ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಪ್ರೀಮಿಯರ್‌ ಲೀಗ್ ಕ್ರಿಕೆಟ್‌ ಟೂರ್ನಿ: ಆರ್‌ಸಿಬಿಗೆ ಸತತ ಎರಡನೇ ಜಯ

ಡಬ್ಲ್ಯುಪಿಎಲ್: ರೇಣುಕಾ, ಸೋಫಿ ಅಮೋಘ ಬೌಲಿಂಗ್
ಗಿರೀಶ ದೊಡ್ಡಮನಿ
Published 28 ಫೆಬ್ರುವರಿ 2024, 0:45 IST
Last Updated 28 ಫೆಬ್ರುವರಿ 2024, 0:45 IST
ಅಕ್ಷರ ಗಾತ್ರ

ಬೆಂಗಳೂರು: ಮಂಗಳವಾರ ರಜೆ ದಿನವಾಗಿರಲಿಲ್ಲ. ಆದರೂ ಚಿನ್ನಸ್ವಾಮಿ ಕ್ರೀಡಾಂಗಣದ ತುಂಬಾ ಕೆಂಪುವರ್ಣ ತುಂಬಿದ್ದರು ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಅಭಿಮಾನಿಗಳು. 

ಸುಮಾರು 20 ಸಾವಿರಕ್ಕೂ ಹೆಚ್ಚು ಅಭಿಮಾನಿಗಳನ್ನು ಸ್ಮೃತಿ ಮಂದಾನ ನಾಯಕತ್ವದ ಆರ್‌ಸಿಬಿ ನಿರಾಶೆಗೊಳಿಸಲಿಲ್ಲ.  ಗುಜರಾತ್ ಜೈಂಟ್ಸ್ ವಿರುದ್ಧ  8 ವಿಕೆಟ್‌ಗಳ ಸುಲಭ ಜಯ ಸಾಧಿಸಿತು. ಆತಿಥೇಯ ತಂಡಕ್ಕೆ ಇದು ಸತತ ಎರಡನೇ ಜಯವಾಗಿದೆ.

ಟಾಸ್ ಗೆದ್ದ ಆರ್‌ಸಿಬಿ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮಧ್ಯಮವೇಗಿ ರೇಣುಕಾಸಿಂಗ್ (14ಕ್ಕೆ2) ಮತ್ತು ಎಡಗೈ ಸ್ಪಿನ್ನರ್ ಸೋಫಿ ಮಾಲಿನ್ (25ಕ್ಕೆ3)  ಅವರ ದಾಳಿಯ ಮುಂದೆ ಗುಜರಾತ್ ಜೈಂಟ್ಸ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 107 ರನ್‌ಗಳ ಅಲ್ಪಮೊತ್ತ ದಾಖಲಿಸಿತು.

ಗುರಿ ಬೆನ್ನಟ್ಟಿದ ಆರ್‌ಸಿಬಿ ತಂಡವು 12.3 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 110 ರನ್ ಗಳಿಸಿ ಗೆದ್ದಿತು. ನಾಯಕಿ ಸ್ಮೃತಿ (43; 27ಎ, 4X8, 6X1) ಮತ್ತು ಎಸ್. ಮೇಘನಾ (ಔಟಾಗದೆ 36; 28ಎ, 4X5, 6X1) ತಂಡದ ಗೆಲುವನ್ನು ಸುಲಭಗೊಳಿಸಿದರು. ಅರ್ಧಶತಕದ ಸನಿಹದಲ್ಲಿ ಸ್ಮೃತಿ ಔಟಾದರು. ಕ್ರೀಸ್‌ಗೆ ಬಂದ ಎಲಿಸ್ ಪೆರಿ 14 ಎಸೆತಗಳಲ್ಲಿ 23 ರನ್ ಗಳಿಸಿದರು.

ಗುಜರಾತ್ ತಂಡದ ಆರಂಭಿಕ ಬ್ಯಾಟರ್ ಹರ್ಲಿನ್ ದೆವೊಲ್ (22; 31ಎ, 4X3), ಹೇಮಲತಾ (ಔಟಾಗದೆ 31; 25ಎ, 4X2, 6X1) ಹಾಗೂ ಸ್ನೇಹಾ ರಾಣಾ (12; 10ಎ, 4X2)  ಅವರಷ್ಟೇ  ಎರಡಂಕಿ ದಾಟಿದರು. ಉಳಿದವರು ವೈಫಲ್ಯ ಅನುಭವಿಸಿದರು.  

ಕ್ರೀಸ್‌ಗೆ ಬಂದ ಬ್ಯಾಟರ್‌ಗಳು ನಿಧಾನಗತಿಯಲ್ಲಿ ರನ್ ಗಳಿಸಿದರು. ಅದರಿಂದಾಗಿ 15 ಓವರ್‌ಗಳು ಮುಗಿದಾಗಲೂ ತಂಡದ ಖಾತೆಯಲ್ಲಿ 70 ರನ್‌ ಗಳಿದ್ದವು. ಕೊನೆಯ ಐದು ಓವರ್‌ಗಳಲ್ಲಿ 37 ರನ್‌ಗಳು ಬರಲು ಹೇಮಲತಾ ಮತ್ತು ಸ್ನೇಹಾ ರಾಣಾ  ಅವರ ದಿಟ್ಟ ಆಟ ಕಾರಣವಾಯಿತು.

ಸಂಕ್ಷಿಪ್ತ ಸ್ಕೋರು: ಗುಜರಾತ್ ಜೈಂಟ್ಸ್: 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 107 (ಹರ್ಲಿನ್ ದೆವೊಲ್ 22, ಹೇಮಲತಾ ದಯಾಳನ್ ಔಟಾಗದೆ 31, ಸ್ನೇಹಾ ರಾಣಾ 12, ರೇಣುಕಾ ಸಿಂಗ್ 14ಕ್ಕೆ2, ಸೋಫಿ ಮಾಲಿನ್ 25ಕ್ಕೆ3)

ಆರ್‌ಸಿಬಿ: 12.3 ಓವರ್‌ಗಳಲ್ಲಿ 2 ವಿಕೆಟ್‌ಗಳಿಗೆ 110 (ಸ್ಮೃತಿ ಮಂದಾನ 43, ಎಸ್. ಮೇಘನಾ ಔಟಾಗದೆ 36, ಎಲಿಸ್ ಪೆರಿ  ಔಟಾಗದೆ 23,  ಆ್ಯಷ್ಲೆ ಗಾರ್ಡನರ್ 15ಕ್ಕೆ1) ಫಲಿತಾಂಶ: ಆರ್‌ಸಿಬಿಗೆ 8 ವಿಕೆಟ್‌ಗಳ ಜಯ. ಪಂದ್ಯದ ಆಟಗಾರ್ತಿ:ರೇಣುಕಾ ಸಿಂಗ್

ಇಂದಿನ ಪಂದ್ಯ

ಮುಂಬೈ ಇಂಡಿಯನ್ಸ್–ಯುಪಿ ವಾರಿಯರ್ಸ್

ಪಂದ್ಯ ಆರಂಭ: ರಾತ್ರಿ 7.30

ನೇರಪ್ರಸಾರ: ಸ್ಪೋರ್ಟ್ಸ್ 18, ಜಿಯೊ ಸಿನಿಮಾ ಆ್ಯಪ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT