ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರೀಶಾಂತ್‌ ನೆರವಿಗೆ ಟಿಮ್‌ ಗ್ರೋವರ್

Last Updated 21 ಜೂನ್ 2020, 18:57 IST
ಅಕ್ಷರ ಗಾತ್ರ

ನವದೆಹಲಿ: ಮುಂದಿನ ಸೆಪ್ಟೆಂಬರ್‌ನಿಂದ ಕ್ರಿಕೆಟ್ ಕಣಕ್ಕೆ ಮರಳಲು ಸಜ್ಜಾಗಿರುವ ಮಧ್ಯಮವೇಗಿ ಎಸ್‌. ಶ್ರೀಶಾಂತ್ ಬ್ಯಾಸ್ಕೆಟ್‌ಬಾಲ್ ತಾರೆ ಮೈಕೆಲ್ ಜೋರ್ಡಾನ್ ಅವರ ಮೈಂಡ್ ಟ್ರೇನರ್ ಟಿಮ್ ಗ್ರೋವರ್ ಅವರಿಂದ ತರಬೇತಿ ಪಡೆಯುತ್ತಿದ್ದಾರೆ.

2013ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದಿದ್ದ ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಶ್ರೀಶಾಂತ್ ಸಿಕ್ಕಿಬಿದ್ದಿದ್ದರು. ಬಿಸಿಸಿಐನಿಂದ ನಿಷೇಧ ಶಿಕ್ಷೆಗೆ ಒಳಗಾಗಿದ್ದರು. ಇದೇ ಆಗಸ್ಟ್‌ ಅಂತ್ಯಕ್ಕೆ ಅವರ ಶಿಕ್ಷೆ ಮುಕ್ತಾಯವಾಗಲಿದೆ. ಅವರನ್ನು ರಣಜಿ ತಂಡದ ಆಯ್ಕೆಗೆ ಪರಿಗಣಿಸುವುದಾಗಿ ಕೇರಳ ಕ್ರಿಕೆಟ್ ತಂಡದ ಮುಖ್ಯ ಕೋಚ್ ಈಚೆಗೆ ಹೇಳಿದ್ದರು. ಇದೀಗ 37 ವರ್ಷದ ಶ್ರೀಶಾಂತ್ ಸಿದ್ಧತೆಯನ್ನು ಭರದಿಂದಲೇ ಆರಂಭಿಸಿದ್ದಾರೆ.

‘ಎನ್‌ಬಿಎನಲ್ಲಿ ಟಿಮ್ ಗ್ರೋವರ್ ದೊಡ್ಡ ಹೆಸರು ಮಾಡಿದ್ದಾರೆ. ಅವರ ಆನ್‌ಲೈನ್‌ ತರಗತಿಗಳಿಗೆ ನಾನು ತಪ್ಪದೇ ಹಾಜರಾಗುತ್ತಿದ್ದೆ. ವಾರದಲ್ಲಿ ಮೂರು ದಿನ ಅವರ ತರಗತಿಗಳು ನಡೆಯುತ್ತವೆ. ಬೆಳಿಗ್ಗೆ 5.30 ರಿಂದ 8.30 ರವರೆಗೆ ಅವರ ತರಗತಿಗಳನ್ನು ಹಾಜರಿರುತ್ತೇನೆ. ಮಧ್ಯಾಹ್ನ 1.30ರಿಂದ ಸಂಜೆ 6ರವರೆಗೆ ಎರ್ನಾಕುಲಂನಲ್ಲಿರುವ ಒಳಾಂಗಣ ಕ್ರೀಡಾಂಗಣದ ನೆಟ್ಸ್‌ನಲ್ಲಿ ಅಭ್ಯಾಸ ಮಾಡುತ್ತಿದ್ದೇನೆ. ಕೇರಳದ 23 ವರ್ಷದೊಳಗಿನ ತಂಡ ಮತ್ತು ರಣಜಿ ತಂಡದಲ್ಲಿರುವ ಸಚಿನ್ ಬೇಬಿ ಮತ್ತಿತರರೊಂದಿಗೆ ತಾಲೀಮು ನಡೆಸುತ್ತಿದ್ದೇನೆ’ ಎಂದು ಶ್ರೀಶಾಂತ್ ಹೇಳಿದ್ದಾರೆ.

‘ಮುಂದಿನ ವರ್ಷದ ಐಪಿಎಲ್‌ನಲ್ಲಿ ಆಡುವ ಗುರಿ ಇದೆ. ಯಾವ ಟೂರ್ನಿಯಿಂದ ನಾನು ಕ್ರಿಕೆಟ್‌ನಿಂದ ದೂರ ಸರಿದಿದ್ದೆನೋ ಆ ಟೂರ್ನಿಯಲ್ಲಿ ಮತ್ತೊಮ್ಮೆ ಆಡುವುದು ನನ್ನ ಗುರಿ. ಮತ್ತೊಮ್ಮೆ ಐಪಿಎಲ್‌ ಅಂಗಳದಲ್ಲಿ ಕಾಣಿಸಿಕೊಳ್ಳುತ್ತೇನೆ. ಪ್ರತಿನಿಧಿಸುವ ತಂಡವನ್ನು ಗೆಲ್ಲಿಸುವಂತಹ ಆಟವಾಡುತ್ತೇನೆ’ ಎಂದಿದ್ದಾರೆ.

‘ನಾನು ಕ್ರಿಕೆಟ್ ಪಂದ್ಯ ಆಡಲು ಮರಳಿದಾಗ ಜನರು ಏನೆನ್ನಬಹುದು ಎಂಬ ಭಯ ಇದೆ. ಮೊದಲ ಪಂದ್ಯದ ನಂತರದ ಪಂದ್ಯಗಳಲ್ಲಿ ಜನರು ತಮ್ಮ ಭಾವನೆ ಬದಲಿಸಿಕೊಳ್ಳುತ್ತಾರೆ. ನಾನು ಅನುಭವಿಸಿದ ಸ್ಥಿತಿಯನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ. ಆ ರೀತಿಯಲ್ಲಿ ಸಾಧನೆ ಮಾಡುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ವಾರದಲ್ಲಿ ಆರು ದಿನ ಬೌಲಿಂಗ್ ಅಭ್ಯಾಸ ಮಾಡುತ್ತಿದ್ದೇನೆ. ಪ್ರತಿದಿನ ಎರಡು ತಾಸು ಕೆಂಪು ಚೆಂಡು ಮತ್ತು ಒಂದು ಗಂಟೆ ಬಿಳಿ ಚೆಂಡಿನಲ್ಲಿ ಬೌಲಿಂಗ್ ಮಾಡುತ್ತೇನೆ. ಸುಮಾರು 12 ಓವರ್‌ಗಳನ್ನು ಪ್ರತಿದಿನ ಹಾಕುತ್ತಿದ್ಧೇನೆ. ಔಟ್‌ಸ್ವಿಂಗರ್‌ನ ಆ ಮೊನಚು ಈಗಲೂ ಇದೆ. ಇದರಿಂದ ನನ್ನ ದೈಹಿಕ ಕ್ಷಮತೆ ಹೆಚ್ಚುತ್ತದೆ. ರಣಜಿ ಮತ್ತು ಇರಾನಿ ಟ್ರೋಫಿಯನ್ನು ನನ್ನ ರಾಜ್ಯ ತಂಡಕ್ಕಾಗಿ ಗೆಲ್ಲುವುದೊಂದೇ ಅಲ್ಲ ಭಾರತ ತಂಡಕ್ಕೆ ಆಡುವುದು ನನ್ನ ಗುರಿ’ ಎಂದು ಶ್ರೀಶಾಂತ್ ಹೇಳಿದ್ದಾರೆ.

‘ಏಳು ವರ್ಷಗಳಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ನೀವು ಜನರ ಮೇಲೆ ಮೊದಲಿನಂತೆ ವಿಶ್ವಾಸ ಇಡಲು ಸಾಧ್ಯವೆ?’ ಎಂಬ ಪ್ರಶ್ನೆಗೆ ಪ್ತತಿಕ್ರಿಯಿಸಿದ ಅವರು, ‘ಇಲ್ಲಿಯವರೆಗೆ ಈ ಸವಾಲನ್ನು ಯಾರೂ ಕೇಳಿರಲಿಲ್ಲ. ಇದರ ಬಗ್ಗೆ ಯೋಚಿಸಿದಾಗ ಭಾವುಕನಾಗುತ್ತೇನೆ. ಈಗಲೂ ನಾನು ಜನರನ್ನು ನಂಬುತ್ತೇನೆ. ಆದರೆ ಅಂಧವಿಶ್ವಾಸವಿಡುವುದಿಲ್ಲ. ಈಗ ನನಗೆ ಯಾರನ್ನು ನಂಬಬೇಕು ಮತ್ತು ನಂಬಬಾರದು ಎಂಬುದು ಅರಿವಾಗಿದೆ. ಹಲವರನ್ನು ನಾನು ಕ್ಷಮಿಸಿದ್ದೇನೆ. ಆದರೆ, ಘಟನೆಗಳನ್ನು ಮರೆತಿಲ್ಲ’ ಎಂದಿದ್ದಾರೆ.

‘ನಾನು ಕ್ರಿಕೆಟ್‌ನಿಂದ ದೂರವಿದ್ದಾಗ ಇರ್ಫಾನ್ ಪಠಾಣ್, ಹರಭಜನ್ ಸಿಂಗ್, ಮಲೆಯಾಳಂ ಚಿತ್ರರಂಗದವರು, ರಾಜಕೀಯ ಧುರೀಣರು ನನಗೆ ಕರೆ ಮಾಡಿ ಮಾತನಾಡಿಸಿದ್ದಾರೆ. ನನ್ನ ಒಳ್ಳೆಯದಕ್ಕಾಗಿ ಹಾರೈಸಿದ್ದಾರೆ. ಕ್ರಿಕೆಟ್ ಆಡದ ಸಂದರ್ಭದಲ್ಲಿ ಹಣ ಗಳಿಸಲು ಚಲನಚಿತ್ರಗಳಲ್ಲಿ ನಟಿಸಿದೆ. ಆದರೆ ಮುಂದಿನ ನನ್ನ ಐದು ವರ್ಷಗಳು ಕ್ರಿಕೆಟ್‌ಗಾಗಿ ಸಮರ್ಪಿಸುತ್ತೇನೆ’ ಎಂದು ಶ್ರೀಶಾಂತ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT