ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಯಲ್ಲಿ ಇಂಗ್ಲೆಂಡ್‌ ಬೇಟೆಯಾಡಿದ ಭಾರತ

Last Updated 26 ಮೇ 2019, 3:05 IST
ಅಕ್ಷರ ಗಾತ್ರ

ರೌಂಡ್‌ ರಾಬಿನ್‌ ಹಂತದ ಕೊನೆಯ ಎರಡು ಪಂದ್ಯಗಳಲ್ಲಿ ಗೆದ್ದ ಕಪಿಲ್‌ ದೇವ್‌ ಪಡೆ, ಆಸ್ಟ್ರೇಲಿಯಾವನ್ನು ಹಿಂದಿಕ್ಕಿ ‘ಬಿ’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನ ತನ್ನದಾಗಿಸಿಕೊಂಡಿತ್ತು. ಈ ಮೂಲಕ ಸೆಮಿಫೈನಲ್‌ ಪ್ರವೇಶಿಸಿ ದಾಖಲೆ ಬರೆದಿತ್ತು. ನಾಲ್ಕರ ಘಟ್ಟದ ಹೋರಾಟದಲ್ಲೂ ಭಾರತ ಜಾದೂ ಮಾಡಿತ್ತು. ಇಂಗ್ಲೆಂಡ್‌ ತಂಡವನ್ನು ಅದರದ್ದೇ ನೆಲದಲ್ಲಿ ಆರು ವಿಕೆಟ್‌ಗಳಿಂದ ಮಣಿಸಿ ಎಲ್ಲರ ಹುಬ್ಬೇರುವಂತೆ ಮಾಡಿತ್ತು.

l ಓಲ್ಡ್‌ ಟ್ರಾಫರ್ಡ್‌ ಅಂಗಳದಲ್ಲಿ ಮೊದಲು ಬ್ಯಾಟ್‌ ಮಾಡಿದ್ದ ಇಂಗ್ಲೆಂಡ್‌ 60 ಓವರ್‌ಗಳನ್ನೂ ಆಡಿ 213ರನ್‌ ಕಲೆಹಾಕಿತ್ತು.

l ಆರಂಭಿಕ ಬ್ಯಾಟ್ಸ್‌ಮನ್ ಗ್ರೇಮ್‌ ಫ್ಲವರ್‌ (33; 59ಎ, 3ಬೌಂ) ಗರಿಷ್ಠ ಸ್ಕೋರರ್‌ ಎನಿಸಿದ್ದರು.

l ಭಾರತದ ಬೌಲರ್‌ಗಳು ಈ ಹಣಾಹಣಿಯಲ್ಲಿ ನೀಡಿದ್ದ ಇತರೆ ರನ್‌ಗಳೇ 29!

l ಕ‍ಪಿಲ್‌ ದೇವ್‌, ರೋಜರ್‌ ಬಿನ್ನಿ ಮತ್ತು ಮೋಹಿಂದರ್ ಅಮರನಾಥ್‌, ಎದುರಾಳಿಗಳ ರನ್ ಗಳಿಕೆಗೆ ಕಡಿವಾಣ ಹಾಕಿದ್ದರು.

l ಕಪಿಲ್‌ ಮೂರು ವಿಕೆಟ್‌ ಕಬಳಿಸಿದರೆ, ಬಿನ್ನಿ ಮತ್ತು ಅಮರನಾಥ್ ತಲಾ ಎರಡು ವಿಕೆಟ್‌ ಬುಟ್ಟಿಗೆ ಹಾಕಿಕೊಂಡಿದ್ದರು.

l ಇಂಗ್ಲೆಂಡ್‌ ತಂಡದ ಇನಿಂಗ್ಸ್‌ನಲ್ಲಿ ಒಂದೂ ಸಿಕ್ಸರ್‌ ದಾಖಲಾಗಿರಲಿಲ್ಲ.

l ಸವಾಲಿನ ಗುರಿ ಬೆನ್ನಟ್ಟಿದ್ದ ಭಾರತವು ಮತ್ತೆ ಆರಂಭಿಕ ಸಂಕಷ್ಟ ಎದುರಿಸಿತ್ತು. ಗಾವಸ್ಕರ್‌ ಮತ್ತು ಶ್ರೀಕಾಂತ್‌ ಬೇಗನೆ ನಿರ್ಗಮಿಸಿದ್ದರು.

l ಯಶ್‌ಪಾಲ್‌ ಶರ್ಮಾ (61; 115ಎ, 3ಬೌಂ, 2ಸಿ) ಮತ್ತು ಮೋಹಿಂದರ್‌ ಅಮರನಾಥ್ (46; 92ಎ, 4ಬೌಂ, 1ಸಿ) ಮೂರನೇ ವಿಕೆಟ್‌ಗೆ 92ರನ್‌ ಸೇರಿಸಿ ತಂಡದ ಮೇಲೆ ಆವರಿಸಿದ್ದ ಆತಂಕದ ಕಾರ್ಮೋಡವನ್ನು ದೂರ ಮಾಡಿದ್ದರು.

l ಸಂದೀಪ್ ಪಾಟೀಲ್‌ (ಔಟಾಗದೆ 51; 32ಎ, 8ಬೌಂ) ಅವರ ಅಬ್ಬರದ ಆಟವೂ ಅಭಿಮಾನಿಗಳ ಮನ ಗೆದ್ದಿತ್ತು. ಅವರು ಯಶ್‌ಪಾಲ್‌ ಜೊತೆ ನಾಲ್ಕನೇ ವಿಕೆಟ್‌ಗೆ 63ರನ್‌ ಸೇರಿಸಿದ್ದರು. ತಂಡವು 54.4 ಓವರ್‌ಗಳಲ್ಲಿ ಗೆಲುವಿನ ದಡ ಮುಟ್ಟಿತ್ತು.

l ದಿ ಓವಲ್‌ನಲ್ಲಿ ನಡೆದಿದ್ದ ಇನ್ನೊಂದು ಸೆಮಿಫೈನಲ್‌ನಲ್ಲಿ ವೆಸ್ಟ್‌ ಇಂಡೀಸ್‌ 8 ವಿಕೆಟ್‌ಗಳಿಂದ ಪಾಕಿಸ್ತಾನವನ್ನು ಸೋಲಿಸಿತ್ತು.

l ಪಾಕಿಸ್ತಾನ ಮೊದಲು ಬ್ಯಾಟ್‌ ಮಾಡಿ 8 ವಿಕೆಟ್‌ಗೆ 184ರನ್‌ ಗಳಿಸಿತ್ತು. ವಿಂಡೀಸ್‌ 48.4 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತ್ತು.

l ಪಾಕ್‌ ಪರ ಮೊಹ್ಸಿನ್‌ ಖಾನ್‌ (70 ರನ್‌) ಮಿಂಚಿದ್ದರು. 176 ಎಸೆತಗಳನ್ನು ಆಡಿದ್ದ ಅವರು ಗಳಿಸಿದ್ದು ಒಂದೇ ಬೌಂಡರಿ!

l ವಿಂಡೀಸ್‌ ತಂಡದ ವಿವಿಯನ್ ರಿಚರ್ಡ್ಸ್‌ ಮಿಂಚಿದ್ದರು. 96 ಎಸೆತಗಳಲ್ಲಿ 11 ಬೌಂಡರಿ ಮತ್ತು ಒಂದು ಸಿಕ್ಸರ್ ಸಹಿತ 80ರನ್‌ ದಾಖಲಿಸಿ ಅಜೇಯವಾಗುಳಿದಿದ್ದರು.

l ಲ್ಯಾರಿ ಗೋಮೆಸ್‌ ಕೂಡಾ ಅಜೇಯ ಅರ್ಧಶತಕ ಗಳಿಸಿದ್ದರು. 100 ಎಸೆತಗಳನ್ನು ಆಡಿದ್ದ ಅವರು ಮೂರು ಬೌಂಡರಿ ಸಹಿತ 50ರನ್‌ ದಾಖಲಿಸಿದ್ದರು.

l ಈ ಜೋಡಿ ಮುರಿಯದ ಮೂರನೇ ವಿಕೆಟ್‌ಗೆ 132ರನ್‌ ಗಳಿಸಿ ಪಾಕ್ ಜಯದ ಕನಸಿಗೆ ತಣ್ಣೀರು ಸುರಿದಿತ್ತು.

**

ಫಲ ನೀಡಿದ್ದ ಕಪಿಲ್ ಮಾತುಗಳು

ವಿಶ್ವಕಪ್ ಟೂರ್ನಿಯ ಆರಂಭಕ್ಕೂ ಮುನ್ನ 24 ವರ್ಷದ ಕಪಿಲ್ ದೇವ್ ಅವರನ್ನು ನಾಯಕನನ್ನಾಗಿ ನೇಮಕ ಮಾಡಲಾಗಿತ್ತು. ಸುನಿಲ್ ಗಾವಸ್ಕರ್ ಅವರನ್ನು ನಾಯಕತ್ವದಿಂದ ಇಳಿಸಲಾಗಿತ್ತು. ತಂಡದಲ್ಲಿ ಏಳು ಜನ ಆಟಗಾರರು ಕಪಿಲ್‌ಗಿಂತ ಹಿರಿಯರಾಗಿದ್ದರು. ಇದು ಅವರ ಮುಂದಿದ್ದ ಪ್ರಮುಖ ಸವಾಲಾಗಿತ್ತು. ಆದರೆ ಅದನ್ನು ಅವರು ನಿಭಾಯಿಸಿದ ರೀತಿ ಅನನ್ಯ.

‘ಸ್ನೇಹಿತರೇ ತಂಡದಲ್ಲಿ ಏಳು ಮಂದಿ ಅನುಭವಿ ಮತ್ತು ಹಿರಿಯ ಆಟಗಾರರು ಇರುವುದು ನನ್ನ ಅದೃಷ್ಟ. ನೀವು ಏನು ಮಾಡಬೇಕು ಎಂಬುದು ನಿಮಗೆ ಚೆನ್ನಾಗಿ ಗೊತ್ತಿದೆ. ನಾನು ಹೇಳಬೇಕಿಲ್ಲ. ಆದರೆ ನನ್ನಗೆ ಸೂಕ್ತ ಮಾರ್ಗದರ್ಶನ ನೀಡಿ ಮುನ್ನಡೆಸುವ ಜವಾಬ್ದಾರಿ ನಿಮ್ಮದೇ ಎಂದು ಕಪಿಲ್ ಹೇಳಿದ್ದರು. ನಾಯಕತ್ವ ವಹಿಸಿಕೊಂಡ ವ್ಯಕ್ತಿಯ ವಿನಮ್ರತೆ ಮತ್ತು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಆ ನಡವಳಿಕೆಯು ಎಲ್ಲರ ಮನಸ್ಸು ಗೆದ್ದಿತ್ತು ‘ ಎಂದು ವಿಕೆಟ್‌ಕೀಪರ್ ಸೈಯದ್ ಕಿರ್ಮಾನಿ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT