ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದಾನ ಬ್ಯಾಟಿಂಗ್‌ ಮೋಡಿ

ಅಂತಿಮ ಓವರ್‌ನಲ್ಲಿ ಜೂಲನ್‌ ಬಿಗುವಿನ ಬೌಲಿಂಗ್‌: ಟ್ರಯಲ್‌ಬ್ಲೇಜರ್ಸ್‌ ಜಯಭೇರಿ
Last Updated 6 ಮೇ 2019, 18:12 IST
ಅಕ್ಷರ ಗಾತ್ರ

ಜೈಪುರ: ರೋಚಕ ಹಣಾಹಣಿಗೆ ಸಾಕ್ಷಿಯಾಗಿದ್ದ ಮಹಿಳಾ ಟ್ವೆಂಟಿ–20 ಚಾಲೆಂಜ್‌ನ ಮೊದಲ ಪಂದ್ಯದಲ್ಲಿ ಸ್ಮೃತಿ ಮಂದಾನ ಮುಂದಾಳತ್ವದ ಟ್ರಯಲ್‌ಬ್ಲೇಜರ್ಸ್‌ ಗೆಲುವಿನ ಸಿಹಿ ಸವಿಯಿತು.

‘ಪಿಂಕ್‌ ಸಿಟಿ’ಯಲ್ಲಿ ನಡೆದ ಪೈಪೋಟಿಯಲ್ಲಿ ಮಂದಾನ (90; 67ಎ, 10ಬೌಂ, 3ಸಿ) ಮೋಡಿ ಮಾಡಿದರು. ಟ್ರಯಲ್‌ಬ್ಲೇಜರ್ಸ್‌ ಎರಡು ರನ್‌ಗಳಿಂದ ಸೂಪರ್‌ನೋವಾಸ್‌ ತಂಡವನ್ನು ಸೋಲಿಸಿತು.

ಮೊದಲು ಬ್ಯಾಟ್‌ ಮಾಡಿದ ಟ್ರಯಲ್‌ಬ್ಲೇಜರ್ಸ್‌ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 140 ರನ್ ಕಲೆ ಹಾಕಿತು. ಸೂಪರ್‌ನೋವಾಸ್‌ 6 ವಿಕೆಟ್‌ಗೆ 138ರನ್‌ ಗಳಿಸಿ ಹೋರಾಟ ಮುಗಿಸಿತು. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (ಔಟಾಗದೆ 46; 34ಎ, 8ಬೌಂ) ಸೋಲಿನ ನಡುವೆಯೂ ಅಭಿಮಾನಿಗಳ ಮನ ಗೆದ್ದರು.

ಅಂತಿಮ ಓವರ್‌ನಲ್ಲಿ ಸೂಪರ್‌ನೋವಾಸ್‌ ಗೆಲುವಿಗೆ 19ರನ್‌ಗಳ ಅಗತ್ಯವಿತ್ತು. ಜೂಲನ್‌ ಗೋಸ್ವಾಮಿ ಹಾಕಿದ ಮೊದಲ ಎರಡು ಎಸೆತಗಳನ್ನೂ ಹರ್ಮನ್‌ಪ್ರೀತ್‌ ಬೌಂಡರಿ ಗೆರೆ ದಾಟಿಸಿದರು. ಮೂರನೇ ಎಸೆತದಲ್ಲಿ ರನ್‌ ಬರಲಿಲ್ಲ.

ನಾಲ್ಕು ಮತ್ತು ಐದನೇ ಎಸೆತಗಳನ್ನೂ ಬೌಂಡರಿಗಟ್ಟಿದ ಹರ್ಮನ್‌ಪ್ರೀತ್‌, ಸೂಪರ್‌ನೋವಾಸ್‌ ಬಳಗದಲ್ಲಿ ಗೆಲುವಿನ ಆಸೆ ಚಿಗುರೊಡೆಯುವಂತೆ ಮಾಡಿದರು. ಅಂತಿಮ ಎಸೆತದಲ್ಲಿ ಹರ್ಮನ್‌ಪ್ರೀತ್ ಮತ್ತೊಂದು ಬೌಂಡರಿ ಗಳಿಸಿಬಿಡುತ್ತಾರೆ ಎಂದು ಭಾವಿಸಿದ್ದವರಿಗೆ ನಿರಾಸೆ ಕಾಡಿತು. ಜೂಲನ್‌ ಎಸೆತದ ಮರ್ಮ ಅರಿಯುವಲ್ಲಿ ಎಡವಿದ ಹರ್ಮನ್‌ ‘ಬೀಟ್‌’ ಆದರು. ಚೆಂಡು ವಿಕೆಟ್‌ ಕೀಪರ್‌ ಕಲ್ಪನಾ ಕೈಸೇರಿತು. ಕಿಂಚಿತ್ತೂ ತಡ ಮಾಡದೆ ಓಡಿಬಂದ ಕಲ್ಪನಾ ಬೇಲ್ಸ್‌ ಎಗರಿಸಿದರು. ಲೀ ತಹುಹು ರನ್‌ಔಟ್‌ ಆದರು. ಟ್ರಯಲ್‌ಬ್ಲೇಜರ್ಸ್‌ ಪಾಳಯದಲ್ಲಿ ಸಂಭ್ರಮ ಮೇಳೈಸಿತು.

ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ್ದ ಸ್ಮೃತಿ ಪಡೆ ಎರಡನೇ ಓವರ್‌ನಲ್ಲೇ ಆಘಾತ ಕಂಡಿತು. ಸೂಸಿ ಬೇಟ್ಸ್ ಪೆವಿಲಿಯನ್‌ ಸೇರಿದಾಗ ತಂಡದ ಖಾತೆಯಲ್ಲಿದ್ದದ್ದು 11 ರನ್. ಬಳಿಕ ಮಂದಾನ ಮತ್ತು ಹರ್ಲೀನ್ ಡಿಯೋಲ್‌ (36; 44ಎ, 3ಬೌಂ) ಸವಾಯಿ ಮಾನ್‌ಸಿಂಗ್‌ ಕ್ರೀಡಾಂಗಣದಲ್ಲಿ ರನ್‌ ಮಳೆ ಸುರಿಸಿದರು. ಸೂಪರ್‌ನೋವಾಸ್‌ ಬೌಲರ್‌ಗಳ ಬೆವರಿಳಿಸಿದ ಈ ಜೋಡಿ ಎರಡನೇ ವಿಕೆಟ್‌ಗೆ 119 ರನ್‌ಗಳ ಜೊತೆಯಾಟ ಆಡಿತು.

ಒಂದು ಓವರ್ ಅಂತರದಲ್ಲಿ ಇಬ್ಬರೂ ಔಟಾದರು. ನಂತರ ಬಂದ ಬ್ಯಾಟ್ಸ್‌ವುಮನ್‌ಗಳು ವಿಕೆಟ್‌ ನೀಡಲು ಅವಸರಿಸಿದ್ದರಿಂದ ದೊಡ್ಡ ಮೊತ್ತ ಕಲೆಹಾಕುವ ತಂಡದ ಕನಸು ಕೈಗೂಡಲಿಲ್ಲ.

ಸಂಕ್ಷಿಪ್ತ ಸ್ಕೋರ್‌:

ಟ್ರಯಲ್‌ಬ್ಲೇಜರ್ಸ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 140 (ಸ್ಮೃತಿ ಮಂದಾನ 90, ಹರ್ಲೀನ್‌ ಡಿಯೋಲ್‌ 36, ಸೂಸಿ ಬೇಟ್ಸ್‌ 1, ಸ್ಟೆಫಾನಿ ಟೇಲರ್‌ 2, ದಯಾಳನ್‌ ಹೇಮಲತಾ ಔಟಾಗದೆ 2; ಅನುಜಾ ಪಾಟೀಲ್‌ 12ಕ್ಕೆ1, ರಾಧಾ ಯಾದವ್‌ 28ಕ್ಕೆ2, ಸೋಫಿ ಡಿವೈನ್‌ 27ಕ್ಕೆ1).

ಸೂಪರ್‌ನೋವಾಸ್‌: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 138 (ಪ್ರಿಯಾ ಪೂನಿಯಾ 1, ಚಾಮರಿ ಅಟಪಟ್ಟು 26, ಜೆಮಿಮಾ ರಾಡ್ರಿಗಸ್‌ 24, ಹರ್ಮನ್‌ಪ್ರೀತ್ ಕೌರ್‌ ಔಟಾಗದೆ 46, ನಟಾಲಿಯಾ ಶಿವರ್‌ 1, ಸೋಫಿ ಡಿವೈನ್‌ 32; ಸೋಫಿ ಎಕ್ಸಲ್‌ಸ್ಟೋನ್‌ 11ಕ್ಕೆ2, ರಾಜೇಶ್ವರಿ ಗಾಯಕವಾಡ 17ಕ್ಕೆ2).

ಫಲಿತಾಂಶ: ಟ್ರಯಲ್‌ಬ್ಲೇಜರ್ಸ್‌ಗೆ 2 ರನ್‌ ಗೆಲುವು.

ಪಂದ್ಯಶ್ರೇಷ್ಠ: ಸ್ಮೃತಿ ಮಂದಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT