ಪಾಕ್‌ ತಂಡಕ್ಕೆ ಬೈಗುಳ ಮಳೆ: ನಾಯಕನ ಮೇಲೆ ವಾಗ್ದಾಳಿ

ಮಂಗಳವಾರ, ಜೂಲೈ 16, 2019
23 °C
ಹಿರಿಯ ಆಟಗಾರರು, ಮಾಧ್ಯಮಗಳ ಟೀಕೆ

ಪಾಕ್‌ ತಂಡಕ್ಕೆ ಬೈಗುಳ ಮಳೆ: ನಾಯಕನ ಮೇಲೆ ವಾಗ್ದಾಳಿ

Published:
Updated:
Prajavani

ಮ್ಯಾಂಚೆಸ್ಟರ್/ಇಸ್ಲಾಮಾಬಾದ್ (ಪಿಟಿಐ/ರಾಯಿಟರ್ಸ್‌): ಭಾರತ ಎದುರು ವಿಶ್ವಕಪ್‌ ಪಂದ್ಯದಲ್ಲಿ ಹೀನಾಯ ಸೋಲುಕಂಡ ಪಾಕಿಸ್ತಾನ ತಂಡದ ವಿರುದ್ಧ ಹಿರಿಯ ಕ್ರಿಕೆಟಿಗರು, ಮಾಧ್ಯಮಗಳು, ಕ್ರಿಕೆಟ್ ಪ್ರೇಮಿಗಳು  ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ವೇಗದ ಬೌಲರ್‌ ವಾಸೀಂ ಅಕ್ರಂ, ಪಾಕಿಸ್ತಾನ ಪೈಪೋಟಿ ನೀಡದೇ ಶರಣಾಯಿತು ಎಂದು ಹೇಳಿದರೆ, ಮತ್ತೊಬ್ಬ ವೇಗಿ ಶೋಯೆಬ್ ಅಕ್ತರ್, ಪಾಕ್ ತಂಡದ ನಾಯಕನ್ನು ಬುದ್ದಿಗೇಡಿ ಎಂದು ಜರೆದಿದ್ದಾರೆ. ಆಟಗಾರರು ನಾಯಕನ ಬಗ್ಗೆ ಅಸಮಾಧಾನ ಹೊಂದಿರುವುದೇ ತಂಡದ ಸೋಲಿಗೆ ಕಾರಣ ಎಂದು ಮಾಧ್ಯಮಗಳು ಟೀಕಿಸಿವೆ.

‘ಸೋಲು ಗೆಲುವು ಪಂದ್ಯದಲ್ಲಿ ಇರುವಂಥದ್ದೇ. ಆದರೆ ಈ ರೀತಿ ಸೋಲಬಾರದಿತ್ತು’ ಎಂದು ಅಕ್ರಂ ಬೇಸರ ವ್ಯಕ್ತಪಡಿಸಿದ್ದಾರೆ.

‘ಭಾರತದ ಎದುರಿನ ಪಂದ್ಯದಲ್ಲಿ ಸರ್ಫರಾಜ್ ಅಹಮ್ಮದ್ ವಿವೇಕವನ್ನೇ ಬಳಸಲಿಲ್ಲ. ಭಾರತ ದೊಡ್ಡ ಮೊತ್ತ ಕಲೆ ಹಾಕಿದರೆ ತಂಡಕ್ಕೆ ಅದನ್ನು ಬೆನ್ನಟ್ಟಲು ಸಾಧ್ಯವಿಲ್ಲ ಎಂಬ ಸಾಮಾನ್ಯ ಜ್ಞಾನವೂ ಅವರಿಗೆ ಇರಲಿಲ್ಲ’ ಎಂದು ಅಕ್ತರ್,  ಯು ಟ್ಯೂಬ್ ಚಾನಲ್‌ನಲ್ಲಿ ಹೇಳಿದ್ದಾರೆ. 

ಭಾನುವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ದುಕೊಂಡಿತ್ತು. ರೋಹಿತ್ ಶರ್ಮಾ ಅವರ ಅಮೋಘ ಶತಕದ ಬಲದಿಂದ ಭಾರತ ಐದು ವಿಕೆಟ್‌ಗಳಿಗೆ 336 ರನ್‌ ಗಳಿಸಿತ್ತು.

ಗುರಿ ಬೆನ್ನತ್ತಿದ ಪಾಕಿಸ್ತಾನ 89 ರನ್‌ಗಳಿಂದ ಸೋತಿತ್ತು. ಮಳೆ ಕಾಡಿದ್ದರಿಂದ ಪಾಕಿಸ್ತಾನಕ್ಕೆ 40 ಓವರ್‌ಗಳಲ್ಲಿ 302 ರನ್ ಗಳಿಸುವ ಪರಿಷ್ಕೃತ  ಗುರಿ ನೀಡಲಾಗಿತ್ತು. ತಂಡ ಆರು ವಿಕೆಟ್‌ ಕಳೆದುಕೊಂಡು 212 ರನ್ ಗಳಿಸಿತ್ತು. 

ಆರಂಭಿಕ ಆಟಗಾರ ಫಕ್ರ್ ಜಮಾನ್ (62), ಮೂರನೇ ಕ್ರಮಾಂಕದ ಬಾಬರ್ ಆಜಂ (48) ಮತ್ತು ಬಾಲಂಗೋಚಿ ಇಮದ್ ವಾಸಿಂ (46) ಅವರನ್ನು ಹೊರತುಪಡಿಸಿದರೆ ಇತರ ಯಾರಿಗೂ ಮಿಂಚಲು ಆಗಲಿಲ್ಲ.

‘ಟಾಸ್ ಗೆದ್ದರೆ ಅರ್ಧ ಪಂದ್ಯ ಗೆದ್ದಂತೆ. ಆದರೆ ಪಾಕಿಸ್ತಾನ ತಂಡ ಮಾಡಿದ್ದೇನು? ತಂಡಕ್ಕೆ ಗೆಲ್ಲುವ ಉತ್ಸಾಹವೇ ಇರಲಿಲ್ಲ. ಇದು ನಾಯಕನ ವೈಫಲ್ಯಕ್ಕೆ ಹಿಡಿದ ಕನ್ನಡಿಯಾಗಿದೆ’ ಎಂದು ಅಕ್ತರ್ ಹೇಳಿದ್ದಾರೆ.

‘ಪಾಕಿಸ್ತಾನ ದೊಡ್ಡ ಮೊತ್ತವನ್ನು ಬೆನ್ನಟ್ಟಿ ಗೆದ್ದ ಇತಿಹಾಸ ಇಲ್ಲ. ಇಂಜಮಾಮ್‌ ಉಲ್ ಹಕ್, ಮಹಮದ್‌ ಯೂಸುಫ್, ಸಯೀದ್ ಅನ್ವರ್, ಶಾಹಿದ್ ಅಫ್ರೀದಿ ಮುಂತಾದವರೆಲ್ಲ ಈ ಅಂಗಣದಲ್ಲಿ ಆಡಿದ್ದಾರೆ. ಅವರ‍್ಯಾರಿಗೂ ಮಾಡಲು ಸಾಧ್ಯವಾಗದ್ದು, ಈಗಿನ ತಂಡಕ್ಕೂ ಆಗಲಾರದು ಎಂಬುದು ತಿಳಿದಿರುವ ವಿಷಯವೇ. ಆದ್ದರಿಂದ ಟಾಸ್ ಗೆದ್ದಾಗ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಬೇಕಾಗಿತ್ತು’ ಎಂದು ಅಕ್ತರ್ ಅಭಿಪ್ರಾಯಪಟ್ಟಿದ್ದಾರೆ.

ಸೋಲಿನಿಂದ ಬೇಸರಗೊಂಡಿರುವ ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳು ತಂಡವನ್ನು ವಿವಿಧ ರೀತಿಯಲ್ಲಿ ಹಂಗಿಸಿದ್ದಾರೆ.

ಕಪ್ ಗೆಲ್ಲಲು ಇನ್ನೂ ಅವಕಾಶವಿದೆ–ಸರ್ಫರಾಜ್: ಈ ನಡುವೆ ಭರವಸೆ ಕೈಬಿಡದ ಸರ್ಫರಾಜ್ ಅಹಮ್ಮದ್ ಪಾಕಿಸ್ತಾನ ತಂಡಕ್ಕೆ ವಿಶ್ವಕಪ್ ಗೆಲ್ಲುವ ಅವಕಾಶ ಇನ್ನೂ ಇದೆ ಎಂದು ಹೇಳಿದ್ದಾರೆ. ಭಾರತದ ವಿರುದ್ಧದ ಸೋಲಿನ ನಂತರ ಪಾಕಿಸ್ತಾನ ಪಾಯಿಂಟ್ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ.

‘ಭಾರತದ ವಿರುದ್ಧ ಸೋತಿರುವುದು ಬೇಸರ ತಂದಿದೆ. ಈ ಸೋಲಿನಿಂದ ತಂಡ ನೈತಿಕವಾಗಿ ಕುಗ್ಗಿದೆ. ಆದರೂ ನಾವು ಟೂರ್ನಿಯಿಂದ ಹೊರಬಿದ್ದಿಲ್ಲ. ಉಳಿದಿರುವ ನಾಲ್ಕೂ ಪಂದ್ಯಗಳನ್ನು ಗೆದ್ದರೆ ಸೆಮಿಫೈನಲ್‌ ತಲುಪುವುದು ಕಷ್ಟವಲ್ಲ’ ಎಂದು ಸರ್ಫರಾಜ್ ಹೇಳಿದರು.

90ರ ದಶಕದಲ್ಲಿ ಇದ್ದ ಪಾಕಿಸ್ತಾನ ತಂಡವಲ್ಲ ಈಗ ಇರುವುದು. ಅಂದು ಪಾಕಿಸ್ತಾನ ಬಲಿಷ್ಠವಾಗಿತ್ತು. ಈಗ ಭಾರತ ಉತ್ತಮವಾಗಿ ಆಡುತ್ತಿದೆ. ಭಾನುವಾರದ ಪಂದ್ಯದ ಎಲ್ಲ ವಿಭಾಗಗಳಲ್ಲೂ ಪಾಕಿಸ್ತಾನ ವೈಫಲ್ಯ ಕಂಡಿತು. ಇದುವೇ ಸೋಲಿಗೆ ಕಾರಣ’ ಎಂದು ಅವರು ಅಭಿಪ್ರಾಯಪಟ್ಟರು.

ಸರ್ಫರಾಜ್ ಗಾಬರಿಯಾಗುತ್ತಾರೆ: ಸಚಿನ್
ಮ್ಯಾಂಚೆಸ್ಟರ್ (ಪಿಟಿಐ): ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಅಹಮ್ಮದ್ ಗಾಬರಿಯಾಗುತ್ತಾರೆ, ಅವರು ಮುನ್ನಡೆಸುತ್ತಿರುವ ತಂಡ ಪಂದ್ಯ ಹೇಗಿರಬಹುದು ಎಂಬುದನ್ನು ಕಲ್ಪಿಸಿಕೊಳ್ಳಲೇ ಇಲ್ಲ ಎಂದು ಹಿರಿಯ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅಭಿಪ್ರಾಯಪಟ್ಟಿದ್ದಾರೆ.

‘ಫೀಲ್ಡಿಂಗ್ ಮಾಡುವ ಸಂದರ್ಭದಲ್ಲಿ ಸರಿಯಾದ ಸ್ಥಾನಗಳಲ್ಲಿ ಆಟಗಾರರನ್ನು ನಿಲ್ಲಿಸುವಲ್ಲಿ ಸರ್ಫರಾಜ್ ವಿಫಲರಾಗಿದ್ದಾರೆ. ವಹಾಬ್ ರಿಯಾಜ್ ಮತ್ತು ಶಾದಬ್ ಖಾನ್ ದಾಳಿ ಸಂದರ್ಭದಲ್ಲಿ ಇದು ಸ್ಪಷ್ಟವಾಗಿ ಗೋಚರವಾಗುತ್ತಿತ್ತು’ ಎಂದು ಸಚಿನ್ ಹೇಳಿದ್ದಾರೆ.

ಭರವಸೆ ಕೈ ಹಿಡಿಯಿತು: ಶಂಕರ್
ಮ್ಯಾಂಚೆಸ್ಟರ್ (ರಾಯಿಟರ್ಸ್‌): ಸ್ವಂತ ಸಾಮರ್ಥ್ಯದ ಮೇಲೆ ನನಗಿದ್ದ ಭರವಸೆ ವಿಶ್ವಕಪ್‌ನ ಚೊಚ್ಚಲ ಪಂದ್ಯದಲ್ಲಿ ಕೈ ಹಿಡಿಯಿತು ಎಂದು ಭಾರತದ ಯುವ ಆಟಗಾರ ವಿಜಯಶಂಕರ್ ಹೇಳಿದರು.

‘ನಾಯಕ ವಿರಾಟ್ ಕೊಹ್ಲಿ ನನ್ನ ಮೇಲೆ ವಿಶ್ವಾಸವಿರಿಸಿದ್ದರು. ನಿರೀಕ್ಷೆಗೂ ಮೊದಲೇ ನನ್ನ ಕೈಗೆ ಚೆಂಡು ನೀಡಿದರು. ಮೊದಲ ಎಸೆತದಲ್ಲೇ ವಿಕೆಟ್ ಪಡೆಯಲು ಸಾಧ್ಯವಾಯಿತು’ ಎಂದರು.

‘ಪರಿಸ್ಥಿತಿಗೆ ಬೇಗನೇ ಹೊಂದಿಕೊಳ್ಳುವ ಆಟಗಾರ ಯಶಸ್ಸು ಕಾಣುತ್ತಾನೆ. ಭಾನುವಾರದ ಪಂದ್ಯದಲ್ಲಿ ನಾನು ಈ ಅಂಶವನ್ನು ಅಳವಡಿಸಿಕೊಂಡೆ. ಈ ಪಂದ್ಯದಲ್ಲಿ ಸಾಧಿಸಿದ ಯಶಸ್ಸು ಮುಂದಿನ ದಿನಗಳಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಮಿಂಚಲು ಸಹಕಾರಿಯಾಗುವ ನಿರೀಕ್ಷೆ ಇದೆ’ ಎಂದರು.

ಬರಹ ಇಷ್ಟವಾಯಿತೆ?

 • 20

  Happy
 • 0

  Amused
 • 2

  Sad
 • 1

  Frustrated
 • 0

  Angry

Comments:

0 comments

Write the first review for this !