ಬುಧವಾರ, ಸೆಪ್ಟೆಂಬರ್ 30, 2020
19 °C

ಸಂಬಂಧಿಕರ ಮೇಲೆ ದಾಳಿ ಪ್ರಕರಣದ ಸಮಗ್ರ ತನಿಖೆಗೆ ರೈನಾ ಒತ್ತಾಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಪಂಜಾಬ್‌ನಲ್ಲಿ ತಮ್ಮ ಸಂಬಂಧಿಕರ ಮೇಲೆ ನಡೆದ ಬರ್ಬರ ದಾಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಮಗ್ರ ತನಿಖೆ ನಡೆಸಬೇಕು ಎಂದು ಭಾರತ ತಂಡದ ಮಾಜಿ ಕ್ರಿಕೆಟಿಗ ಸುರೇಶ್ ರೈನಾ ಆಗ್ರಹಿಸಿದ್ದಾರೆ.

ಆಗಸ್ಟ್ 19ರಂದು  ಪಂಜಾಬ್‌ನ ಪಠಾಣ್‌ಕೋಟ್‌ ಸಮೀಪ ದರೋಡೆಕೋರರು ರೈನಾ ಅವರ ಸೋದರಮಾವನ ಹತ್ಯೆ ಮಾಡಿದ್ದರು. ಸಂಬಂಧಿಕರ ಮೇಲೆ ದಾಳಿ ಮಾಡಿದ್ದರು.  ಯುಎಇಯಲ್ಲಿದ್ದ ರೈನಾ ಸುದ್ದಿ ತಿಳಿದು ತವರಿಗೆ ಮರಳಿದ್ದರು.  ವೈಯಕ್ತಿಕ ಕಾರಣಗಳಿಗಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಿಂದ ಹೊರಹೋಗುತ್ತಿರುವುದಾಗಿ ತಿಳಿಸಿದ್ದರು.

ಇದೇ ಮೊದಲ ಬಾರಿಗೆ ಪ್ರಕರಣದ ಕುರಿತು ಮೌನ ಮುರಿದಿರುವ ರೈನಾ, ‘ನನ್ನ ಕುಟುಂಬದ ಸದಸ್ಯರೊಂದಿಗೆ ಪಂಜಾಬ್‌ನಲ್ಲಿ ನಡೆದಿದ್ದು ಅಮಾನವೀಯ. ನನ್ನ ಅಂಕಲ್‌ವನ್ನು ಕೊಲೆ ಮಾಡಲಾಗಿದೆ. ಅಮಾನುಷ ದಾಳಿಯಲ್ಲಿ ನನ್ನ ಸೋದರತ್ತೆ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರ ಸ್ಥಿತಿ ಚಿಂತಾಜನಕವಾಗಿದೆ. ದಾಳಿಗೊಳಗಾಗಿದ್ದ ಇನ್ನೊಬ್ಬ ಸಹೋದರ ಸಂಬಂಧಿ ನಿನ್ನೆ (ಸೋಮವಾರ) ಸಾವನ್ನಪ್ಪಿದ್ದಾನೆ’ ಎಂದು ಟ್ವೀಟ್ ಮಾಡಿದ್ದಾರೆ. 

‘ಈ ದಾಳಿ ನಡೆದಿದ್ದು ಯಾಕೆ ಎಂಬುದರ ಕುರಿತು ಯಾವ ಸುಳಿವು ನಮಗಿಲ್ಲ. ಯಾರು ಮಾಡಿದರು ಎಂಬುದೂ ಗೊತ್ತಿಲ್ಲ. ಆದ್ದರಿಂದ ಪಂಜಾಬ್ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತನಿಖೆ ಮಾಡಬೇಕು. ಕೊಲೆಗಡುಕರನ್ನು ಹೆಡೆಮುರಿ ಕಟ್ಟಬೇಕು’ ಎಂದು 33 ವರ್ಷದ ಎಡಗೈ ಬ್ಯಾಟ್ಸ್‌ಮನ್ ರೈನಾ ಒತ್ತಾಯಿಸಿದ್ದಾರೆ.

ಅವರು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು  ಪೊಲೀಸ್ ಆಯುಕ್ತರಿಗೆ ಟ್ವೀಟ್‌ ಟ್ಯಾಗ್ ಮಾಡಿದ್ದಾರೆ.

ರೈನಾ ಆಗಸ್ಟ್‌ 15ರಂದು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. ಆ ದಿನ ತಮ್ಮ ಆಪ್ತಮಿತ್ರ ಮತ್ತು ಭಾರತ ತಂಡದ ಮಾಜಿ ನಾಯಕ  ಮಹೇಂದ್ರಸಿಂಗ್ ಧೋನಿ ಅವರು ವಿದಾಯ ಪ್ರಕಟಿಸಿದ ಕೆಲವು ನಿಮಿಷಗಳ ನಂತರ ರೈನಾ ಕೂಡ ತಮ್ಮ ನಿರ್ಗಮನ ಪ್ರಕಟಿಸಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು