ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್ ಗೆಲುವು ಶಾಶ್ವತ, ಯಾವುದರಿಂದಲೂ ಸರಿದೂಗಿಸಲಾಗದು: ಯುವರಾಜ್

Last Updated 2 ಏಪ್ರಿಲ್ 2021, 8:19 IST
ಅಕ್ಷರ ಗಾತ್ರ

ನವದೆಹಲಿ: ಏಕದಿನ ವಿಶ್ವಕಪ್ ಗೆಲುವು ಶಾಶ್ವತವಾಗಿದ್ದು, ಕ್ರಿಕೆಟ್ ವೃತ್ತಿ ಜೀವನದಲ್ಲಿ ಅದನ್ನು ಯಾವುದರಿಂದಲೂ ಸರಿದೂಗಿಸಲಾಗದುಎಂದು 2011ರ ವಿಶ್ವಕಪ್ ಹೀರೊ ಹಾಗೂ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ದಶಕದ ಹಿಂದೆ ಅಂದಿನ ಈ ದಿನದಂದು (ಏಪ್ರಿಲ್ 2, 2011) ಭಾರತ 28 ವರ್ಷಗಳ ಬಳಿಕ ಏಕದಿನ ವಿಶ್ವಕಪ್ ಪ್ರಶಸ್ತಿ ಜಯಿಸಿತ್ತು. ಟೂರ್ನಿಯಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಯುವರಾಜ್ ಸಿಂಗ್, ಅರ್ಹವಾಗಿಯೇ ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನವಾಗಿದ್ದರು.

ಕ್ಯಾನ್ಸರ್ ರೋಗಕ್ಕೆ ತುತ್ತಾಗಿದ್ದ ಯುವಿ, ಅತೀವ ನೋವಿನಲ್ಲೂ ದೇಶಕ್ಕಾಗಿ ಕ್ರಿಕೆಟ್ ಆಡಿ ಟೂರ್ನಿಯಲ್ಲಿ ಒಟ್ಟು 362 ರನ್ ಮತ್ತು 15 ವಿಕೆಟ್‌ಗಳನ್ನು ಕಬಳಿಸಿದ್ದರು.

'ನಾವು ವಿಶ್ವಕಪ್ ಗೆದ್ದು 10 ವರ್ಷಗಳು ಕಳೆದಿವೆ. ಸಮಯ ಇಷ್ಟು ಬೇಗ ಸಾಗಿದೆ. ಇಡೀ ತಂಡವೇ ವಿಶೇಷವಾಗಿ ಕೊನೆಯ ವಿಶ್ವಕಪ್ ಆಡಿದ್ದ ಸಚಿನ್ ತೆಂಡೂಲ್ಕರ್ ಅವರಿಗಾಗಿ ತವರಿನಲ್ಲಿ ವಿಶ್ವಕಪ್ ಜಯಿಸಲು ಬಯಸಿದ್ದೆವು. ಬೇರೆ ಯಾವ ತಂಡವು ಆ ಸಾಧನೆ ಮಾಡಿರಲಿಲ್ಲ. ಇದು ನಮ್ಮ ಪಾಲಿಗೆ ವಿಶೇಷ. ಆ ಭಾವನೆಗಳನ್ನು ಪದಗಳಲ್ಲಿವರ್ಣಿಸಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

'ಫೈನಲ್‌ನಲ್ಲಿ ಎಂ.ಎಸ್. ಧೋನಿ ಮತ್ತು ಗೌತಮ್ ಗಂಭೀರ್ ಅತ್ಯುತ್ತಮ ಪ್ರದರ್ಶನ ನೀಡಿದ್ದರು. ಗಂಭೀರ್ ಟೂರ್ನಿಯುದ್ಧಕ್ಕೂ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಸಚಿನ್ ಜೊತೆಗೆ ವೀರೇಂದ್ರ ಸೆಹ್ವಾಗ್ ಅತ್ಯುತ್ತಮ ಆರಂಭಿಕ ಜೊತೆಯಾಟದಲ್ಲಿ ಭಾಗಿಯಾಗಿದ್ದರು. ನಿಸ್ಸಂಶವಾಗಿಯೂ ವಿಶ್ವಕಪ್ ಪ್ರಯಾಣದುದ್ಧಕ್ಕೂ ಸಚಿನ್ ಅದ್ಭುತ. ಜ್ಯಾಕ್ (ಜಹೀರ್ ಖಾನ್) ಕೂಡಾ 20ರಷ್ಟು ವಿಕೆಟ್ ಕಬಳಿಸಿ ಅದ್ಭುತ ನಿರ್ವಹಣೆ ನೀಡಿದ್ದರು' ಎಂದು ಯುವರಾಜ್ ಸಿಂಗ್ ವಿಶ್ವಕಪ್ ಪ್ರದರ್ಶನಗಳನ್ನು ಮೆಲುಕು ಹಾಕಿದರು.

ಇದನ್ನೂ ಓದಿ:

'ವಿಶ್ವಕಪ್ ಗೆಲ್ಲುವುದು ಪ್ರತಿಯೊಬ್ಬ ಕ್ರಿಕೆಟಿಗನಿಗೂ ವಿಶೇಷವಾದ ಸ್ಮರಣೆಯಾಗಿದೆ. ವಿಶೇಷವಾಗಿಯೂ ಚಿಕ್ಕ ವಯಸ್ಸಿನಲ್ಲಿ ದೇಶಕ್ಕಾಗಿ ಆಡುವುದು ಮತ್ತು ವಿಶ್ವಕಪ್ ಗೆಲ್ಲುವುದನ್ನು ಕನಸು ಕಂಡಿರುತ್ತೇವೆ. ಅದು ಶಾಶ್ವತವಾಗಿದ್ದು, ಅದಕ್ಕಿಂತ ಮಿಗಿಲಾಗಿ ಬೇರೆ ಏನು ಇಲ್ಲ. ನಮ್ಮ ಪಾಲಿಗಿದು ಭಾವನಾತ್ಮಕ ದಿನವಾಗಿತ್ತು. ಈಗ ಗೆಲುವಿನ ಸಂಭ್ರಮಕ್ಕೆ 10 ವರ್ಷಗಳು ಸಂದಿವೆ. ನಿಸ್ಸಂಶಯವಾಗಿಯೂ ಈ ವಿಡಿಯೊವನ್ನು ಸಚಿನ್, ವೀರು, ಭಜ್ಜಿ ಸೇರಿದಂತೆ ಎಲ್ಲ ಸದಸ್ಯರೊಂದಿಗೆ ಮಾಡಲು ಬಯಸಿದ್ದೆವು. ದುರದೃಷ್ಟವಶಾತ್ ಸಚಿನ್, ಯೂಸುಫ್ ಹಾಗೂ ಇರ್ಫಾನ್ ಕೋವಿಡ್-19 ಸೋಂಕಿಗೊಳಗಾಗಿದ್ದಾರೆ. ಅವರು ಬೇಗನೇ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ' ಎಂದಿದ್ದಾರೆ.

'ವಿಶ್ವಕಪ್ ಗೆಲುವು ನಮ್ಮ ಪಾಲಿಗೆ ಮಹತ್ತರವಾಗಿದ್ದು, ಅತ್ಯುತ್ತಮ ಸ್ಮರಣೆಯಾಗಿದೆ. ನನ್ನ ಕ್ರಿಕೆಟ್ ವೃತ್ತಿ ಜೀವನದಲ್ಲಿ ಬೇರೆ ಯಾವುದರಿಂದ ಸರಿದೂಗಿಸಲಾಗದು. ಈ ಶ್ರೇಷ್ಠ ದಿನವನ್ನು ನೀವೆಲ್ಲರೂ ನೆನಪಿಸಿಕೊಳ್ಳುವಿರಿ ಎಂಬ ನಿರೀಕ್ಷೆಯಿದೆ. ನೆನಪುಗಳು ಶಾಶ್ವತವಾಗಿ ಉಳಿಯುತ್ತವೆ. ನಿಮ್ಮಲ್ಲರಿಗೂ ನನ್ನ ಪ್ರೀತಿ ಸಲ್ಲಿಸುತ್ತೇನೆ' ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT