ಗುರುವಾರ , ನವೆಂಬರ್ 14, 2019
19 °C
ವಿಶ್ವಕಪ್‌ ಕ್ರಿಕೆಟ್‌

ಬದಲಾದ ಬ್ಯಾಟು ಹೇಳುತ್ತಿದೆಯಾ ಧೋನಿ ವಿದಾಯದ ಮುನ್ನುಡಿ?!

Published:
Updated:

ನವದೆಹಲಿ: ತಂಡ ಸಂಕಷ್ಟದ ಸಮಯದಲ್ಲಿದ್ದಾಗ ಅಥವಾ ಅತ್ಯಂತ ಒತ್ತಡ ಸ್ಥಿತಿಯಲ್ಲೂ ಬಹಳ ಕೂಲ್‌ ಆಗಿ ಕಾಣುವ ಟೀಂ ಇಂಡಿಯಾದ ವಿಕೆಟ್‌ ಕೀಪರ್‌ ಮಹೇಂದ್ರ ಸಿಂಗ್‌ ಧೋನಿ, ಇದೇ ವಿಶ್ವಕಪ್‌ ಟೂರ್ನಿಯೊಂದಿಗೆ ತಮ್ಮ ಕ್ರಿಕೆಟ್‌ ಪಯಣವನ್ನು ಮುಗಿಸಲಿದ್ದಾರೆ?– ಕೆಲವು ವರದಿಗಳು ಇಂಥದೊಂದು ಚರ್ಚೆಗೆ ಅವಕಾಶ ಮಾಡಿವೆ. ಧೋನಿ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ. 

ಕ್ರಿಕೆಟ್‌ ಜಗತ್ತಿನ ಅತ್ಯುತ್ತಮ ಫಿನಿಷರ್‌, ಮಿಂಚಿನ ವೇಗದಲ್ಲಿ ಸ್ಟಂಪಿಂಗ್‌ ಮಾಡಿ ಬ್ಯಾಟ್ಸ್‌ಮನ್‌ಗಳಿಗೆ ದಿಗಿಲು ಬಡಿಸಿದ ಹ್ಯಾಲಿಕಾಪ್ಟರ್‌ ಶಾಟ್‌ಗಳ ಸರದಾರ ವೃತ್ತಿ ಕ್ರಿಕೆಟ್‌ಗೆ ವಿದಾಯ ಹೇಳಲಿದ್ದಾರೆ... ಸ್ವತಃ ಧೋನಿ ಅಥವಾ ಬಿಸಿಸಿಐ ಈ ಬಗ್ಗೆ ಯಾವುದೇ ಪ್ರಕಟಣೆ ನೀಡಿಲ್ಲ. ಆದರೂ ಸಾಮಾಜಿಕ ಮಾಧ್ಯಮಗಳಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳ ವರದಿಗಳಲ್ಲಿ ಇದರ ಜೋರು ಚರ್ಚೆ ನಡೆದಿದೆ. 

ವಿಶ್ವಕಪ್‌ ಟೂರ್ನಿಯ ಪಂದ್ಯಗಳಲ್ಲಿ ಧೋನಿ ಬಳಸುತ್ತಿರುವ ಬ್ಯಾಟ್‌ಗಳ ಆಧಾರ ಮೇಲೆ ಹೇಳುವುದಾದರೆ, ಕ್ರಿಕೆಟ್‌ ಜೀವನದಲ್ಲಿ ಈವರೆಗೆ ಸಹಕಾರ ನೀಡಿದ ಎಲ್ಲ ಬ್ರ್ಯಾಂಡ್‌ಗಳಿಗೂ ಅವರು ಅಂತಿಮ ನಮನ ಸಲ್ಲಿಸಿದಂತೆ ಕಾಣುತ್ತಿದೆ. ಈ ಬಗ್ಗೆ ಹಿಂದುಸ್ತಾನ್‌ಟೈಮ್ಸ್‌ ವರದಿ ಮಾಡಿದೆ. 

ಎಸ್‌ಎಸ್‌ ಸ್ಟಿಕ್ಕರ್‌ನ ಬ್ಯಾಟ್‌ ಬಳಸುತ್ತಿದ್ದ ಧೋನಿ ಬಿಎಎಸ್‌ ಬ್ಯಾಟ್‌ಗೆ ಬದಲಿಸಿಕೊಂಡಿರುವುದನ್ನು ಕಾಣಬಹುದಾಗಿದೆ. ಕ್ರಿಕೆಟ್‌ ಜೀವನದ ಆರಂಭದ ಹಂತದಿಂದಲೂ ಅವರಿಗೆ ನೆರವಾದ ಬ್ಯಾಟ್‌ ಮೇಕರ್‌ಗಳಿಗೆ ಧನ್ಯವಾದ ಅರ್ಪಿಸುತ್ತಿರುವ ಬಗೆ ಇದಾಗಿದೆ ಎಂದು ಧೋನಿ ಅವರ ಮೇನೇಜರ್‌ ಹಾಗೂ ಸ್ನೇಹಿತ ಅರುಣ್‌ ಪಾಂಡೆ ಹೇಳಿರುವುದಾಗಿ ವರದಿಯಾಗಿದೆ. 

ಭಾರತ ತಂಡದ ಮಾಜಿ ನಾಯಕ ಧೋನಿ ಈಗ ವಿವಿಧ ಬ್ರ್ಯಾಂಡ್‌ಗಳ ಬ್ಯಾಟ್‌ಗಳನ್ನು ಬಳಸುತ್ತಿದ್ದಾರೆ. ಆದರೆ, ಅದಕ್ಕಾಗಿ ಅವರು ಯಾವುದೇ ಶುಲ್ಕ ಪಡೆಯುತ್ತಿಲ್ಲ ಎನ್ನಲಾಗಿದೆ. ವಿಶ್ವಕಪ್‌ ಟೂರ್ನಿಯ 7 ಪಂದ್ಯಗಳಲ್ಲಿ 223 ರನ್‌ ಗಳಿಸಿದ್ದಾರೆ. ಸ್ಟ್ರೈಕ್‌ ರೇಟ್‌ 93.30 ದಾಖಲಾಗಿದೆ ಹಾಗೂ ಗರಿಷ್ಠ ಮೊತ್ತ 56 ರನ್‌ ಗಳಿಸಿದ್ದಾರೆ.  

ಏಕದಿನ ಕ್ರಿಕೆಟ್‌ನಲ್ಲಿ ಧೋನಿ ಸಾಧನೆ

ಏಕದಿನ ಪಂದ್ಯಗಳು– 348
ರನ್‌ ಗಳಿಕೆ – 10,723
ಗರಿಷ್ಠ ಸ್ಕೋರ್‌– 183
ಸ್ಟ್ರೈಕ್‌ ರೇಟ್‌– 87.67
ಶತಕ– 10
ಅರ್ಧ ಶತಕ– 72
ಬೌಂಡರಿ– 825
ಸಿಕ್ಸರ್– 228
ಕ್ಯಾಚ್‌– 317
ಸ್ಟಂಪಿಂಗ್‌– 122

ಇತ್ತೀಚಿಗಷ್ಟೇ ಅಂಬಟಿ ರಾಯುಡು ವೃತ್ತಿ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿಕೊಂಡರು. ಇದನ್ನೂ ಓದಿ: ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿಶ್ವಕಪ್ ಅವಕಾಶವಂಚಿತ ಅಂಬಟಿ ರಾಯುಡು ನಿವೃತ್ತಿ

ಪ್ರತಿಕ್ರಿಯಿಸಿ (+)