ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ | ಡೆಲ್ಲಿ ಕ್ಯಾಪಿಟಲ್ಸ್‌ಗೆ ಜಯ

Published 26 ಫೆಬ್ರುವರಿ 2024, 23:35 IST
Last Updated 26 ಫೆಬ್ರುವರಿ 2024, 23:35 IST
ಅಕ್ಷರ ಗಾತ್ರ

ಬೆಂಗಳೂರು: ಎಡಗೈ ಸ್ಪಿನ್ನರ್ ರಾಧಾ ಯಾದವ್ ಮತ್ತು ಮಧ್ಯಮವೇಗಿ ಮರಿಝಾನ್ ಕಾಪ್ ಅವರ ನಿಖರ ದಾಳಿಯ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಯು.ಪಿ. ವಾರಿಯರ್ಸ್ ವಿರುದ್ಧ ಜಯಭೇರಿ ಬಾರಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ಕ್ರಿಕೆಟ್ ಟೂರ್ನಿಯಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ  ರಾಧಾ ಮತ್ತು ಕಾಪ್ ದಾಳಿಯ ಮುಂದೆ ವಾರಿಯರ್ಸ್‌   ಯು.ಪಿ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 119 ರನ್ ಗಳಿಸಿತು. ಅದಕ್ಕುತ್ತರವಾಗಿ ಡೆಲ್ಲಿ ತಂಡವು 14.3 ಓವರ್‌ಗಳಲ್ಲಿ 1 ವಿಕೆಟ್‌ಗೆ 123 ರನ್‌ ಗಳಿಸಿ, 9 ವಿಕೆಟ್‌ಗಳಿಂದ ಜಯಿಸಿತು.

ಟಾಸ್ ಗೆದ್ದ ಡೆಲ್ಲಿ ತಂಡವು ಫೀಲ್ಡಿಂಗ್ ಮಾಡುವ ನಿರ್ಧಾರ ಮಾಡಿತು. ತಂಡದ ನಾಯಕಿ ಮೆಗ್‌ ಲ್ಯಾನಿಂಗ್ ನಿರ್ಧಾರವನ್ನು ತಂಡದ ಬೌಲರ್‌ಗಳು ಸಮರ್ಥಿಸಿಕೊಂಡರು. ದಕ್ಷಿಣ ಆಫ್ರಿಕಾದ ಕಾಪ್ (5ಕ್ಕೆ3) ಅಗ್ರಕ್ರಮಾಂಕದ ಬ್ಯಾಟರ್‌ಗಳ ವಿಕೆಟ್ ಕಬಳಿಸಿದರು.

ಮಹಾರಾಷ್ಟ್ರದ ಹುಡುಗಿ ರಾಧಾ ಯಾದವ್ (20ಕ್ಕೆ4) ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳನ್ನು ಪೆವಿಲಿಯನ್‌ಗೆ ಮರಳಿ ಕಳಿಸಿದರು. ಇದರಿಂದಾಗಿ ತಂಡವು 12 ಓವರ್‌ಗಳಲ್ಲಿ ಕೇವಲ 57 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿತು. ಯುಪಿ ತಂಡದ ಐದನೇ ಕ್ರಮಾಂಕದ ಬ್ಯಾಟರ್ ಶ್ವೇತಾ ಸೆಹ್ರಾವತ್ (45; 42ಎ, 4X5, 6X1) ಅವರೊಬ್ಬರೇ ದಿಟ್ಟ ಹೋರಾಟ ನಡೆಸಿದರು. 

ಒಂದು ಕಡೆ ವಿಕೆಟ್‌ಗಳು ಪತನವಾಗುತ್ತಿದ್ದರೂ ಶ್ವೇತಾ 107. 14ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದರು. ಇದರಿಂದಾಗಿ ತಂಡವು ನೂರರ ಗಡಿ ದಾಟಲು ಸಾಧ್ಯವಾಯಿತು. ಇಲ್ಲದಿದ್ದರೆ ಅಲ್ಪಮೊತ್ತಕ್ಕೆ ಕುಸಿಯವ ಆತಂಕ ಇತ್ತು.

ಗುರಿ ಬೆನ್ನಟ್ಟಿದ ಡೆಲ್ಲಿ ತಂಡದ ಆರಂಭಿಕ ಜೋಡಿ ಮೆಗ್‌ ಲ್ಯಾನಿಂಗ್ (51; 43ಎ, 4X6) ಮತ್ತು ಶಫಾಲಿ ವರ್ಮಾ (ಔಟಾಗದೆ 64; 43ಎ, 4X6, 6X4) ಅರ್ಧಶತಕ ಗಳಿಸಿ ತಂಡದ ಜಯವನ್ನು ಸುಲಭಗೊಳಿಸಿದರು.

ಸಂಕ್ಷಿಪ್ತ ಸ್ಕೋರ್: ಯು.ಪಿ. ವಾರಿಯರ್ಸ್: 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 119 (ಅಲಿಸಾ ಹೀಲಿ 13, ಗ್ರೇಸ್ ಹ್ಯಾರಿಸ್ 17, ಶ್ವೇತಾ ಸೆಹ್ರಾವತ್ 45, ಮರಿಜಾನೆ ಕಾಪ್ 5ಕ್ಕೆ3, ಅರುಂಧತಿ ರೆಡ್ಡಿ 16ಕ್ಕೆ1, ರಾಧಾ ಯಾದವ್ 20ಕ್ಕೆ4) ಡೆಲ್ಲಿ ಕ್ಯಾಪಿಟಲ್ಸ್: 14.3 ಓವರ್‌ಗಳಲ್ಲಿ 1 ವಿಕೆಟ್‌ಗೆ 123 (ಮೆಗ್‌ ಲ್ಯಾನಿಂಗ್ 51, ಶಫಾಲಿ ವರ್ಮಾ ಔಟಾಗದೆ 64) ಫಲಿತಾಂಶ: ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 9 ವಿಕೆಟ್ ಜಯ. ಇಂದಿನ ಪಂದ್ಯ,

ರಾಯಲ್‌ ಚಾಲೆಂಜರ್ಸ್‌–ಗುಜರಾತ್‌ ಜೇಂಟ್ಸ್‌. ರಾತ್ರಿ 7.30. ಸ್ಪೋರ್ಟ್ಸ್‌18

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT