುನ್, ಮುಷ್ಫಿಕರ್ ರಹೀಮ್, ಮುಸ್ತಫೀಜುರ್ ರೆಹಮಾನ್, ಶಬ್ಬೀರ್ ರೆಹಮಾನ್, ಮೊಹಮ್ಮದ್ ಸೈಫುದ್ದೀನ್, ಸೌಮ್ಯಾ ಸರ್ಕಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT