ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ ಕವಿದ ಮೋಡ; ರೇನ್‌, ರೇನ್‌, ಗೊ ಅವೇ..

ವಿಶ್ಲೇಷಣೆ
Last Updated 11 ಜೂನ್ 2019, 15:00 IST
ಅಕ್ಷರ ಗಾತ್ರ

ಅಂದು ವೆಸ್ಟ್ ಇಂಡೀಸ್‌–ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಪಂದ್ಯ. ಹರಿಣಿಗಳಿಗೆ ಸೋಲಿನಿಂದ ಹೊರಬರುವ ತವಕ, ಕೆರೀಬಿಯನ್ನರಿಗೆ ಜಯಗಳಿಸುವ ಹುಮ್ಮಸ್ಸು. ಎಲ್ಲವನ್ನೂ ಸುರಿವ ಮಳೆ ಅಳಿಸಿ ಹಾಕಿತು. ಅಭಿಮಾನಿಗಳು ಕೊಡೆ ಹಿಡಿದು ಸಮಯ ಉರುಳಿದರೂ ಮತ್ತೆ ಪಂದ್ಯ ಶುರುವಾಗಲೇ ಇಲ್ಲ...

Rain, rain, go away
Come again another day...(ರೇನ್‌, ರೇನ್‌, ಗೊ ಅವೇ...ಕಮ್‌ ಅಗೇನ್‌ ಅನದರ್‌ ಡೇ)
ಎಂದು ಪಾಕಿಸ್ತಾನ ತಂಡದ ಮಾಜಿ ಕ್ರಿಕೆಟಿಗ, ವೇಗದ ಬೌಲರ್‌ ಶೋಯಬ್‌ ಅಖ್ತರ್‌ ಮಳೆಯನ್ನು ಮರಳಿ ಹೋಗುವಂತೆ ಕೋರಿದರು. ‘ಮಳೆಯೇ ಮತ್ತೊಮ್ಮೆ ಬರುವಿಯಂತೆ ನೀನು ಹೊರಡು, ವೆಸ್ಟ್ ಇಂಡೀಸ್‌–ದಕ್ಷಿಣ ಆಫ್ರಿಕಾ ಆಟ ಆಡಬೇಕಿದೆ; ಮಳೆಯೇ ಹೊರಡು...’ ಎಂಬ ಸಾಲುಗಳಿಂದ ಮಳೆ ಮತ್ತು ಕ್ರಿಕೆಟ್‌ ಕಾತುರತೆಯನ್ನು ಸಾರಿದರು.

ಇನ್ನು ವಿಶ್ವಕಪ್‌ ಕ್ರಿಕೆಟ್‌ ಟೂರ್ನಿ ಆಯೋಜನೆಯಾಗಿರುವ ಸ್ಥಳದ ಬಗ್ಗೆ ಕ್ರಿಕೆಟ್‌ ಪ್ರಿಯರು ಅಸಮಾಧಾನ ಹೊರಹಾಕುವುದು ನಡೆದೇ ಇದೆ. ಇಂಗ್ಲೆಂಡ್‌ನ ಬಹುತೇಕ ಭಾಗಗಳಲ್ಲಿ ಯಾವಾಗ ಬೇಕಾದರೂ ಮಳೆ ಬರಬಹುದು, ಹೋಗಬಹುದು. ಮೈಕೊರೆಯುವ ಚಳಿಯೂ ಜತೆಯಾಗಬಹುದು. ಆದರೂ ಕ್ರಿಕೆಟ್‌ ತವರಿನಲ್ಲಿ ಆಟದ ಮೇಲಿನ ಪ್ರೀತಿಗೆ ಮೋಡ ಕವಿದಿದ್ದೇ ಇಲ್ಲ!

ಈಗಾಗಲೇ ಟೂರ್ನಿಯ ಮೂರು ಪಂದ್ಯಗಳು ಮಳೆಗೆ ಬಲಿಯಾಗಿವೆ. ಹೈವೋಲ್ಟೇಜ್‌ ಪಂದ್ಯವಾಗಿ ನಿರೀಕ್ಷೆ ಹುಟ್ಟಿಸಿದ್ದ ಶ್ರೀಲಂಕಾ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಅಂಗಳದಲ್ಲಿ ಬಿಡಿಸಿಕೊಳ್ಳಲೇ ಇಲ್ಲ. ದಕ್ಷಿಣ ಆಫ್ರಿಕಾ–ವೆಸ್ಟ್ ಇಂಡೀಸ್ ಪಂದ್ಯಗಳು ಮುಂದುವರಿಯಲಿಲ್ಲ. ಮಂಗಳವಾರದ(ಜೂನ್‌ 11) ಬಾಂಗ್ಲಾದೇಶ–ಶ್ರೀಲಂಕಾ ಪಂದ್ಯ ಸಹ ನಿಲ್ಲದ ಮಳೆಯ ಕಾರಣದಿಂದಾಗಿ ರದ್ದಾಯಿತು.

ಮಳೆಯ ಕಾರಣದಿಂದ ಆಟ ಮುಗಿಸದೆಯೇ ಶ್ರೀಲಂಕಾ ತಂಡ ಈಗಾಗಲೇ 2 ಪಾಯಿಂಟ್‌ ಗಳಿಸಿದ್ದರೆ, ಬಾಂಗ್ಲಾ, ಪಾಕಿಸ್ತಾನ, ದಕ್ಷಿಣ ಆಫ್ರಿಕಾ ಹಾಗೂ ವೆಸ್ಟ್ ಇಂಡೀಸ್‌ ತಲಾ ಒಂದು ಅಂಕಗಳನ್ನು ತಮ್ಮ ಖಾತೆಗೆ ಪಡೆದಿವೆ. ನಾಲ್ಕು ಪಂದ್ಯಗಳ ಪೈಕಿ ಶ್ರೀಲಂಕಾ ಒಂದರಲ್ಲಿ ಸೋತು, ಒಂದು ಪಂದ್ಯದಲ್ಲಷ್ಟೇ ಗೆಲುವು ಪಡೆದಿದ್ದರೂ ಅಂಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ. ಒಂದೂ‍ಪಂದ್ಯದಲ್ಲಿ ಜಯ ಕಾಣದ ದಕ್ಷಿಣ ಆಫ್ರಿಕಾ ತಂಡವು ಅಫ್ಗಾನಿಸ್ತಾನಕ್ಕಿಂತ ಮೇಲಿನ ಸ್ಥಾನ ಪಡೆಯಲು ಮಳೆಯೇ ಮೂಲವಾಗಿದೆ.

ಇನ್ನೂ ಒಂದು ತಿಂಗಳು ವಿಶ್ವಕಪ್‌ ಟೂರ್ನಿ ಪಂದ್ಯಗಳು ನಡೆಯಲಿವೆ. ವಾರದಲ್ಲಿ ಎರಡು ಪಂದ್ಯ ರದ್ದಾಗುತ್ತಾ ಅಂಕಗಳು ಹಂಚಿಕೆಯಾಗುತ್ತಲೇ ಹೋದರೆ, ಆಟಗಾರರ ನಿಜ ಸಾಮರ್ಥ್ಯಕ್ಕೆ ಟೂರ್ನಿ ವೇದಿಕೆಯಾಗದೆಯೇ ಕಳೆದು ಹೋಗುವ ಸಾಧ್ಯತೆಯೂ ಹೆಚ್ಚು. ವಿಶ್ವಕಪ್‌ ಕ್ರಿಕೆಟ್‌ ಆತಿಥ್ಯಕ್ಕೆ ಇಂಗ್ಲೆಂಡ್‌ ಆಯ್ಕೆ ಮಾಡಿರುವ ಐಸಿಸಿ ನಿರ್ಧಾರಕ್ಕೆ ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ಕೆಲವರು ಹವಾಮಾನವನ್ನು ನಿಯಂತ್ರಿಸಲು ಯಾರಿಂದಲಾದರೂ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.

ಇಂಗ್ಲೆಂಡ್‌ನಲ್ಲಿ ನಡೆದಿರುವ 5 ವಿಶ್ವಕಪ್‌ಗಳ ಪೈಕಿ ಒಟ್ಟು ರದ್ದಾಗಿರುವ ಪಂದ್ಯಗಳ ಸಂಖ್ಯೆ 5. ಅದೂ ಸಹ ಈ ಬಾರಿಯ ಮೂರು ಪಂದ್ಯಗಳನ್ನೂ ಸೇರಿ ಎಂದು ಕ್ರಿಕೆಟ್‌ ವಿಶ್ಲೇಷಕರೊಬ್ಬರು ಪ್ರತಿಕ್ರಿಯಿಸಿದ್ದಾರೆ. ದುಬೈ ಸೇರಿದಂತೆ ಯಾವುದೇ ಪ್ರದೇಶದಲ್ಲಿ ಮಳೆಯಿಂದಾಗಿ ಪಂದ್ಯ ರದ್ದಾಗಿರುವುದು ತಿಳಿದಿರುವ ಸಂಗತಿ ಎಂದಿದ್ದಾರೆ.

ಇನ್ನಷ್ಟು ಓದು:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT