ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಸೋತ ಅಫ್ಗಾನ್‌, ಗರಿಗೆದರಿದ ಬಾಂಗ್ಲಾ ಹುಲಿಗಳ ಸೆಮಿಫೈನಲ್‌ ಕನಸು; 62ರನ್ ಜಯ

ವಿಶ್ವಕಪ್‌ ಕ್ರಿಕೆಟ್‌
Last Updated 24 ಜೂನ್ 2019, 17:35 IST
ಅಕ್ಷರ ಗಾತ್ರ

ಸೌತಾಂಪ್ಟನ್: ಬಾಂಗ್ಲಾ ಹುಲಿಗಳು ನೀಡಿದ 263 ರನ್‌ಗಳ ಗುರಿ ಬೆನ್ನೇರಿದ ಅಫ್ಗಾನಿಸ್ತಾನಕ್ಕೆ ಶಕೀಬ್‌ ಅಲ್‌ ಹಸನ್‌ ಸ್ಪಿನ್‌ ಮೋಡಿ ಮಾರಕವಾಯಿತು. ಮತ್ತೊಮ್ಮೆ ಅಫ್ಗಾನ್‌ಗೆ ಗೆಲುವಿನ ದಾರಿ ದೂರವಾಯಿತು, ಬಾಂಗ್ಲಾಗೆ ಸೆಮಿಫೈನಲ್‌ ಪ್ರವೇಶಿಸುವ ಆಸೆ ಗರಿಗೆದರಿತು.

ಅಫ್ಗಾನಿಸ್ತಾನ 47 ಓವರ್‌ಗಳಲ್ಲಿ ಎಲ್ಲ ವಿಕೆಟ್‌ ಕಳೆದುಕೊಂಡು 200 ರನ್‌ ಗಳಿಸಿತು. ಬಾಂಗ್ಲಾದೇಶ ಉತ್ತಮ ಬೌಲಿಂಗ್‌ ಪ್ರದರ್ಶನದ ಮೂಲಕ 62 ರನ್‌ಗಳ ಗೆಲುವು ಪಡೆಯಿತು.

ಕ್ಷಣಕ್ಷಣದ ಸ್ಕೋರ್‌:https://bit.ly/2NaEfiP

ಭಾರತದ ಎದುರು ದಿಟ್ಟ ಹೋರಾಟ ನಡೆಸಿದ್ದ ಅಫ್ಗಾನ್, ಬಾಂಗ್ಲಾ ತಂಡದೆದುರು ಕೊಂಚ ಮಂಕಾದಂತೆ ಕಂಡಿತು. ಹಿಂದಿನ ಆಟದಿಂದ ಅಪಾರ ನಿರೀಕ್ಷೆ ಮೂಡಿಸಿದ್ದ ಮೊಹಮ್ಮದ್‌ ನಬಿ ಶೂನ್ಯಕ್ಕೆ ಹೊರ ನಡೆದರು. ತಾಳ್ಮೆಯ ಆಟ ಪ್ರದರ್ಶಿಸುತ್ತಿದ್ದ ನಾಯಕ ಗುಲ್ಬದೀನ್‌ ನೈಬ್‌(47) ಅರ್ಧ ಶತಕದ ಸಮೀಪದಲ್ಲಿ ಎಡವಿದರು. ರಹಮತ್‌ ಷಾ(24), ಅಸ್ಗರ್‌ ಅಫ್ಗರ್‌(20), ಸಮಿವುಲ್ಲಾ ಶಿನ್ವಾರಿ(49) ನಡೆಸಿದ ಎಚ್ಚರಿಕೆ ಆಟ ತಂಡವನ್ನು ಗೆಲುವಿನ ಸನಿಹಕ್ಕೆ ತರಲಿಲ್ಲ.

10 ಓವರ್‌ಗಳಲ್ಲಿ 29 ರನ್‌ ನೀಡಿ ಪ್ರಮುಖ ಐದು ವಿಕೆಟ್‌ ಕಬಳಿಸಿದ ಶಕೀಬ್‌, ವಿಶ್ವಕಪ್‌ ಟೂರ್ನಿಯಲ್ಲಿ ಮತ್ತೊಂದು ಸಾಧನೆ ಮಾಡಿದರು. ಅವರು ಇದೇ ಪಂದ್ಯದಲ್ಲಿ ಅರ್ಧ ಶತಕ ಸಹ ಗಳಿಸಿದರು.

49 ರನ್‌ ಗಳಿಸುವವರೆಗೂ ಸ್ಥಿರ ಆಟ ಪ್ರದರ್ಶಿಸುತ್ತಿದ್ದ ಅಫ್ಗಾನಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್‌ಗಳಿಗೆ ಶಕೀಬ್‌ ಮೊದಲ ಆಘಾತ ನೀಡಿದರು. ನಿಧಾನ ಗತಿಯ ಆಟದ ಮೂಲಕ 100 ರನ್‌ ಗಡಿ ದಾಟಿದ್ದ ತಂಡಕ್ಕೆ 28ನೇ ಓವರ್‌ನಲ್ಲಿ ಶಕೀಬ್‌ ದೊಡ್ಡು ಪೆಟ್ಟು ನೀಡಿದರು. ಮೂರು ಎಸೆತಗಳಲ್ಲಿ ಎರಡು ಪ್ರಮುಖ ವಿಕೆಟ್‌ಗಳನ್ನು ಉರುಳಿಸುವ ಮೂಲಕ ಹುಲಿಗಳ ಆರ್ಭಟ ಜೋರು ಮಾಡಿದರು.

ಆರಂಭಿಕ ಮತ್ತು ಮಧ್ಯ ಕ್ರಮಾಂಕದ ಬ್ಯಾಟಿಂಗ್‌ ಪೆವಿಲಿಯನ್‌ ಹಾದಿ ಹಿಡಿದಿತ್ತು. ಆರನೇ ಕ್ರಮಾಂಕದಲ್ಲಿ ಸಮಿವುಲ್ಲಾ ಮತ್ತು ಎಂಟನೇ ಕ್ರಮಾಂಕದಲ್ಲಿ ನಜೀಬುಲ್ಲಾ ಜದ್ರಾನ್‌ ನಡೆಸಿದ ಹೋರಾಟ ಅಭಿಮಾನಿಗಳಲ್ಲಿ ಭರವಸೆ ಚಿಗುರಿಸಿತು. ಆದರೆ, 23 ರನ್‌ ಗಳಿಸಿದ್ದ ನಜೀಬುಲ್ಲಾ ಜದ್ರಾನ್‌ ವಿಕೆಟ್‌ ಪಡೆಯುವ ಮೂಲಕ ಶಕೀಬ್‌ ಜತೆಯಾಟವನ್ನು ಮುರಿದರು. ಇದರೊಂದಿಗೆ ಶಕೀಬ್‌ ಐದು ವಿಕೆಟ್‌ಗಳ ಸಾಧನೆ ಮಾಡಿದರು. ಸಮಿವುಲ್ಲಾ ಅಜೇಯರಾಗಿ ಉಳಿದರು.

ಮುಸ್ತಫಿಜುರ್‌ ರೆಹಮಾನ್‌ 2 ವಿಕೆಟ್‌, ಮೊಸಾಡೆಕ್‌ ಹೊಸೇನ್‌ ಮತ್ತು ಸೈಫುದ್ದೀನ್‌ ತಲಾ 1 ವಿಕೆಟ್‌ ಪಡೆದರು. ಪಾಯಿಂಟ್‌ ಪಟ್ಟಿಯಲ್ಲಿ ಬಾಂಗ್ಲಾದೇಶ 5ನೇ ಸ್ಥಾನಕ್ಕೆ ಜಿಗಿದಿದೆ. ಈ ಮೂಲಕ ಸೆಮಿಫೈನಲ್‌ ಪ್ರವೇಶಿಸುವ ಹಾದಿ ಸಮೀಪವಾಗಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ, ಅಫ್ಗಾನಿಸ್ತಾನ ನೀಡಿದ ಆರಂಭಿಕ ಆಘಾತದಿಂದ ಚೇತರಿಸಿಕೊಂಡು ಉತ್ತಮ ರನ್‌ ಗಳಿಯತ್ತ ಮುನ್ನಡೆದಿದ್ದಾಗ ಮುಜೀಬ್‌ ತಡೆ ಗೋಡೆಯಾದರು. ಪ್ರಮುಖ ಮೂರು ವಿಕೆಟ್‌ ಕಬಳಿಸುವ ಮೂಲಕ ಬೃಹತ್‌ ಮೊತ್ತಕ್ಕೆ ಕಡಿವಾಣ ಹಾಕಿದರು.

ಬಾಂಗ್ಲಾದೇಶ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 262 ರನ್‌ ಗಳಿಸಿತು. ಭರ್ಜರಿ ಬ್ಯಾಟಿಂಗ್‌ ಪ್ರದರ್ಶಿಸಿ ಅರ್ಧ ಶತಕ ದಾಖಲಿಸಿದ ಮುಷ್ಫಿಕರ್‌ ರಹೀಮ್‌ (83; 4 ಬೌಂಡರಿ, 1 ಸಿಕ್ಸರ್‌) ತಂಡ ಉತ್ತಮ ಮೊತ್ತ ಗಳಿಸಲು ನೆರವಾದರು. ಕೊನೆಯ ಓವರ್‌ಗಳಲ್ಲಿ ಮೊಸಾಡೆಕ್‌ ಹೊಸೇನ್‌ ಬಿರುಸಿನ ಆಟ ಪ್ರದರ್ಶಿಸಿ 24 ಎಸೆತಗಳಲ್ಲಿ 35 ರನ್‌ ಕಲೆಹಾಕಿದರು. ತಾಳ್ಮೆಯ ಆಟದೊಂದಿಗೆ ಅರ್ಧ ಶತಕ ಗಳಿಸಿದ್ದ ಶಕೀಬ್‌ ಅಲ್‌ ಹಸನ್‌(51) ಮುಜೀಬ್‌ ಎಸೆತದಲ್ಲಿ ಎಲ್‌ಬಿಡಬ್ಯುಗೆ ಬಲಿಯಾದರು. ಸೌಮ್ಯ ಸರ್ಕಾರ್‌ ಲಯ ಕಂಡುಕೊಳ್ಳುವ ಮುನ್ನವೇ ಮುಜೀಬ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು. ಮುಜೀಬ್‌ 3 ವಿಕೆಟ್‌ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT