ಗುರುವಾರ , ಆಗಸ್ಟ್ 13, 2020
21 °C

ವಿರಾಟ್ ಕೊಹ್ಲಿಯನ್ನು ನಿಯಂತ್ರಿಸುವುದು ಸವಾಲು ಹ್ಯಾಜಲ್‌ವುಡ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ತಂಡದ ಎದುರು ಆಡುವಾಗ ವಿರಾಟ್ ಕೊಹ್ಲಿ ಅವರನ್ನು ನಿಯಂತ್ರಿಸುವುದೇ ನಮ್ಮ ಪ್ರಮುಖ ಗುರಿಯಾಗಿರುತ್ತದೆ. ಅವರನ್ನು ಕಟ್ಟಿಹಾಕುವುದು ಬೌಲರ್‌ಗಳಿಗೆ ಪ್ರಮುಖ ಸವಾಲು ಎಂದು ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಆಟಗಾರ ಜೋಶ್ ಹ್ಯಾಜಲ್‌ವುಡ್ ಹೇಳಿದ್ದಾರೆ.

ಮುಂದಿನ ನವೆಂಬರ್‌–ಡಿಸೆಂಬರ್‌ನಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವ ಯೋಜನೆ ಇದೆ. ಆ ಸಂದರ್ಭದಲ್ಲಿ ವಿರಾಟ್ ಬಳಗದ ವಿರುದ್ಧ ತಮ್ಮ ತಂತ್ರಗಾರಿಕೆಯ ಕುರಿತು ಜೋಶ್ ಸ್ಟಾರ್ ಸ್ಪೋರ್ಟ್ಸ್‌ ವಾಹಿನಿಯ ಕಾರ್ಯಕ್ರಮದಲ್ಲಿ ಮಾತನಾಡಿದರು. 

’2018ರಲ್ಲಿ ಇಲ್ಲಿ ನಡೆದಿದ್ದ ಟೆಸ್ಟ್ ಸರಣಿಯಲ್ಲಿ ವಿರಾಟ್ ಅಮೋಘ ಆಟವಾಡಿದ್ದರು. ಭಾರತ ಜಯಭೇರಿ ಬಾರಿಸಿತ್ತು. ಅದೇ ಆತ್ಮವಿಶ್ವಾಸದಿಂದ ಈ ಬಾರಿಯೂ ಅವರು ಕಣಕ್ಕಿಳಿಯುವಂತೆ ಕಾಣುತ್ತಿದ್ದಾರೆ. ಆದ್ದರಿಂದ ಅವರು ಒಮ್ಮೆ ಕ್ರೀಸ್‌ನಲ್ಲಿ ಆಟಕ್ಕೆ ಕುದುರಿಕೊಂಡರೆ ಬೌಲರ್‌ಗಳ ಕೈಕಟ್ಟಿದಂತೆಯೇ ಲೆಕ್ಕ‘ ಎಂದಿದ್ದಾರೆ. 

’ಭಾರತ ತಂಡದಲ್ಲಿ ಬೌಲರ್‌ಗಳಿಗೆ ಕಬ್ಬಿಣದ ಕಡಲೆಯಾಗಬಲ್ಲ ಸಾಮರ್ಥ್ಯ ಇರುವ ಇನ್ನೊಬ್ಬ ಬ್ಯಾಟ್ಸ್‌ಮನ್‌ ಎಂದರೆ ಚೇತೇಶ್ವರ್ ಪೂಜಾರ. ಅವರನ್ನು ಔಟ್ ಮಾಡಲು ಬೌಲರ್‌ಗಳು ತಮ್ಮ ಸರ್ವಸಾಮರ್ಥ್ಯವನ್ನೂ ಒರೆಗೆ ಹಚ್ಚಬೇಕು. ಅವರ ವಿಕೆಟ್‌ಗೆ ಅಮೂಲ್ಯವಾದ ಬೆಲೆ ಇದೆ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಅವರೊಬ್ಬ ಪರಿಣತ ಬ್ಯಾಟ್ಸ್‌ಮನ್’ ಎಂದು ಹೇಳಿದರು.

ಆಸ್ಟ್ರೇಲಿಯಾದ ಸೀಮಿತ ಓವರ್‌ಗಳ ತಂಡದ ನಾಯಕ ಆ್ಯರನ್ ಫಿಂಚ್ ಅವರೂ ಈಚೆಗೆ ಕೊಹ್ಲಿಯ ಬಗ್ಗೆ ಮೆಚ್ಚುಗೆಯ ಮಳೆಗರೆದಿದ್ದರು. ’ವಿರಾಟ್ ಏಕದಿನ ಕ್ರಿಕೆಟ್‌ನ ಶ್ರೇಷ್ಠ ಆಟಗಾರ‘ ಎಂದಿದ್ದರು.

ಸದ್ಯದ ವೇಳಾಪಟ್ಟಿಯ ಪ್ರಕಾರ ಭಾರತ ತಂಡವು ಡಿಸೆಂಬರ್‌ ಮೂರರಿಂದ ಬ್ರಿಸ್ಟೆನ್‌ನಲ್ಲಿ ಮೊದಲ ಟೆಸ್ಟ್ ಆಡಲಿದೆ. ಒಟ್ಟು ನಾಲ್ಕು ಟೆಸ್ಟ್‌ಗಳು ಸರಣಿಯಲ್ಲಿ ನಡೆಯಲಿವೆ. ಅಡಿಲೇಡ್‌ನಲ್ಲಿ ಎರಡನೇ ಟೆಸ್ಟ್‌ ಪಂದ್ಯವನ್ನು ಹೊನಲು–ಬೆಳಕಿನಲ್ಲಿ ಆಡಲು ಯೋಜಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು